IND vs ZIM T20: ‘ಶ್ರೇಯಸ್’ ಬಳಗ ಶುಭಾರಂಭ
ಹರಾರೆ: ವೈಭವ್ ಸೂರ್ಯವಂಶಿ ಅಂತರರಾಷ್ಟ್ರೀಯ ಕ್ರಿಕೆಟ್ ಅಂಗಳದಲ್ಲಿಯೂ ತಮ್ಮ ಭುಜಬಲ ಪರಾಕ್ರಮ ಮೆರೆದರು. 18 ಎಸೆತಗಳಲ್ಲಿ ಅರ್ಧಶತಕ ಗಳಿಸುವ ಮೂಲಕ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮೀರಿದರು. ಅವರ ಬ್ಯಾಟಿಂಗ್ ಭರಾಟೆ ಮತ್ತು ವೇಗಿ ಮಯಂಕ್ ಯಾದವ್ (18ಕ್ಕೆ2) ಚೆಂದದ ಬೌಲಿಂಗ್ ಬಲದಿಂದ ಭಾರತ ತಂಡವುಗುರುವಾರ ಇಲ್ಲಿನಡೆದ ಟಿ20 ಸರಣಿಯ ಮೊದಲ ಪಂದ್ಯದಲ್ಲ

ಹರಾರೆ: ವೈಭವ್ ಸೂರ್ಯವಂಶಿ ಅಂತರರಾಷ್ಟ್ರೀಯ ಕ್ರಿಕೆಟ್ ಅಂಗಳದಲ್ಲಿಯೂ ತಮ್ಮ ಭುಜಬಲ ಪರಾಕ್ರಮ ಮೆರೆದರು. 18 ಎಸೆತಗಳಲ್ಲಿ ಅರ್ಧಶತಕ ಗಳಿಸುವ ಮೂಲಕ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮೀರಿದರು. ಅವರ ಬ್ಯಾಟಿಂಗ್ ಭರಾಟೆ ಮತ್ತು ವೇಗಿ ಮಯಂಕ್ ಯಾದವ್ (18ಕ್ಕೆ2) ಚೆಂದದ ಬೌಲಿಂಗ್ ಬಲದಿಂದ ಭಾರತ ತಂಡವುಗುರುವಾರ ಇಲ್ಲಿನಡೆದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಜಿಂಬಾಬ್ವೆ ಎದುರು 7 ವಿಕೆಟ್ ಜಯಸಾಧಿಸಿತು. ಶ್ರೇಯಸ್ ಅಯ್ಯರ್ ನಾಯಕರಾದ ನಂತರ ಮೊದಲ ಗೆಲುವಿನ ಸಂಭ್ರಮ ಆಚರಿಸಿದರು. ಹರಾರೆ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮಯಂಕ್ ದಾಳಿಯ ಮುಂದೆ ಜಿಂಬಾಬ್ವೆ ತಂಡವು 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 125 ರನ್ಗಳ ಸಾಧಾರಣ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ಭಾರತ ತಂಡವು ವೈಭವ್ ಸೂರ್ಯವಂಶಿ (50; 19ಎ) ಬೀಸಾಟದ ಬಲದಿಂದ 13.2 ಓವರ್ಗಳಲ್ಲಿ 3 ವಿಕೆಟ್ಗಳಿಗೆ 126 ರನ್ ಗಳಿಸಿ ಗೆದ್ದಿತು. ಈ ಹಾದಿಯಲ್ಲಿ ವೈಭವ್ (15 ವರ್ಷ 118 ದಿನ) ಅವರು ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ವೇಗದ ಅರ್ಧಶತಕ ದಾಖಲಿಸಿದ ಭಾರತದ ಅತಿ ಕಿರಿಯ ವಯಸ್ಸಿನ ಆಟಗಾರನಾದರು. ತೆಂಡೂಲ್ಕರ್ (16 ವರ್ಷ 213 ದಿನ) ಅವರ ದಾಖಲೆಯನ್ನು ಬಿಹಾರದ ಬಾಲಕ ವೈಭವ್ ಮೀರಿ ನಿಂತರು.