Dry farming Tips: ಬಾರದ ಮಳೆ, ಅಧಿಕ ಬಿಸಿಲಿನ ನಡುವೆಯೂ ಬೆಳೆ ಯೋಜನೆ ಹೀಗಿರಲಿ
ಬೆಂಗಳೂರು: ಶತಮಾನದ ನಂತರ ಈ ರೀತಿಯ ಬರಗಾಲದ ಸನ್ನಿವೇಶ ಕರ್ನಾಟಕದಲ್ಲಿ ಎದುರಾಗಿದೆ. ಒಂದೂವರೆ ತಿಂಗಳ ಅವಧಿಯಲ್ಲಿ ಬರೀ ಆರೇಳು ದಿನ ಮಳೆ ಬಂದಿರುವುದು ಬಿಟ್ಟರೆ ತೀವ್ರ ಮಳೆ ಕೊರತೆ ಕೃಷಿಯನ್ನು ಕಾಡುತ್ತಿದೆ. ಜೂನ್ನಿಂದ ಜುಲೈ ಬದಲು ಮೇ ತಿಂಗಳಿಗೆ ಹೋಗಿರುವ ರೀತಿ ಬಿಸಿಲು ನಮ್ಮನ್ನು ಸ್ವಾಗತಿಸುತ್ತಿದೆ. ಇಂತಹ ಸಂದರ್ಭದಲ್ಲಿ ರೈತರು ಈಗಿನ ಸನ್ನಿವೇಶದ ಬಗ್ಗೆ ಯೋಚಿಸುವ ಜ
ಬೆಂಗಳೂರು: ಶತಮಾನದ ನಂತರ ಈ ರೀತಿಯ ಬರಗಾಲದ ಸನ್ನಿವೇಶ ಕರ್ನಾಟಕದಲ್ಲಿ ಎದುರಾಗಿದೆ. ಒಂದೂವರೆ ತಿಂಗಳ ಅವಧಿಯಲ್ಲಿ ಬರೀ ಆರೇಳು ದಿನ ಮಳೆ ಬಂದಿರುವುದು ಬಿಟ್ಟರೆ ತೀವ್ರ ಮಳೆ ಕೊರತೆ ಕೃಷಿಯನ್ನು ಕಾಡುತ್ತಿದೆ. ಜೂನ್ನಿಂದ ಜುಲೈ ಬದಲು ಮೇ ತಿಂಗಳಿಗೆ ಹೋಗಿರುವ ರೀತಿ ಬಿಸಿಲು ನಮ್ಮನ್ನು ಸ್ವಾಗತಿಸುತ್ತಿದೆ. ಇಂತಹ ಸಂದರ್ಭದಲ್ಲಿ ರೈತರು ಈಗಿನ ಸನ್ನಿವೇಶದ ಬಗ್ಗೆ ಯೋಚಿಸುವ ಜತೆಗೆ ಹಿಂಗಾರು ಕೃಷಿ ಹಾಗೂ ಭವಿಷ್ಯದ ಬೆಳೆ ಕ್ರಮದ ಕುರಿತು ಯೋಜನೆ ಹಾಕಿಕೊಳ್ಳಬೇಕು. ಇದರಿಂದ ಕೃಷಿ ಇನ್ನಷ್ಟು ಸುಸ್ಥಿರವಾಗಲಿದೆ.ಇದು ಬೆಂಗಳೂರು ತೋಟಗಾರಿಕೆ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ, ಮಣ್ಣು ವಿಭಾಗದ ಮುಖ್ಯಸ್ಥರಾಗಿರುವ ಡಾ.ಎಸ್. ಎಂ.ಪ್ರಸನ್ನ ಸೂಗೂರು ಅವರ ಸಲಹೆ. ಚಿಕ್ಕಮಗಳೂರು, ಬಾಗಲಕೋಟೆ, ಬೀದರ್ ಸಹಿತ ನಾನಾ ಕಡೆಗಳಲ್ಲಿ ತೋಟಗಾರಿಕೆ ಹಾಗೂ ಕೃಷಿ ತಜ್ಞರಾಗಿ ಕೆಲಸ ಮಾಡಿರುವ ಪ್ರಸನ್ನ ಅವರು ಈಗಿನ ಕೃಷಿ ಸ್ಥಿತಿಗತಿ, ಹವಾಮಾನ ವೈಪರಿತ್ಯಗಳು, ಒಣ ಬೇಸಾಯದ ಸುಧಾರಣೆ, ತೋಟಗಾರಿಕೆ ಬೆಳೆಗಳ ಕುರಿತು ಪ್ರಜಾವಾಣಿಗೆ ವಿವರಗಳನ್ನು ಹಂಚಿಕೊಂಡರು.