ನಿರ್ಣಾಯಕ ಖನಿಜಗಳ ಉದ್ಯಮ, Brahmos ಮಾರಾಟ: ಇಂಡೋನೇಷ್ಯಾದಲ್ಲಿ ಮೋದಿ ಅಜೆಂಡಾ
ನಿಕಲ್ ಸೇರಿದಂತೆ ನಿರ್ಣಾಯಕ ಖನಿಜಗಳನ್ನು ಸಂಸ್ಕರಿಸಿ, ಪ್ರಮುಖವಾಗಿ ಭಾರತಕ್ಕೆ ರಫ್ತು ಮಾಡಲು ಎರಡೂ ದೇಶಗಳ ಕಂಪನಿಗಳ ಜಂಟಿ ಉದ್ಯಮಗಳಿಗೆ ಅನುಕೂಲವಾಗುವಂತಹ ಒಪ್ಪಂದಕ್ಕೆ ಇಂಡೋನೇಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ ಸಹಿ ಹಾಕಲಿದ್ದಾರೆ.ಮೇಡ್ ಇನ್ ಇಂಡಿಯಾ ಬ್ರಹ್ಮೋಸ್ ಕ್ಷಿಪಣಿಯನ್ನು ಇಂಡೋನೇಷ್ಯಾಕ್ಕೆ ಮಾರಾಟ ಸೇರಿದಂ

ನಿಕಲ್ ಸೇರಿದಂತೆ ನಿರ್ಣಾಯಕ ಖನಿಜಗಳನ್ನು ಸಂಸ್ಕರಿಸಿ, ಪ್ರಮುಖವಾಗಿ ಭಾರತಕ್ಕೆ ರಫ್ತು ಮಾಡಲು ಎರಡೂ ದೇಶಗಳ ಕಂಪನಿಗಳ ಜಂಟಿ ಉದ್ಯಮಗಳಿಗೆ ಅನುಕೂಲವಾಗುವಂತಹ ಒಪ್ಪಂದಕ್ಕೆ ಇಂಡೋನೇಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ ಸಹಿ ಹಾಕಲಿದ್ದಾರೆ.ಮೇಡ್ ಇನ್ ಇಂಡಿಯಾ ಬ್ರಹ್ಮೋಸ್ ಕ್ಷಿಪಣಿಯನ್ನು ಇಂಡೋನೇಷ್ಯಾಕ್ಕೆ ಮಾರಾಟ ಸೇರಿದಂತೆ ದ್ವಿಪಕ್ಷೀಯ ರಕ್ಷಣಾ ಸಹಕಾರ ವಿಸ್ತರಣೆ ಬಗ್ಗೆಯೂ ಉಭಯ ನಾಯಕರು ಚರ್ಚಿಸಲಿದ್ದಾರೆ.ಒಂದೊಮ್ಮೆ ಬ್ರಹ್ಮೋಸ್ ಖರೀದಿಗೆ ಇಂಡೋನೇಷ್ಯಾ ಒಪ್ಪಂದ ಮಾಡಿಕೊಂಡರೆ, ಭಾರತದಲ್ಲಿ ತಯಾರಿಸಲಾಗುವ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಖರೀದಿಸುತ್ತಿರುವ ಮೂರನೇ ದೇಶವಾಗಲಿದೆ. ಇಂಡೋನೇಷ್ಯಾ ಜೊತೆಗಿನ ಬ್ರಹ್ಮೋಸ್ ಖರೀದಿ ಒಪ್ಪಂದವು ಅಂತಿಮ ಹಂತದಲ್ಲಿದೆ ಎಂದು ಮೂಲಗಳು ತಿಳಿಸಿವೆ. ಸೋಮವಾರ ಇಂಡೋನೇಷ್ಯಾ ರಾಜಧಾನಿ ಜಕಾರ್ತಾಗೆ ಬಂದಿಳಿರುವ ಮೋದಿ ಮೂರು ದೇಶಗಳ ಪ್ರವಾಸವನ್ನು ಆರಂಭಿಸಿದ್ದಾರೆ. ಇಂಡೋನೇಷ್ಯಾ ಬಳಿಕ ನ್ಯೂಜಿಲೆಂಡ್, ಆಸ್ಟ್ರೇಲಿಯಾಕ್ಕೂ ಅವರು ತೆರಳಲಿದ್ಧಾರೆ. ಜುಲೈ 11ರಂದು ಭಾರತಕ್ಕೆ ವಾಪಸ್ ಆಗಲಿದ್ದಾರೆ. ಪ್ರಧಾನಿ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ಒನ್ ವಿಮಾನವು ಇಂಡೋನೇಷ್ಯಾ ವಾಯುಪ್ರದೇಶವನ್ನು ಪ್ರವೇಶಿಸುತ್ತಿದ್ದಂತೆ ಇಂಡೋನೇಷ್ಯಾ ವಾಯುಪಡೆಯ ವಿಮಾನಗಳು ಅದನ್ನು ಹಿಂಬಾಲಿಸಿದ್ದವು. ಅಧ್ಯಕ್ಷ ಪ್ರಬೊವೊ ಖುದ್ದು ಆಗಮಿಸಿ ಪ್ರಧಾನಿ ಮೋದಿಯವರನ್ನು ಬರಮಾಡಿಕೊಂಡರು. ಮಂಗಳವಾರ ಮೋದಿ– ಪ್ರಬೊವೊ ಮಾತುಕತೆ ನಡೆಸಲಿದ್ದು, ನಿರ್ಣಾಯಕ ಖನಿಜಗಳ ಒಪ್ಪಂದ ಸೇರಿ ಹಲವು ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.ನೈಸರ್ಗಿಕ ಸಂಪನ್ಮೂಲ ಸಮೃದ್ಧ ದೇಶವಾದ ಇಂಡೋನೇಷ್ಯಾಕ್ಕೆ ನಿರ್ಣಾಯಕ ಖನಿಜಗಳು ಕಾರ್ಯತಂತ್ರದ ಆದ್ಯತೆಯಾಗಿ ಹೊರಹೊಮ್ಮಿವೆ. ಶುದ್ಧ ಇಂಧನ ತಂತ್ರಜ್ಞಾನ, ವಿದ್ಯುತ್ ವಾಹನಗಳು ಮತ್ತು ಮುಂದುವರಿದ ತಂತ್ರಜ್ಞಾನ ಸಂಬಂಧಿತ ಉತ್ಪಾದನೆಗೆ ಅಗತ್ಯವಾದ ಹಲವು ಖನಿಜಗಳ ಹೇರಳವಾದ ನಿಕ್ಷೇಪಗಳನ್ನು ಹೊಂದಿದೆ. ಅವುಗಳಲ್ಲಿ ನಿಕಲ್ ನಿರ್ದಿಷ್ಟ ಪ್ರಾಮುಖ್ಯತೆ ಪಡೆದುಕೊಂಡಿದೆ. ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಇಂಡೋನೇಷ್ಯಾ ಅಂದಾಜು 55 ಮಿಲಿಯನ್ ಟನ್ ನಿಕಲ್ ನಿಕ್ಷೇಪಗಳನ್ನು ಹೊಂದಿದೆ. ಇದು ಜಾಗತಿಕವಾಗಿ ಒಟ್ಟು ನಿಕ್ಷೇಪಗಳಲ್ಲಿ ಸುಮಾರು ಶೇ 42 ರಷ್ಟಾಗಿದೆ. ಆದರೆ, ವಿಶ್ವದಾದ್ಯಂತ ನಿಕಲ್ ಉತ್ಪಾದನೆಯಲ್ಲಿ ಸುಮಾರು ಶೇ 60 ರಷ್ಟು ಇಂಡೋನೇಷ್ಯಾದಲ್ಲೇ ಆಗುತ್ತಿದೆ.