ನುಡಿ ನಮನ: ಅವರು ಕಟ್ಟಿದ್ದು ಕೇವಲ ತೂಗು ಸೇತುವೆಯಲ್ಲ, ಊರುಗಳನ್ನು ಜೋಡಿಸಿದರು !
ನೀವು ಕಟ್ಟಿದ ಸೇತುವೆಗಳು ಇನ್ನೂ ನೂರಾರು ವರ್ಷ ಜನರನ್ನು ಒಂದು ದಡದಿಂದ ಮತ್ತೊಂದು ದಡಕ್ಕೆ ಕರೆದೊಯ್ಯುತ್ತವೆ. ಆ ದಾರಿಯಲ್ಲಿ ನಡೆಯುವ ಪ್ರತಿಯೊಬ್ಬರ ಹೆಜ್ಜೆಯಲ್ಲೂ ನಿಮ್ಮ ಪರಿಶ್ರಮದ ಪ್ರತಿಧ್ವನಿ ಇರುತ್ತದೆ.ಕೆಲವು ಮನುಷ್ಯರು ತಮ್ಮ ಹೆಸರನ್ನು ಕಲ್ಲಿನ ಮೇಲೆ ಕೆತ್ತಿಸಿಕೊಳ್ಳುತ್ತಾರೆ.ನೀವು ನಿಮ್ಮ ಹೆಸರನ್ನು ಮನುಷ್ಯರು ದಾಟುವ ದಾರಿಗಳ ಮೇಲೆ ಬರೆದಿದ್ದೀರಿ.ಆದ್ದರಿಂದ

ನೀವು ಕಟ್ಟಿದ ಸೇತುವೆಗಳು ಇನ್ನೂ ನೂರಾರು ವರ್ಷ ಜನರನ್ನು ಒಂದು ದಡದಿಂದ ಮತ್ತೊಂದು ದಡಕ್ಕೆ ಕರೆದೊಯ್ಯುತ್ತವೆ. ಆ ದಾರಿಯಲ್ಲಿ ನಡೆಯುವ ಪ್ರತಿಯೊಬ್ಬರ ಹೆಜ್ಜೆಯಲ್ಲೂ ನಿಮ್ಮ ಪರಿಶ್ರಮದ ಪ್ರತಿಧ್ವನಿ ಇರುತ್ತದೆ.ಕೆಲವು ಮನುಷ್ಯರು ತಮ್ಮ ಹೆಸರನ್ನು ಕಲ್ಲಿನ ಮೇಲೆ ಕೆತ್ತಿಸಿಕೊಳ್ಳುತ್ತಾರೆ.ನೀವು ನಿಮ್ಮ ಹೆಸರನ್ನು ಮನುಷ್ಯರು ದಾಟುವ ದಾರಿಗಳ ಮೇಲೆ ಬರೆದಿದ್ದೀರಿ.ಆದ್ದರಿಂದ ನೀವು ಕೇವಲ ಪದ್ಮಶ್ರೀ ಅಲ್ಲ. ನಮ್ಮ ನೆಲದ ಪದ್ಮಶ್ರೀ.ಪದ್ಮಶ್ರೀ ಪ್ರಶಸ್ತಿಯನ್ನು ಪಡೆದವರು ಹಲವರಿದ್ದಾರೆ. ಆದರೆ ಅವರಲ್ಲಿ ಕೆಲವರು ಮಾತ್ರ ತಮ್ಮ ಬದುಕಿನ ಮೂಲಕ ಆ ಪ್ರಶಸ್ತಿಗೆ ಹೊಸ ಅರ್ಥ ಕೊಡುತ್ತಾರೆ. ನನಗೆ ಗಿರೀಶ್ ಭಾರದ್ವಾಜ್ ಅಂತಹವರಲ್ಲಿ ಒಬ್ಬರು. ಅದಕ್ಕಾಗಿಯೇ ಅವರನ್ನು ನಾನು ಯಾವತ್ತೂ 'ನೆಲದ ಪದ್ಮಶ್ರೀ' ಎಂದೇ ಭಾವಿಸಿದ್ದೆ.ಯಾಕೆಂದರೆ ಅವರು ಕಟ್ಟಿದ್ದು ಕೇವಲ ತೂಗು ಸೇತುವೆಗಳಲ್ಲ.ಅವರು ಜೋಡಿಸಿದ್ದು ಊರುಗಳನ್ನು. ಅವರು ಹತ್ತಿರ ತಂದದ್ದು ಮನುಷ್ಯರನ್ನು.ಅವರು ಸಂಪರ್ಕಿಸಿದ್ದು ಬದುಕುಗಳನ್ನು.