FIFA World Cup | ಸ್ಪೇನ್ಗೆ ಹೇಗೆ ಪೆಟ್ಟು ನೀಡಬೇಕೆಂಬುದೇ ತಿಳಿಯಲಿಲ್ಲ: ಎಂಬಾಪೆ
ಫಿಫಾ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್ ಎದುರು 2–0 ಗೋಲುಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ ಸ್ಪೇನ್, ಫೈನಲ್ಗೆ ಲಗ್ಗೆ ಇಟ್ಟಿದೆ. ಇದರೊಂದಿಗೆ ಫ್ರಾನ್ಸ್ನ ಫುಟ್ಬಾಲ್ ತಾರೆ ಕಿಲಿಯನ್ ಎಂಬಾಪೆ ಅವರು ಫೈನಲ್ ಕನಸು ಕಮರಿತು. ಪಂದ್ಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಫ್ರಾನ್ಸ್ ತಂಡದ ನಾಯಕ ಎಂಬಾಪೆ, ‘ಸ್ಪೇನ್ ತಂಡಕ್ಕೆ ಹೇಗೆ ಪ

ಫಿಫಾ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್ ಎದುರು 2–0 ಗೋಲುಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ ಸ್ಪೇನ್, ಫೈನಲ್ಗೆ ಲಗ್ಗೆ ಇಟ್ಟಿದೆ. ಇದರೊಂದಿಗೆ ಫ್ರಾನ್ಸ್ನ ಫುಟ್ಬಾಲ್ ತಾರೆ ಕಿಲಿಯನ್ ಎಂಬಾಪೆ ಅವರು ಫೈನಲ್ ಕನಸು ಕಮರಿತು. ಪಂದ್ಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಫ್ರಾನ್ಸ್ ತಂಡದ ನಾಯಕ ಎಂಬಾಪೆ, ‘ಸ್ಪೇನ್ ತಂಡಕ್ಕೆ ಹೇಗೆ ಪೆಟ್ಟು ನೀಡಬೇಕೆಂದು ನಮಗೆ ತಿಳಿಯಲಿಲ್ಲ ಎಂದು ಹೇಳುವ ಮೂಲಕ ತಮ್ಮ ಚಾಂಪಿಯನ್ಶಿಪ್ ಕನಸನ್ನು ಭಗ್ನಗೊಳಿಸಿದ ತಾಂತ್ರಿಕ ಮತ್ತು ತಂತ್ರಗಾರಿಕೆಯ ಲೋಪಗಳ ಬಗ್ಗೆ ವಿವರಿಸಿದ್ದಾರೆ.‘ನಾವು ಅಂದುಕೊಂಡಂತೆ ಆಡಲು ಸಾಧ್ಯವಾಗಲಿಲ್ಲ. ಅದು ನಮ್ಮ ತಂತ್ರಗಾರಿಕೆಯಾಗಲಿ ಅಥವಾ ನಾವು ಪ್ರದರ್ಶಿಸಿದ ಒಟ್ಟಾರೆ ಆಟ ನಿರೀಕ್ಷೆಯಂತೆ ಆಡಲಿಲ್ಲ. ವಿಶ್ವಕಪ್ ಸೆಮಿಫೈನಲ್ನಲ್ಲಿ ನಾವು ಮಾಡಬೇಕಾದುದನ್ನು ಮಾಡದಿದ್ದಾಗ, ನಮಗೆ ಗೆಲ್ಲಲು ಸಾಧ್ಯವಾಗುವುದಿಲ್ಲ. ಸ್ಪೇನ್ ತನ್ನದೇ ಆದ ಯೋಜನೆಗೆ ಬದ್ಧವಾಗಿತ್ತು. ಆಟಗಾರರು ಯಾವುದನ್ನು ನಂಬುತ್ತಾರೋ ಅದನ್ನೇ ಮಾಡಿದರು. ಚೆಂಡು ಮತ್ತು ಪಂದ್ಯದ ವೇಗವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವಲ್ಲಿ ಯಶಸ್ವಿಯಾದರು’ ಎಂದು ಎಂಬಾಪೆ ಹೇಳಿದ್ದಾರೆ. ಸ್ಪೇನ್ ವಿರುದ್ಧ ತಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ವಿಫಲರಾಗಿದ್ದನ್ನು ಎಂಬಾಪೆ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ‘ಸ್ಪೇನ್ ಆಟಗಾರರಿಗೆ ಲಯ ಕಂಡುಕೊಳ್ಳಲು ಬಿಡಬಾರದು ಎಂಬ ಉದ್ದೇಶದಿಂದ ಅವರ ಮೇಲೆ ತೀವ್ರ ಒತ್ತಡ ಹೇರುವುದು ನಮ್ಮ ಯೋಜನೆಯಾಗಿತ್ತು. ಆದರೆ, ಅದು ನಮ್ಮಿಂದ ಸಾಧ್ಯವಾಗಲಿಲ್ಲ. ಹಲವು ತಾಂತ್ರಿಕ ತಪ್ಪುಗಳು ಆದವು. ಎದುರಾಳಿಗಳಿಗೆ ಪೆಟ್ಟು ನೀಡಬೇಕಾದ ಅಗತ್ಯವಿದ್ದ ಸಮಯದಲ್ಲಿ ನಾವು ಸಂಪೂರ್ಣವಾಗಿ ಎಡವಿದ್ದೇವೆ’ ಎಂದು ತಿಳಿಸಿದ್ದಾರೆ. ‘ಮಿಡ್ ಫೀಲ್ಡ್ನಲ್ಲಿ ನಾವು ಯಾವಾಗಲೂ ಮೂವರ ವಿರುದ್ಧ ಇಬ್ಬರು ಎಂಬ ಸಂಖ್ಯಾತ್ಮಕ ಯೋಜನೆಯನ್ನು ಎದುರಿಸುತ್ತಿದ್ದೆವು. ಹಾಗೆಯೇ, ಪ್ರೆಸ್ಸಿಂಗ್ ಮಾಡುವಾಗ ಉಂಟಾದ ಸಂವಹನದ ಕೊರತೆಯಿಂದಾಗಿ ಸ್ಪೇನ್ನ ಆಟಗಾರರಾದ ಫ್ಯಾಬಿಯನ್ ರುಯಿಝ್ ಮತ್ತು ರೊಡ್ರಿಗೆ ಹೆಚ್ಚಿನ ಸಮಯ ಮತ್ತು ಮುಕ್ತ ಅವಕಾಶ ಸಿಕ್ಕಿತು’ ಎಂದೂ ಎಂಬಾಪೆ ಹೇಳಿಕೊಂಡಿದ್ದಾರೆ.‘ನಾವು ಪ್ರತಿಯೊಬ್ಬ ಆಟಗಾರನಿಗೆ ಒಬ್ಬರಂತೆ ನಿಲ್ಲಿಸಬೇಕಿತ್ತು. ನಮ್ಮೊಂದಿಗೆ ಓಡುವಂತೆ ಅವರ ಮೇಲೆ ಒತ್ತಡ ಹೇರಬೇಕಿತ್ತು. ಸ್ಪೇನ್ ಚೆಂಡಿಲ್ಲದೆ ಓಡಲು ಇಷ್ಟಪಡದ ತಂಡವಾಗಿದೆ. ನಾವು ಚೆಂಡನ್ನು ಮರಳಿ ಪಡೆದಾಗಲೂ, ತಾಂತ್ರಿಕವಾಗಿ ನಮ್ಮ ಮೊದಲ ಪಾಸ್ಗಳು ವಿಶ್ವಕಪ್ ಸೆಮಿಫೈನಲ್ಗೆ ತಕ್ಕದಾಗಿರಲಿಲ್ಲ’ ಎಂದಿದ್ದಾರೆ.ಸ್ಪೇನ್ ಸಂಪೂರ್ಣವಾಗಿ ಚೆಂಡನ್ನು ತನ್ನ ವಶದಲ್ಲಿಟ್ಟುಕೊಂಡಿದ್ದು, ಪಂದ್ಯದ ಫಲಿತಾಂಶದ ಮೇಲೆ ಭಾರಿ ಪ್ರಭಾವ ಬೀರಿತು. ಇದು ಎಂಬಾಪೆ ಆಟವನ್ನು ತಟಸ್ಥಗೊಳಿಸಿತು. ಮಿಸ್ ಆಯ್ತು ಎಂಬಾಪೆ ‘ಫೈನಲ್’ ಕನಸುಎಂಬಾಪೆ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ವಿಶ್ವಕಪ್ ಫೈನಲ್ ಮಿಸ್ ಮಾಡಿಕೊಳ್ಳಲಿದ್ದಾರೆ. ಇದಕ್ಕೂ ಮುನ್ನ 2018 ಮತ್ತು 2022ರ ವಿಶ್ವಕಪ್ಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಜಾಗತಿಕ ವೇದಿಕೆಯಲ್ಲಿ ಸೆಮಿಫೈನಲ್ ತಲುಪುವುದು ಅತ್ಯಂತ ಶ್ಲಾಘನೀಯ ಸಾಧನೆಯಾಗಿದ್ದರೂ, ಟೂರ್ನಿಯಲ್ಲಿ ಫೈನಲ್ ತಲುಪುವುದು ‘ರಿಯಲ್ ಮ್ಯಾಡ್ರಿಡ್’ ಪರ ಆಡುವ ಸೂಪರ್ಸ್ಟಾರ್ಗೆ ಒಂದು ಕನಸಾಗಿತ್ತು ಎಂದರೆ ತಪ್ಪಲ್ಲ.‘ಎಲ್ಲರಂತೆ ನನಗೂ ತುಂಬಾ ನಿರಾಸೆಯಾಗಿದೆ. ಫೈನಲ್ ತಲುಪುವುದು, ನಮ್ಮ ದೇಶಕ್ಕೆ ಆ ಕನಸು ಕಾಣುವ ಅವಕಾಶವನ್ನು ನೀಡುವುದು ಮತ್ತು ಇತಿಹಾಸ ಸೃಷ್ಟಿಸುವುದು ನಮಗೆ ಒಂದು ಕನಸಾಗಿತ್ತು. ಇದು ಸಾಧ್ಯವಾಗಲಿಲ್ಲ. ಇದರ ಬಗ್ಗೆ ತುಂಬಾ ಬೇಸರವಾಗಿದೆ. ಇದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ನಾವು ತಲೆ ಎತ್ತಿ ಮುನ್ನಡೆಯಬೇಕು. ಮತ್ತೆ ಹೊಸದಾಗಿ ಆಟ ಆರಂಭಿಸಬೇಕು. ಫುಟ್ಬಾಲ್ ಯಾರಿಗಾಗಿಯೂ ಕಾಯುವುದಿಲ್ಲ. ಕ್ಲಬ್ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಇತರ ಸವಾಲುಗಳು ಎದುರಾಗಲಿವೆ’ ಎಂದು ಎಂಬಾಪೆ ತಿಳಿಸಿದ್ದಾರೆ.FIFA 2026: ಫ್ರಾನ್ಸ್ ಮಣಿಸಿ ಫೈನಲ್ ತಲುಪಿದ ಸ್ಪೇನ್