ಆಹಾ ನಂ‘ಗೇ’ ಮದುವೆಯಂತೆ..!
ಗೇ ವ್ಯಕ್ತಿ ಹಲವಾರು ಸಮಸ್ಯೆಗಳನ್ನು ಬದುಕಿನಲ್ಲಿ ಎದುರಿಸಿದರೂ ಅವನ ನಿಜವಾದ ಸಮಸ್ಯೆ ಏಕಾಂಗಿಯಾಗಿ ಬದುಕುವುದೇ ಆಗಿದೆ. ಸಂಗಾತಿಯಿಲ್ಲದೆ ಒಬ್ಬರೇ ಬದುಕನ್ನು ನಿಭಾಯಿಸುವ ಹಿರಿಯ ಗೇ ಜೀವಿಗಳನ್ನು ನೋಡಿದರೆ ಸಂಕಟವಾಗುತ್ತದೆ. ಸಮಾಜದ ಇತರ ಸವಾಲುಗಳಾದ ಕಡೆಗಣ್ಣಿನ ಕುಹುಕದ ನೋಟ, ‘ಹೆಣ್ಣಾಡಂಗಿ’ ಎಂದು ಗೋಳಾಡಿಸುವ ಸಹಪಾಟಿಗಳ ಅವಮಾನವನ್ನು ಎದುರಿಸುತ್ತಾ ಶಾಲೆ, -ಪದವಿಯನ್ನು

ಗೇ ವ್ಯಕ್ತಿ ಹಲವಾರು ಸಮಸ್ಯೆಗಳನ್ನು ಬದುಕಿನಲ್ಲಿ ಎದುರಿಸಿದರೂ ಅವನ ನಿಜವಾದ ಸಮಸ್ಯೆ ಏಕಾಂಗಿಯಾಗಿ ಬದುಕುವುದೇ ಆಗಿದೆ. ಸಂಗಾತಿಯಿಲ್ಲದೆ ಒಬ್ಬರೇ ಬದುಕನ್ನು ನಿಭಾಯಿಸುವ ಹಿರಿಯ ಗೇ ಜೀವಿಗಳನ್ನು ನೋಡಿದರೆ ಸಂಕಟವಾಗುತ್ತದೆ. ಸಮಾಜದ ಇತರ ಸವಾಲುಗಳಾದ ಕಡೆಗಣ್ಣಿನ ಕುಹುಕದ ನೋಟ, ‘ಹೆಣ್ಣಾಡಂಗಿ’ ಎಂದು ಗೋಳಾಡಿಸುವ ಸಹಪಾಟಿಗಳ ಅವಮಾನವನ್ನು ಎದುರಿಸುತ್ತಾ ಶಾಲೆ, -ಪದವಿಯನ್ನು ಮುಗಿಸುವುದು, ಸಮಾನ ಲೈಂಗಿಕ ಆಸಕ್ತಿಯ ಹುಡುಗರು ಎಲ್ಲಿಹರೋ ತಿಳಿಯದೆ ಕಷ್ಟಪಟ್ಟು ಹೇಗೋ ಹುಡುಕಿಕೊಂಡು ದೈಹಿಕ ಬಯಕೆ ತೀರಿಸಿಕೊಳ್ಳುವುದು, ಅಪ್ಪ- ಅಮ್ಮನನ್ನು ಎದುರು ಹಾಕಿಕೊಂಡು ಮದುವೆಯಾಗದೇ ಉಳಿಯುವುದು - ಎಲ್ಲವನ್ನೂ ಹೇಗೋ ನಿಭಾಯಿಸುತ್ತಾನೆ. ಆದರೆ ತಂದೆ- ತಾಯಿ ತೀರಿಕೊಂಡು, ಸಹೋದರ -ಸಹೋದರಿಯರು ಮದುವೆಯಾಗಿ ದೂರವಾಗಿ, ಯೌವನದಲ್ಲಿ ಕೂಡಲು ಹಂಬಲಿಸುತ್ತಿದ್ದ ಹುಡುಗರೆಲ್ಲರೂ ಮಾತಾಡಿಸಲೂ ಸಿಗದಷ್ಟು ತಮ್ಮದೇ ದಂದುಗದಲ್ಲಿ ಮುಳುಗಿ ಹೋಗಿರುವಾಗ, ಇವನು ತನ್ನ ನಡುವಯಸ್ಸಿನಲ್ಲಿ ವ್ಯಯಿಸಲಾಗದಷ್ಟು ವಿರಾಮವನ್ನು ಮುಂದಿಟ್ಟುಕೊಂಡು ತಲೆಯ ಕೂದಲು ಹಣ್ಣಾಗಿ ಆರೋಗ್ಯ ತುಸು ತುಸುವೇ ಕೈಕೊಡುತ್ತಿರುವಾಗ ಏನು ಮಾಡುವುದೆಂದೇ ತೋಚದೆ ಒಬ್ಬನೇ ಮನೆಯಲ್ಲಿ ಟೀವಿ ರಿಮೋಟ್ ಕೈಯಲ್ಲಿ ಹಿಡಿದು ಚಾನಲ್ ಬದಲಾಯಿಸುತ್ತಾ ಉಳಿಯುತ್ತಾನಲ್ಲಾ, ಅದೇ ಅವನ ಬದುಕಿನ ದೊಡ್ಡ ಹಿಂಸೆ. ತುಸು ಜ್ವರ ಬಂದರೂ ಯಾರ ಬಳಿ ಸಹಾಯಕ್ಕೆ ಹಂಬಲಿಸಬೇಕು ಎಂದು ತೋಚದೆ, ದುಡ್ಡಿದ್ದವನಾದರೆ ಸಣ್ಣ ಸಮಸ್ಯೆಗೂ ದೊಡ್ಡ ಆಸ್ಪತ್ರೆಗೆ ಹೋಗಿ ಅವರು ಅಡ್ಮಿಟ್ ಮಾಡಿಕೊಳ್ಳಲು ನಿರಾಕರಿಸಿದರೂ ‘ದಯವಿಟ್ಟು ಅಡ್ಮಿಟ್ ಮಾಡಿಕೊಳ್ಳಿ’ ಎಂದು ಗೋಗೆರೆಯುವ ಅವಸ್ಥೆಯೇ ಅವನ ದೊಡ್ಡ ಸವಾಲು. ಬಹುತೇಕ ತಂದೆ-ತಾಯಿಗಳು ಅಂಜುವುದು ತಮ್ಮ ‘ಗೇ’ ಎಂದು ಹೇಳಿಕೊಳ್ಳುವ ಮಗನು ಎಲ್ಲಿ ಅಂತಹ ಸ್ಥಿತಿಗೆ ಸಿಲುಕುತ್ತಾನೋ ಎಂದೇ ಹೊರತು ಅವನ ವಿಭಿನ್ನ ಲೈಂಗಿಕ ಬಯಕೆ ಸಂಗತಿಗೆ ಅಷ್ಟಾಗಿ ಅಲ್ಲ.ಇಂತಹ ಅವಸ್ಥೆಯನ್ನು ಯಾರೂ ಎದುರಿಸಬಾರದು ಎನ್ನುವ ಕಾರಣಕ್ಕೆ ಮನುಷ್ಯರು ‘ಮದುವೆ’ ಎನ್ನುವ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ಧರ್ಮ, ಬುಡಕಟ್ಟು, ಜಾತಿ, ವರ್ಗ, ದೇಶ-ಕಾಲಗಳ ವ್ಯತ್ಯಾಸವಿಲ್ಲದೆ ಮದುವೆಯೆಂಬ ವ್ಯವಸ್ಥೆ ಎಲ್ಲೆಡೆಯೂ ಶತಮಾನಗಳಿಂದ ಚಾಲ್ತಿಯಲ್ಲಿದೆ. ಮದುವೆಯೆನ್ನುವುದು ಕೇವಲ ಮನುಷ್ಯ ಜೀವಿ ತನ್ನ ಒಳಿತಿಗಾಗಿ ಮಾಡಿಕೊಂಡ ಒಂದು ಅನನ್ಯವಾದ ಮತ್ತು ವಿಶೇಷ ಸಾಮಾಜಿಕ ವ್ಯವಸ್ಥೆ. ಹಾಗೆ ನೋಡಿದರೆ ನಿಸರ್ಗದಲ್ಲಿ ಮದುವೆ ಎನ್ನುವುದು ಇಲ್ಲವೇ ಇಲ್ಲ. ಒಂದು ಗಂಡು ಮತ್ತು ಒಂದು ಹೆಣ್ಣು ಬೆದೆ ಬಂದ ಕಾಲಕ್ಕೆ ಕೂಡುತ್ತವೆ, ಅನಂತರ ಮಕ್ಕಳು ಮಾಡಿಕೊಂಡು ಅವುಗಳಿಗೆ ವಿದ್ಯೆ ಕಲಿಸಿ ಸ್ವತಂತ್ರವಾಗಿ ಬದುಕಲು ಕಲಿಸಿ ದೂರಾಗಿಸಿ, ತಾವೂ ಬೇರ್ಪಟ್ಟು ಹೊಸ ಬದುಕನ್ನು ಹುಡುಕಿಕೊಂಡು ಹೋಗುತ್ತವೆ. ಮತ್ತೆ ಹೊಸ ಸಂಗಾತಿಗೆ ಹುಡುಕಾಡಿ, ಹೊಸ ಬದುಕನ್ನು ಹಂಬಲಿಸುತ್ತವೆ. ಒಮ್ಮೆ ಕೂಡಿದ ಸಂಗಾತಿಯೊಡನೆ, ಹುಟ್ಟಿದ ಮಕ್ಕಳೊಡನೆ ಇಡೀ ಜೀವನವೆಲ್ಲಾ ಕಳೆಯುವ ವಿಚಿತ್ರ ಪದ್ಧತಿ ನಿಸರ್ಗದಲ್ಲೆಲ್ಲೂ ಇಲ್ಲ. ಆದರೆ ಮನುಷ್ಯನಿಗೆ ಈ ನಿಸರ್ಗದ ಸಹಜ ಬದುಕಿನ ಕ್ರಮ ಹೊಂದಾಣಿಕೆಯಾಗದೆ, ಅನೈಸರ್ಗಿಕವಾಗಿ ಹೊಸತೇ ಬಗೆಯ ‘ಮದುವೆ’ ಎಂಬ ವ್ಯವಸ್ಥೆಯ ಅವಶ್ಯಕತೆ ಇರುವುದಕ್ಕೆ ಹಲವು ಕಾರಣಗಳಿವೆ. ಪ್ರಾಣಿ ಪಕ್ಷಿಗಳಲ್ಲಿ ಮಕ್ಕಳಿಗೆ ವಿದ್ಯೆ ಕಲಿಸಿ ಸ್ವತಂತ್ರವಾಗಿಸುವಷ್ಟು ಸುಲಭವಾಗಿ ಮನುಷ್ಯ ಮಾಡಲಾರ. ಅದು ಅವನಲ್ಲಿ ಸುದೀರ್ಘವಾದ ಕ್ರಿಯೆ. ಜೊತೆಗೆ ಈ ಬೆಳೆಸುವಿಕೆಯಲ್ಲಿ ಪ್ರೀತಿಯ ಬಂಧನವನ್ನು ಬೆಳೆಸಿಕೊಂಡು ಬಿಡುತ್ತಾನೆ. ಅದನ್ನು ಬಿಡಿಸಿಕೊಂಡು ಹೊರಬರುವ ಶಕ್ತಿ ಅವನಿಗಿಲ್ಲ. ಜೊತೆಗೆ ಮಕ್ಕಳು ಬೆಳೆದು ದೊಡ್ಡವರಾಗಿ ಸ್ವತಂತ್ರವಾಗುವ ಹೊತ್ತಿಗೆ ಅವನಿಗೆ ಮತ್ತೊಂದು ಸಂಗಾತಿಯನ್ನು ಹುಡುಕಿಕೊಳ್ಳುವ ಚೈತನ್ಯವಾಗಲಿ, ಚೆಲುವಾಗಲಿ ಉಳಿಯದಿರದೆ ಮತ್ತೊಬ್ಬರ ಮೇಲೆ ಅವಲಂಬಿತನಾಗುತ್ತಾನೆ. ಆದ್ದರಿಂದಲೇ ಬದುಕಿನ ಕೊನೆಯ ತನಕವೂ ಸಂಗಾತಿ ಮತ್ತು ಮಕ್ಕಳು ಬೇಕೆಂದು ಬಯಸುತ್ತಾನೆ.ಯಾವುದೇ ಗೇ ವ್ಯಕ್ತಿಯನ್ನು ವಿಚಾರಿಸಿದರೂ ಒಂದು ಅನುಭವವನ್ನು ತಪ್ಪದೆ ಹೇಳುತ್ತಾನೆ. ಗೆಳೆಯರ, ಬಂಧು-ಬಳಗದವರ ಮದುವೆಗೆ ಹೋದಾಗ, ಇಡೀ ಮದುವೆಯ ಗುಂಪೆಲ್ಲಾ ಸಂಭ್ರಮದಿಂದ ಸಂತೋಷವಾಗಿರುವಾಗ ಅವನು ಸದ್ದಿಲ್ಲದೆ ಕಣ್ಣು ತೇವ ಮಾಡಿಕೊಂಡಿರುತ್ತಾನೆ. ತುಸು ಭಾವುಕನಾದ ಹುಡುಗ ಮದುವೆಯ ಮಂಟಪದಿಂದ ದೂರ ಹೋಗಿ, ಯಾರೂ ಇರದ ಕಡೆಯಲ್ಲಿ ಏಕಾಂಗಿಯಾಗಿ ಬಿಕ್ಕಳಿಸಿರುತ್ತಾನೆ. ನಮ್ಮ ಬದುಕಲ್ಲಿ ಮದುವೆಯೆಂಬುದು ಈಗಾಗಲೇ ನಡೆದಿದೆ ಅಥವಾ ಕೆಲವೇ ದಿನಗಳಲ್ಲಿ ನಡೆಯುತ್ತದೆ ಎಂಬ ಭರವಸೆಯಿದ್ದಾಗ ಮಾತ್ರ ಇನ್ನೊಂದು ಮದುವೆಯ ಸಮಾರಂಭದಲ್ಲಿ ಸಂತೋಷದಿಂದ ಭಾಗವಹಿಸಲು ಸಾಧ್ಯ. ಇಲ್ಲವಾದರೆ ಆ ಸಮಾರಂಭ ಅಕ್ಷರಶಃ ಒಂದು ನರಕ ವೇದನೆಯ ಸ್ಥಳ. ಆದ್ದರಿಂದ ಗೇ ಹುಡುಗರು ಒಂದು ಹಂತದ ನಂತರ ಮದುವೆಯ ಸಮಾರಂಭದಲ್ಲಿ ಭಾಗವಹಿಸಲು ಹಿಂಜರಿಯುತ್ತಾರೆ. ಏನಾದರೂ ನೆಪ ಹೂಡಿ ತಪ್ಪಿಸಿಕೊಳ್ಳಲು ನೋಡುತ್ತಾರೆ.ಇಂತಹ ಸಂಕಟಗಳೆಲ್ಲಾ ವ್ಯಕ್ತಿಯೊಬ್ಬನನ್ನು ಸಮಾಜದಿಂದ ದೂರವಾಗಿಸಿ, ಅವನ ಮನಸ್ಸನ್ನು ಕಹಿಯಾಗಿಸುತ್ತವೆ. ವ್ಯಕ್ತಿಯೊಬ್ಬ ಸಮಾಜದ ಭಾಗವಾಗದೇ ಹೋದರೆ ಅದು ಸಮಾಜದ ಶಕ್ತಿಯನ್ನು ಕುಗ್ಗಿಸಿದಂತೆ, ಪ್ರಜಾಪ್ರಭುತ್ವದ ಮೌಲ್ಯವನ್ನು ಸಂಕುಚಿತಗೊಳಿಸಿದಂತೆ. ಹಾಗಾಗುವುದು ಯಾವುದೇ ದೇಶಕ್ಕಾಗಲಿ ಅಥವಾ ಸಮಾಜಕ್ಕಾಗಲಿ ಶೋಭೆಯಲ್ಲ. ಆದ್ದರಿಂದಲೇ ಬಹುತೇಕ ಪ್ರಗತಿಪರ ದೇಶಗಳೆಲ್ಲವೂ ಗೇ ಮದುವೆಯನ್ನು ಕಾನೂನುಬದ್ಧಗೊಳಿಸಿಕೊಂಡಿವೆ ಅಥವಾ ಅದಕ್ಕಾಗಿ ಒತ್ತಾಯಿಸುತ್ತಿವೆ. ಮದುವೆಗೆ ಮುಖ್ಯವಾಗಿ ಬೇಕಿರುವುದು ಒಂದಕ್ಕೊಂದು ಪ್ರೀತಿಸುವ, ಜೊತೆಯಾಗಿರಲು ಬಯಸುವ ಎರಡು ಜೀವಗಳೇ ಹೊರತು ಅವುಗಳ ಲಿಂಗ ಮುಖ್ಯವಲ್ಲವೆಂದು ಅವೆಲ್ಲಾ ಅರಿತುಕೊಂಡಿವೆ. ಭಾರತದಲ್ಲೂ ಈ ಕಾರಣಕ್ಕಾಗಿಯೇ ಕ್ವೀರ್ ಸಮುದಾಯ ಹೋರಾಟ ನಡೆಸುತ್ತಿದೆ.ಮದುವೆಯೆನ್ನುವುದು ಸಹಬಾಳ್ವೆಗಾಗಿ ಮಾಡಿಕೊಂಡ ವ್ಯವಸ್ಥೆಯಾದರೂ ಅದರಿಂದಾಗಿ ಹಲವಾರು ಅನುಕೂಲಗಳು ಕುಟುಂಬವೊಂದಕ್ಕೆ ಲಭಿಸುತ್ತವೆ. ಆಸ್ತಿ ಹಂಚಿಕೆ ಮತ್ತು ವರ್ಗಾವಣೆ, ವಿಮೆಯ ವಾರಸುದಾರಿಕೆ, ಅನುಕಂಪ ಆಧಾರಿತ ಉದ್ಯೋಗ ಮತ್ತು ಇತರ ಸವಲತ್ತುಗಳು, ದತ್ತು ಸ್ವೀಕಾರ, ಶಸ್ತ್ರಚಿಕಿತ್ಸೆಯಂತಹ ಸಮಯದಲ್ಲಿ ಸಮ್ಮತಿ, ಪಿಂಚಣಿ, ಸಾಲ ಮತ್ತು ತೆರಿಗೆಗಳ ಲಭ್ಯತೆ, ಅಷ್ಟೇ ಏಕೆ ಬ್ಯಾಂಕೊಂದರಲ್ಲಿ ಜಂಟಿ ಖಾತೆ ತೆರೆಯಲು ಕೂಡ ಮದುವೆಯ ರುಜು ಬೇಕಾಗುತ್ತದೆ. ಗೇ ವ್ಯಕ್ತಿಯೊಬ್ಬನಿಗೂ ಈ ಎಲ್ಲಾ ಅನುಕೂಲಗಳ ಅವಶ್ಯಕತೆ ಇರುತ್ತದೆ. ಹಾಗೆ ನೋಡಿದರೆ ಈ ಎಲ್ಲಾ ಅನುಕೂಲಗಳೂ ನಮ್ಮ ಸಂವಿಧಾನದಲ್ಲಿ ‘ಸಮಾನತೆ ಮತ್ತು ಬದುಕಿನ ಹಕ್ಕು’ಗಳ ಅಡಿಯಲ್ಲಿ ಬರುತ್ತವೆ. ವ್ಯಕ್ತಿಯೊಬ್ಬನ ಲೈಂಗಿಕತೆ ಬೇರೆಯಾದ ಮಾತ್ರಕ್ಕೆ ಅವನು ಈ ‘ಸಮಾನತೆ ಮತ್ತು ಬದುಕಿನ ಹಕ್ಕು’ಗಳನ್ನು ಕಳೆದುಕೊಳ್ಳಲು ಸಾಧ್ಯವೆ?ಗಂಡು-–ಗಂಡು ಅಥವಾ ಹೆಣ್ಣು–ಹೆಣ್ಣು ಮದುವೆಯಾಗದಿದ್ದರೂ ಜೋಡಿಯಾಗಿ ಬದುಕಲು ನಮ್ಮ ಸರ್ವೋಚ್ಚ ನ್ಯಾಯಾಲಯ ಅವಕಾಶವನ್ನು ಕೊಟ್ಟಿದೆ. ಈ ಬದಲಾವಣೆಗಾಗಿ ಕ್ವೀರ್ ಸಮುದಾಯ ದಶಕಗಳ ಕಾಲ ಹೋರಾಟ ಮಾಡಿ, 2018ರಲ್ಲಿ ಗಳಿಸಿದೆ. ಹಾಗಿದ್ದರೆ ಮದುವೆಯೆನ್ನುವ ಸಂಪ್ರದಾಯ ಮತ್ತೇಕೆ ಬೇಕು ಎಂದು ನಿಮಗನ್ನಿಸಬಹುದು. ಅದನ್ನು ಅರಿಯಲು ಒಂದು ಸನ್ನಿವೇಶವನ್ನು ಊಹಿಸಿಕೊಳ್ಳಿ. ಇಬ್ಬರು ಹುಡುಗರು ಒಬ್ಬರಿಗೊಬ್ಬರು ಪ್ರೀತಿಸಿ ಜೊತೆಯಾಗಿ ಹಿತವಾಗಿ ಹತ್ತಾರು ವರ್ಷ ಬದುಕಿದ್ದಾರೆ ಎಂದುಕೊಳ್ಳೋಣ. ಯಾವುದೋ ಹಂತದಲ್ಲಿ ಅವರಲ್ಲಿ ಒಬ್ಬನಿಗೆ ಹೃದಯಾಘಾತವಾಗಿ, ತೆರೆದ ಹೃದಯದ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಎದುರಾಗಿದೆ ಎನ್ನಿ. ಅದಕ್ಕೆ ಸಮ್ಮತಿ ಯಾರು ಕೊಡಬೇಕು? ಅವನ ಜೊತೆ ಪ್ರೀತಿಯಿಂದ ದಶಕಗಳ ಕಾಲ ಬಾಳಿದ ಜೊತೆಗಾರನ ಸಮ್ಮತಿಯನ್ನು ವೈದ್ಯರು ಒಪ್ಪಿಕೊಳ್ಳುವುದಿಲ್ಲ. ಏಕೆಂದರೆ ಅವರ ಸುದೀರ್ಘ ಬದುಕಿಗೆ ‘ಮದುವೆ’ಯೆಂಬ ಕಾನೂನಿನ ಮನ್ನಣೆಯಿರುವುದಿಲ್ಲ. ಈ ಇಳಿವಯಸ್ಸಿನಲ್ಲಿ ಆ ಗೇ ವ್ಯಕ್ತಿಗೆ ಬಹುತೇಕ ತಂದೆ-ತಾಯಿಯರೂ ಇರುವುದಿಲ್ಲ. ಅದರ ಬದಲು ಎಂದೋ ಮದುವೆಯಾಗಿ ದೂರವಾದ ಸಹೋದರ-ಸಹೋದರಿಯರ ಒಪ್ಪಿಗೆ ಪಡೆಯಲು ಅವನ ಜೊತೆಗಾರ ಒದ್ದಾಡಬೇಕಾಗುತ್ತದೆ? ಇದೆಂತಹಾ ವ್ಯಂಗ್ಯವೆಂದು ನಿಮಗೆ ಅನ್ನಿಸುವುದಿಲ್ಲವೆ?