ಮೌಲ್ಯವರ್ಧನೆಯನ್ನು ವೃದ್ಧಿಸುವ ಉದ್ದೇಶದಿಂದ 2020ರಲ್ಲಿ ಇಂಡೋನೇಷ್ಯಾವು ಸಂಸ್ಕರಿಸದ ನಿಕಲ್ ಅದಿರಿನ ರಫ್ತನ್ನು ನಿಷೇಧಿಸಿತ್ತು. ನಿಕಲ್ ಅನ್ನು ವಿದೇಶಕ್ಕೆ ಸಾಗಿಸುವ ಮೊದಲು ದೇಶೀಯವಾಗಿ ಸಂಸ್ಕರಿಸುವ ನಿಯಮ ಜಾರಿಗೆ ತಂದಿತು. ಈ ನೀತಿಯು ದೇಶದಲ್ಲಿ ನಿಕಲ್ ಸಂಸ್ಕರಣಾ ಉದ್ಯಮದ ತ್ವರಿತ ಬೆಳವಣಿಗೆಗೆ ಉತ್ತೇಜನ ನೀಡಿದೆ. ಇಂಡೋನೇಷ್ಯಾವನ್ನು ನಿರ್ಣಾಯಕ ಖನಿಜಗಳನ್ನು ಸಂಸ್ಕರಿಸುವ ವಿಶ್ವದ ಪ್ರಮುಖ ಕೇಂದ್ರಗಳಲ್ಲಿ ಒಂದನ್ನಾಗಿ ಮಾಡಿದೆ. ನಿಕಲ್ ಸಂಸ್ಕರಣೆ ಸೇರಿದಂತೆ ಇಂಡೋನೇಷ್ಯಾದಲ್ಲಿ ಚೀನಾ ಕಂಪನಿಗಳು 65 ಬಿಲಿಯನ್ ಡಾಲರ್ಗೂ ಅಧಿಕ ಹೂಡಿಕೆ ಮಾಡಿವೆ. ಇಂಡೋನೇಷ್ಯಾದಲ್ಲಿ ನಿಕಲ್ ಸಂಸ್ಕರಣೆಯ ಶೇ 75ರಷ್ಟು ಪಾಲನ್ನು ಚೀನಾ ಕಂಪನಿಗಳು ಹೊಂದಿವೆ. ಹೀಗಾಗಿ, ಇದು ಇಂಡೋನೇಷ್ಯಾವನ್ನು ವಿದ್ಯುತ್ ವಾಹನ ಬ್ಯಾಟರಿಗಳಲ್ಲಿ ಬಳಸುವ ವಸ್ತುಗಳ ಪ್ರಮುಖ ಉತ್ಪಾದಕ ದೇಶವಾಗಿಸಿದೆ. ಜೊತೆಗೆ, ವಿಶ್ವದ ಪ್ರಮುಖ ಬ್ಯಾಟರಿ ಸಂಬಂಧಿತ ವಸ್ತುಗಳ ಪೂರೈಕೆ ಸರಪಳಿಗಳಲ್ಲಿ ಚೀನಾಕ್ಕೆ ಪ್ರಮುಖ ಸ್ಥಾನ ನೀಡಿದೆ.ಭಾರತಕ್ಕೆ ಸಂಬಂಧಿಸಿದಂತೆ, ಪ್ರಸ್ತಾವಿತ ಒಪ್ಪಂದವು ದೇಶದ ಶುದ್ಧ ಇಂಧನ ಪರಿವರ್ತನೆ, ಎಲೆಕ್ಟ್ರಾನಿಕ್ಸ್, ವಿದ್ಯುತ್ ಚಲನಶೀಲತೆ, ನವೀಕರಿಸಬಹುದಾದ ಇಂಧನ ಮತ್ತು ರಕ್ಷಣಾ ಉತ್ಪಾದನೆಗೆ ಅಗತ್ಯವಾದ ನಿರ್ಣಾಯಕ ಖನಿಜಗಳಿಗೆ ವಿಶ್ವಾಸಾರ್ಹ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ವಿಶಾಲ ಕಾರ್ಯತಂತ್ರದ ಭಾಗವಾಗಿದೆ. ಈ ಪಾಲುದಾರಿಕೆಯು ವಿವಿಧ ಖನಿಜಗಳನ್ನು ಒಳಗೊಳ್ಳುವ ನಿರೀಕ್ಷೆ ಇದ್ದರೂ, ನಿಕಲ್ ಸಹಯೋಗವು ಪ್ರಮುಖವಾದದ್ದಾಗಿದೆ.