ಯಾವುದೇ ಕಾರಣಕ್ಕೂ ಗ್ಯಾರಂಟಿ ನಿಲ್ಲಿಸಲ್ಲ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಬೀದರ್: ‘ಯಾವುದೇ ಕಾರಣಕ್ಕೂ ಈ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಶ್ವಾಸನೆ ನೀಡಿದರು. ನಗರದ ಗಣೇಶ್ ಮೈದಾನದಲ್ಲಿ ಜಿಲ್ಲಾ ಕಾಂಗ್ರೆಸ್ನಿಂದ ಸೋಮವಾರ ರಾತ್ರಿ ಏರ್ಪಡಿಸಿದ್ದ ಪಕ್ಷದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಗ್ಯಾರಂಟಿ ಯೋಜನೆ ದುರುಪಯೋಗ ತಡೆಯಲು ಮರು ಪರಿಶೀಲನೆ

ಬೀದರ್: ‘ಯಾವುದೇ ಕಾರಣಕ್ಕೂ ಈ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಶ್ವಾಸನೆ ನೀಡಿದರು. ನಗರದ ಗಣೇಶ್ ಮೈದಾನದಲ್ಲಿ ಜಿಲ್ಲಾ ಕಾಂಗ್ರೆಸ್ನಿಂದ ಸೋಮವಾರ ರಾತ್ರಿ ಏರ್ಪಡಿಸಿದ್ದ ಪಕ್ಷದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಗ್ಯಾರಂಟಿ ಯೋಜನೆ ದುರುಪಯೋಗ ತಡೆಯಲು ಮರು ಪರಿಶೀಲನೆ ಮಾಡುತ್ತೇವೆ ಹೊರತು ನಿಲ್ಲಿಸುವುದಿಲ್ಲ. ನಮ್ಮ ರಾಜ್ಯದ ಗ್ಯಾರಂಟಿ ಯೋಜನೆಗಳು ಇಡೀ ದೇಶದಲ್ಲಿ ಮಾದರಿಯಾಗಿವೆ. ವಿಶ್ವಸಂಸ್ಥೆ ಕೂಡ ನಮ್ಮ ಗ್ಯಾರಂಟಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಆದರೆ, ಬಿಜೆಪಿಯವರು ಗ್ಯಾರಂಟಿಗಳನ್ನು ಟೀಕಿಸಿದರು. ಆದರೆ, ಅವರೇ ಅನೇಕ ರಾಜ್ಯಗಳಲ್ಲಿ ಈ ಯೋಜನೆ ಜಾರಿಗೆ ತಂದಿದ್ದಾರೆ. ಸತ್ತವರ ಹೆಸರಿಗೆ ಹಾಗೂ ಬೇರೆ ರಾಜ್ಯದವರಿಗೆ ಹೋಗುವ ಗ್ಯಾರಂಟಿ ಹಣ ತಡೆಯುವುದು ನಮ್ಮ ಉದ್ದೇಶ. ಆದಕಾರಣ ಮರು ಪರಿಶೀಲನೆ ಮಾಡುತ್ತಿದ್ದು, ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದರು.ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಮೂರನೇ ಸಲ ಅಧಿಕಾರಕ್ಕೆ ಬಂದಿದೆ. ಆದರೆ, ಒಂದೇ ಒಂದೂ ಭರವಸೆ ಈಡೇರಿಸಿಲ್ಲ. ಅವರು ದೇವರು, ಧರ್ಮ ಹೆಸರಿನಲ್ಲಿ ರಾಜಕೀಯ ಮಾಡುತ್ತಾರೆ.