ನದಿಯ ಆಚೆ-ಈಚೆ ನಿಂತು ಕೈ ಎತ್ತಿ ನಮಸ್ಕಾರ ಮಾಡುವುದಷ್ಟೇ ಗೊತ್ತಿದ್ದ ಹಳ್ಳಿಗಳ ನಡುವೆ ಅವರು ಒಂದು ದಾರಿ ನಿರ್ಮಿಸಿದರು. ಕೈಭಾಷೆಯಲ್ಲಿ ಮಾತನಾಡುತ್ತಿದ್ದ ಜನರಿಗೆ ಕಾಲಿಟ್ಟು ನಡೆದು ಭೇಟಿಯಾಗುವ ಅವಕಾಶ ಕೊಟ್ಟರು. ಒಂದು ಸೇತುವೆ ನಿರ್ಮಾಣವಾದರೆ ಕೇವಲ ಎರಡು ದಡಗಳು ಒಂದಾಗುವುದಿಲ್ಲ; ಶಾಲೆಗೆ ಹೋಗುವ ಮಕ್ಕಳ ಬದುಕು ಬದಲಾಗುತ್ತದೆ, ರೈತನ ಮಾರುಕಟ್ಟೆ ಹತ್ತಿರವಾಗುತ್ತದೆ, ರೋಗಿಗೆ ಆಸ್ಪತ್ರೆ ಹತ್ತಿರವಾಗುತ್ತದೆ, ಸಂಬಂಧಗಳು ಗಟ್ಟಿಯಾಗುತ್ತವೆ, ಸಂಸ್ಕೃತಿಗಳು ಪರಸ್ಪರ ಬೆರೆಯುತ್ತವೆ. ಗಿರೀಶ್ ಭಾರದ್ವಾಜ್ ಕಟ್ಟಿದ ನೂರಾರು ಸೇತುವೆಗಳು ಇಂತಹ ಸಾವಿರಾರು ಕಥೆಗಳಿಗೆ ಸಾಕ್ಷಿಯಾಗಿವೆ.ದಕ್ಷಿಣ ಭಾರತದ ಹಳ್ಳಿಗಳಿಂದ ಹಿಡಿದು ಉತ್ತರ ಭಾರತದ ದುರ್ಗಮ ಪ್ರದೇಶಗಳವರೆಗೂ, ಆಧುನಿಕ ತಂತ್ರಜ್ಞಾನವೂ ತಲುಪಲು ಕಷ್ಟಪಟ್ಟ ನದಿಗಳ ಮೇಲೆ ಅವರು ತೂಗು ಸೇತುವೆಗಳನ್ನು ನಿರ್ಮಿಸಿದರು. ಅವರ ಸಾಧನೆ ಇಂಜಿನಿಯರಿಂಗ್ನ ಯಶಸ್ಸು ಮಾತ್ರವಲ್ಲ; ಅದು ಮನುಷ್ಯರನ್ನು ಮನುಷ್ಯರಿಗೆ ಜೋಡಿಸುವ ಮಾನವೀಯತೆಯ ಯಶಸ್ಸು.ಸುಳ್ಯದಂತಹ ಅಂಚಿನ ಊರಿನಿಂದ ಹೊರಟ ಒಬ್ಬ ಮನುಷ್ಯ ದೇಶದಾದ್ಯಂತ ತನ್ನ ಕೆಲಸದ ಗುರುತು ಮೂಡಿಸುವುದು ಸಣ್ಣ ಸಾಧನೆಯಲ್ಲ. ಆದರೆ ಅವರ ಬದುಕಿನಲ್ಲಿ ನನಗೆ ಹೆಚ್ಚು ಇಷ್ಟವಾಗಿದ್ದು ಅವರ ವಿನಯ. ಪದ್ಮಶ್ರೀ ಪ್ರಶಸ್ತಿ ಅವರ ಹೆಸರಿನ ಮುಂದೆ ಬಂದರೂ, ಅವರ ಮಾತಿನಲ್ಲಿ ಅಥವಾ ವರ್ತನೆಯಲ್ಲಿ ಅದರ ಅಹಂಕಾರವನ್ನು ನಾನು ಎಂದೂ ಕಂಡಿಲ್ಲ.ಸುಳ್ಯದ ಸಾಹಿತ್ಯ, ಸಂಸ್ಕೃತಿ ಮತ್ತು ಜೀವಪರ ಕಾರ್ಯಕ್ರಮಗಳಲ್ಲಿ ಅವರು ಅತ್ಯಂತ ಸಹಜವಾಗಿ ಕಾಣಿಸಿಕೊಳ್ಳುತ್ತಿದ್ದರು. ಸಭೆಯ ಒಂದು ಮೂಲೆಯಲ್ಲಿ ಕುಳಿತು ಎಲ್ಲರ ಮಾತುಗಳನ್ನು ಆಲಿಸುತ್ತಿದ್ದರು. ಹಿತಮಿತವಾಗಿ ಮಾತನಾಡುತ್ತಿದ್ದರು. ಅವರಲ್ಲಿ ಸಾಧನೆಯ ಸದ್ದು ಇರಲಿಲ್ಲ; ಕೆಲಸದ ಮೌನ ಮಾತ್ರ ಇತ್ತು. ಇಂತಹ ಮನುಷ್ಯರೇ ಸಮಾಜದ ನಿಜವಾದ ದೊಡ್ಡವರು.