ಗೇ ಹುಡುಗನೊಬ್ಬ ಹೆಣ್ಣಿನ ಜೊತೆಗೆ ಬೆರೆಯಲು ಇಷ್ಟಪಡುವುದಿಲ್ಲವಾದರೂ ಅವನು ಷಂಡನಲ್ಲ. ಅವನ ವೀರ್ಯಕ್ಕೆ ಖಂಡಿತವಾಗಿಯೂ ಮಗುವನ್ನು ಮಾಡಿಕೊಳ್ಳುವ ಶಕ್ತಿ ಇದ್ದೇ ಇರುತ್ತದೆ. ಆದ್ದರಿಂದ ಬಹುತೇಕ ಗೇ ದಂಪತಿ ಮಗುವನ್ನು ಮಾಡಿಕೊಂಡು ಅದನ್ನು ಬೆಳೆಸುವ ಅನುಭವಕ್ಕಾಗಿ ಹಪಹಪಿಸುತ್ತಾರೆ. ನಮ್ಮ ವೀರ್ಯವನ್ನು ಬಾಡಿಗೆ ತಾಯಿಗೆ ನೀಡಿ ಮಗುವನ್ನು ಮಾಡಿಕೊಳ್ಳುವುದು ಈ ಕಾಲದಲ್ಲಿ ಕಷ್ಟವೇನೂ ಅಲ್ಲ. ಇಬ್ಬರೂ ಒಂದೊಂದು ಮಗುವನ್ನು ಮಾಡಿಕೊಂಡು ಎರಡು ಮಕ್ಕಳನ್ನು ಸಾಕುವುದು ಬಹುತೇಕ ಗೇ ದಂಪತಿಗಳ ಕನಸು. ಅಂತಹ ಮಗುವಿನ ಲಾಲನೆ ಪಾಲನೆಯನ್ನು ಆ ಗೇ ಜೋಡಿ ತಾವೇ ತಂದೆ-ತಾಯಿಯಾಗಿ ಪ್ರೀತಿಯಿಂದ ಬೆಳೆಸಬಹುದಾಗಿದೆ. ಪಾಶ್ಚಾತ್ಯ ದೇಶಗಳಲ್ಲಿ ಇಂತಹ ಮಕ್ಕಳ ಸಂಖ್ಯೆ ದೊಡ್ಡದಿದೆ. ಮಕ್ಕಳನ್ನು ಬೆಳೆಸಿದ ಗೇ ದಂಪತಿ ತಮ್ಮ ಕುಟುಂಬದ ಫೋಟೊಗಳನ್ನು ಹೆಮ್ಮೆಯಿಂದ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಲೇ ಇರುತ್ತಾರೆ. ಆ ಮಕ್ಕಳ ಸಾಧನೆಗಳನ್ನು ಜಗಜ್ಜಾಹೀರಗೊಳಿಸುವುದು, ಅವರ ಪದವಿ ಪ್ರದಾನದಲ್ಲಿ ಜೊತೆಯಾಗಿ ಭಾಗವಹಿಸುವುದು, ಅವರೊಡನೆ ಪ್ರವಾಸಕ್ಕೆ ಹೋಗಿ ಬರುವುದು - ಎಲ್ಲದರ ಫೋಟೊಗಳೂ ನೋಡಲು ಸಿಗುತ್ತವೆ. ಇಬ್ಬರು ಗಂಡಸರು ಅಥವಾ ಇಬ್ಬರು ಹೆಂಗಸರು ಒಂದು ಮಗುವನ್ನು ಬೆಳೆಸುವುದು ಯೋಗ್ಯವೆ, ಆರೋಗ್ಯಕರವೆ ಎಂದು ವಿಜ್ಞಾನ ಮತ್ತು ವೈದ್ಯಕೀಯ ರಂಗ ಸಾಕಷ್ಟು ಅಧ್ಯಯನ ಮಾಡಿ, ಗಂಡು-–ಹೆಣ್ಣು ಸೇರಿ ಮಗುವನ್ನು ಬೆಳೆಸುವ ವಿಧಾನಕ್ಕಿಂತಲೂ ಇದು ಯಾವುದೇ ರೀತಿಯಿಂದಲೂ ಕಡಿಮೆಯಲ್ಲ ಎಂದು ಹೇಳಿದ್ದಾರೆ. ಇಂತಹ ಮಕ್ಕಳ ಮೂಲಕ ತಮ್ಮ ವಂಶಾವಳಿಯನ್ನು ಕಾಪಾಡಿಕೊಳ್ಳುವ, ಮುಂದುವರೆಸುವ ಬಯಕೆ ಬಹುತೆಕ ಗೇ ಹುಡುಗರದಾಗಿರುತ್ತದೆ. ಎಷ್ಟೋ ಹುಡುಗರು ತಂದೆ-ತಾಯಿಗಳ ಏಕಮಾತ್ರ ಪುತ್ರರು ಅಥವಾ ಮಗುವಾಗಿರುತ್ತಾರೆ.ಮದುವೆಗೆ ಸಮಾಜದಲ್ಲಿ ವಿಶೇಷ ಗೌರವವಿರುತ್ತದೆ. ಮದುವೆಯೆನ್ನುವ ವ್ಯವಸ್ಥೆಯನ್ನು ಮಾಡಿಕೊಂಡ ನಂತರ ಕಾಲಕ್ರಮೇಣವಾಗಿ ಮನುಷ್ಯನಲ್ಲಿ ರೂಢಿಯಾದ ಮನೋಭಾವ ಇದಾಗಿದೆ. ಸುದೀರ್ಘ ಕಾಲ ಬಾಳಿದ ದಂಪತಿಗೆ ಜನರು ನೀಡುವ ಗೌರವ ಅಷ್ಟೇ ಹಿರಿದಾಗಿರುತ್ತದೆ. ಒಂಟಿಯಾಗಿ ಬಾಳಿದ ವ್ಯಕ್ತಿಗೆ ಅಂತಹ ಗೌರವ ಯಾವುದೇ ಸಮಾರಂಭದಲ್ಲೂ ದಕ್ಕುವುದಿಲ್ಲ. ಜೋಡಿಯೊಂದು ಸುಖವಾಗಿ ಬಾಳಿತೋ, ನಿತ್ಯ ಜಗಳವಾಡುತ್ತಾ ಬದುಕಿತೋ ಎಂಬುದು ಯಾರಿಗೂ ಮುಖ್ಯವಾಗದೆ, ಜೊತೆಯಲ್ಲಿ ಬಾಳಿದರೆನ್ನುವುದೇ ಪ್ರಾಮುಖ್ಯತೆ ಪಡೆಯುತ್ತದೆ. ಆ ಕಾರಣದಿಂದಲೇ ಮದುವೆಯೆಂಬ ಬಂಧನಕ್ಕೆ ವ್ಯಕ್ತಿಯೊಬ್ಬ ಹಂಬಲಿಸುವುದು ಸಹಜವೆನ್ನಿಸುತ್ತದೆ. ಬಹುತೇಕ ಸಮಾಜದ ಸಮಾರಂಭಗಳಿಗೆ ದಂಪತಿ-ಮಕ್ಕಳನ್ನು ಕರೆಯುತ್ತಾರೆಯೇ ಹೊರತು ಒಂಟಿ ವ್ಯಕ್ತಿಯನ್ನು