ಆದರೆ, ನಾವು ಬಡವರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು. 72 ಸಾವಿರ ಹುದ್ದೆ ಭರ್ತಿ : ಬರುವ ಮೂರು ತಿಂಗಳಲ್ಲಿ ವಿವಿಧ ಇಲಾಖೆಗಳಲ್ಲಿನ 72 ಸಾವಿರ ಹುದ್ದೆ ಭರ್ತಿ ಮಾಡುತ್ತೇವೆ. 15 ಸಾವಿರ ಶಿಕ್ಷಕರು, ನಗರಾಭಿವೃದ್ಧಿ ಇಲಾಖೆಯ 15 ಸಾವಿರ, 6,800 ಪೌರ ಕಾರ್ಮಿಕರು, 3,300 ಪೊಲೀಸ್, 1,600 ಇಂಧನ ಇಲಾಖೆ ಹುದ್ದೆ ಭರ್ತಿ ಮಾಡಲಾಗುವುದು ಎಂದು ಹೇಳಿದರು.ಎಸ್ಐಆರ್ ಬಗ್ಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಗಂಭೀರವಾಗಿರಬೇಕು. ಪಕ್ಷದ ಕಾರ್ಯಕರ್ತರು ಈ ಕುರಿತು ಅರಿವು ಮೂಡಿಸಬೇಕು. ಎಲ್ಲರೂ ಎನ್ಯುಮರೇಷನ್ ಫಾರ್ಮ್ ತುಂಬಿ ಕೊಡಲು ತಿಳಿಸಬೇಕು. ಸಾಕಷ್ಟು ಜನ ಬಡವರಿಗೆ ಅದರ ಬಗ್ಗೆ ಗೊತ್ತಾಗುವುದಿಲ್ಲ. ಆದಕಾರಣ ಪಕ್ಷದ ಕಾರ್ಯಕರ್ತರು ಅರ್ಜಿ ತುಂಬಿಸಿ, ಬಿಎಲ್ಒಗೆ ನೀಡಬೇಕು. ಇಲ್ಲವಾದಲ್ಲಿ ಪಕ್ಷ ನಿಯೋಜಿಸಿರುವ ಬಿಎಲ್ಎ–2ಗಳು ಅವುಗಳನ್ನು ಸಂಗ್ರಹಿಸಿ ಬಿಎಲ್ಒಗಳಿಗೆ ತಲುಪಿಸುವ ಕೆಲಸ ಮಾಡಬೇಕು. ಪ್ರಜಾಪ್ರಭುತ್ವದಲ್ಲಿ ಮತದಾನಕ್ಕೆ ದೊಡ್ಡ ಶಕ್ತಿ ಇದೆ ಎಂದು ಹೇಳಿದರು.ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮಾತನಾಡಿ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಇಳಿಸಿದರೂ ಕೇಂದ್ರ ಸರ್ಕಾರ ಬೆಲೆ ಇಳಿಕೆ ಮಾಡಿಲ್ಲ. ಆದರೆ, ನಾವು ಜೆನ್–ಜಿ ಪರವಾಗಿದ್ದೇವೆ. ಅವರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಆರಂಭಿಸಿದ್ದು, ಖಾಲಿ ಹುದ್ದೆಗಳನ್ನು ತುಂಬುವ ನಿಟ್ಟಿನಲ್ಲಿ ಕೆಲಸ ಪ್ರಾರಂಭಿಸಿದ್ದೇವೆ ಎಂದರು.ಬೀದರ್ ಜಿಲ್ಲೆ ಬರ ಘೋಷಣೆಗೆ ಮನವಿಈ ವರ್ಷ ಜಿಲ್ಲೆಯಲ್ಲಿ ಮಳೆಯಾಗದೆ ರೈತರು ಸಂಕಷ್ಟದಲ್ಲಿದ್ದು, ಬರ ಘೋಷಣೆ ಮಾಡಿ ರೈತರ ನೆರವಿಗೆ ಬರಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.