ಮಿಡಿಸೌತೆ ಬೆಳೆಗಾರರಿಗೆ ಹಣ ಪಾವತಿಸದೆ ವಂಚನೆ: ರೈತರ ದೂರು
ಹೂವಿನಹಡಗಲಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಮಿಡಿಸೌತೆ ಬೆಳೆದ ರೈತರಿಂದ ಫಸಲು ಖರೀದಿಸಿರುವ ಬೆಂಗಳೂರಿನ ಇಂಡಿಯಾ ಆಗ್ರೋ ಎಕ್ಸ್ಪೋರ್ಟ್ ಕಂಪನಿ ಹಣ ಪಾವತಿಸದೇ ವಂಚನೆ ಮಾಡಿದೆ ಎಂದು ರೈತರು ದೂರಿದ್ದಾರೆ.ರೈತರ ಪ್ರತಿನಿಧಿಗಳು ಹಾಗೂ ಮೇಲ್ವಿಚಾರಕರಾದ ನಾಗರಾಜ ನಾಯ್ಕ, ಬಿ.ಹುಲುಗಪ್ಪ, ಕೃಷ್ಣನಾಯ್ಕ, ಕೊಟ್ರೇಶನಾಯ್ಕ ಅವರು ಸೋಮವಾರ ಇಲ್ಲಿ ಪತ್ರಿಕಾ
ಹೂವಿನಹಡಗಲಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಮಿಡಿಸೌತೆ ಬೆಳೆದ ರೈತರಿಂದ ಫಸಲು ಖರೀದಿಸಿರುವ ಬೆಂಗಳೂರಿನ ಇಂಡಿಯಾ ಆಗ್ರೋ ಎಕ್ಸ್ಪೋರ್ಟ್ ಕಂಪನಿ ಹಣ ಪಾವತಿಸದೇ ವಂಚನೆ ಮಾಡಿದೆ ಎಂದು ರೈತರು ದೂರಿದ್ದಾರೆ.ರೈತರ ಪ್ರತಿನಿಧಿಗಳು ಹಾಗೂ ಮೇಲ್ವಿಚಾರಕರಾದ ನಾಗರಾಜ ನಾಯ್ಕ, ಬಿ.ಹುಲುಗಪ್ಪ, ಕೃಷ್ಣನಾಯ್ಕ, ಕೊಟ್ರೇಶನಾಯ್ಕ ಅವರು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಅಳಲು ತೋಡಿಕೊಂಡರು.ತಾಲ್ಲೂಕಿನ ಮಾನ್ಯರ ಮಸಲವಾಡ, ಕಗ್ಗಲಕಟ್ಟಿ ತಾಂಡ, ಕೊಮಾರನಹಳ್ಳಿ ತಾಂಡ, ಕಾಲ್ವಿ ತಾಂಡ, ಸೋವೇನಹಳ್ಳಿ, ಹಿರೇಮಲ್ಲನಕೆರೆ, ದಾಸರಹಳ್ಳಿ ತಾಂಡ ಹಾಗೂ ಇತರ ಗ್ರಾಮಗಳಲ್ಲಿ ನೂರಾರು ರೈತರು ಮಿಡಿಸೌತೆ ಬೆಳೆದು, ಕಂಪನಿಗೆ ಫಸಲು ಪೂರೈಸಿದ್ದಾರೆ. 11 ತಿಂಗಳಾದರೂ ರೈತರಿಗೆ ಲಕ್ಷಾಂತರ ಹಣ ಪಾವತಿಸದೇ ವಂಚಿಸಿದ್ದಾರೆ. ಪಟ್ಟಣದಲ್ಲಿ ತೆರೆದಿದ್ದ ಕಂಪನಿಯ ಕಚೇರಿಯನ್ನು ಮುಚ್ಚಿದ್ದಾರೆ’ ಎಂದು ದೂರಿದರು.‘ಸೂಪರ್ವೈಸರ್ಗಳಿಗೆ ನಾಲ್ಕು ತಿಂಗಳು ಮಾತ್ರ ವೇತನ ನೀಡಿದ್ದಾರೆ. 11 ತಿಂಗಳ ವೇತನ, ಬೋನಸ್, ಇನ್ಸೆಂಟೀವ್ಬಾಕಿ ಉಳಿಸಿಕೊಂಡಿದ್ದಾರೆ. ಈ ಕುರಿತು ಕಂಪನಿಯವರು ಸಬೂಬು ಹೇಳುತ್ತಾರೆ. ರೈತರಿಗೆ ವಂಚಿಸಿರುವ ಕಂಪನಿ ವಿರುದ್ಧ ದೂರು ನೀಡಿದರೂ ಪೊಲೀಸರು ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.ರೈತ ಸಂಘದ ಅಧ್ಯಕ್ಷ ಹೊಸಮನಿ ಸಿದ್ದಪ್ಪ ಮಾತನಾಡಿ, ರೈತರಿಗೆ ಕಂಪನಿ ಮೋಸ ಮಾಡಿದೆ. ರೈತರ ಬಾಕಿ ಹಣವನ್ನು ಬಡ್ಡಿ ಸಮೇತ ತಕ್ಷಣ ಪಾವತಿಸಬೇಕು. ಇಲ್ಲದಿದ್ದರೆ ಅವರ ವಿರುದ್ಧ ಪ್ರತಿಭಟನೆ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು.ಮುಖಂಡರಾದ ಎಂ.ಶಿವರಾಜ್, ವಿಜಯಲಕ್ಷ್ಮಿ, ಮುಜುಬು ರಹಿಮಾನ್, ವಿಠಲನಾಯ್ಕ, ಗನಿ ಸಾಬ್ ಇತರರು ಇದ್ದರು.ಕಂಪನಿ ಪ್ರತಿಕ್ರಿಯೆ: ‘ರೈತರಿಗೆ ಯಾವುದೇ ಬಾಕಿ ಉಳಿಸಿಕೊಂಡಿಲ್ಲ. ಒಪ್ಪಂದ ದರದಂತೆ ಹಣ ಪಾವತಿಸಿದ್ದೇವೆ’ ಎಂದು ಕಂಪನಿಯ ಪ್ರಧಾನ ವ್ಯವಸ್ಥಾಪಕ ಸಂಜೀವ ಕಟ್ಟಿ ಪ್ರತಿಕ್ರಿಯಿಸಿದ್ದಾರೆ.