ವಿದೇಶ ಪ್ರವಾಸ ಕನಸಿಗೆ ರೆಕ್ಕೆ ಕೊಟ್ಟ 'Flying Passport': ಕಿರಣ್, ಆಶಾ ಯಶೋಗಾಥೆ
ಫ್ಲೈಯಿಂಗ್ ಪಾಸ್ಪೋರ್ಟ್ ಹೆಸರು ಕೇಳಿದೊಡನೆ ನೆನಪಿಗೆ ಬರುವುದು ಕನ್ನಡದ ಆಶಾ, ಕಿರಣ್ ದಂಪತಿ . ಜಗತ್ತನ್ನು ಸುತ್ತುವ ಜನರ ಕನಸಿಗೆ ಯೂಟ್ಯೂಬ್ ಚಾನಲ್ ಮೂಲಕ ಕಿಟಕಿ ಕೊಟ್ಟವರು. 100ಕ್ಕೂ ಅಧಿಕ ದೇಶಗಳನ್ನು ಸುತ್ತಿ ಅಲ್ಲಿನ ವಿಶೇಷತೆ, ಸಂಸ್ಕೃತಿ, ಪರಿಸರ, ಜನಜೀವನ ಮುಂತಾದ ವಿಷಯಗಳ ಬಗ್ಗೆ ಕನ್ನಡಿಗರಿಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ.ಉದ್ಯೋಗದ ಜೊತೆ ಜೊತೆಗೆ, ಜಗತ್ತ

ಫ್ಲೈಯಿಂಗ್ ಪಾಸ್ಪೋರ್ಟ್ ಹೆಸರು ಕೇಳಿದೊಡನೆ ನೆನಪಿಗೆ ಬರುವುದು ಕನ್ನಡದ ಆಶಾ, ಕಿರಣ್ ದಂಪತಿ . ಜಗತ್ತನ್ನು ಸುತ್ತುವ ಜನರ ಕನಸಿಗೆ ಯೂಟ್ಯೂಬ್ ಚಾನಲ್ ಮೂಲಕ ಕಿಟಕಿ ಕೊಟ್ಟವರು. 100ಕ್ಕೂ ಅಧಿಕ ದೇಶಗಳನ್ನು ಸುತ್ತಿ ಅಲ್ಲಿನ ವಿಶೇಷತೆ, ಸಂಸ್ಕೃತಿ, ಪರಿಸರ, ಜನಜೀವನ ಮುಂತಾದ ವಿಷಯಗಳ ಬಗ್ಗೆ ಕನ್ನಡಿಗರಿಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ.ಉದ್ಯೋಗದ ಜೊತೆ ಜೊತೆಗೆ, ಜಗತ್ತನ್ನು ಸುತ್ತುವ ತಮ್ಮ ಆಸಕ್ತಿಯನ್ನು ನಿರಂತರವಾಗಿ ಮುಂದುವರಿಸಿದ್ದಾರೆ. 197 ದೇಶಗಳನ್ನು ತಮ್ಮ ವೀಕ್ಷಕರಿಗೆ ತೋರಿಸುವ ಪಣ ತೊಟ್ಟಿದ್ದಾರೆ. ಅಮೆರಿಕ ಇರಲಿ, ಆಫ್ರಿಕಾ ಇರಲಿ, ಚೀನಾ ಇರಲಿ, ಅಮೆಜಾನ್ ಕಾಡೇ ಇರಲಿ.. ಕಿರಣ್, ಆಶಾ ಹೋಗದ ಜಾಗವೇ ಇಲ್ಲ. ಅಲ್ಲಿ ಕಳ್ಳ ಕಾಕರ ಹಾವಳಿ ಇರಲಿ, ಮಾದಕ ವ್ಯಸನಿಗಳ ಕೊಂಪೆಯೇ ಆಗಿರಲಿ. ವ್ಯಭಿಚಾರದ ಗೂಡಾದರೂ ಸರಿ. ಧೈರ್ಯದಿಂದ ನುಗ್ಗಿ ವಿಡಿಯೊ ಮಾಡಿ ಜಗತ್ತಿಗೆ ಪರಿಚಯಿಸುವ ಸಾಹಸ ಮೆರೆದಿದ್ದಾರೆ. ಮಾನವ ಆತಂಕಗಳ ನಡುವೆ ಪರಿಸರ ವೈಪರೀತ್ಯ, ಕಾಡುಪ್ರಾಣಿಗಳ ಆತಂಕವಿರುವ ಯಾವುದೇ ಪ್ರದೇಶಕ್ಕೂ ಕೆಚ್ಚೆದೆಯಿಂದ ಹೋಗುವ ಇವರು, ಎಷ್ಟೋ ಬಾರಿ ಪ್ರಾಣ ಪಣಕ್ಕಿಟ್ಟು ವಿಡಿಯೊ ಮಾಡಿದ ಪ್ರಸಂಗಗಳಿವೆ. ಜಗತ್ತಿನ ಮೂಲೆ ಮೂಲೆಗೂ ಪಯಣಕೀನ್ಯಾದ ಮಸಾಯಿ ಮಾರಾ ಬುಡಕಟ್ಟು ಜನಾಂಗದಿಂದ ಹಿಡಿದು, ಅಮೆಜಾನ್ ಕಾಡು, ಕುಖ್ಯಾತ ಮಾದಕವಸ್ತು ದಂಧೆಕೋರ ಪ್ಯಾಬ್ಲೊ ಎಸ್ಕೊಬಾರ್ ವಾಸಿಸಿದ್ದ ಸ್ಥಳ, ವಿಶ್ವ ಯುದ್ಧಗಳಲ್ಲಿ ಬಳಕೆಯಾದ ಭೂಗತ ಬಂಕರ್ ಇರುವ ದೇಶಗಳು, ಮೈಕೊರೆವ ಚಳಿಯ ಸ್ಕ್ಯಾಡಿನೇವಿಯನ್ ದೇಶಗಳು, ಶೂನ್ಯ ಗುರುತ್ವಾಕರ್ಷಣದ ಭೂಮಧ್ಯ ರೇಖೆ .. ಹೀಗೆ ಜಗತ್ತಿನ ಮೂಲೆ ಮೂಲೆಗೂ ತೆರಳುವ ಪ್ರಯತ್ನ ನಡೆಸುತ್ತಿದ್ದಾರೆ. ಪ್ರವಾಸ ಎಂದರೆ ಬಹುತೇಕರಿಗೆ ವರ್ಷಕ್ಕೊಮ್ಮೆ ಸಿಗುವ ರಜೆ, ಒಂದಷ್ಟು ದಿನಗಳ ವಿಶ್ರಾಂತಿ. ಹೊಸ ಜಾಗಗಳನ್ನು ನೋಡುವುದು, ಅಲ್ಲಿನ ಸಂಸ್ಕೃತಿಯನ್ನು ಅರಿಯುವುದು, ವಿಭಿನ್ನ ಆಹಾರಗಳನ್ನು ಸವಿಯುವುದು. ಆದರೆ, ಇವರ ಹವ್ಯಾಸವಾಗಿದ್ದ ಪ್ರವಾಸ ಈಗ ಬದುಕಿನ ಒಂದು ಭಾಗ. ಇಂತಹ ಪ್ರವಾಸದ ಕನಸನ್ನು ನನಸಾಗಿಸಿಕೊಂಡು, ಜಗತ್ತಿನ ವಿವಿಧ ದೇಶಗಳ ಅನುಭವವನ್ನು ಕನ್ನಡಿಗರೊಂದಿಗೆ ಹಂಚಿಕೊಳ್ಳುತ್ತಿರುವ ದಂಪತಿ ಆಶಾ ಮತ್ತು ಕಿರಣ್.