ವಾಡಿಕೆಗಿಂತ ತೀರಾ ಕಡಿಮೆ ಮಳೆಯಾಗಿದೆ. ಜಿಲ್ಲೆಯ ನೀರಾವರಿ ಪೂರ್ಣಗೊಳಿಸಲು ಎರಡೂವರೆ ಸಾವಿರ ಕೋಟಿ ಅಗತ್ಯ. ಬೀದರ್ ಜಿಲ್ಲೆ ಪ್ರವಾಸಿತಾಣ ಪ್ರಸ್ತಾವ ಅನುಮೋದನೆ ನೀಡಬೇಕು. ಜಿಲ್ಲೆಯ ಮೂರು ಸಹಕಾರ ಸಕ್ಕರೆ ಕಾರ್ಖಾನೆ ಪುನಶ್ಚೇತನ ಅಗತ್ಯ. ಅದಕ್ಕೆ ಅಗತ್ಯ ನೆರವು ನೀಡಬೇಕು. ಕಾರಂಜಾ ಸಂತ್ರಸ್ತರಿಗೆ ನೆರವು ನೀಡಬೇಕು ಎಂದರು.ಸಂಸದ ಸಾಗರ್ ಖಂಡ್ರೆ ಮಾತನಾಡಿ, ಎಸ್ಐಆರ್ ಬಗ್ಗೆ ಪಕ್ಷದ ಕಾರ್ಯಕರ್ತರು ಎಚ್ಚರ ವಹಿಸಬೇಕು. ಮತದಾನ ರದ್ದು ಆದರೆ ಸರ್ಕಾರಿ ಸೌಲಭ್ಯ ಸಿಗುವುದಿಲ್ಲ ಎಂದು ಮನವರಿಕೆ ಮಾಡಿಕೊಡಬೇಕು ಎಂದರುಮಾಜಿ ಸಚಿವ ರಾಜಶೇಖರ ಪಾಟೀಲ, ಶಾಸಕ ರಹೀಂ ಖಾನ್ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ, ಡಾ. ಚಂದ್ರಶೇಖರ ಪಾಟೀಲ, ಮುಖಂಡ ಕೆ. ಪುಂಡಲೀಕರಾವ್, ನರಸಿಂಗರಾವ್ ಸೂರ್ಯವಂಶಿ, ವಿಜಯ್ ಸಿಂಗ್, ಅರವಿಂದಕುಮಾರ ಅರಳಿ, ಅಮೃತರಾವ್ ಚಿಮಕೋಡೆ, ಸಂಜಯ ಜಾಗೀರದಾರ, ಭೀಮಸೇನರಾವ್ ಶಿಂಧೆ, ಅಮರ ಖಂಡ್ರೆ, ದತ್ತು ಮೂಲಗೆ ಇದ್ದರು.ಮುಖಂಡರ ಬೆಂಬಲಿಗರಿಗೆ ಸಿಎಂ ಎಚ್ಚರಿಕೆಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾಷಣ ಮಾಡಲು ಮುಂದಾದಾಗ ಈಶ್ವರ ಬಿ.ಖಂಡ್ರೆ, ರಾಜಶೇಖರ ಪಾಟೀಲ ಹುಮನಾಬಾದ್ ಹಾಗೂ ರಹೀಂ ಖಾನ್ ಅವರ ಬೆಂಬಲಿಗರು ಸ್ಪರ್ಧೆಗೆ ಇಳಿದವರಂತೆ ಘೋಷಣೆ ಕೂಗಿದರು. ಇದರಿಂದ ಸಿಟ್ಟಾದ ಶಿವಕುಮಾರ್, ವ್ಯಕ್ತಿ ಪೂಜೆ ಬಿಟ್ಟು ಪಕ್ಷದ ಪೂಜೆ ಮಾಡುವುದು ಕಲಿಯಬೇಕು. ಗೌರವ ಕಾಪಾಡಿಕೊಳ್ಳಬೇಕು. ಪ್ರೀತಿ, ವಿಶ್ವಾಸ, ಅಭಿಮಾನ ಇರಲಿ. ಫೋಟೋ ಹಿಡಿದು ಜೈಕಾರ ಹಾಕಿದರೆ ಯಾವುದೇ ಸ್ಥಾನ ಸಿಗಲ್ಲ. ನಾನು ಯುವ ಕಾಂಗ್ರೆಸ್ನಿಂದ ಬಂದವನು. ಎಂದೂ ಈ ರೀತಿ ಕಿರುಚಿದವನು ಅಲ್ಲ ಎಂದು ಎಚ್ಚರಿಕೆಯ ಧಾಟಿಯಲ್ಲಿ ಹೇಳಿದಾಗ ಮೌನವಾದರು. ಬಳಿಕ ಮಾತು ಮುಂದವರೆಸಿದರು.2028ಕ್ಕೆ ಪುನಃ ನಮ್ಮ ಪಕ್ಷ ಅಧಿಕಾರಕ್ಕೆ2028ರಲ್ಲಿ ಪುನಃ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಕಾರ್ಯಕರ್ತರು ಆತ್ಮವಿಶ್ವಾಸದಿಂದ ಇರಬೇಕು ಎಂದು ಡಿ.