ಇಂದು ಅವರು ಇಲ್ಲ ಎಂಬ ಸುದ್ದಿ ಮನಸ್ಸಿಗೆ ಭಾರವಾಗುತ್ತದೆ. ಆದರೆ ಕೆಲವು ಮನುಷ್ಯರು ಸಾವಿನ ನಂತರವೂ ಎಲ್ಲಿಗೂ ಹೋಗುವುದಿಲ್ಲ.ಅವರು ಕಟ್ಟಿದ ಸೇತುವೆಗಳ ಮೇಲೆ ಪ್ರತಿದಿನ ಮಕ್ಕಳು ಶಾಲೆಗೆ ನಡೆಯುತ್ತಾರೆ.ರೈತರು ತಮ್ಮ ಫಸಲನ್ನು ಹೊತ್ತು ನಡೆಯುತ್ತಾರೆ.ಹಿರಿಯರು ಆಸ್ಪತ್ರೆ ಕಡೆ ಸಾಗುತ್ತಾರೆ. ಹಬ್ಬಕ್ಕೆ ಬಂಧುಗಳು ಪರಸ್ಪರ ಭೇಟಿಯಾಗುತ್ತಾರೆ. ಆ ಸೇತುವೆಗಳ ಪ್ರತಿಯೊಂದು ಹೆಜ್ಜೆಯಲ್ಲೂ ಅವರ ನೆನಪು ಜೀವಂತವಾಗಿರುತ್ತದೆ.ಸೇತುವೆ ಎಂದರೆ ಕಬ್ಬಿಣ, ಉಕ್ಕು ಮತ್ತು ಹಗ್ಗಗಳ ಜೋಡಣೆಯಲ್ಲ. ಅದು ಮನುಷ್ಯರ ನಡುವೆ ನಂಬಿಕೆಯನ್ನು ಕಟ್ಟುವ ಕೆಲಸ. ಗಿರೀಶ್ ಭಾರದ್ವಾಜ್ ಅವರು ತಮ್ಮ ಬದುಕಿನುದ್ದಕ್ಕೂ ಅದನ್ನೇ ಮಾಡಿದರು. ನದಿಗಳನ್ನು ದಾಟುವ ದಾರಿಗಳನ್ನು ನಿರ್ಮಿಸುವುದರ ಜೊತೆಗೆ, ಊರುಗಳನ್ನು, ಭಾವನೆಗಳನ್ನು, ಸಂಬಂಧಗಳನ್ನು, ಸಂಸ್ಕೃತಿಯನ್ನು ಮತ್ತು ಮನುಷ್ಯತ್ವವನ್ನು ಕೂಡ ಜೋಡಿಸಿದರು.( ಲೇಖಕರು ನಿವೃತ್ತ ಅಧ್ಯಾಪಕರು, ಸಾಹಿತಿ)ʼತೂಗುಸೇತುವೆಗಳ ಸರದಾರʼ ಎಂದೇ ಖ್ಯಾತರಾದ ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರಧ್ವಾಜ್ ಅವರ ನಿಧನದ ಸುದ್ದಿ ಕೇಳಿ ಆಘಾತವಾಯಿತು. ಮಹಾನ್ ತಾಂತ್ರಿಕ ಚೇತನವೊಂದು ನಮ್ಮನ್ನು ಅಗಲಿರುವುದು ವಿಜ್ಞಾನ, ತಂತ್ರಜ್ಞಾನ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಗ್ರಾಮೀಣ ಭಾರತದ ಅಭಿವೃದ್ಧಿಗೆ ಮತ್ತು ಸಂಪರ್ಕ ಕ್ರಾಂತಿಗೆ ಶ್ರೀಯುತರು… pic.twitter.com/kYBmrU4iPq— Dr. G Parameshwara (@DrParameshwara) July 7, 2026