IND vs ZIM T20: ಗೆಲುವಿನ ಹಳಿಗೆ ಮರಳಲು ಭಾರತ ತವಕ
ಹರಾರೆ: ಶ್ರೇಯಸ್ ಅಯ್ಯರ್ ಅವರು ಭಾರತ ಟಿ20 ತಂಡದ ನಾಯಕತ್ವ ವಹಿಸಿಕೊಂಡ ಮೇಲೆ ಮೊದಲ ಗೆಲುವು ಪಡೆಯಲು ತವಕದಿಂದಿದ್ದಾರೆ. ಕೆಚ್ಚೆದೆಯ ಆಟವಾಡಬಲ್ಲ ಜಿಂಬಾಬ್ವೆ ವಿರುದ್ಧ ಗುರುವಾರ ಆರಂಭವಾಗುವ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಯುವ ಆಟಗಾರರೂ ಲಯ ಕಂಡುಕೊಳ್ಳಲು ಕಾತರದಲ್ಲಿದ್ದಾರೆ.ಅಯ್ಯರ್ ಸಾರಥ್ಯ ವಹಿಸಿದ ನಂತರ ಭಾರತ ತಂಡ ಐರ್ಲೆಂಡ್ ವಿರುದ್ಧ (ಎರಡು) ಮತ್ತು ಇಂಗ್ಲೆಂ

ಹರಾರೆ: ಶ್ರೇಯಸ್ ಅಯ್ಯರ್ ಅವರು ಭಾರತ ಟಿ20 ತಂಡದ ನಾಯಕತ್ವ ವಹಿಸಿಕೊಂಡ ಮೇಲೆ ಮೊದಲ ಗೆಲುವು ಪಡೆಯಲು ತವಕದಿಂದಿದ್ದಾರೆ. ಕೆಚ್ಚೆದೆಯ ಆಟವಾಡಬಲ್ಲ ಜಿಂಬಾಬ್ವೆ ವಿರುದ್ಧ ಗುರುವಾರ ಆರಂಭವಾಗುವ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಯುವ ಆಟಗಾರರೂ ಲಯ ಕಂಡುಕೊಳ್ಳಲು ಕಾತರದಲ್ಲಿದ್ದಾರೆ.ಅಯ್ಯರ್ ಸಾರಥ್ಯ ವಹಿಸಿದ ನಂತರ ಭಾರತ ತಂಡ ಐರ್ಲೆಂಡ್ ವಿರುದ್ಧ (ಎರಡು) ಮತ್ತು ಇಂಗ್ಲೆಂಡ್ ವಿರುದ್ಧ (ಐದು) ಆಡಿರುವ ಒಟ್ಟು ಏಳು ಟಿ20 ಪಂದ್ಯಗಳಲ್ಲಿ ಆರನ್ನು ಸೋತಿದೆ. ಇಂಗ್ಲೆಂಡ್ ವಿರುದ್ಧ ಒಂದು ಪಂದ್ಯ ಮಳೆಗೆ ಕೊಚ್ಚಿಹೋಗಿತ್ತು. ಹೀಗಾಗಿ ಅಯ್ಯರ್ ಅವರಿಗೆ ತಂಡವನ್ನು ಗೆಲುವಿನ ಹಳಿಗೆ ಕರೆದೊಯ್ಯಲು ಈ ಸರಣಿ ಅವಕಾಶ ಕಲ್ಪಿಸಿದೆ.ಭಾರತ ತಂಡವು ಈ ಸರಣಿ ಗೆದ್ದರೆ ಅದೇನೂ ಅನಿರೀಕ್ಷಿತವೆನಿಸದು. ಆದರೆ ಸೋತರೆ ಅದು ಈ ಯುವೋತ್ಸಾಹದ ತಂಡವನ್ನು ಇನ್ನಷ್ಟು ಒತ್ತಡಕ್ಕೆ ಸಿಲುಕಿಸಬಹುದು. ಈ ಪ್ರವಾಸದ ಮಟ್ಟಿಗೆ ವಿ.ವಿ.