ಏರ್ಪೋರ್ಟ್ನಲ್ಲಿ ಮಾನ್ಗೆ 3 ಗಂಟೆ ತಡೆ, 50 ಸಾವಿರ ದಂಡ:BJP ವಿರುದ್ಧ AAP ಗರಂ
ಚಂಡೀಗಢ: ಪ್ಯಾರಿಸ್ನಿಂದ ವಾಪಸಾದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಮೂರು ಗಂಟೆಗಳ ಕಾಲ ತಡೆಹಿಡಿಯಲಾಗಿದೆ ಮತ್ತು 50 ಸಾವಿರ ದಂಡ ವಿಧಿಸಲಾಗಿದೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಆರೋಪಿಸಿದೆ. ಮಾನ್ ಅವರನ್ನು ಏಕೆ ತಡೆಹಿಡಿಯಲಾಯಿತು ಅಥವಾ ದಂಡ ವಿಧಿಸಲಾಯಿತು ಎಂಬುದರ ಕುರಿತು ಪಕ್ಷವು ಯಾವುದೇ ಸ್ಪಷ್ಟನೆ ನೀಡಿಲ್ಲ.ಪಂಜಾಬ್ ಎಎ

ಚಂಡೀಗಢ: ಪ್ಯಾರಿಸ್ನಿಂದ ವಾಪಸಾದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಮೂರು ಗಂಟೆಗಳ ಕಾಲ ತಡೆಹಿಡಿಯಲಾಗಿದೆ ಮತ್ತು 50 ಸಾವಿರ ದಂಡ ವಿಧಿಸಲಾಗಿದೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಆರೋಪಿಸಿದೆ. ಮಾನ್ ಅವರನ್ನು ಏಕೆ ತಡೆಹಿಡಿಯಲಾಯಿತು ಅಥವಾ ದಂಡ ವಿಧಿಸಲಾಯಿತು ಎಂಬುದರ ಕುರಿತು ಪಕ್ಷವು ಯಾವುದೇ ಸ್ಪಷ್ಟನೆ ನೀಡಿಲ್ಲ.ಪಂಜಾಬ್ ಎಎಪಿ ಮಾಧ್ಯಮ ಉಸ್ತುವಾರಿ ಬಲ್ತೇಜ್ ಪನ್ನು ಮಾತನಾಡಿ, ‘ಕೇಂದ್ರದ ಸರ್ಕಾರವು ಮಾನ್ ಅವರ ವಿದೇಶ ಪ್ರವಾಸಗಳಿಗೆ ಪದೇ ಪದೇ ಅನುಮತಿ ನಿರಾಕರಿಸುತ್ತಿದೆ. ಜೊತೆಗೆ ರಾಜ್ಯದ ಅಭಿವೃದ್ಧಿಗೆ ಬಿಜೆಪಿ ಅಡ್ಡಗಾಲು ಹಾಕುತ್ತಿದೆ’ ಎಂದು ಆರೋಪಿಸಿದ್ದಾರೆ.ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ಆದೇಶದ ಮೇರೆಗೆ ಮಾನ್ ಅವರು ಪ್ಯಾರಿಸ್ಗೆ ತೆರಳಿದ್ದರು. ಆದರೆ, ದೆಹಲಿ ವಿಮಾನ ನಿಲ್ದಾಣದಲ್ಲಿ ಅವರನ್ನು ತಡೆಹಿಡಿಯುವ ಮೂಲಕ ಕೇಂದ್ರ ಸರ್ಕಾರವು ಮತ್ತೊಮ್ಮೆ ತನ್ನ ಸಂಕುಚಿತ ಮನೋಭಾವವನ್ನು ಪ್ರದರ್ಶಿಸಿದೆ ಎಂದೂ ಅವರು ಟೀಕಿಸಿದ್ದಾರೆ.