ಸಾಮಾನ್ಯವಾಗಿ ನಮಗೆ ಒಟ್ಟು ಮಳೆಗಾಲದಲ್ಲಿ 27 ಮಳೆಗಳು ಬರಬೇಕು. ಅದರಲ್ಲೂ ಜೂನ್ ಹಾಗೂ ಜುಲೈನಲ್ಲಿ ಸುಮಾರು 14 ಮಳೆಗಳು ಸುರಿದು ಇಷ್ಟೊತ್ತಿಗೆ ಕೃಷಿ ಚಟುವಟಿಕೆ ಚುರುಕುಗೊಳ್ಳಬೇಕಿತ್ತು. ಹೆಚ್ಚು ಮಳೆಯಾಗುವ ಪಶ್ಚಿಮ ಘಟ್ಟ ಹಾಗೂ ಮಲೆನಾಡಿನ ಜಿಲ್ಲೆಗಳು, ಅರೆಮಲೆನಾಡಿನ ಭಾಗ ಹಾಗೂ ಒಣಭೂಮಿಯೇ ಹೆಚ್ಚಿರುವ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಒಂದೇ ರೀತಿಯ ಸ್ಥಿತಿಯಿದೆ. ಮಳೆ ಕಾಣಬೇಕಾದ ಕಡೆ ಬಿಸಿಲು ಪ್ರಬಲಗೊಂಡಿದೆ. ನಾಲ್ಕೈದು ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೆಚ್ಚಳವಾಗಿದೆ. ಮಳೆ ಬಂದು ಭೂಮಿ ಹದಗೊಂಡು, ಅಂತರ್ಜಲ ಹೆಚ್ಚಬೇಕಾದ ಸಮಯದಲ್ಲಿ ಬಿಸಿಲು ಕಾಣಿಸಿಕೊಂಡಿರುವುದು ಈಗಾಗಲೇ ಬಿತ್ತನೆ ಮಾಡಿರುವ ಪ್ರದೇಶವೂ ಒಣಗುವ ಹಂತಕ್ಕೆ ಹೋಗಲಿದೆ. ಜುಲೈ ಒಳಗೆ ನಿರೀಕ್ಷಿತ ಮಳೆ ಬಾರದೇ ಇದ್ದರೆ ಸಮಸ್ಯೆ ಬಿಗಡಾಯಿಸುತ್ತದೆ ಎಂದು ಹೇಳುತ್ತಾರೆ.ಆದರೆ, ಇಂತಹ ಸನ್ನಿವೇಶಗಳನ್ನು ನಮ್ಮ ರೈತರು ಮೊದಲಿನಿಂದಲೂ ಕಲಿಕೆಯ, ಪ್ರಯೋಗಗಳ ಅವಧಿ ಮಾಡಿಕೊಂಡಿದ್ದು ಇದೆ. ಈಗ ಕೃಷಿ ಸನ್ನಿವೇಶಗಳು ಬದಲಾಗುತ್ತಿರುವಾಗ, ಹೊಸ ತಲೆಮಾರಿನವರೂ ಇಂತಹ ಸನ್ನಿವೇಶವನ್ನು ಪೂರಕವಾಗಿಯೇ ರೂಪಿಸಿಕೊಳ್ಳಬೇಕಾಗುತ್ತದೆ. ಒಣ ಬೇಸಾಯ ಮಾಡುವವರು ಮೊದಲು ಹೆಚ್ಚು ನೀರು ಬೇಡುವ ಭತ್ತ, ಮೆಕ್ಕೆಜೋಳ, ಕಬ್ಬಿನಂತಹ ಬೆಳೆಗಳನ್ನು ಆದಷ್ಟು ಕಡಿಮೆ ಮಾಡಲೇಬೇಕು. ರಾಗಿ, ಸಜ್ಜೆ ಸಹಿತ ಸಿರಿಧಾನ್ಯಗಳನ್ನು ಬೆಳೆಯಲು ಒತ್ತು ನೀಡಬೇಕು. ಒಂದರಿಂದ ಒಂದೂವರೆ ತಿಂಗಳಲ್ಲಿ ಬರುವ, ಕಡಿಮೆ ನೀರಿನಲ್ಲೂ ಬೆಳೆಯುವ ತರಕಾರಿ,ಸೊಪ್ಪುಗಳ ಕಡೆಗೆ ಗಮನ ಕೊಡಬೇಕು. ಹಸಿರೆಲೆ ಗೊಬ್ಬರಗಳನ್ನು ಜಮೀನಿಗೆ ನೀಡುವುದು ಒಳಿತು ಎನ್ನುವುದು ಅವರ ಸಲಹೆ.