ಎಸ್. ಲಕ್ಷ್ಮಣ್ ಅವರು ತಂಡಕ್ಕೆ ಹೆಡ್ ಕೋಚ್ ಆಗಿದ್ದಾರೆ. ಗೌತಮ್ ಗಂಭೀರ್ ಮತ್ತು ಲಕ್ಷ್ಮಣ್ ಅವರ ಮನೋಭಾವ ಭಿನ್ನಸ್ವರೂಪದ್ದು. ಆಕ್ರಮಣಕಾರಿ ಆಟದ ಪ್ರತಿಪಾದಕರಾದ ಗಂಭೀರ್ ಆಡುವ 11ರಲ್ಲಿ ಬದಲಾವಣೆಗಳನ್ನು ಮಾಡುತ್ತ ಇರುವವರು. ಆದರೆ ಆ ಪ್ರಮಾಣದಲ್ಲಿ ಪ್ರಯೋಗಗಳಿಗೆ ಲಕ್ಷ್ಮಣ್ ಮುಂದಾಗುವವರಲ್ಲ.ವೈಭವ್ ಮೇಲೆ ಕಣ್ಣು: ನಿರ್ಭೀತ ಬೀಸಾಟದಿಂದ ಬೇಗನೇ ತಂಡಕ್ಕೆ ಲಗ್ಗೆಯಿಟ್ಟಿರುವ ‘ಬಾಯ್ ವಂಡರ್’ ವೈಭವ್ ಸೂರ್ಯವಂಶಿ ಮೂರೂ ಪಂದ್ಯಗಳಲ್ಲಿ ಅಭಿಷೇಕ್ ಶರ್ಮಾ ಜೊತೆ ಇನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ. ಈ ಪ್ರವಾಸಕ್ಕೆ ಸಂಜು ಸ್ಯಾಮ್ಸನ್ ಆಯ್ಕೆಯಾಗಿಲ್ಲ.ಅಭಿಷೇಕ್ ಮತ್ತು 15 ವರ್ಷ ವಯಸ್ಸಿನ ಸೂರ್ಯವಂಶಿ ಅವರಿಗೆ ಇಲ್ಲಿ ಸವಿನೆನಪುಗಳಿವೆ. ಅಭಿಷೇಕ್ ಅವರು ಹರಾರೆ ಸ್ಪೋರ್ಟ್ಸ್ ಕ್ಲಬ್ನಲ್ಲಿ ಪದಾರ್ಪಣೆ ಮಾಡಿದ್ದರು. ಎರಡನೇ ಪಂದ್ಯದಲ್ಲೇ ತಮ್ಮ ಮೊದಲ ಟಿ20 ಶತಕ ಬಾರಿಸಿದ್ದರು. ಈ ವರ್ಷದ ಫೆಬ್ರುವರಿಯಲ್ಲಿ ಜೂನಿಯರ್ ವಿಶ್ವಕಪ್ ಫೈನಲ್ನಲ್ಲಿ ಇಂಗ್ಲೆಂಡ್ ದಾಳಿಯನ್ನು ನೆಲಸಮ ಮಾಡಿದ್ದ ಸೂರ್ಯವಂಶಿ ಭರ್ಜರಿ ಶತಕ (175, 80 ಎಸೆತ) ಗಳಿಸಿ ಭಾರತದ ಗೆಲುವಿಗೆ ಕಾರಣರಾಗಿದ್ದರು.ಇತ್ತೀಚಿನ ಸತತ ಹಿನ್ನಡೆಯಿಂದ ತಂಡ ಒತ್ತಡದಲ್ಲಿರುವ ಕಾರಣ ಮೊದಲ ಪಂದ್ಯದಲ್ಲಿ ಭಾರತ ಪ್ರಯೋಗಕ್ಕೆ ಕೈಹಾಕುವ ಸಾಧ್ಯತೆಯಿಲ್ಲ. ಜಿಂಬಾಬ್ವೆಯ ಇಬ್ಬರು ಎತ್ತರದ ವೇಗಿಗಳಾದ ಬ್ಲೆಸಿಂಗ್ ಮುಝರಾಬಾನಿ ಮತ್ತು ರಿಚರ್ಡ್ ಎನ್ಗವಾರ ಅವರು ಭಾರತಕ್ಕೆ ಸವಾಲೊಡ್ಡಬಲ್ಲರು. ಹೀಗಾಗಿ ಲಕ್ಷ್ಮಣ್ ಅವರ ತಂತ್ರಗಾರಿಕೆ ಕುತೂಹಲ ಮೂಡಿಸಿದೆ.ತಿಲಕ್ ವರ್ಮಾ ಐದನೇ ಕ್ರಮಾಂಕದಲ್ಲಿ ಅಷ್ಟೇನೂ ಯಶ ಕಂಡಿಲ್ಲ. ಅವರು ಆಡುವ ಮೂರನೆ ಕ್ರಮಾಂಕದಲ್ಲಿ ಅನುಭವಿ ಇಶಾನ್ ಕಿಶನ್ ಬೇರೂರಿದ್ದಾರೆ. ಐದನೇ ಕ್ರಮಾಂಕಕ್ಕೆ ರಿಂಕು ಸಿಂಗ್ ಕೂಡ ಸೂಕ್ತವಾಗಬಲ್ಲರು. ಆದರೆ ಉಪನಾಯಕನ (ತಿಲಕ್ ವರ್ಮಾ) ಕ್ರಮಾಂಕದಲ್ಲಿ ಅವರು ಆಡುವ ಸಾಧ್ಯತೆಯಿಲ್ಲ.ಹರ್ಷ ದುಬೆ, ಶಿವಂ ದುಬೆ, ಸೂರ್ಯಾಂಶ್ ಶೆಡ್ಗೆ ಅವರಲ್ಲಿ ಇಬ್ಬರನ್ನು ಆರಿಸುವುದೂ ಸವಾಲು. ಮೂವರೂ ಪರಿಣತ ಆಲ್ರೌಂಡರ್ಗಳಲ್ಲ. ಗಂಭೀರ್ ಆಲ್ರೌಂಡರ್ಗಳಿಗೆ ಆದ್ಯತೆ ನೀಡುವವರು. ಆದರೆ ಲಕ್ಷ್ಮಣ್ ಆದ್ಯತೆ ಭಿನ್ನವಾದುದು.ವೇಗಿಗಳಾದ ಮಯಂಕ್ ಯಾದವ್, ಅಶೋಕ್ ಶರ್ಮಾ, ಪ್ರಿನ್ಸ್ ಯಾದವ್ ಮತ್ತು ಯಶ್ ಠಾಕೂರ್ ಅವರು ಉಪಯುಕ್ತ ಬ್ಯಾಟರ್ಗಳಲ್ಲ. ಅಶೋಕ್ ಮತ್ತು ಯಶ್ ಅವರಲ್ಲಿ ಒಬ್ಬರಷ್ಟೇ ಅವಕಾಶ ಪಡೆಯಬಹುದು.ತಂಡಗಳು ಹೀಗಿವೆ: ಭಾರತ: ಶ್ರೇಯಸ್ ಅಯ್ಯರ್ (ನಾಯಕ), ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಶಿವಂ ದುಬೆ, ಹರ್ಷ ದುಬೆ, ಸೂರ್ಯಾಂಶ್ ಶೆಡ್ಗೆ, ಯಶ್ ಠಾಕೂರ್, ಪ್ರಿನ್ಸ್ ಯಾದವ್, ಮಯಂಕ್ ಯಾದವ್, ಅಶೋಕ್ ಶರ್ಮಾ, ರವಿ ಬಿಷ್ಣೋಯಿ, ಪ್ರಭಸಿಮ್ರನ್ ಸಿಂಗ್, ರಿಂಕು ಸಿಂಗ್.ಜಿಂಬಾಬ್ವೆ: ಸಿಕಂದರ್ ರಝಾ (ನಾಯಕ), ಬ್ರಿಯಾನ್ ಬೆನೆಟ್, ರಯಾನ್ ಬರ್ಲ್, ತನಾಕ ಚಿವಾಂಗ, ಬೆನ್ ಕರನ್, ಬ್ರಾಡ್ ಇವಾನ್ಸ್, ವೆಸ್ಲಿ ಮಧೆವೆರೆ, ತಸಿವನಾಶೆ ಮರುಮಣಿ, ವೆಲ್ಟಿಂಗ್ಟನ್ ಮಸಕದ್ಜಾ, ಬ್ಲೆಸಿಂಗ್ ಮುಝರಾಬಾನಿ, ಡಿಯಾನ್ ಮೈರ್ಸ್, ರಿಚಾರ್ಡ್ ಎನ್ಗವಾರ, ನೆವ್ಮನ್ ನ್ಯಾಮ್ಹುರಿ, ಮಿಲ್ಟನ್ ಶುಂಬಾ, ತಫದ್ಜ್ವಾ ಸಿಗಾ.ಪಂದ್ಯ ಆರಂಭ: ಸಂಜೆ 4.30.