ಈಚೆಗೆ ಇದೇ ಕ್ರೀಡಾಂಗಣದಲ್ಲಿ ನಡೆದಿದ್ದ 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯ ಫೈನಲ್ನಲ್ಲಿ ವೈಭವ್ 80 ಎಸೆತಗಳಲ್ಲಿ 175 ರನ್ ಗಳಿಸಿದ್ದರು. ಈಗ ಮತ್ತೊಂದು ದಾಖಲೆ ಬರೆದರು.ಆದರೆ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಅಭಿಷೇಕ್ ಶರ್ಮಾ ಎಂಟು ಎಸೆತಗಳಲ್ಲಿ 1 ರನ್ ಮಾತ್ರ ಗಳಿಸಿದರು. ವೈಭವ್ ಅವರು ರಿಚರ್ಡ್ ಎನ್ಗರವಾ ಬೌಲಿಂಗ್ನಲ್ಲಿ ಎರಡು ಸಿಕ್ಸರ್ ಎತ್ತಿದರು. ಆತಿಥೇಯ ತಂಡದ ಬೌಲರ್ ಬ್ಲೆಸಿಂಗ್ ಮುಝರಬಾನಿ ಅವರು ಬಿಗಿ ದಾಳಿ ನಡೆಸಿದರು. ಆರಂಭದಲ್ಲಿ ವೈಭವ್ ಅವರಿಗೆ ಹೆಚ್ಚು ಅವಕಾಶ ಕೊಡಲಿಲ್ಲ. ಆದರೆ ಇನಿಂಗ್ಸ್ನ ಐದನೇ ಓವರ್ ಹಾಕಿದ ಮುಝರಬಾನಿ ಎಸೆತವನ್ನೂ ವೈಭವ್ ಅವರು 90 ಮೀಟರ್ಸ್ ಅಂತರದ ಸಿಕ್ಸರ್ ಹೊಡೆದರು. ಶ್ರೇಯಸ್ ಅವರು ನಾಯಕತ್ವ ವಹಿಸಿಕೊಂಡ ಮೇಲೆ ತಂಡವು ಐರ್ಲೆಂಡ್ ಮತ್ತು ಇಂಗ್ಲೆಂಡ್ನಲ್ಲಿ ಸತತ ಎರಡು ಟಿ20 ಸರಣಿಗಳಲ್ಲಿ ಸೋತಿತು. ಒಟ್ಟು ಆರು ಪಂದ್ಯಗಳಲ್ಲಿ ಪರಾಭವಗೊಂಡಿತ್ತು. ಒಂದು ಮಳೆಗೆ ರದ್ದಾಗಿತ್ತು. ಇಲ್ಲಿ ಗೆಲುವು ಸುಲಭವಾಗಿ ಒಲಿಯಿತು. 2024ರ ಅಕ್ಟೋಬರ್ ನಂತರ ಮತ್ತೆ ಕಣಕ್ಕೆ ಮರಳಿದ ವೇಗಿ ಮಯಂಕ್ ಅವರು ಇನಿಂಗ್ಸ್ನ ಮೊದಲ ಎಸೆತದಲ್ಲಿ ಬ್ರಯನ್ ಬೆನೆಟ್ ವಿಕೆಟ್ ಕಬಳಿಸಿದರು. ಐದನೇ ಓವರ್ನಲ್ಲಿ ಡಿಯಾನ್ ಮೆಯರ್ಸ್ ವಿಕೆಟ್ ಕೂಡ ತಮ್ಮದಾಗಿಸಿಕೊಂಡರು. ಇನ್ನೊಂದು ಬದಿಯಿಂದ ಪ್ರಿನ್ಸ್ ಯಾದವ್ (19ಕ್ಕೆ2) ಅವರು ಪರಿಣಾಮಕಾರಿ ದಾಳಿ ನಡೆಸಿದರು.ಇದರಿಂದಾಗಿ ಜಿಂಬಾಬ್ವೆ ತಂಡವು ಸಾಧಾರಣ ಮೊತ್ತ ಗಳಿಸಿತು.ಸಂಕ್ಷಿಪ್ತ ಸ್ಕೋರು: ಜಿಂಬಾಬ್ವೆ: 20 ಓವರ್ಗಳಲ್ಲಿ 7ಕ್ಕೆ125 (ರಿಯಾನ್ ಬುರಿ 26, ವೆಸ್ಲಿ ಮದೆವೆರೆ 39, ತಡಿವನಾಶೆ ಮೆರುಮನಿ 27, ಮಯಂಕ್ ಯಾದವ್ 18ಕ್ಕೆ2, ಪ್ರಿನ್ಸ್ ಯಾದವ್ 19ಕ್ಕೆ2, ಶಿವಂ ದುಬೆ 32ಕ್ಕೆ1, ರವಿ ಬಿಷ್ಣೋಯಿ 24ಕ್ಕೆ1)ಭಾರತ: 13.2 ಓವರ್ಗಳಲ್ಲಿ 3ಕ್ಕೆ126 (ವೈಭವ್ ಸೂರ್ಯವಂಶಿ 50, ಇಶಾನ್ ಕಿಶನ್ 35, ಶ್ರೇಯಸ್ ಅಯ್ಯರ್ ಔಟಾಗದೇ 28, ಬ್ಲೆಸಿಂಗ್ ಮುಝರಬಾನಿ 26ಕ್ಕೆ2, ರಿಚರ್ಡ್ ಎನ್ಗರಾವಾ 30ಕ್ಕೆ1) ಭಾರತ ತಂಡಕ್ಕೆ 7 ವಿಕೆಟ್ ಜಯ. ಸರಣಿಯಲ್ಲಿ 1–0 ಮುನ್ನಡೆ. ಪಂದ್ಯದ ಆಟಗಾರ: ಮಯಂಕ್ ಯಾದವ್.