ಕರೆಯುವುದಿಲ್ಲ. ಒಂಟಿಯಾಗಿ ಬಾಳುವ ಗಂಡಸೊಬ್ಬ ಯಾವುದೋ ಮಂಗಳ ಕಾರ್ಯಕ್ಕೆ ಹೋದಾಗ ತಾನು ತಂದ ಉಡುಗೊರೆಯನ್ನು ಒಬ್ಬನೇ ಹೋಗಿ ಕೊಡಲು ಹಿಂಜರಿದು ನಿಲ್ಲುತ್ತಾನೆ. ತಾನೊಬ್ಬನೇ ಅವರೊಡನೆ ನಿಂತು ಫೋಟೊ ತೆಗೆಸಿಕೊಳ್ಳಲು ಒದ್ದಾಡುವುದನ್ನು ನೀವು ಕಂಡರೆ ಈ ಸಂಕಟವೇನೆಂದು ಅರ್ಥವಾಗುತ್ತದೆ. ಆರತಕ್ಷತೆಗೆ ಹೋದಾಗ ಹೊಸ ಜೋಡಿಯ ಅಕ್ಕ-ಪಕ್ಕ ಗಂಡ-–ಹೆಂಡತಿ ನಿಂತು ನಗುನಗುತ್ತಾ ಫೋಟೊ ತೆಗೆಸಿಕೊಳ್ಳುವುದಕ್ಕೂ, ಒಬ್ಬನೇ ವ್ಯಕ್ತಿ ಅವರಿಬ್ಬರಿಂದ ತುಸು ದೂರ ನಿಂತು ಅಳುಬುರುಕು ಮಾರಿಯಲ್ಲಿ ಫೋಟೊ ತೆಗೆಸಿಕೊಳ್ಳುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ.ಆದರೆ ಸಮಕಾಲೀನ ಬದುಕಿನ ಮತ್ತೊಂದು ವ್ಯಂಗ್ಯವನ್ನು ನಾವಿಲ್ಲಿ ಗಮನಿಸಬೇಕು. ಮದುವೆ ಎನ್ನುವ ಸಾಮಾಜಿಕ ವ್ಯವಸ್ಥೆಯನ್ನು ವಿರೋಧಿಸಿ ಒಂಟಿಯಾಗಿ ಬಾಳುವ ಅಥವಾ ಮದುವೆಯಿಲ್ಲದೆ ಜೊತೆಯಾಗಿ ಬದುಕುವ ಹಕ್ಕಿಗಾಗಿ ಹೋರಾಡುವ ದೊಡ್ಡ ಯುವ ತಂಡವೇ ನಮ್ಮ ಕಣ್ಣ ಮುಂದಿದೆ. ಮದುವೆಯೂ ಬೇಡ, ಮಕ್ಕಳೂ ಬೇಡ ಎಂದು ನಿರ್ಧರಿಸಿ, ಸಾಧನೆಗಾಗಿ ಟೊಂಕಕಟ್ಟಿ ನಿಲ್ಲುವವರ ಸಂಖ್ಯೆ ದಿನದಿನಕ್ಕೆ ವೃದ್ಧಿಸುತ್ತಿದೆ. ದೈಹಿಕ ಅಗತ್ಯವನ್ನು ತೀರಿಸಿಕೊಳ್ಳವ ಸಲುವಾಗಿ ಮದುವೆಯೆಂಬ ದೊಡ್ಡ ಖೆಡ್ಡಾಕ್ಕೆ ಬೀಳುವುದು ಮೂರ್ಖತನ ಎಂದು ಈ ಯುವಪಡೆ ಹೇಳುತ್ತಿದೆ. ಅದಕ್ಕೆ ವಿರುದ್ಧವಾಗಿ ಈ ಕ್ವೀರ್ ಸಮುದಾಯ ಮದುವೆಗಾಗಿ ಹೋರಾಡುತ್ತಿದೆ. ಜಗತ್ತು ಯಾವತ್ತೂ ವಿಸ್ಮಯಗಳ ಸಮೂಹವೇ ಆಗಿರುತ್ತದೆ. ಹಾಗಂತ ಈ ಎರಡೂ ಸಂಗತಿಗಳು ಮೇಲ್ನೋಟಕ್ಕೆ ಕಾಣುವಷ್ಟು ಸರಳವೇನೂ ಅಲ್ಲ. ಒಬ್ಬರಿಗೆ ಇರುವ ಹಕ್ಕನ್ನು ಬೇಡವೆಂದು ನಿರಾಕರಿಸಿ ಹೊಸ ಮಾರ್ಗವೊಂದನ್ನು ಹುಡುಕಿಕೊಳ್ಳುವ ಪರಿಯಾದರೆ, ಮತ್ತೊಬ್ಬರದು ಇರದ ಹಕ್ಕಿಗಾಗಿ ಹೋರಾಡುವ ಮಾರ್ಗ. ಎರಡಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಅಗರ್ಭ ಶ್ರೀಮಂತನೊಬ್ಬ ಸರಳವಾಗಿ ಬದುಕಲು ಹವಣಿಸುವುದಕ್ಕೂ, ಬಡವನೊಬ್ಬ ಸಿರಿಯನ್ನು ಗಳಿಸುವುದಕ್ಕೆ ಉತ್ಸಾಹ ತೋರಿಸುವುದಕ್ಕೂ ಇರುವ ವ್ಯತ್ಯಾಸ ಇದಾಗಿದೆ.ಕ್ವೀರ್ ಸಮುದಾಯದಲ್ಲೂ ‘ಮದುವೆ’ಯ ಬಗ್ಗೆ ಎರಡು ಬಗೆಯ ಅಭಿಪ್ರಾಯಗಳಿವೆ. ಮೇಲೆ ತಿಳಿಸಿದಂತೆ ಒಂದು ಗುಂಪಿಗೆ ಮದುವೆಯ ಕಡು ಬಯಕೆ ಇದ್ದರೆ, ಮತ್ತೊಂದು ಗುಂಪು ಅದನ್ನು ಸಂಪೂರ್ಣವಾಗಿ ವಿರೋಧಿಸುತ್ತಿದೆ. ‘ಮದುವೆ’ ಎನ್ನುವುದು ಈಗಾಗಲೇ ತನ್ನ ಅರ್ಥವನ್ನು ಕಳೆದುಕೊಂಡು ಸವಕಲಾಗಿರುವ ಸಾಮಾಜಿಕ ವ್ಯವಸ್ಥೆ. ಮದುವೆಯ ಕಾರಣದಿಂದಾಗಿಯೇ ಸ್ತ್ರೀಯರು ನಿರಂತರವಾಗಿ ಶೋಷಣೆಗೆ ಒಳಗಾಗುತ್ತಲೇ ಬಂದಿದ್ದಾರೆ. ಒಮ್ಮೆ ಮುಗ್ಗಂಟಿನ ಬಂಧನಕ್ಕೆ ಒಳಗಾದರೆ ತೀರಿತು, ಅದರಿಂದ ಹೊರ ಬರುವುದು ಅತ್ಯಂತ ಸಂಕೀರ್ಣ ಸಂಗತಿಯಾಗಿದೆ. ಅಂತಹ ದುರ್ಬಲ ವ್ಯವಸ್ಥೆಯನ್ನು ನಾವು ಕುರುಡಾಗಿ ಅನುಕರಿಸುವ ಅವಶ್ಯಕತೆಯೇನು? ಜೀವವೊಂದಕ್ಕೆ ಪ್ರೀತಿಯನ್ನು ಹಂಚಿಕೊಳ್ಳಲು