ಲಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗಬೇಕು: ಸಾಹಿತಿ ಗೊ.ರು.ಚನ್ನಬಸಪ್ಪ
ಬೆಂಗಳೂರು: 'ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಮತ್ತು ಅದರ ಅನುಯಾಯಿಗಳಿಗೆ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದಲ್ಲಿ ಅಲ್ಪಸಂಖ್ಯಾತ ಸಮುದಾಯದವರೆಂಬ ಮನ್ನಣೆ ದೊರಕಿಸಬೇಕು' ಎಂದು ಸಾಹಿತಿ ಗೊ.ರು.ಚನ್ನಬಸಪ್ಪ ಒತ್ತಾಯಿಸಿದರು.ವಿಜಯನಗರದ ಶ್ರೀಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಮಂಗಳವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ 14ನೇ ಶರಣ ಸಾಹಿತ್ಯ ಸಮ್ಮೇಳನದಲ

ಬೆಂಗಳೂರು: 'ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಮತ್ತು ಅದರ ಅನುಯಾಯಿಗಳಿಗೆ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದಲ್ಲಿ ಅಲ್ಪಸಂಖ್ಯಾತ ಸಮುದಾಯದವರೆಂಬ ಮನ್ನಣೆ ದೊರಕಿಸಬೇಕು' ಎಂದು ಸಾಹಿತಿ ಗೊ.ರು.ಚನ್ನಬಸಪ್ಪ ಒತ್ತಾಯಿಸಿದರು.ವಿಜಯನಗರದ ಶ್ರೀಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಮಂಗಳವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ 14ನೇ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡಿದರು. 'ಜಾಗತಿಕ ಲಿಂಗಾಯತ ಮಹಾಸಭಾದ ನೇತೃತ್ವದಲ್ಲಿ ನಾಡು- ಹೊರನಾಡುಗಳ ಬಸವ ಧರ್ಮಾನುಯಾಯಿಗಳು ನಡೆಸಿರುವ ಹೋರಾಟದಂತೆ ಸ್ವತಂತ್ರ ಧರ್ಮದ ಸ್ಥಾನ ಸಿಗಬೇಕು' ಎಂದರು. 'ಬಸವಣ್ಣ ವೈದಿಕ ಧರ್ಮದ ಮತ್ತು ಜಾತಿಜಾಡ್ಯದ ಸಮಾಜ ವ್ಯವಸ್ಥೆಯನ್ನು ಧಿಕ್ಕರಿಸಿ, ಧಾರ್ಮಿಕ ಮತ್ತು ಸಾಮಾಜಿಕ ಸಮಾನತೆ ಘೋಷಿಸಿದರು. ಶತಮಾನಗಳಿಂದ ಸನಾತನಿಗಳೆನ್ನುವವರು ಆಚರಿಸುತ್ತಿದ್ದ ಅಸ್ಪೃಶ್ಯತೆಯ ಅನಿಷ್ಟವನ್ನು ತೊಡೆದುಹಾಕಲು ಪ್ರಯತ್ನಿಸಿದರು. ಕಾಯಕ- ದಾಸೋಹದ ಮೂಲಕ ಸಹಬಾಳ್ವೆ, ವರ್ಗ- ವರ್ಣ ಭೇಧವಿಲ್ಲದ 'ಅನುಭವ ಮಂಟಪ ಸ್ಥಾಪಿಸಿದರು' ಎಂದು ಸ್ಮರಿಸಿದರು. 