ಮದ್ಯದ ತೆರಿಗೆ: ರಾಜ್ಯದ ನೀತಿಯಿಂದ ಪ್ರೀಮಿಯಂ ಮದ್ಯಕ್ಕೆ ಬೇಡಿಕೆ ಹೆಚ್ಚಳ ನಿರೀಕ್ಷೆ
ಬೆಂಗಳೂರು: ಪೇಯದಲ್ಲಿ ಇರುವ ಮದ್ಯದ ಪ್ರಮಾಣದ ಆಧಾರದಲ್ಲಿ ಅದಕ್ಕೆ ತೆರಿಗೆ ನಿಗದಿ ಮಾಡಲು ರಾಜ್ಯ ಸರ್ಕಾರವು ಜಾರಿಗೆ ತಂದಿರುವ ನೀತಿಯು ಪ್ರೀಮಿಯಂ ವರ್ಗದ ಮದ್ಯಕ್ಕೆ ಬೇಡಿಕೆಯನ್ನು ಹೆಚ್ಚು ಮಾಡುವ ನಿರೀಕ್ಷೆ ಇದೆ ಎಂದು ಭಾರತೀಯ ಮಾಲ್ಟ್ ವಿಸ್ಕಿ ಅಸೋಸಿಯೇಷನ್ನ ಮಹಾನಿರ್ದೇಶಕ, ಮೇಜರ್ ಜನರಲ್ (ನಿವೃತ್ತ) ರಾಜೇಶ್ ಚೋಪ್ರಾ ಹೇಳಿದ್ದಾರೆ.ಹೊಸ ನೀತಿಯ ಪರಿಣಾಮವಾಗಿ ಪ

ಬೆಂಗಳೂರು: ಪೇಯದಲ್ಲಿ ಇರುವ ಮದ್ಯದ ಪ್ರಮಾಣದ ಆಧಾರದಲ್ಲಿ ಅದಕ್ಕೆ ತೆರಿಗೆ ನಿಗದಿ ಮಾಡಲು ರಾಜ್ಯ ಸರ್ಕಾರವು ಜಾರಿಗೆ ತಂದಿರುವ ನೀತಿಯು ಪ್ರೀಮಿಯಂ ವರ್ಗದ ಮದ್ಯಕ್ಕೆ ಬೇಡಿಕೆಯನ್ನು ಹೆಚ್ಚು ಮಾಡುವ ನಿರೀಕ್ಷೆ ಇದೆ ಎಂದು ಭಾರತೀಯ ಮಾಲ್ಟ್ ವಿಸ್ಕಿ ಅಸೋಸಿಯೇಷನ್ನ ಮಹಾನಿರ್ದೇಶಕ, ಮೇಜರ್ ಜನರಲ್ (ನಿವೃತ್ತ) ರಾಜೇಶ್ ಚೋಪ್ರಾ ಹೇಳಿದ್ದಾರೆ.ಹೊಸ ನೀತಿಯ ಪರಿಣಾಮವಾಗಿ ಪ್ರೀಮಿಯಂ ವರ್ಗದ ವಿಸ್ಕಿಗಳ ಬೆಲೆ ಕಡಿಮೆ ಆಗಿದ್ದು, ಅದರ ಪರಿಣಾಮವಾಗಿ ಆಮದು ಮಾಡಿಕೊಂಡ ಕೆಲವು ವಿದೇಶಿ ಮದ್ಯಗಳ ಮುಂದೆ ಇವು ಹೆಚ್ಚು ಸ್ಪರ್ಧಾತ್ಮಕವಾಗುತ್ತವೆ ಎಂದು ಉದ್ಯಮದ ಪರಿಣತರು ಅಂದಾಜು ಮಾಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಭಾರತದ ಸಿಂಗಲ್ ಮಾಲ್ಟ್ ವಿಸ್ಕಿಗಳಿಗೆ ಜಾಗತಿಕ ಮಟ್ಟದಲ್ಲಿ ಒಳ್ಳೆಯ ಬೇಡಿಕೆ ಲಭ್ಯವಾಗುತ್ತಿದೆ.ರಾಜ್ಯದಲ್ಲಿ ಜಾರಿಗೆ ಬಂದಿರುವ ನೀತಿಯ ಕುರಿತಾಗಿ ‘ಪ್ರಜಾವಾಣಿ’ ಜೊತೆ ಈಚೆಗೆ ಅನಿಸಿಕೆ ಹಂಚಿಕೊಂಡಿರುವ ಚೋಪ್ರಾ ಅವರು, ‘ಹೊಸ ನೀತಿಯು ಪ್ರೀಮಿಯಂ ವರ್ಗದ ಮದ್ಯದ ಬಳಕೆ ಹೆಚ್ಚಳಕ್ಕೆ ವೇಗ ನೀಡುವ ಕೆಲಸ ಮಾಡಬಹುದು ಎಂದು ನೊಮುರ ಸಂಸ್ಥೆ ಅಂದಾಜಿಸಿದೆ. ತೆರಿಗೆ ಪರಿಷ್ಕರಣೆಯ ಕಾರಣದಿಂದಾಗಿ ಪ್ರೀಮಿಯಂ ವರ್ಗದ ಮದ್ಯಗಳು ಹೆಚ್ಚು ಅಗ್ಗವಾಗಿವೆ’ ಎಂದು ಹೇಳಿದ್ದಾರೆ.