ಕೇವಲ ಒಬ್ಬ ವ್ಯಕ್ತಿ ಸಾಕಾಗುವುದಿಲ್ಲ. ನಿರಂತರವಾಗಿ ಹೊಸ ಹೊಸ ವ್ಯಕ್ತಿಗಳ ಒಡನಾಟಕ್ಕೆ ಅದು ಹಪಹಪಿಸುತ್ತದೆ. ಹೊಸ ಹೊಸ ಅನುಭವಗಳನ್ನು ಗಳಿಸುವುದು ಪ್ರಕೃತಿ ಸಹಜ ಬಯಕೆಯಾಗಿದೆ. ಆದ್ದರಿಂದ ಕೃತಕ ಬಂಧನಕ್ಕೆ ಒಳಗಾಗಿ ಏಕವ್ಯಕ್ತಿಗೆ ನಮ್ಮನ್ನು ಮುಡುಪಾಗಿಸುವ ಸಂಕೋಲೆಯ ವ್ಯವಸ್ಥೆಯ ಅವಶ್ಯಕತೆಯೇನು? ಎಂದು ಈ ಗುಂಪು ವಾದಿಸುತ್ತದೆ. ಮದುವೆ ಬೇಕೆನ್ನುವ, ಬೇಡವೆನ್ನುವ ಎರಡೂ ಕ್ವೀರ್ ಗುಂಪಿನ ಅನಿಸಿಕೆಗಳಿಗೂ ತಮ್ಮದೇ ಆದ ತರ್ಕಗಳಿವೆ. ಬಹುಶಃ ಮದುವೆಯ ಆಯ್ಕೆಯನ್ನು ಎಲ್ಲರಿಗೂ ನೀಡಿ, ಬೇಕಾದವರು ಬೇಕಾದಂತೆ ಬಾಳುವ ಸ್ವಾತಂತ್ರ್ಯ ನೀಡುವುದು ಹೆಚ್ಚು ಆರೋಗ್ಯಕರವೆನ್ನಿಸುತ್ತದೆ.ನನ್ನ ಗೆಳೆಯ ಸುಮಿತ್ (ಹೆಸರು ಬದಲಾಯಿಸಲಾಗಿದೆ) ಇತ್ತೀಚೆಗೆ ಫ್ರೆಂಚ್ ನಾಗರಿಕನೊಬ್ಬನ ಜೊತೆ ಮದುವೆಯಾದ. ಇವನು ವೈದ್ಯಕ್ಷೇತ್ರದಲ್ಲಿ ಶಸ್ತ್ರಚಿಕಿತ್ಸೆಯ ಪರಿಣಿತನಾದರೆ, ಅವನ ಒಡನಾಡಿ ದೊಡ್ಡ ವಿಜ್ಞಾನ ಸಂಸ್ಥೆಯೊಂದರಲ್ಲಿ ವಿಜ್ಞಾನಿ. ಇಬ್ಬರೂ ಸದ್ಯಕ್ಕೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಭಾರತದಲ್ಲಿ ಗೇ ಮದುವೆಯು ಕಾನೂನುಬದ್ಧವಲ್ಲದ ಕಾರಣ ಇಬ್ಬರೂ ಫ್ರಾನ್ಸ್ ದೇಶಕ್ಕೆ ತೆರಳಿ ಮದುವೆಯಾಗಿ ಬಂದರು. ಬಹುತೇಕ ಗೇ ಹುಡುಗರು ಮದುವೆಯ ಸಲುವಾಗಿ ಬೇರೆ ದೇಶಕ್ಕೆ ವಲಸೆ ಹೋಗುವುದು ಕಂಡುಬರುತ್ತದೆ.ಸುಮಿತ್ನೊಡನೆ ಮಾತಾಡುತ್ತಾ ಮದುವೆಯ ನಂತರದ ಬದುಕಿನ ಬದಲಾವಣೆಗಳ ಬಗ್ಗೆ ಕೇಳಿದೆ. ಅವನು ಹೇಳಿದ್ದು ವಿಶೇಷವಾಗಿತ್ತು.“ಮೊದಮೊದಲು ನನ್ನ ಸಹೋದರ-ಸಹೋದರಿಯರು ಮದುವೆಯಾಗುವಾಗ ನನಗೆ ಸಂಕಟವಾಗುತ್ತಿತ್ತು. ಅವರಿಗೆ ಸಿಗುವ ಭಾಗ್ಯ ನನಗೇಕೆ ಸಿಗುತ್ತಿಲ್ಲ ಎಂದು ಸಿಟ್ಟಾಗುತ್ತಿದ್ದೆ. ಅನಂತರ ಮದುವೆಯೆನ್ನುವುದು ಕೊನೆಗೂ ಒಂದು ಕಾಗದದ ಮೇಲೆ ಹಲವರ ಸಮ್ಮುಖದಲ್ಲಿ ಹಾಕುವ ರುಜುವಷ್ಟೇ ಎಂದು ಸಮಾಧಾನ ಮಾಡಿಕೊಂಡು ಅದನ್ನು ಅಸಡ್ಡೆಯಿಂದ ಕಾಣತೊಡಗಿದೆ. ಆದರೆ ಈಗ ನಾನೂ ಮದುವೆಯಾದ ಮೇಲೆ ನನ್ನ ಅನುಭವಗಳು ಸಂಪೂರ್ಣವಾಗಿ ಬೇರೆಯಾಗಿದೆ. ಫ್ರಾನ್ಸ್ ದೇಶಕ್ಕೆ ಹೋದಾಗ ನನ್ನ ಅತ್ತೆ ಈಗ ನನಗೆ ಅಳಿಯನೆಂದು ಕೊಡುವ ಗೌರವವೇ ಬೇರೆ ಬಗೆಯದ್ದಾಗಿದೆ. ಈ ಹಿಂದೆಯೂ ಮದುವೆಗೆ ಮುಂಚೆ ಅವರ ಮನೆಗೆ ನನ್ನ ಸಂಗಾತಿಯ ಜೊತೆಗೆ ಹೋಗಿದ್ದೇನೆ. ನಾವಿಬ್ಬರೂ ಕೂಡಿ ಬಾಳುತ್ತಿದ್ದೇವೆ ಎನ್ನುವುದು ಆಕೆಗೆ ಗೊತ್ತಿಲ್ಲದ್ದೇನೂ ಆಗಿರಲಿಲ್ಲ. ಆದರೂ ಆಗ ಅವರಲ್ಲಿ ಅಂತಹ ಪ್ರೀತಿಯಾಗಲಿ, ಇವನು ನಮ್ಮವನೆಂಬ ಭಾವವಾಗಲಿ ಇರಲಿಲ್ಲ. ಈಗ ನಗುನಗುತ್ತಾ ನನ್ನೊಡನೆ ಎಲ್ಲಾ ಸಂಗತಿಗಳನ್ನು ಹಂಚಿಕೊಳ್ಳುತ್ತಾಳೆ. ಮಗನ ಮೇಲೆ ಸಣ್ಣ ಪುಟ್ಟ ದೂರುಗಳನ್ನು ಗುಟ್ಟಾಗಿ ಹೇಳುತ್ತಾಳೆ. ಇತ್ತ ನಮ್ಮ ಮನೆಯಲ್ಲೂ ನನ್ನ ಸಂಗಾತಿಯನ್ನು ಗೌರವದಿಂದ ಕಾಣಲು ಪ್ರಾರಂಭಿಸಿದ್ದಾರೆ. ನಮ್ಮ ಹಳ್ಳಿಯ ಕುಲದೇವತೆಗೆ ಪೂಜೆ ಮಾಡಿಸುವುದಕ್ಕೆ ಇಬ್ಬರನ್ನೂ ಕರೆದುಕೊಂಡು ಹೋಗಲು ತಯಾರಿ ಮಾಡುತ್ತಿದ್ದಾರೆ. ಮೊದ ಮೊದಲು ಮೂಗು ಮುರಿದ ಸಂಬಂಧಿಗಳು ಈಗ ಗೌರವದಿಂದ ಕಾಣತೊಡಗಿದ್ದಾರೆ. ಮನೆಗೆ ಆಹ್ವಾನಿಸುತ್ತಾರೆ. ಇದೆಲ್ಲಾ ನನಗೆ ಧನಾತ್ಮಕವಾಗಿ ಕಾಣುತ್ತದೆ. ಆದರೆ ಪರಿಸ್ಥಿತಿಯ ವ್ಯಂಗ್ಯ ನೋಡು. ನನಗೆ ಮಕ್ಕಳು ಮಾಡಿಕೊಂಡು ಬೆಳೆಸುವ ಆಸೆ. ಭಾರತದಲ್ಲಿ ಗಂಡು ಜೋಡಿಗೆ ಮಕ್ಕಳನ್ನು ದತ್ತು ತೆಗೆದುಕೊಳ್ಳುವುದಕ್ಕೆ ಕಾನೂನಿನ ಮಾನ್ಯತೆಯಿಲ್ಲ. ಆದರೆ ನನ್ನ ಅಣ್ಣ-–ಅತ್ತಿಗೆ ಇಬ್ಬರಿಗೂ ಮಕ್ಕಳು ಬೇಡವಾಗಿದೆ. ಮಗುವೊಂದಿದ್ದರೆ ವೃತ್ತಿಯಲ್ಲಿ ಪ್ರಗತಿ ಹೊಂದುವುದು ಸಾಧ್ಯವಿಲ್ಲ ಎಂದು ಅಂಜುತ್ತಾರೆ. ಅದಕ್ಕೆ ಬದಲು ನಾಯಿ-ಬೆಕ್ಕುಗಳನ್ನು ತಂದು ಸಾಕುತ್ತಿದ್ದಾರೆ. ಅವಕ್ಕೆ ಅವರು ವ್ಯಯಿಸುವ ಹಣದಲ್ಲಿ ಹತ್ತು ಮಕ್ಕಳನ್ನು ಸಾಕಬಹುದು. ನೀವು ಮಗು ಮಾಡಿಕೊಂಡು ನನಗೆ ಕೊಡಿ, ನಾನು ಸಾಕುತ್ತೇನೆ ಎಂದು ಇನ್ನಿಲ್ಲದೆ ಕೇಳುತ್ತೇನೆ. ತಿಂಗಳುಗಟ್ಟಲೆ ಗರ್ಭ ಧರಿಸಿ, ಅನಂತರ ಜೀವನ್ಮರಣದ ಹೆರಿಗೆಯ ನೋವನ್ನು ಅನುಭವಿಸುವುದಕ್ಕೆ ನನಗಂತೂ ಸಾಧ್ಯವಿಲ್ಲ ಎಂದು ಅತ್ತಿಗೆ ನಿರಾಕರಿಸುತ್ತಾರೆ.”ಮದುವೆಯೆಂದರೆ ನಾವು ಒಂದೇ ಜೀವಕ್ಕೆ ಸೀಮಿತವಾಗುವುದಿಲ್ಲವೆ? ಸುಮಿತ್ ಈ ಹಿಂದೆ ಹಲವು ಹುಡುಗರ ಜೊತೆಗೆ ಒಡನಾಡಿದವನು ಎಂಬುದು ನನಗೆ ಗೊತ್ತು. ಈಗ ಅದೊಂದೂ ಸಾಧ್ಯವಿಲ್ಲ.“ಹೊಸ ದೇಹಗಳು ಆಕರ್ಷಣೆ ಕಳೆದುಕೊಳ್ಳುತ್ತಿವೆ. ಮನೆಗೆ ಸುಸ್ತಾಗಿ ಬಂದಾಗಿ ನನ್ನವನು ಅಡುಗೆ ಮಾಡಿಕೊಂಡು ಕಾಯುತ್ತಾ ‘ಹೇಗಿದೀಯಾ?’ ಎಂದು ಕೇಳುತ್ತಾನಲ್ಲಾ, ಆ ಸುಖದ ಮುಂದೆ ಉಳಿದ ದೈಹಿಕ ಆಕರ್ಷಣೆಗಳು ಸಪ್ಪೆಯೆನ್ನಿಸುತ್ತಿವೆ. ಇಬ್ಬರೂ ಜೊತೆಯಾಗಿ ಸಿನಿಮಾಕ್ಕೆ ಹೋಗುತ್ತೇವೆ, ಪ್ರವಾಸ ಮಾಡುತ್ತೇವೆ. ಮನೆಯಲ್ಲಿ ಟೀವಿ ನೋಡುವಾಗ ನಾನು ಒಂಟಿಯಲ್ಲ, ಜೊತೆಯಲ್ಲಿ ನನ್ನದು ಎನ್ನುವ ಜೀವವಿದೆ ಎನ್ನುವುದೇ ಬದುಕಿನ ದೊಡ್ಡ ಸುಖವೆನ್ನಿಸುತ್ತದೆ” ಎಂದು ಸುಮಿತ್ಸ್ಪಷ್ಟ ಪಡಿಸಿದ.ಇಷ್ಟೆಲ್ಲಾ ಆದರೂ ಭಾರತದಲ್ಲಿ ಕ್ವೀರ್ ಮದುವೆ ಕಾನೂನುಬದ್ಧವಾಗಿಸುವುದು ಅಷ್ಟೇನೂ ಸುಲಭದ ಸಂಗತಿಯಾಗಿಲ್ಲ. ಸೆಕ್ಷನ್ 377 ಅನ್ನು ಸರ್ವೋಚ್ಚ ನ್ಯಾಯಾಲಯ ತೆಗೆದು ಹಾಕುವಾಗಲೇ ಕೇಂದ್ರ ಸರ್ಕಾರ ಅಸಮಾಧಾನದಲ್ಲಿಯೇ ಮುಂದಿನ ದಿನಗಳಲ್ಲಿ ಮದುವೆ- ಅದು ಇದು ಅಂತೆಲ್ಲಾ ಕೇಳೋ ಹಾಗಿಲ್ಲ ಎನ್ನುತ್ತಾ ಒಪ್ಪಿಗೆ ಕೊಟ್ಟಿತ್ತು. ಸರ್ವೋಚ್ಚ ನ್ಯಾಯಾಲಯದ ಮುಂದೆ ಕ್ವೀರ್ ಮದುವೆಯನ್ನು ಬದುಕಿನ ಹಕ್ಕೆಂದು ವಾದ ಮಂಡಿಸಿದರೂ ಅದು ಒಪ್ಪಲಿಲ್ಲ. ಇಂತಹ ನಿರ್ಣಯಕ್ಕೆ ಬರುವುದ ತನ್ನ ಜವಾಬ್ದಾರಿ ಮೀರಿದ್ದು, ಶಾಸಕರು ಇದನ್ನು ಒಪ್ಪಿ ಮೊದಲು ಕಾನೂನು ಮಾಡಬೇಕು ಎಂದು ಹೇಳಿತು. ಇಂತಹ ಹೊತ್ತಿನಲ್ಲಿ ಅಂದಾಜು ಇಪ್ಪತ್ತು ಕೋಟಿಗೂ ಹೆಚ್ಚಿನ ಕ್ವೀರ್ ಜನರು (ತಾವು ಕ್ವೀರ್ ಎಂದು ಭಾರತದಲ್ಲಿ ಇಪ್ಪತ್ತೈದು ಲಕ್ಷಕ್ಕೂ ಹೆಚ್ಚು ಜನ ಹೇಳಿಕೊಂಡಿದ್ದಾರೆ. ಹೇಳಿಕೊಳ್ಳದೆ ಗುಟ್ಟಾಗಿ ಬಾಳುವವರ ಸಂಖ್ಯೆ ಬಹು ದೊಡ್ಡದು. ಸುಮಾರು ಜನಸಂಖ್ಯೆಯ ಶೇಕಡಾ ಇಪ್ಪತ್ತರಷ್ಟು ಎಲ್ಲೆಡೆಯೂ ಕ್ವೀರ್ ಜನರು ಇರುತ್ತಾರೆ ಎಂದು ಅಂದಾಜಿಸಲಾಗುತ್ತದೆ.) ಮುಂದೇನು ನಿರೀಕ್ಷಿಸಬಹುದು? ಇದಕ್ಕೆ ನನ್ನ ಮತ್ತೊಬ್ಬ ಗೆಳೆಯ, ಭಾರತದ ಕ್ವೀರ್ ಜನರ ಯೋಗಕ್ಷೇಮಕ್ಕಾಗಿ ಅವಿರತವಾಗಿ ಹೋರಾಡುವ ಅರವಿಂದ್ ನರೇನ್ ಹೇಳುವ ಮಾತುಗಳು ಹೀಗಿವೆ.