2027ರ ಜನಗಣತಿ ವೇಳಾಪಟ್ಟಿ ಪ್ರಕಟ – ಜನವರಿ 10 ರಿಂದ ಸ್ವಯಂ ಗಣತಿ, ಜ.25 ರಿಂದ ಮನೆಮನೆ ಸಮೀಕ್ಷೆ ಶುರು
ನವದೆಹಲಿ: ದೇಶಾದ್ಯಂತ 2027ರಲ್ಲಿ ನಡೆಯಲಿರುವ ಜನಗಣತಿಯ (Census 2027) ವೇಳಾಪಟ್ಟಿಯನ್ನ ಕೇಂದ್ರ ಸರ್ಕಾರ (Central Govt) ಶುಕ್ರವಾರ (ಅ.30) ಪ್ರಕಟಿಸಿದೆ. ಬಹುತೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 2027ರ ಜನವರಿ 25 ರಿಂದ ಫೆಬ್ರವರಿ 28ರ ವರೆಗೆ ಮನೆಮನೆಗೆ ತೆರಳಿ ಜನಗಣತಿ ಕಾರ್ಯ ನಡೆಸಲು ನಿರ್ಧರಿಸಲಾಗಿದೆ. ಆದ್ರೆ, ಚುನಾವಣೆ ನಡೆಯಲಿರುವ ಕೆಲವು

ನವದೆಹಲಿ: ದೇಶಾದ್ಯಂತ 2027ರಲ್ಲಿ ನಡೆಯಲಿರುವ ಜನಗಣತಿಯ (Census 2027) ವೇಳಾಪಟ್ಟಿಯನ್ನ ಕೇಂದ್ರ ಸರ್ಕಾರ (Central Govt) ಶುಕ್ರವಾರ (ಅ.30) ಪ್ರಕಟಿಸಿದೆ. ಬಹುತೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 2027ರ ಜನವರಿ 25 ರಿಂದ ಫೆಬ್ರವರಿ 28ರ ವರೆಗೆ ಮನೆಮನೆಗೆ ತೆರಳಿ ಜನಗಣತಿ ಕಾರ್ಯ ನಡೆಸಲು ನಿರ್ಧರಿಸಲಾಗಿದೆ. ಆದ್ರೆ, ಚುನಾವಣೆ ನಡೆಯಲಿರುವ ಕೆಲವು ರಾಜ್ಯಗಳು ಹಾಗೂ ಹಿಮಪಾತದಿಂದ ಬಾಧಿತ ಪ್ರದೇಶಗಳನ್ನ ಈ ವೇಳಾಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದೆ. ಭಾರತದ ರಿಜಿಸ್ಟ್ರಾರ್ ಜನರಲ್ ಹಾಗೂ ಜನಗಣತಿ ಆಯುಕ್ತರಾದ ಮೃತ್ಯುಂಜಯ್ ಕುಮಾರ್ ನಾರಾಯಣ್ ಅವರು ಈ ಅಧಿಸೂಚನೆ ಹೊರಡಿಸಿದ್ದಾರೆ. 2027ರ ಮಾರ್ಚ್ 1ರ ಮಧ್ಯರಾತ್ರಿ 12 ಗಂಟೆಯನ್ನ ಜನಗಣತಿಯ ಉಲ್ಲೇಖ ದಿನಾಂಕವಾಗಿ ನಿಗದಿಪಡಿಸಲಾಗಿದೆ. ಈ ದಿನಾಂಕವನ್ನೇ ದೇಶದ ಜನಸಂಖ್ಯೆ ಲೆಕ್ಕಾಚಾರಕ್ಕೆ ಆಧಾರವಾಗಿ ಪರಿಗಣಿಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ. ಚುನಾವಣಾ ರಾಜ್ಯಗಳು, ಹಿಮಪಾತ ಪೀಡಿತ ಪ್ರದೇಶಗಳಿಗೆ ವಿನಾಯಿತಿ 2027ರ ಜನವರಿ 25ರಿಂದ ಫೆಬ್ರವರಿ 28ರವರೆಗೆ ದೇಶದ ಬಹುತೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜನಗಣತಿ ಕಾರ್ಯ ನಡೆಯಲಿದೆ. ಆದರೆ, ಮಣಿಪುರ, ಗೋವಾ, ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ ಹಾಗೂ ಲಡಾಖ್ ಅನ್ನು ಈ ವೇಳಾಪಟ್ಟಿಯಿಂದ ಹೊರಗಿಡಲಾಗಿದೆ. ಇದರ ಜೊತೆಗೆ ಹಿಮಾಚಲ ಪ್ರದೇಶ ಮತ್ತು ಜಮ್ಮು-ಕಾಶ್ಮೀರದ ಹಿಮಪಾತದಿಂದ ಬಾಧಿತ, ಸಾಮಾನ್ಯ ವೇಳಾಪಟ್ಟಿಗೆ ಹೊಂದಿಕೆಯಾಗದ ಪ್ರದೇಶಗಳಲ್ಲಿಯೂ ಈ ಅವಧಿಯಲ್ಲಿ ಜನಗಣತಿ ನಡೆಯುವುದಿಲ್ಲ. ಮಣಿಪುರ ರಾಜ್ಯದಲ್ಲಿ ಜನಗಣತಿ ಕಾರ್ಯದ ಕುರಿತು ಮುಂದಿನ ದಿನಗಳಲ್ಲಿ ಪ್ರತ್ಯೇಕ ಪ್ರಕಟಣೆ ಹೊರಡಿಸಲಾಗುವುದು ಎಂದು ಮೃತ್ಯುಂಜಯ್ ಕುಮಾರ್ ನಾರಾಯಣ್ ತಿಳಿಸಿದ್ದಾರೆ. ಜನವರಿ 10 ರಿಂದ 2 ವಾರ ಸ್ವಯಂ ಗಣತಿಗೆ ಅವಕಾಶ ಮನೆಮನೆಗೆ ತೆರಳಿ ಜನಗಣತಿ ಕಾರ್ಯ ಆರಂಭಿಸುವುದಕ್ಕೂ ಮುನ್ನ ಸಾರ್ವಜನಿಕರಿಗೆ ಸ್ವತಃ ತಮ್ಮ ವಿವರಗಳನ್ನ ದಾಖಲಿಸುವ ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ 2027ರ ಜನವರಿ 10ರಿಂದ ಜನವರಿ 24ರವರೆಗೆ ಸ್ವಯಂ ಗಣತಿ (Self-Enumeration)ಗೆ ಅವಕಾಶ ಇರಲಿದೆ. ಈ ಅವಧಿಯಲ್ಲಿ ಜನರು ತಮ್ಮ ಅಗತ್ಯ ಮಾಹಿತಿಗಳನ್ನ ಸ್ವತಃ ಸಲ್ಲಿಸಬಹುದಾಗಿದೆ. ಜನವರಿ 24ರಂದು ಸ್ವಯಂ ಗಣತಿ ಮುಕ್ತಾಯಗೊಳ್ಳಲಿದ್ದು, ಬಳಿಕ ಮನೆ ಮನೆ ಗಣತಿ ಶುರುವಾಗಲಿದೆ. ಮಾರ್ಚ್ 1 ರಿಂದ 5ರವರೆಗೆ ಪರಿಷ್ಕರಣಾ ಸುತ್ತು ಮುಖ್ಯ ಜನಗಣತಿ ಕಾರ್ಯ ಪೂರ್ಣಗೊಂಡ ಬಳಿಕ ಮಾರ್ಚ್ 1ರಿಂದ ಮಾರ್ಚ್ 5, 2027ರ ವರೆಗೆ ಪರಿಷ್ಕರಣಾ ಸುತ್ತು (Revisional Round) ನಡೆಯಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.