ದೇಶೀಯವಾಗಿ ಕಡಿಮೆ ಲಭ್ಯತೆ ಹಿನ್ನೆಲೆಯಲ್ಲಿ ಭಾರತವು ತನ್ನ ನಿಕಲ್ ಅವಶ್ಯಕತೆಗಳನ್ನು ಪೂರೈಸಲು ಸಂಪೂರ್ಣವಾಗಿ ಆಮದಿನ ಮೇಲೆ ಅವಲಂಬಿತವಾಗಿದೆ. ಕೈಗಾರಿಕಾ ಅಂದಾಜಿನ ಪ್ರಕಾರ, ದೇಶದ ಸಂಸ್ಕರಿಸಿದ ನಿಕಲ್ ಬೇಡಿಕೆಯು ವಾರ್ಷಿಕವಾಗಿ ಸುಮಾರು 85,000 ಮೆಟ್ರಿಕ್ ಟನ್ಗಳಷ್ಟಿದೆ. ಇಂಡೋನೇಷ್ಯಾದಿಂದಲೇ ಭಾರತಕ್ಕೆ ಅಗತ್ಯವಿರುವ ಬಹುತೇಕ ಎಲ್ಲ ಫೆರೋನಿಕಲ್ ಪೂರೈಕೆ ಆಗುತ್ತಿದೆ. ಭಾರತದ ವಿದ್ಯುತ್ ವಾಹನ ಮತ್ತು ಸ್ಟೇನ್ಲೆಸ್ ಸ್ಟೀಲ್ ಕೈಗಾರಿಕೆಗಳು ವಿಸ್ತರಿಸುತ್ತಿದ್ದು, ಸಂಸ್ಕರಿಸಿದ ನಿಕಲ್ನ ಬೇಡಿಕೆಯು ಮುಂದಿನ ಐದು ವರ್ಷಗಳಲ್ಲಿ ಎರಡು ಪಟ್ಟು ಹೆಚ್ಚಾಗಿ 170,000 ಮೆಟ್ರಿಕ್ ಟನ್ಗಳಿಗಿಂತಲೂ ಹೆಚ್ಚಾಗುವ ನಿರೀಕ್ಷೆ ಇದೆ. ಪ್ರಸ್ತಾವಿತ ಜಂಟಿ ಉದ್ಯಮಗಳು ಇಂಡೋನೇಷ್ಯಾದ ನಿರ್ಣಾಯಕ ಖನಿಜ ಸಂಸ್ಕರಣಾ ಪರಿಸರ ವ್ಯವಸ್ಥೆಯಲ್ಲಿ ಭಾರತಕ್ಕೆ ನೆಲೆ ಒದಗಿಸುವ ನಿರೀಕ್ಷೆ ಇದೆ. ಕಾರ್ಯತಂತ್ರದ ಕಚ್ಚಾ ವಸ್ತುಗಳಿಗೆ ಪ್ರವೇಶ ನೀಡುತ್ತದೆ. ಚೀನಾ ಪ್ರಾಬಲ್ಯದ ಸಂಸ್ಕರಣಾ ಜಾಲಗಳನ್ನು ಮೀರಿ ಸಂಗ್ರಹಣೆಯನ್ನು ವೈವಿಧ್ಯಗೊಳಿಸುತ್ತದೆ. ಮೂಲಗಳ ಪ್ರಕಾರ, ಈ ಒಪ್ಪಂದವು ಭಾರತದ ಪೂರೈಕೆ-ಸರಪಳಿಯ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುತ್ತದೆ. ವಿದ್ಯುತ್ ಚಲನಶೀಲತೆ, ಬ್ಯಾಟರಿ ಉತ್ಪಾದನೆ, ನವೀಕರಿಸಬಹುದಾದ ಇಂಧನ ಮತ್ತು ಇತರ ಮುಂದುವರಿದ ಕೈಗಾರಿಕೆಗಳಿಗೆ ಅಗತ್ಯವಾದ ಖನಿಜಗಳಿಗೆ ದೀರ್ಘಕಾಲೀನ ಪ್ರವೇಶ ಪಡೆಯಲು ಸಹಾಯ ಮಾಡುತ್ತದೆ. ಅಲ್ಲದೇ, ಚೀನಾ ನಿಯಂತ್ರಿಸುವ ಇಂಡೋನೇಷ್ಯಾದ ಸಂಸ್ಕರಣಾ ಉದ್ಯಮದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.ದ್ವಿಪಕ್ಷೀಯ ವ್ಯಾಪಾರ ಮತ್ತು ವಾಣಿಜ್ಯ ಸಂಬಂಧಗಳ ಬಗ್ಗೆಯೂ ಮೋದಿ ಮತ್ತು ಪ್ರಬೊವೊ ಚರ್ಚೆ ನಡೆಸಲಿದ್ಧಾರೆ. ಆಸಿಯಾನ್ ವಲಯದಲ್ಲಿ ಇಂಡೋನೇಷ್ಯಾವು ಭಾರತದ 2ನೇ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿದೆ. 2025–26ರ ಅವಧಿಯಲ್ಲಿ ದ್ವಿಪಕ್ಷೀಯ ವ್ಯಾಪಾರದ ಮೊತ್ತ 24.78 ಬಿಲಿಯನ್ ಡಾಲರ್ಗೆ ಹೆಚ್ಚಳವಾಗಿದೆ.ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ಡಿಒ) ಮತ್ತು ರಷ್ಯಾದ ಎನ್ಪಿಒ ಮೊಶಿನೊಸಟ್ರೊಯೆನಿಯಾ(ಎನ್ಪಿಒಎಂ) ಜಂಟಿ ಉದ್ಯಮವಾದ ಬ್ರಹ್ಮೋಸ್ ಏರೊಸ್ಪೇಸ್ ಪ್ರೈವೇಟೆ ಲಿಮಿಟೆಡ್ ಬ್ರಹ್ಮೋಸ್ ಕ್ಷಿಪಣಿಯ ವಿನ್ಯಾಸ, ಅಭಿವೃದ್ಧಿ ಮತ್ತು ಉತ್ಪಾದನೆ ಮಾಡುತ್ತಿದೆ.ಭಾರತವು 2022ರ ಜನವರಿಯಲ್ಲಿ ಫಿಲಿಪೈನ್ಸ್ ಜೊತೆ 375 ಮಿಲಿಯನ್ ಡಾಲರ್ ಮೊತ್ತದ ಬ್ರಹ್ಮೋಸ್ ಕ್ಷಿಪಣಿ ಪೂರೈಕೆ ಒಪ್ಪಂದ ಮಾಡಿಕೊಂಡಿದೆ. ವಿಯೆಟ್ನಾಂ ಜೊತೆಗೂ 700 ಮಿಲಿಯನ್ ಡಾಲರ್ ಮೌಲ್ಯದ ಬ್ರಹ್ಮೋಸ್ ಒಪ್ಪಂದ ಮಾತುಕತೆ ನಡೆಯುತ್ತಿದೆ. ಅದೇ ರೀತಿ ಇಂಡೋನೇಷ್ಯಾ ಜೊತೆಗೆ ಬ್ರಹ್ಮೋಸ್ ಕ್ಷಿಪಣಿ ಪೂರೈಕೆ ಒಪ್ಪಂದದ ಪ್ರಸ್ತಾಪವಿದೆ.