ಹಾಸನ ಮೂಲದ ಆಶಾ ಮತ್ತು ಕಿರಣ್ ಜರ್ಮನಿಯಲ್ಲಿ ಉನ್ನತ ಶಿಕ್ಷಣ, ಉದ್ಯೋಗ ಕಂಡುಕೊಳ್ಳುವ ಜೊತೆಗೆ ಜಗತ್ತನ್ನು ಸುತ್ತುವ ಕನಸಿಗೆ ರೆಕ್ಕೆ ಕಟ್ಟಿಕೊಂಡರು. ಪ್ರವಾಸದ ಮೇಲಿನ ಆಸಕ್ತಿ ಇವರನ್ನು ಒಂದೊಂದೇ ದೇಶದತ್ತ ಕರೆದೊಯ್ಯಿತು. ಆರಂಭದಲ್ಲಿ ಪ್ರವಾಸ ಹವ್ಯಾಸವಾಗಿದ್ದರೂ, ಕ್ರಮೇಣ ಅದನ್ನು ಕನ್ನಡಿಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿ ಬೆಳೆಸಿದರು. ವಿಶೇಷವೆಂದರೆ, ಪ್ರವಾಸಕ್ಕಾಗಿ ಉದ್ಯೋಗವನ್ನೇ ಸಂಪೂರ್ಣವಾಗಿ ಬಿಟ್ಟುಕೊಡುವ ಬದಲು, ಕೆಲಸ ಮತ್ತು ಪ್ರಯಾಣ ಎರಡನ್ನೂ ಸಮತೋಲನದಿಂದ ಮುಂದುವರಿಸುವ ಮಾರ್ಗ ಕಂಡುಕೊಂಡಿದ್ದಾರೆ. ಪ್ರಯಾಣದ ನಡುವೆ ಕಚೇರಿ ಕೆಲಸ, ವಿಡಿಯೊ ಚಿತ್ರೀಕರಣ, ಸಂಕಲನ ಹಾಗೂ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸುವ ಜವಾಬ್ದಾರಿ ನಿರ್ವಹಿಸುತ್ತಾರೆ. View this post on Instagram ಪ್ರವಾಸವೆಂದರೆ ಕೇವಲ ಪ್ರವಾಸಿ ತಾಣಗಳನ್ನು ಸುತ್ತುವುದಲ್ಲ!ವಿದೇಶಕ್ಕೆ ಹೋದಾಗ ಪ್ರಸಿದ್ಧ ಪ್ರವಾಸಿ ತಾಣಗಳನ್ನು ನೋಡುವುದು ಸಾಮಾನ್ಯ. ಆದರೆ, ಆಶಾ ಮತ್ತು ಕಿರಣ್ ಅವರ ವಿಡಿಯೊಗಳಲ್ಲಿ ಪ್ರವಾಸಿ ತಾಣಗಳ ಆಚೆಗಿನ ಜಗತ್ತೂ ತೆರೆದುಕೊಳ್ಳುತ್ತದೆ.ಅಲ್ಲಿನ ಸಣ್ಣ ಹಳ್ಳಿಗಳು, ಸ್ಥಳೀಯ ಜನರ ಜೀವನಶೈಲಿ, ಆಹಾರ ಪದ್ಧತಿ, ಸಂಸ್ಕೃತಿ, ಸಂಪ್ರದಾಯ ಹಾಗೂ ಪ್ರಕೃತಿಯ ವೈವಿಧ್ಯವನ್ನು ಪರಿಚಯಿಸುತ್ತಾರೆ. ವಿದೇಶ ಪ್ರವಾಸದ ಮಾಹಿತಿಯನ್ನು ಇಂಗ್ಲಿಷ್ನಲ್ಲಿ ತಿಳಿದುಕೊಳ್ಳಲು ಸಾಧ್ಯವಾಗದ ಕನ್ನಡಿಗರಿಗೂ ಜಗತ್ತಿನ ಪರಿಚಯ ಮಾಡಿಕೊಡಬೇಕು ಎಂಬುದು ಇವರ ಪ್ರಯತ್ನದ ಪ್ರಮುಖ ಆಶಯ. ಹಾಗಾಗಿ, ವಿಡಿಯೊಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಿದ್ದಾರೆ.