“ಯಾವ ಹಕ್ಕುಗಳೂ ಸುಲಭವಾಗಿ ದಕ್ಕುವುದಿಲ್ಲ. ಅದಕ್ಕೆ ದೊಡ್ಡ ಹೋರಾಟದ ಹಿನ್ನೆಲೆಯಿರುತ್ತದೆ. ಈ ಹಿಂದೆ ಕೇವಲ ಧಾರ್ಮಿಕ ಮದುವೆಗೆ ಮಾತ್ರ ಸಮ್ಮತಿಯಿತ್ತು. ಅಂದರೆ ಹಿಂದೂ ಮದುವೆ, ಮುಸ್ಲಿಂ ಮದುವೆ, ಪಾರ್ಸಿ ಮದುವೆ - ಇತ್ಯಾದಿಗಳಿಗೆ ಮಾತ್ರ ಅವಕಾಶವಿತ್ತು. ಅನಂತರ ಅಂತರ್ಜಾತೀಯ ಮತ್ತು ಅಂತರ್ಧರ್ಮೀಯ ಮದುವೆಗಾಗಿ ನಮ್ಮ ಹಿರಿಯರು ಹೋರಾಟ ಮಾಡಿ ಹಕ್ಕನ್ನು ಪಡೆದುಕೊಂಡಿದ್ದಾರೆ. ಅದೇ ರೀತಿ ವಿಧವಾ ವಿವಾಹಕ್ಕೂ ದೊಡ್ಡ ಹೋರಾಟ ನಡೆದಿದೆ. ಅಂದ ಮೇಲೆ ಕ್ವೀರ್ ಸಮುದಾಯದ ವಿವಾಹಕ್ಕೆ ಅಷ್ಟು ಸುಲಭವಾಗಿ ಹಕ್ಕುಗಳು ಸಿಗುತ್ತದೆಂದು ನಾವು ಭಾವಿಸಬಾರದು. ಅದಕ್ಕೆ ಬೇಕಾದ ಹೋರಾಟವನ್ನು ಮಾಡಲೇ ಬೇಕಾಗುತ್ತದೆ. ಹೋರಾಟ ಮಾಡದೆ ಪಡೆವ ಹಕ್ಕುಗಳಿಗೆ ಅಂತಹ ಬೆಲೆಯೂ ಇರುವುದಿಲ್ಲ.”ಕ್ವೀರ್ ಮದುವೆಯನ್ನು ಭಾರತದ ಕಾನೂನು ಒಪ್ಪಿಕೊಂಡರೆ ಕ್ವೀರ್ ಸಮುದಾಯಕ್ಕೆ ಒಳಿತಾಗುತ್ತದೆ ನಿಜ, ಅದರಿಂದ ಉಳಿದವರಿಗೆ ಏನಾದರೂ ಅನುಕೂಲವಿದೆಯೆ? ಅರವಿಂದ್ ನರೇನ್ ಅದಕ್ಕೂ ಸಾಕಷ್ಟು ಮುಖ್ಯ ಸಂಗತಿಗಳನ್ನು ತಿಳಿಸಿದರು.“ಪ್ರತಿಯೊಂದು ಹೊಸ ಹಕ್ಕುಗಳು ಜಾರಿಗೊಂಡಾಗಲೂ ಪ್ರಜಾಪ್ರಭುತ್ವ ಗಟ್ಟಿಗೊಳ್ಳುತ್ತದೆ. ಕ್ವೀರ್ ಸಮುದಾಯದಲ್ಲಿ ಜಾತಿ, ವರ್ಗ, ಪಂಗಡ, ಧರ್ಮ ಇತ್ಯಾದಿಗಳ ಬೇಧಭಾವ ಅಷ್ಟಾಗಿ ಇಲ್ಲ. ಅತ್ಯಂತ ಸಣ್ಣ ಸಮುದಾಯವದಾದ್ದರಿಂದ ಅಲ್ಲಿ ಬದುಕಿನ ಅಗತ್ಯಗಳನ್ನು ಪೂರೈಸಿಕೊಳ್ಳುವುದೇ ದೊಡ್ಡ ಸಾಹಸವಾಗಿ, ಇತರ ಜನವಿಭಜನೆಯ ಸಂಗತಿಗಳ ಬಗ್ಗೆ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ಆದ್ದರಿಂದ ಅವರು ಮದುವೆಯಾಗಲು ತೊಡಗಿದರೆ ಜಾತಿ, ಧರ್ಮದ ಗಡಿಗಳು ತುಸುವಾದರೂ ಕಡಿಮೆಯಾಗುತ್ತಾ ಹೋಗುತ್ತವೆ. ಅದು ಸಮಾಜಕ್ಕೆ ಹಿತಕಾರಿಯಾಗಲಿದೆ. ಕ್ವೀರ್ ಜನರು ಸಮಾಜದಿಂದ ಬೇರ್ಪಟ್ಟು ಬದುಕುವವರೇನಲ್ಲ. ಅವರ ತಂದೆ-ತಾಯಿ, ಸಹೋದರ-ಸಹೋದರಿಯರು, ಸ್ನೇಹಿತರು - ಎಲ್ಲರೂ ಅವರೊಡನೆ ಒಡನಾಡುತ್ತಲೇ ಇರುತ್ತಾರೆ. ಕ್ವೀರ್ ಜನರಿಗೆ ಒಳಿತಾದರೆ ಅವರೆಲ್ಲರಿಗೂ ಒಳಿತಾಗುತ್ತದೆ, ಸಂತೋಷವಾಗುತ್ತದೆ.”ವಿ.ಸೂ. ಈ ಲೇಖನವನ್ನು ಸಂಪೂರ್ಣವಾಗಿ ನನಗೆ ಪರಿಚಯವಿರುವ ಗೇ ದೃಷ್ಟಿಕೋನದಿಂದಲೇ ಬರೆದಿದ್ದರೂ, ಇದು ಒಟ್ಟಾರೆ ಕ್ವೀರ್ ಸಮುದಾಯಕ್ಕೆ ಅನ್ವಯವಾಗಲಿದೆ. ಲೆಸ್ಬಿಯನ್ ಹುಡುಗಿಯರು, ಟ್ರಾನ್ಸ್ ಸಮುದಾಯದವರೂ ಮದುವೆಗಾಗಿ ಹಾತೊರೆಯುತ್ತಾರೆ.(ಇನ್ನಷ್ಟು ಆಸಕ್ತಿಕರ ನುಡಿಚಿತ್ರಗಳಿಗಾಗಿ, ಕುತೂಹಲಕರ ಕತೆ–ಕಾದಂಬರಿಗಾಗಿ ಮಾರುಕಟ್ಟೆಯಲ್ಲಿರುವ ಸುಧಾ ಓದಿ)