ಕೆ. ಶಿವಕುಮಾರ್ ಪಕ್ಷದ ಕಾರ್ಯಕರ್ತರಿಗೆ ಭರವಸೆ ಮೂಡಿಸಿದರು. ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಮೂರ್ನಾಲ್ಕು ತಿಂಗಳಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲಾಗುವುದು. 2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬೀದರ್ ಜಿಲ್ಲೆಯಲ್ಲಿ 6ರ ಪೈಕಿ 5ರಲ್ಲಿ ಕಾಂಗ್ರೆಸ್ ಗೆಲ್ಲುವ ಭರವಸೆ ಇತ್ತು. ಆದರೆ, ಎರಡು ಕ್ಷೇತ್ರಗಳಲ್ಲಿ ಜಯ ಗಳಿಸಿದ್ದೆವು. ಮುಂಬರುವ ಚುನಾವಣೆಯಲ್ಲಿ ಆರಕ್ಕೆ ಆರು ಕ್ಷೇತ್ರಗಳಲ್ಲಿ ಗೆಲ್ಲಬೇಕಿದೆ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಪಕ್ಷದ ಗೆಲುವಿಗೆ ಶ್ರಮಿಸಬೇಕೆಂದು ಈಶ್ವರ ಖಂಡ್ರೆಯವರಿಗೆ ತಿಳಿಸಿರುವೆ ಎಂದರು.ರಾಮನ ಹೆಸರಿನಲ್ಲಿ ಮತ ಕೇಳುವ ಹಕ್ಕು ಬಿಜೆಪಿಗಿಲ್ಲ‘ರಾಮ ಹಾಗೂ ಧರ್ಮದ ಹೆಸರಿನಲ್ಲಿ ಲೂಟಿ ನಡೆಯುತ್ತಿದೆ. ಇದರ ಹೆಸರಿನಲ್ಲಿ ಮತ ಕೇಳುವ ಹಕ್ಕು ಬಿಜೆಪಿಗಿಲ್ಲ’ ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.ನಾವು ಅಧಿಕಾರಕ್ಕೆ ಬಂದು ಬಡವರಿಗೆ ಶಕ್ತಿ ತುಂಬಿದ್ದೇವೆ. ಬಿಜೆಪಿಯವರು ಚಿನ್ನ ಖರೀದಿಸಬೇಡಿ, ಮಾಂಗಲ್ಯ ಸರ ಖರೀದಿಸಬೇಡಿ, ಪೆಟ್ರೋಲ್, ಡೀಸೆಲ್ ಖರೀದಿಸಬೇಡಿ ಎಂದು ಹೇಳುತ್ತಿದ್ದಾರೆ. ರಾಮನ ಹೆಸರಿನಲ್ಲಿ ಜನ ಚಿನ್ನ, ಬೆಳ್ಳಿ ಕೊಟ್ಟರು. ನಾವು ಕೊಟ್ಟ ಅಕ್ಕಿಯನ್ನು ಮಂತ್ರಾಕ್ಷತೆಯಾಗಿ ಬಳಸಿಕೊಂಡರು. ಕಾಂಗ್ರೆಸ್ ಈ ದೇಶದ ಶಕ್ತಿ, ಜನರನ್ನು ಒಟ್ಟುಗೂಡಿಸುವ, ಶಕ್ತಿ ತುಂಬುವ ಕೆಲಸ ಮಾಡುತ್ತಿದೆ ಎಂದರು.