ನಮ್ಮ ಕಾಲೇಜು: ಮರೆತೆನೆಂದರೂ ಹೇಗೆ ಮರೆಯಲಿ ನಾ ಬದುಕು ರೂಪಿಸಿದ ಆ ದಿನಗಳನ್ನು...
ಪ್ರತಿಯೊಬ್ಬ ವಿದ್ಯಾರ್ಥಿಯ ಸಾಧನೆಯ ಹಿಂದೆ ಗುರುಗಳ ಪಾತ್ರ ಬಹಳ ದೊಡ್ಡದು. ಅದೇ ರೀತಿ ಗುರುಗಳ ಪಾಠ, ಪರೀಕ್ಷೆಯ ಜೊತೆಗೆ ಆತ್ಮೀಯರು, ಗೆಳತಿಯರು ಸಿಗಲು, ಅಕ್ಕ.. ಅಕ್ಕ.. ಎಂದು ಕರೆಯುವ ಜೂನಿಯರ್ಸ್ಗಳು ಸಿಗಲು ಅವಕಾಶ ಮಾಡಿಕೊಟ್ಟ ಕಾಲೇಜನ್ನು ಮರೆಯುವುದುಂಟೆ?ನನ್ನದು ಪುತ್ತೂರಿನ ಪೇಟೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು. ಇದರ ಬಗ್ಗೆ ಹೇಳುವ ಮೊದಲು, ನನ್

ಪ್ರತಿಯೊಬ್ಬ ವಿದ್ಯಾರ್ಥಿಯ ಸಾಧನೆಯ ಹಿಂದೆ ಗುರುಗಳ ಪಾತ್ರ ಬಹಳ ದೊಡ್ಡದು. ಅದೇ ರೀತಿ ಗುರುಗಳ ಪಾಠ, ಪರೀಕ್ಷೆಯ ಜೊತೆಗೆ ಆತ್ಮೀಯರು, ಗೆಳತಿಯರು ಸಿಗಲು, ಅಕ್ಕ.. ಅಕ್ಕ.. ಎಂದು ಕರೆಯುವ ಜೂನಿಯರ್ಸ್ಗಳು ಸಿಗಲು ಅವಕಾಶ ಮಾಡಿಕೊಟ್ಟ ಕಾಲೇಜನ್ನು ಮರೆಯುವುದುಂಟೆ?ನನ್ನದು ಪುತ್ತೂರಿನ ಪೇಟೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು. ಇದರ ಬಗ್ಗೆ ಹೇಳುವ ಮೊದಲು, ನನ್ನ ಗುರುಗಳು ಹೇಳುತ್ತಿದ್ದ ಮಾತು ಇಲ್ಲಿ ನೆನೆಪು ಮಾಡಿಕೊಳ್ಳಲೇಬೇಕಿದೆ. ‘ಕಲಿಕೆಗೆ ಕಟ್ಟಡವಲ್ಲ, ಅಲ್ಲಿ ಸಿಗುವ ಜ್ಞಾನದ ಸಂಪತ್ತು ಮುಖ್ಯ’ ಎಂದು ಹೇಳುವ ಮಾತು ಬಹಳ ಅರ್ಥಪೂರ್ಣವಾದದ್ದು. ಯಾಕೆಂದರೆ, ನನ್ನ ಕಾಲೇಜು ಯಾವ ಮೂಲೆಯಿಂದ ನಿಂತು ನೋಡಿದರು ಕಾಲೇಜಿನ ರೀತಿಯಲ್ಲಿ ಕಾಣುತ್ತಿರಲಿಲ್ಲ. ಅದೊಂದು ಬ್ರಿಟಿಷರ ಕಾಲದ ಜೈಲಿನಂತಿತ್ತು. ಪುತ್ತೂರಿನ ಪೇಟೆಯಲ್ಲಿ ಕಾಲೇಜು ಎಲ್ಲಿದೆ? ಎಂಬುದು ಅನೇಕರಿಗೆ ತಿಳಿದಿರದ ಸಂಗತಿ. ಯಾರದರೂ ನೀನು ಕಲಿಯುತ್ತಿರುವ ಮಹಿಳಾ ಕಾಲೇಜು ಎಲ್ಲಿ ? ಎಂದು ಕೇಳಿದಾಗ ಅದನ್ನು ವರ್ಣಿಸುವ ರೀತಿಯೇ ಬಹಳ ಚಂದ. ಸರ್ಕಾರಿ ಆಸ್ಪತ್ರೆಯ ಪಕ್ಕದಲ್ಲಿ, ಮೊದಲಿನ ತಾಲೂಕು ಪಂಚಾಯತ್ ಎಂದರೆ ಗೊತ್ತಾಗುತ್ತಿತು. ನನ್ನ 3 ವರ್ಷದ ಕಲಿಕೆಯ ಸಮಯದಲ್ಲಿ ಜನರು ಇದು ತಾಲೂಕು ಪಂಚಾಯತಿಯಾ? ಎಂದು ಕೇಳಿಕೊಂಡು ಬಂದವರೇ ಹೆಚ್ಚು. ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಕಟ್ಟಡ ಇಂದಿಗೂ ಗಟ್ಟಿಯಾಗಿದೆ. ದೊಡ್ಡ ಮನೆಯಂತಿದ್ದ ನನ್ನ ಕಾಲೇಜು ಅದೆಷ್ಟೋ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯರಿಗೆ ಬದುಕಿನ ಪಾಠದ ಜೊತೆಗೆ ಜೀವನ ಕಟ್ಟಿಕೊಟ್ಟಂತಹ ದೇಗುಲ. ಬೆಳಗಿನ ಸಮಯದಲ್ಲಿ ಎಲ್ಲರೂ ಶಿಸ್ತಿನಿಂದ ಹೇಳುತ್ತಿದ್ದ ಪ್ರಾರ್ಥನೆ, ನಮ್ಮಲ್ಲಿ ಹೊಸ ಚೈತನ್ಯವನ್ನು ಉಂಟುಮಾಡುತ್ತಿತ್ತು. ಕಾಲೇಜು ವಾರ್ಷಿಕೋತ್ಸವ, ಸಾಂಸ್ಕೃತಿಕ ಹಬ್ಬಗಳು ಮತ್ತು ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ನೆನಪುಗಳು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಹೆಣ್ಣುಮಕ್ಕಳಿಗೆ ತಮ್ಮ ಸಾಮರ್ಥ್ಯವನ್ನು ಗುರುತಿಸಿಕೊಳ್ಳಲು, ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಈ ಕಾಲೇಜು ನೀಡಿದ ವೇದಿಕೆ ಅನನ್ಯವಾದದ್ದು.ನಾನು ಕಲಿಯುತ್ತಿದ್ದ ತರಗತಿ ಒಂದರಲ್ಲೇ 115 ಮಂದಿ ಸಹಪಾಠಿಗಳು. ತರಗತಿಯಲ್ಲಿ ಕೂತು ಕಿಟಕಿಯ ಹೊರಗೆ ಒಂದು ಕ್ಷಣ ನೋಡಿದರೆ, ಸುತ್ತಲೂ ಹಸಿರು ಗಿಡಗಳು, ಮಳೆ, ಗಾಳಿ, ಬಿಸಿಲು, ಹಕ್ಕಿಗಳ ಚಿಲಿಪಿಲಿ ಕೂಗುವ ಪಕ್ಷಿಗಳ ಕಲರವ ಎಲ್ಲವನ್ನೂ ಹತ್ತಿರದಿಂದ ನೋಡಿ ಅನುಭವಿಸುವ ಭಾಗ್ಯ ನಮ್ಮದಾಗಿತ್ತು. ಯಾವುದೇ ಸಣ್ಣ ಕಾರ್ಯಕ್ರಮವನ್ನು ಕೂಡ ಬಹಳ ಶಿಸ್ತಿನಿಂದ, ಎಲ್ಲಾ ತರಗತಿಗಳ ವಿದ್ಯಾರ್ಥಿನಿಗಳು ಎಲ್ಲಾರು ಒಟ್ಟಿಗೆ ಸೇರಿ ಮಾಡುತ್ತಿದ್ದೇವು.ನಮ್ಮ ಕಾಲೇಜಿನ ಹೆಸರೇ ಹೇಳುವಂತೆ, ಹುಡುಗಿಯರಿಗೆ ಯಾವುದೇ ಕೆಲಸ ಗೊತ್ತಿಲ್ಲ ಎಂದು ಹೇಳುವ ಮಾತೇ ಇಲ್ಲ. ಬಾಲಕರಂತೆ ಎಲ್ಲಾ ಕೆಲಸವನ್ನು ಮಾಡುತ್ತಿದೆವು. ಅದೆಷ್ಟೋ ವಿದ್ಯಾರ್ಥಿನಿಯರಿಗೆ ಹೊಸ ವಿಷಯಗಳ ಕುರಿತು ಬರೆಯಲು ಹುರುಪು ನೀಡಿದ್ದು ನಮ್ಮ ಕಾಲೇಜಿನ ನಿಯತಕಾಲಿಕ ಪತ್ರಿಕೆ. ಇದಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಅತ್ಯುತ್ತಮ ವಾರ್ಷಿಕ ಸಂಚಿಕೆ ಪ್ರಶಸ್ತಿಯು ದೊರೆಯಿತು. ಕಾಲೇಜು ಏನನ್ನು ಕಲಿಸಿತು ಎನುವುದಕ್ಕಿಂತ, ನಾವು ಏನನ್ನು ಪಡೆದುಕೊಂಡು ಹೋಗುತ್ತೀವಿ ಎನ್ನುವುದು ಬಹಳ ಸೂಕ್ಷ್ಮವಾದದ್ದು. ನಮ್ಮ ಕಾಲೇಜಿನಲ್ಲಿ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ಇಂದು ತಮ್ಮ ಜೀವನದ ಹಾದಿಯನ್ನು ರೂಪಿಸಿಕೊಳ್ಳುವಲ್ಲಿ ಯಶಸ್ಸನ್ನು ಕಂಡಿದ್ದಾರೆ.ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಪುತ್ತೂರು ವಿದ್ಯಾರ್ಥಿ ಜೀವನ ಎಂಬುದು ಪ್ರತಿಯೊಬ್ಬರ ಬಾಳಿನಲ್ಲೂ ಬರುವ ಸುಂದರ ಕ್ಷಣ. ಅದರಲ್ಲೂ ಪುತ್ತೂರಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಕಳೆದ ಕ್ಷಣಗಳು ಕೇವಲ ನೆನಪುಗಳಲ್ಲ, ಅವು ನಮ್ಮ ಬದುಕನ್ನು ರೂಪಿಸಿದ ಸುಂದರ ಶಿಲ್ಪಿಗಳು. ಜ್ಞಾನ, ಸ್ನೇಹ, ಮತ್ತು ಸ್ವಾತಂತ್ರ್ಯದ ರೆಕ್ಕೆಗಳನ್ನು ನೀಡಿ ನಮ್ಮ ಕನಸುಗಳಿಗೆ ಜೀವ ತುಂಬಿದ ಈ ಕಾಲೇಜಿನ ಆವರಣ, ಪ್ರತಿಯೊಬ್ಬ ವಿದ್ಯಾರ್ಥಿನಿಯ ಹೃದಯದಲ್ಲಿ ಎಂದಿಗೂ ಮಾಸದ ಹಸಿರು ನೆನಪಾಗಿರುತ್ತದೆ. ಬಹಳ ವರ್ಷಗಳಿಂದ ಇದ್ದ ಕಾಲೇಜು, 3 ತಿಂಗಳ ಹಿಂದೆ ಅದೆಷ್ಟೋ ನೆನಪುಗಳ ಜೊತೆ ಸ್ಥಳಾಂತರಗೊಂಡಿತು. ಕಾಲ ಉರುಳಿದರೂ, ಕ್ಯಾಂಪಸ್ ಬದಲಾದರೂ ಆ ಸುಂದರ ದಿನಗಳಲ್ಲಿ ಗುರುಗಳ ಜೊತೆ ಗೆಳತಿಯರೊಂದಿಗೆ ಕಳೆದ ಕ್ಷಣಗಳನ್ನು ಮರೆಯುವುದುಂಟೆ.ಸರ್ಕಾರಿ ಶಾಲೆ, ಕಾಲೇಜಿನಲ್ಲಿ ಪರೀಕ್ಷೆಗೆ ಸಂಬಂಧಿಸಿದ ವಿಷಯದ ಜೊತೆಗೆ ತರಗತಿಯ ಹೊರಗಿನ ಜೀವನದ ಪಾಠ ಕಲಿಸುವ ಗುರುಗಳು. ಪದವಿಯ ನಂತರ ನಮ್ಮ ಬದುಕಿಗೆ ಮುನ್ನುಡಿ ಬರೆದದ್ದು ಇವರೇ... ಅಲ್ಲಿ ಸಿಕ್ಕ ಅನುಭವಗಳನ್ನು ಎಂದಿಗೂ ಮರೆಯಾಲಾಗದು.(ಲೇಖಕಿ: ವಿದ್ಯಾಶ್ರೀ ನಾರಾಯಣ್, ಪುತ್ತೂರು)