CJP Protest|ಸೆಂಟ್ರಲ್ ಪಾರ್ಕ್ ಮುಚ್ಚುವ ಆದೇಶ;ತುರ್ತು ವಿಚಾರಣೆಗೆ ಸುಪ್ರೀಂ ನಕಾರ
ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿಯ ಕನ್ನಾಟ್ ಪ್ಲೇಸ್ನಲ್ಲಿರುವ ಸೆಂಟ್ರಲ್ ಪಾರ್ಕ್ ಮುಚ್ಚುವ ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್ಡಿಎಂಸಿ) ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.ದೆಹಲಿ ಕಿರಾಣಿ ಸಮಿತಿ ಹಾಗೂ ದೆಹಲಿ ಕಬ್ಬಿಣ ಮತ್ತು ಹ

ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿಯ ಕನ್ನಾಟ್ ಪ್ಲೇಸ್ನಲ್ಲಿರುವ ಸೆಂಟ್ರಲ್ ಪಾರ್ಕ್ ಮುಚ್ಚುವ ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್ಡಿಎಂಸಿ) ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.ದೆಹಲಿ ಕಿರಾಣಿ ಸಮಿತಿ ಹಾಗೂ ದೆಹಲಿ ಕಬ್ಬಿಣ ಮತ್ತು ಹಾರ್ಡ್ವೇರ್ ವ್ಯಾಪಾರಿಗಳ ಸಂಘ ಈ ಅರ್ಜಿಯನ್ನು ಸಲ್ಲಿಸಿದೆ.ಎಲ್ಲರೂ ವಿವೇಚನೆಯಿಂದ ನಡೆದುಕೊಳ್ಳುತ್ತಾರೆ ಎಂಬ ಆಶಯ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ ಅವರಿದ್ದ ಪೀಠವು ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಿಲ್ಲ.‘ಎಲ್ಲರೂ ವಿವೇಚನೆಯಿಂದ ನಡೆದುಕೊಳ್ಳುತ್ತಾರೆ ಎಂದು ನಾವು ಆಶಿಸುತ್ತೇವೆ. ಈ ದಿನಗಳಲ್ಲಿ ಸಣ್ಣ ಅಂಗಡಿಕಾರರು ತಮ್ಮ ಜೀವನೋಪಾಯಕ್ಕಾಗಿ ವ್ಯಾಪಾರ ನಡೆಸುತ್ತಾರೆ. ಇದರಿಂದ ಇಡೀ ಕುಟುಂಬಗಳು ಎದುರಿಸಬೇಕಾದ ಸಂಕಷ್ಟ ಮತ್ತು ತೊಂದರೆ ನಮಗೆ ತಿಳಿದಿದೆ’ ಎಂದು ಪೀಠ ಹೇಳಿತು.‘ಒಬ್ಬರು ಪ್ರತಿಭಟನೆ ನಡೆಸಲು ಬಯಸುತ್ತಾರೆ, ಮತ್ತೊಬ್ಬರು ಕಡಲೆಕಾಯಿ ಮಾರಾಟ ಮಾಡಲು ಬಯಸುತ್ತಾರೆ, ಇನ್ನೊಬ್ಬರು ಕಾನೂನು ಸುವ್ಯವಸ್ಥೆಯನ್ನು ಬಯಸುತ್ತಾರೆ. ಇವೆಲ್ಲವೂ ಪರಸ್ಪರ ಸಂಬಂಧ ಹೊಂದಿವೆ’ ಎಂದು ನ್ಯಾ. ಬಾಗ್ಚಿ ಹೇಳಿದರು.‘ವ್ಯಾಪಾರಕ್ಕೆ ನಷ್ಟವಾದರೆ, ಸಂವಿಧಾನಾತ್ಮಕ ಅಧಿಕಾರದಡಿ ನಾವು ಮಧ್ಯಪ್ರವೇಶಿಸುತ್ತೇವೆ. ಆ ಪರಿಸ್ಥಿತಿ ಎದುರಾದಾಗ ನೋಡೋಣ’ ಎಂದರು.ಗುರುವಾರ ತಡರಾತ್ರಿ ಎನ್ಡಿಎಂಸಿ ಸೆಂಟ್ರಲ್ ಪಾರ್ಕ್ ಮುಚ್ಚುವಂತೆ ಆದೇಶ ಹೊರಡಿಸಿದ್ದು, ಇದರಿಂದ ಅಲ್ಲಿ ವ್ಯಾಪಾರ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.ಅರ್ಜಿಯನ್ನು ಅಕ್ಟೋಬರ್ 26 ಅಥವಾ 27ರಂದು ವಿಚಾರಣೆಗೆ ಪಟ್ಟಿ ಮಾಡಬಹುದು ಎಂದು ಪೀಠ ಸೂಚಿಸಿತು.