ಪ್ರೀಮಿಯಂ ವರ್ಗದ ಮದ್ಯ, ಸೂಪರ್ ಪ್ರೀಮಿಯಂ ವರ್ಗದ ಮದ್ಯ, ಭಾರತದ ಸಿಂಗಲ್ ಮಾಲ್ಟ್ ಮದ್ಯ ಹೆಚ್ಚು ಬೇಡಿಕೆ ಗಳಿಸುತ್ತಿವೆ ಎಂಬುದನ್ನು ಉದ್ಯಮದ ದತ್ತಾಂಶಗಳು ಹೇಳುತ್ತಿವೆ. ಆದರೆ ಕರ್ನಾಟಕದಲ್ಲಿ ಜಾರಿಗೆ ಬಂದಿರುವ ನೀತಿಯ ಪರಿಣಾಮ ಏನು ಎಂಬುದನ್ನು ತಕ್ಷಣವೇ ಸ್ಪಷ್ಟವಾಗಿ ಹೇಳುವುದು ಕಷ್ಟ ಎಂದಿದ್ದಾರೆ.ಹೊಸ ನೀತಿಯ ಪರಿಣಾಮವಾಗಿ ಕಡಿಮೆ ಬೆಲೆಯ ‘ಇಂಡಿಯನ್ ಮೇಡ್ ಫಾರಿನ್ ಲಿಕ್ಕರ್’ಗಳ (ಐಎಂಎಫ್ಎಲ್) ಬೆಲೆ ಜಾಸ್ತಿಯಾಗಿದೆ. ರಾಜ್ಯದ ಅಬಕಾರಿ ವರಮಾನದಲ್ಲಿ ಶೇ 70–75ರಷ್ಟು ಪಾಲು ಹೊಂದಿರುವ ಮೊದಲ ಐದು ಅಬಕಾರಿ ಹಂತಗಳ ಮೇಲೆ ತೀವ್ರ ಪರಿಣಾಮ ಉಂಟಾಗಿದೆ ಎಂದಿದ್ದಾರೆ.ಐಎಂಎಫ್ಎಲ್ ಮದ್ಯದ ಮೇಲೆ ಹೆಚ್ಚಿನ ತೆರಿಗೆ ಇರುವುದರಿಂದಾಗಿ, ಆ ವರ್ಗದ ಮದ್ಯವನ್ನು ಖರೀದಿಸುವವರು ಅಕ್ರಮ ಮದ್ಯದ ಕಡೆ ಮುಖ ಮಾಡಬಹುದು ಎಂಬ ಕಳವಳವನ್ನು ಕೂಡ ಉದ್ಯಮದ ಪರಿಣತರು ವ್ಯಕ್ತಪಡಿಸಿದ್ದಾರೆ.ರಾಜ್ಯ ಸರ್ಕಾರವು ಹೊಸ ನೀತಿಯ ಮೂಲಕ ಮದ್ಯ ತಯಾರಕರಿಗೆ ತಮ್ಮ ಉತ್ಪನ್ನದ ಗರಿಷ್ಠ ಮಾರಾಟ ಬೆಲೆಯನ್ನು ನಿರ್ಧರಿಸುವ ಅವಕಾಶ ನೀಡಿದೆ. ಈ ಮೂಲಕ ಅದು ಬೆಲೆ ನಿಗದಿ ವಿಚಾರದಲ್ಲಿ ಸರ್ಕಾರದ ಪಾತ್ರವನ್ನು ಇಲ್ಲವಾಗಿಸಿದೆ. ‘ಈ ಹೆಜ್ಜೆಯ ಮೂಲಕ ಭಾರತದ ಮಾಲ್ಟ್ ವಿಸ್ಕಿ ತಯಾರಕರಿಗೆ ಸಮಾನ ನೆಲೆಯಲ್ಲಿ ಮಾರುಕಟ್ಟೆಯಲ್ಲಿರಲು ಸಾಧ್ಯವಾಗುತ್ತದೆ’ ಎಂದು ಚೋಪ್ರಾ ಹೇಳಿದ್ದಾರೆ.ಆದರೆ, ದರ ನಿಗದಿಯ ಸ್ವಾತಂತ್ರ್ಯವನ್ನು ತಯಾರಕರಿಗೆ ನೀಡುವುದರಿಂದ ಮಾರಾಟ ದರದಲ್ಲಿ ವ್ಯತ್ಯಾಸ ಆಗಬಹುದು, ಇದರಿಂದ ಹೆಚ್ಚು ಮಳಿಗೆಗಳನ್ನು ಹೊಂದಿರುವ ಮದ್ಯ ಮಾರಾಟ ಕಂಪನಿಗಳಿಗೆ ಮಾತ್ರವೇ ಅನುಕೂಲ ಆಗಬಹುದು ಎಂಬ ಆಕ್ಷೇಪ ಕೂಡ ಮಾರಾಟಗಾರರಿಂದ ಬಂದಿದೆ.