ವಿದೇಶದ ನೆಲದಲ್ಲಿ ಕನ್ನಡದ ಬಾವುಟ ಹಾರಿಸುವುದು ಇವರ ಮತ್ತೊಂದು ವಿಶೇಷ. ತಾವು ಭೇಟಿ ನೀಡುವ ದೇಶಗಳಲ್ಲಿ ಕನ್ನಡದ ಬಾವುಟವನ್ನು ಪ್ರದರ್ಶಿಸುವ ಮೂಲಕ ಭಾಷೆಯ ಮೇಲಿನ ಪ್ರೀತಿ ವ್ಯಕ್ತಪಡಿಸುತ್ತಾರೆ. ಪ್ರವಾಸದ ಅನುಭವದ ಜತೆಗೆ ಕನ್ನಡದ ಅಸ್ಮಿತೆಯನ್ನೂ ಜಾಗತಿಕ ವೇದಿಕೆಗೆ ಕೊಂಡೊಯ್ಯುವ ಪ್ರಯತ್ನ ಇದಾಗಿದೆ. View this post on Instagram ಹವ್ಯಾಸ ಉದ್ಯಮವಾಗಿಸಿದ ದಂಪತಿಜಗತ್ತನ್ನು ಸುತ್ತುವ ಆಸೆಯಿಂದ ಆರಂಭವಾದ ಈ ದಂಪತಿಯ ಪಯಣ ಇಂದು ಪ್ರವಾಸಿಗರನ್ನು ದೇಶ-ವಿದೇಶಗಳಿಗೆ ಕರೆದೊಯ್ಯುವ ಪ್ರಯತ್ನವಾಗಿ ಬೆಳೆದಿದೆ. ಪ್ರವಾಸದ ಅನುಭವವನ್ನು ಕೇವಲ ವಿಡಿಯೊಗಳಿಗೆ ಸೀಮಿತಗೊಳಿಸದೆ, ಅದನ್ನೇ ಉದ್ಯಮವಾಗಿ ರೂಪಿಸಿಕೊಂಡಿದ್ದಾರೆ.ಇಂದು ‘ಆಶಾಕಿರಣ್ ಫ್ಲೈಯಿಂಗ್ ಪಾಸ್ಪೋರ್ಟ್ ಟೂರ್ಸ್ ಪ್ರೈವೇಟ್ ಲಿಮಿಟೆಡ್’ ಹೆಸರಿನಲ್ಲಿ ಸಂಸ್ಥೆ ಕಟ್ಟಿರುವ ಇವರು, ಆಸಕ್ತರನ್ನು ತಮ್ಮ ಜೊತೆಯಲ್ಲೇ ಕರೆದೊಯ್ದು ವಿದೇಶ ಪ್ರವಾಸ ಮಾಡಿಸುತ್ತಿದ್ದಾರೆ. ವಿದೇಶ ಪ್ರವಾಸಕ್ಕೆ ಸಂಬಂಧಿಸಿದ ವಿಮಾನ ಟಿಕೆಟ್, ವೀಸಾ, ವಸತಿ, ಸ್ಥಳೀಯ ಸಾರಿಗೆ ಮತ್ತು ಪ್ರವಾಸದ ವೇಳಾಪಟ್ಟಿಯಂತಹ ಹಲವು ವ್ಯವಸ್ಥೆಗಳನ್ನು ಒಂದೇ ಕಡೆ ನಿರ್ವಹಿಸುವುದು ಇವರ ಸಂಸ್ಥೆಯ ವಿಶೇಷವಾಗಿದೆ. ಯುರೋಪ್, ಜಪಾನ್, ದಕ್ಷಿಣ ಆಫ್ರಿಕಾ, ಕೀನ್ಯಾ, ಅಮೆಜಾನ್ ಮತ್ತು ಆಗ್ನೇಯ ಏಷ್ಯಾದಂತಹ ತಾಣಗಳಿಗೆ ಗುಂಪು ಪ್ರವಾಸಗಳನ್ನೂ ಆಯೋಜಿಸುತ್ತಿದ್ದಾರೆ. ಪ್ರವಾಸಿಗರು ಒಬ್ಬರೇ ಬಂದರೂ ಗುಂಪಿನೊಂದಿಗೆ ಬೆರೆತು ಪ್ರಯಾಣದ ಅನುಭವ ಪಡೆಯುವಂತೆ ವ್ಯವಸ್ಥೆ ಕಲ್ಪಿಸುವುದು ಈ ಮಾದರಿಯ ವಿಶೇಷತೆ.