ಉತ್ತರ ಕರ್ನಾಟಕದ ಬಾಗಲಕೋಟೆ, ಕೊಪ್ಪಳ. ಬೆಳಗಾವಿ, ವಿಜಯಪುರ ಸಹಿತ ಕೆಲವು ಜಿಲ್ಲೆಗಳಲ್ಲಿ ರೈತರು ದಾಳಿಂಬೆ ಬೆಳೆದು ಯಶಸ್ವಿಯಾಗಿದ್ದಾರೆ. ಆದಾಯವೂ ಚೆನ್ನಾಗಿ ಬಂದಿದೆ. ಇಂತಹ ಮಾದರಿಗಳನ್ನೂ ರೈತರು ಗಮನಿಸಬೇಕು. ಈ ವೇಳೆಯಲ್ಲಿ ಮೇವು ಬೆಳೆಯಲು ಗಮನ ನೀಡಬೇಕು. ಇದರಿಂದ ರಾಸುಗಳಿಗೂ ಆಹಾರ ಒದಗಿಸಲು ಗಮನ ನೀಡದಂತಾಗುತ್ತದೆ ಎನ್ನುತ್ತಾರೆ.ಮುಖ್ಯವಾಗಿ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರ, ಕೃಷಿ, ತೋಟಗಾರಿಕೆ ವಿಶ್ವವಿದ್ಯಾಲಯ, ಕಚೇರಿಗಳಿಗೆ ಭೇಟಿ ನೀಡುವುದು ಒಳ್ಳೆಯದು. ಮುಂಗಾರು ಮಾತ್ರವಲ್ಲದೇ ಹಿಂಗಾರು ಬೆಳೆಯ ಬಗ್ಗೆ ಈಗಿನಿಂದಲೇ ಯೋಜಿಸಿಕೊಳ್ಳಲು ಅಧಿಕಾರಿಗಳು, ತಜ್ಞರು, ವಿಜ್ಞಾನಿಗಳು, ಅದೇ ಕ್ಷೇತ್ರದಲ್ಲಿ ಸಂಶೋಧನಾ ನಿರತರು ಪರ್ಯಾಯ ಮಾರ್ಗಗಳನ್ನು ನಿಮ್ಮ ಜಮೀನು, ಅಲ್ಲಿನ ಮಣ್ಣಿನ ಗುಣ, ಹವಾಗುಣ ಆಧರಿಸಿ ಖಂಡಿತ ಮಾಹಿತಿ ನೀಡಲಿದ್ದಾರೆ. ಇದು ಮುಂದಿನ ವರ್ಷಗಳ ಕೃಷಿಗೆ ಸಹಾಯಕವಾಗಲಿದೆ ಎನ್ನುತ್ತಾರೆ ಡಾ.ಪ್ರಸನ್ನ. ಈಗ ಕಾಣಿಸಿಕೊಂಡಿರುವ ಬಿಸಿಲಿನಿಂದ ಮಣ್ಣಿನ ಮೇಲೆ ಪರಿಣಾಮ ಬೀರಿ ಲವಣಾಂಶ, ತೇವಾಂಶ ಕಡಿಮೆಯಾಗಿ ಉತ್ಪಾದನೆಗೆ ಧಕ್ಕೆ ಆಗಲಿದೆ. ಇದರ ನಡುವೆಯೂ, ಕಾಫಿ ಸಹಿತ ಕೆಲವು ಬೆಳೆಗಳಿಗೆ ಸಹಕಾರಿಯಾಗಬಹುದು. ಕಡಿಮೆ ನೀರು ಬಳಸಿ ಉತ್ಪಾದಿಸುವ ಬೆಳೆಗಳಿಗೆ ನೆರವಾಗಬಹುದು. ಆದರೂ ಸಮಸ್ಯೆಯಂತೂ ಆಗಲಿದೆ. ಹಾಗೆಂದು ಜಮೀನನ್ನು ಖಾಲಿ ಬಿಡದೇ ಕೃಷಿ ಚಟುವಟಿಕೆಯನ್ನು ಸೀಮಿತವಾಗಿಯಾದರೂ ಮಾಡಬೇಕು. ಎಂದು ಸಲಹೆ ನೀಡುತ್ತಾರೆ.ಕೃಷಿ ಭೂಮಿ ಖಾಲಿ ಬಿಡಬೇಡಿಡಾ.ಎಸ್,ಎಂ, ಪ್ರಸನ್ನ ಸೂಗೂರು, ತೋಟಗಾರಿಕೆ ತಜ್ಞಹೆಚ್ಚು ನೀರು ಬೇಡುವ ಭತ್ತ, ಕಬ್ಬು, ಮೆಕ್ಕೆಜೋಳ ಬೆಳೆಯುವುದಕ್ಕೆ ಆದ್ಯತೆ ನೀಡಬೇಡಿ. ಇದರ ಬದಲು ಕಡಿಮೆ ನೀರು ಬೇಡುವ ರಾಗಿ, ಸಜ್ಜೆ, ತೊಗರಿ ನಿಮ್ಮ ಕೃಷಿ ಆದ್ಯತೆಯಾಗಲಿ. ಹಿಂಗಾರು ಬೆಳೆಯ ಕುರಿತು ಯೋಜನೆ ಈಗಲೇ ಹಾಕಿಕೊಳ್ಳಿ