‘ವಿಶ್ವದ ಎರಡನೇ ಅತಿದೊಡ್ಡ ಆಹಾರ ಉತ್ಸವದಲ್ಲಿ ಪಂಜಾಬ್ನ ಪ್ರಸಿದ್ಧ ಉತ್ಪನ್ನಗಳನ್ನು ಪರಿಚಯಿಸಲು ಮಾನ್, ಪ್ಯಾರಿಸ್ಗೆ ಹೋಗಿದ್ದರು. ಹೈಕೋರ್ಟ್ ಸ್ಪಷ್ಟವಾಗಿ ನಿರ್ದೇಶನ ನೀಡಿದ್ದರೂ, ಮುಖ್ಯಮಂತ್ರಿ ವಿಚಾರದಲ್ಲಿ ಶಿಷ್ಟಾಚಾರ ಪಾಲನೆಯಾಗಿಲ್ಲ’ ಎಂದು ಪನ್ನು ದೂರಿದ್ದಾರೆ.‘ಮಾನ್ ಪ್ಯಾರಿಸ್ನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಾಗ, ಅವರನ್ನು ಉದ್ದೇಶಪೂರ್ವಕವಾಗಿಯೇ ಮೂರು ಗಂಟೆಗಳ ಕಾಲ ತಡೆಹಿಡಿಯಲಾಯಿತು. ನಿಮ್ಮ ಲಗೇಜ್ ಇನ್ನೂ ಬರುತ್ತಿದೆ... ನಿಮ್ಮ ಲಗೇಜ್ ಪರಿಶೀಲಿಸಲಾಗುತ್ತಿದೆ ಎಂದು ನೆಪ ಹೇಳಲಾಯಿತು. ಇದು ಶುದ್ಧ ಸುಳ್ಳು ಮತ್ತು ಪಂಜಾಬ್ಗೆ ಮಾಡಿದ ಅವಮಾನ’ ಎಂದು ಪನ್ನು ವಾಗ್ದಾಳಿ ನಡೆಸಿದ್ದಾರೆ.ಮೂರು ಗಂಟೆಗಳ ಬಳಿಕ ಮಾನ್ ಅವರಿಗೆ ಅಲ್ಲಿಂದ ತೆರಳಲು ಅನುಮತಿ ನೀಡಲಾಯಿತು. ತಮ್ಮ ಲಗೇಜ್ ಅನ್ನು ವಾಹನದಲ್ಲಿ ಇರಿಸುತ್ತಿದ್ದ ವೇಳೆ ಸ್ಥಳಕ್ಕೆ ಬಂದ ಅಧಿಕಾರಿಗಳು ‘ಮೇಲಿನಿಂದ ತೀವ್ರ ಒತ್ತಡವಿದೆ’ ಎಂದು ಹೇಳಿರುವುದಾಗಿ ಪನ್ನು ವಿವರಿಸಿದ್ದಾರೆ.‘ಇದೇ ವೇಳೆ ಅಧಿಕಾರಿಗಳು 50 ಸಾವಿರ ದಂಡದ ಚಲನ್ ನೀಡಿದರು. ಅಧಿಕಾರಿಗಳೇ ತಮಗೆ ಒತ್ತಡವಿತ್ತು ಎಂದು ಒಪ್ಪಿಕೊಂಡಿದ್ದಾರೆ. ಅಂದರೆ ಈ ಸಂಪೂರ್ಣ ಘಟನೆಯು ಮೇಲಿನಿಂದ ಬಂದ ಆದೇಶದ ಮೇರೆಗೆ ನಡೆದಿದೆ ಎಂಬುದು ಸಾಬೀತಾಗಿದೆ’ ಎಂದು ಅವರು ಹೇಳಿದ್ದಾರೆ.‘ದೇಶದ ಯಾವುದೇ ರಾಜ್ಯದ ಮುಖ್ಯಮಂತ್ರಿಯನ್ನು ಈ ರೀತಿ ವಿಮಾನ ನಿಲ್ದಾಣದಲ್ಲಿ ಮೂರು ಗಂಟೆಗಳ ಕಾಲ ತಡೆಹಿಡಿದ ಉದಾಹರಣೆ ಇದೆಯೇ?, ಮುಖ್ಯಮಂತ್ರಿಯೊಬ್ಬರಿಗೆ 50 ಸಾವಿರ ದಂಡದ ಚಲನ್ ನೀಡುವ ಮೂಲಕ ಅವಮಾನಿಸಿರುವುದು ಇದೇ ಮೊದಲೇ?, ಮಾನ್ ಅವರು ಪಂಜಾಬಿ ಆಗಿರುವುದು ಮತ್ತು ರಾಜ್ಯದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವುದು ಬಿಜೆಪಿಗರಿಗೆ ಸಹಿಸಲು ಆಗುತ್ತಿಲ್ಲ’ ಎಂದು ಎಎಪಿ ನಾಯಕರೊಬ್ಬರು ಗುಡುಗಿದ್ದಾರೆ.