'ಸಂಪ್ರದಾಯ ವ್ಯವಸ್ಥೆ ಬದಲು ಶರಣರು ಪ್ರಗತಿಪರ ಪರ್ಯಾಯ ವ್ಯವಸ್ಥೆ ನೆಲೆಗೊಂಡಿದ್ದರಿಂದ ಸಹಸ್ರಾರು ವರ್ಷದ ಮೌನ ಮುರಿದು ದೀನ- ದಲಿತರು ಮುಕ್ತವಾಗಿ ದನಿಮಾಡತೊಡಗಿದರು. ಶರಣರ ಆಂದೋಲನದಿಂದಲೇ ಕನ್ನಡದ ನೆಲೆದಲ್ಲಿ ದಲಿತರ ದನಿ ಮೊದಲು ಕೇಳಿ ಬಂದಿತ್ತು' ಎಂದರು.ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಮಾತನಾಡಿ, 'ಲಿಂಗಾಯತ ಧರ್ಮ ಜಾತಿ ರಹಿತ ಧರ್ಮ. ಜೈನ, ಬೌದ್ಧ, ಸಿಖ್ಖ್ ಧರ್ಮಗಳಿಂದ ಹಿಂದೂ ಧರ್ಮಕ್ಕೆ ಯಾವುದೇ ಅಪಾಯವಾಗಿಲ್ಲ. ಕನ್ನಡ ಧರ್ಮದಿಂದ ಅಪಾಯವಾಗುವುದೇ' ಎಂದು ಪ್ರಶ್ನಿಸಿದರು. 'ಭೌಗೋಳಿಕವಾಗಿ ಎಲ್ಲರೂ ಹಿಂದೂಗಳೇ. ಬಸವ ಧರ್ಮ ಜಾಗತಿಕ ಧರ್ಮವಾಗಬೇಕಿದೆ. ಆದರೆ, ಸಮುದಾಯದವರು ಉಪ ಪಂಗಡಗಳಲ್ಲಿ ಹಂಚಿಹೋಗಿದ್ದೇವೆ. ರಾಜ್ಯದಲ್ಲಿ ಶೇ 17ರಷ್ಟಿದ್ದವರು ಮೀಸಲಾತಿ ಕಾರಣ ಶೇ 11ರಷ್ಟಕ್ಕೆ ಬಂದಿದ್ದೇವೆ. ಸ್ವತಂತ್ರ ಧರ್ಮ ಹೋರಾಟಕ್ಕೆ ಸುತ್ತೂರುಶ್ರೀ, ಸಿದ್ಧಗಂಗಾಶ್ರೀ ಮಾರ್ಗದರ್ಶನ ಬೇಕಿದೆ' ಎಂದರು. ಸಮ್ಮೇಳನದ ಸ್ಮರಣ ಸಂಚಿಕೆ 'ಕಲ್ಯಾಣ ಸಂಗಮ', 'ಮಹಾಮನೆ' ಬಿಡುಗಡೆ ಮಾಡಲಾಯಿತು. ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಪರಿಷತ್ ಅಧ್ಯಕ್ಷ ಸಿ.ಸೋಮಶೇಖರ್, ಶಾಸಕ ಕೃಷ್ಣಪ್ಪ, ಕೆ.ವಿ.ನಾಗರಾಜಮೂರ್ತಿ, ಮಾಜಿ ಮೇಯರ್ ಗಂಗಾಂಬಿಕಾ ಮಲ್ಲಿಕಾರ್ಜುನ್, ಉದ್ಯಮಿ ದಯಾನಂದ, ಪ್ರಮೀಳಾ ಗರಡಿ, ಪರಿಷತ್ತಿನ ಬೆಂಗಳೂರು ನಗರ ಘಟಕದ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ, ಮಂಜುನಾಥ್, ಸುಶೀಲಮ್ಮ ಪಾಲ್ಗೊಂಡಿದ್ದರು. ಸಮ್ಮೇಳನಾಧ್ಯಕ್ಷರ ಹಕ್ಕೊತ್ತಾಯಗಳುವಿಶ್ವಗುರು ಬಸವಣ್ಣ, ಸಾಂಸ್ಕೃತಿಕ ನಾಯಕ ಘೋಷಣೆಯ ಅನುಷ್ಠಾನಕ್ಕಾಗಿ ಸಚಿವ ಸಂಪುಟದ ಉಪಸಮಿತಿ ರಚಿಸಬೇಕು. ಸಲಹೆ- ಸಮಾಲೋಚನೆಗಾಗಿ ಕ್ಷೇತ್ರ ತಜ್ಞರ ಸಮಿತಿ ರಚಿಸಬೇಕು ಬಸವ ಕಲ್ಯಾಣದಲ್ಲಿ ನಡೆಯುತ್ತಿರುವ 'ನೂತನ ಅನುಭವ ಮಂಟಪ'ದ ನಿರ್ಮಾಣ ಕಾರ್ಯವನ್ನು ಆದಷ್ಟು ಬೇಗ ಪೂರ್ಣಗೊಳಿಸಿ, ತಜ್ಞ ಸಮಿತಿ ನೀಡಿರುವ ಸಲಹೆಯಂತೆ ಕಾರ್ಯಾರಂಭವಾಗಬೇಕು. ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಮತ್ತು ಅದರ ಅನುಯಾಯಿಗಳಿಗೆ ಅಲ್ಪಸಂಖ್ಯಾತ ಸಮುದಾಯದ ಮನ್ನಣೆ ದೊರಕಿಸುವುದು. ಸಾರ್ವಕಾಲಿಕ ಮೌಲ್ಯದ ಸಾಂವಿಧಾನಾತ್ಮಕ ಅನ್ವಯದ ವಚನ ಸಾಹಿತ್ಯವನ್ನು ಪ್ರಾಥಮಿಕ ಶಿಕ್ಷಣದ ಹಂತದಿಂದ ಸ್ನಾತಕೋತ್ತರ ಹಂತದವರೆಗಿನ ಪಠ್ಯಕ್ರಮದಲ್ಲಿ ಕಡ್ಡಾಯವಾಗಿ ಸೇರಿಸುವುದು. ಈಗಾಗಲೇ, ರಾಜ್ಯ ಸರ್ಕಾರ ಒಪ್ಪಿಕೊಂಡಿರುವ 'ವಚನ ವಿಶ್ವವಿದ್ಯಾಲಯ'ದ ಆರಂಭಕ್ಕೆ ಅಗತ್ಯವಿರುವ ಎಲ್ಲ ನೆರವನ್ನೂ ಒದಗಿಸುವುದು. ದೆಹಲಿಯಲ್ಲಿ ಎಲ್ಲ ರಾಜ್ಯಗಳ ಭವನಗಳಿರುವಂತೆ, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲೂ ಎಲ್ಲ ಜಿಲ್ಲೆಗಳ ಜಿಲ್ಲಾ ಭವನಗಳನ್ನು ನಿರ್ಮಿಸಿ, ಆಡಳಿತ ಮತ್ತು ಸಾಂಸ್ಕೃತಿಕ ಸಂಬಂಧ ಸಮನ್ವಯಕ್ಕೆ ಅವಕಾಶ ಕಲ್ಪಿಸುವುದು ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪ್ರಮುಖ ರಸ್ತೆಗಳು, ಬಡಾವಣೆಗಳು ಮತ್ತು ಉದ್ಯಾನಗಳಿಗೆ ಶರಣರ ಹೆಸರುಗಳನ್ನು ನಾಮಕರಣ ಮಾಡುವುದು. ಸಾರ್ವಜನಿಕರು ಕೇವಲ ವ್ಯಕ್ತಿ ಪ್ರತಿಷ್ಠೆಯಿಂದ, ಕೆಲವು ಮತಾಂಧರಿಂದ, ಕೆಲವು ರಾಜಕೀಯ ಪಕ್ಷಗಳ ಪ್ರಚೋದನೆಯಿಂದ ಸಮುದಾಯದ ಸಾಮರಸ್ಯ ಭಂಗಗೊಳ್ಳುತ್ತಿರುವುದಕ್ಕೆ ಮೂಕಸಾಕ್ಷಿಗಳಾಗದೆ, ಸಮುದಾಯದಲ್ಲಿ ಶರಣ ಜಾಗೃತಿ ಉಂಟು ಮಾಡುವಲ್ಲಿ ಸಹಕರಿಸುವುದು. ನಾಗರಿಕರು ಶರಣರ ಜೀವನ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ಅನಗತ್ಯ ವಾದ-ವಿವಾದಗಳನ್ನು ಬಿಟ್ಟು, ಶರಣ ಸಂದೇಶದ ವಸ್ತುನಿಷ್ಠ ಅನುಷ್ಠಾನಕ್ಕೆ ತೊಡಗುವುದು.