ಕಲಬುರಗಿ: ಗುಂಡು ಹಾರಿಸಿಕೊಂಡು ಸಿಎಆರ್ ಕಾನ್ಸ್ಟೆಬಲ್ ಸಾವು
ಕಲಬುರಗಿ: ನಗರದ ಜಗತ್ ವೃತ್ತದಲ್ಲಿ ಕರ್ತವ್ಯನಿರತ ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಕಾನ್ಸ್ಟೆಬಲ್ವೊಬ್ಬರು ಸರ್ವೀಸ್ ರೈಫಲ್ನಿಂದ ಪೊಲೀಸ್ ವಾಹನದಲ್ಲೇ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾರೆ. ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಮಾವನೂರ ಗ್ರಾಮದ ಶಿವಕುಮಾರ ಶಿವಶರಣಪ್ಪ ನರಿಬೋಳಿ (32) ಮೃತರು. ಅವರಿಗೆ ಪತ್ನಿ, ಇಬ್ಬರು ಮಕ್ಕಳು ಇದ್ದಾರೆ.ನಗರದ ಜನನಿಬಿಡ ಜಗತ್

ಕಲಬುರಗಿ: ನಗರದ ಜಗತ್ ವೃತ್ತದಲ್ಲಿ ಕರ್ತವ್ಯನಿರತ ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಕಾನ್ಸ್ಟೆಬಲ್ವೊಬ್ಬರು ಸರ್ವೀಸ್ ರೈಫಲ್ನಿಂದ ಪೊಲೀಸ್ ವಾಹನದಲ್ಲೇ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾರೆ. ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಮಾವನೂರ ಗ್ರಾಮದ ಶಿವಕುಮಾರ ಶಿವಶರಣಪ್ಪ ನರಿಬೋಳಿ (32) ಮೃತರು. ಅವರಿಗೆ ಪತ್ನಿ, ಇಬ್ಬರು ಮಕ್ಕಳು ಇದ್ದಾರೆ.ನಗರದ ಜನನಿಬಿಡ ಜಗತ್ ವೃತ್ತದಲ್ಲಿ ಮಂಗಳವಾರ ಕರ್ತವ್ಯದ ಅವಧಿಯಲ್ಲೇ ರಾತ್ರಿ 9 ಗಂಟೆ ಹೊತ್ತಿಗೆ ಈ ಅವಘಡ ನಡೆದಿದ್ದು, ಘಟನೆಗೆ ಕಾರಣ ತಿಳಿದು ಬಂದಿಲ್ಲ.ಶಿವಕುಮಾರ ಅವರು 2016ರಲ್ಲಿ ಪೊಲೀಸ್ ಇಲಾಖೆ ಸೇರಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೆಲಸ ಮಾಡಿದ್ದರು. ಅಂತರ ಜಿಲ್ಲಾ ವರ್ಗಾವಣೆ ಮೂಲಕ ಇದೇ ವರ್ಷದ ಫೆಬ್ರುವರಿಯಲ್ಲಿ ಕಲಬುರಗಿ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೆ ವರ್ಗಾವಣೆಯಾಗಿ ಬಂದಿದ್ದರು. ಘಟನಾ ಸ್ಥಳಕ್ಕೆ ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ., ಡಿಸಿಪಿಗಳಾದ ಶಾಲೂ, ಪ್ರವೀಣ ನಾಯಕ, ಎಸಿಪಿ ಶರಣಬಸಪ್ಪ ಸುಬೇದಾರ, ಪಿಐಗಳಾದ ಮಹಾಂತೇಶ ಪಾಟೀಲ, ನಗರ ಮೀಸಲು ಪಡೆಯ ಇನ್ಸ್ಪೆಕ್ಟರ್ ಮಹಾದೇವ ಪಾಟೀಲ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.‘ಸಿಎಆರ್ ಕಾನ್ಸ್ಟೆಬಲ್ ಶಿವಕುಮಾರ ತಮ್ಮ ರೈಫಲ್ನಿಂದ ಶೂಟ್ ಮಾಡಿಕೊಂಡು ಮೃತಪಟ್ಟಿದ್ದಾರೆ. ಈಗಾಗಲೇ ಸೋಕೋ ತಂಡ, ವಿಧಿವಿಜ್ಞಾನ ತಂಡ, ಬ್ಯಾಲಿಸ್ಟಿಕ್ ತಂಡಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿವೆ. ಪ್ರಾಥಮಿಕ ಮಾಹಿತಿ ಪ್ರಕಾರ ಕಳೆದ ಕೆಲವು ದಿನಗಳಿಂದ ವೈಯಕ್ತಿಕ ಕಾರಣಗಳಿಗೆ ಮಾನಸಿಕವಾಗಿ ನೊಂದಿದ್ದರು. ಆದರೂ, ಅವರ ಕುಟುಂಬದವರು ನೀಡುವ ದೂರು ಆಧರಿಸಿ ಮುಂದಿನ ಕಾನೂನು ಕ್ರಮಕೈಗೊಳ್ಳಲಾಗುವುದು’ ಎಂದು ಕಮಿಷನರ್ ಶರಣಪ್ಪ ಎಸ್.ಡಿ. ಹೇಳಿದರು.ಬ್ರಹ್ಮಪುರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕುಟುಂಬ ಸದಸ್ಯ ಆಕ್ರಂದನ ಮುಗಿಲು ಮುಟ್ಟಿತ್ತು.