ಅಯೋಧ್ಯೆ: ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವಕ್ಕೆ ₹113 ಕೋಟಿ ವೆಚ್ಚ
ಅಯೋಧ್ಯೆ: ರಾಮಮಂದಿರದಲ್ಲಿ ನಡೆದಿದೆ ಎನ್ನಲಾದ ದೇಣಿಗೆ ದುರುಪಯೋಗ ಕುರಿತು ತನಿಖೆ ನಡೆಯುತ್ತಿರುವ ಬೆನ್ನಲ್ಲೇ ರಾಮಮಂದಿರ ಟ್ರಸ್ಟ್ ಈ ಹಿಂದೆ ಆಯೋಜಿಸಿದ್ದ ಪ್ರಮುಖ ಕಾರ್ಯಕ್ರಮಗಳಿಗೆ ವ್ಯಯಿಸಿದ್ದ ಹಣದ ಬಗ್ಗೆಯೂ ತನಿಖಾ ಸಂಸ್ಥೆಗಳ ನಿಗಾ ವಹಿಸಿವೆ. ದೇಣಿಗೆ ದುರುಪಯೋಗ ಆರೋಪ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು ತನ್ನ ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸ

ಅಯೋಧ್ಯೆ: ರಾಮಮಂದಿರದಲ್ಲಿ ನಡೆದಿದೆ ಎನ್ನಲಾದ ದೇಣಿಗೆ ದುರುಪಯೋಗ ಕುರಿತು ತನಿಖೆ ನಡೆಯುತ್ತಿರುವ ಬೆನ್ನಲ್ಲೇ ರಾಮಮಂದಿರ ಟ್ರಸ್ಟ್ ಈ ಹಿಂದೆ ಆಯೋಜಿಸಿದ್ದ ಪ್ರಮುಖ ಕಾರ್ಯಕ್ರಮಗಳಿಗೆ ವ್ಯಯಿಸಿದ್ದ ಹಣದ ಬಗ್ಗೆಯೂ ತನಿಖಾ ಸಂಸ್ಥೆಗಳ ನಿಗಾ ವಹಿಸಿವೆ. ದೇಣಿಗೆ ದುರುಪಯೋಗ ಆರೋಪ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು ತನ್ನ ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಿದ್ದು, ಟ್ರಸ್ಟ್ ಆಯೋಜಿಸಿದ್ದ ಪ್ರಮುಖ ಕಾರ್ಯಕ್ರಮಗಳಿಗೆ ತಗುಲಿದ ವೆಚ್ಚಗಳ ಬಗ್ಗೆಯೂ ತನಿಖೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. 2024ರ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದ ಬಾಲರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವಕ್ಕೆ ₹113 ಕೋಟಿ ವೆಚ್ಚ ಮಾಡಲಾಗಿದೆ ಎಂದು ಮೂಲಗಳು ಉಲ್ಲೇಖಿಸಿವೆ.ಕಳೆದ ವರ್ಷ ನವೆಂಬರ್ನಲ್ಲಿ ನಡೆದ ‘ಧ್ವಜಾರೋಹಣ’ ಕಾರ್ಯಕ್ರಮಕ್ಕೆ ರಾಮಮಂದಿರ ಟ್ರಸ್ಟ್ ₹10 ಕೋಟಿ ಖರ್ಚು ಮಾಡಿತ್ತು. ಈ ಕಾರ್ಯಕ್ರಮದಲ್ಲೂ ಮೋದಿ ಭಾಗವಹಿಸಿದ್ದರು.ಈ ವೆಚ್ಚಗಳು ಟ್ರಸ್ಟ್ ಅಳವಡಿಸಿಕೊಂಡಿರುವ ಹಣಕಾಸು ನಿಯಮಾವಳಿಗೆ ಅನುಗುಣವಾಗಿಯೇ ಇವೆಯೇ ಮತ್ತು ಪಾವತಿ ವೋಚರ್ಗಳು ಹಾಗೂ ಬಿಲ್ಗಳ ರೂಪದಲ್ಲಿ ಈ ವೆಚ್ಚಗಳ ಸರಿಯಾದ ದಾಖಲೆಗಳು ಲಭ್ಯವಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಎಸ್ಐಟಿ ಪ್ರಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.ದೊಡ್ಡ ಕಾರ್ಯಕ್ರಮಗಳಿಗೆ ಆದ ವೆಚ್ಚಗಳ ವಿವರಗಳನ್ನು ಟ್ರಸ್ಟ್ನ ಸಭೆಗಳಲ್ಲಿ ಸದಸ್ಯರ ಮುಂದೆ ಇಡಲಾಗಿದೆಯೇ ಮತ್ತು ಟ್ರಸ್ಟ್ ವೆಚ್ಚಗಳಿಗೆ ಅನುಮೋದನೆ ನೀಡಿತ್ತೇ ಎಂಬುದರ ಕುರಿತು ಕೂಡ ಎಸ್ಐಟಿ ತನಿಖೆ ನಡೆಸುತ್ತಿದೆ.ಜಮೀನಿನ ಖರೀದಿ ಬೆಲೆಯು ಪ್ರಸ್ತುತ ಮಾರುಕಟ್ಟೆ ದರಕ್ಕಿಂತ ಅತ್ಯಂತ ಹೆಚ್ಚಾಗಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ, ಟ್ರಸ್ಟ್ ನಡೆಸಿರುವ ಭೂಮಿ ಖರೀದಿಗಳ ಬಗ್ಗೆ ಎಸ್ಐಟಿ ಈಗಾಗಲೇ ತನಿಖೆ ನಡೆಸುತ್ತಿದೆ.