ಕೇರ್ ಆಫ್ ಫುಟ್ಪಾತ್
‘ಫುಟ್ಪಾತ್ ಉದ್ದೇಶವೂ ಉಳಿಯಬೇಕು, ಫುಟ್ಪಾತ್ ವ್ಯಾಪಾರಿಗಳನ್ನೂ ಉಳಿಸಬೇಕು’ ಎಂಬ ವಿಚಾರವಾಗಿ ‘ಫುಟ್ಪಾತ್ ಕೇರ್’ ಸಮಿತಿ ಸಭೆಯಲ್ಲಿ ಚರ್ಚೆ ನಡೆದಿತ್ತು.‘ಮೂಗು ಇರೋವರೆಗೂ ನೆಗಡಿ ತಪ್ಪುವುದಿಲ್ಲ, ಫುಟ್ಪಾತ್ ಇರೋವರೆಗೂ ಈ ರಗಳೆ ತಪ್ಪುವುದಿಲ್ಲ...’ ಎಂದು ಚಿಕ್ಕ ಅಧಿಕಾರಿ ಬೇಸರ ವ್ಯಕ್ತಪಡಿಸಿದರು.‘ಸೀರೆಗೆ ರವಿಕೆ ಇರುವಂತೆ ರಸ್ತೆಗೆ ಫುಟ್ಪಾತ್ ಇರಲೇಬೇಕು ಕಣ್ರೀ..

‘ಫುಟ್ಪಾತ್ ಉದ್ದೇಶವೂ ಉಳಿಯಬೇಕು, ಫುಟ್ಪಾತ್ ವ್ಯಾಪಾರಿಗಳನ್ನೂ ಉಳಿಸಬೇಕು’ ಎಂಬ ವಿಚಾರವಾಗಿ ‘ಫುಟ್ಪಾತ್ ಕೇರ್’ ಸಮಿತಿ ಸಭೆಯಲ್ಲಿ ಚರ್ಚೆ ನಡೆದಿತ್ತು.‘ಮೂಗು ಇರೋವರೆಗೂ ನೆಗಡಿ ತಪ್ಪುವುದಿಲ್ಲ, ಫುಟ್ಪಾತ್ ಇರೋವರೆಗೂ ಈ ರಗಳೆ ತಪ್ಪುವುದಿಲ್ಲ...’ ಎಂದು ಚಿಕ್ಕ ಅಧಿಕಾರಿ ಬೇಸರ ವ್ಯಕ್ತಪಡಿಸಿದರು.‘ಸೀರೆಗೆ ರವಿಕೆ ಇರುವಂತೆ ರಸ್ತೆಗೆ ಫುಟ್ಪಾತ್ ಇರಲೇಬೇಕು ಕಣ್ರೀ... ವೆಂಡರ್ ಜೋನ್ ನಿರ್ಮಾಣ ಮಾಡಿ ಫುಟ್ಪಾತ್ ವ್ಯಾಪಾರಿಗಳನ್ನು ಸ್ಥಳಾಂತರಿಸೋಣ. ವ್ಯಾಪಾರಿಗಳು ಗುರುತಿನ ಕಾರ್ಡ್ ಕೊಟ್ಟು ಹೆಸರು ನೋಂದಾಯಿಸಿಕೊಳ್ಳಿ’ ಎಂದರು ದೊಡ್ಡ ಸಾಹೇಬ್ರು.‘ಎಸ್ಐಆರ್, ಗೃಹಲಕ್ಷ್ಮಿ, ಗೃಹಜ್ಯೋತಿ, ಜನಗಣತಿ, ಜಾತಿಗಣತಿ ಎಂದು ಸಮೀಕ್ಷೆಗೆ ಬಂದವರಿಗೆಲ್ಲ ಜೆರಾಕ್ಸ್ ಮಾಡಿಸಿಕೊಟ್ಟು ನಮ್ಮ ಆಧಾರ್ ಕಾಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್ಗಳು ಸವೆದುಹೋಗಿವೆ ಸಾರ್’ ವ್ಯಾಪಾರಿಯೊಬ್ಬ ನಕ್ಕು ಹೇಳಿದ.‘ವೆಂಡರ್ ಜೋನ್ ಬೇಡ, ಜನ ಓಡಾಡುವ ಫುಟ್ಪಾತ್ನಲ್ಲೇ ಅವಕಾಶ ಮಾಡಿಕೊಡಬೇಕು’ ವ್ಯಾಪಾರಿಗಳು ಒತ್ತಾಯಿಸಿದರು.‘ನೀವು ಫುಟ್ಪಾತ್ ಆಕ್ರಮಿಸಿಕೊಂಡರೆ ಪಾದಚಾರಿ ಗಳು ಓಡಾಡೋದು ಹೇಗ್ರೀ?’ ಸಾಹೇಬ್ರು ಸಿಟ್ಟಾದರು.‘ಸಾರ್, ಫುಟ್ಪಾತ್ನಲ್ಲಿ ಮೇಲ್ಚಾವಣಿ ನಿರ್ಮಿಸೋಣ, ಚಾವಣಿ ಮೇಲೆ ವ್ಯಾಪಾರ ಮಾಡಿಕೊಳ್ಳಲಿ, ಕೆಳಗೆ ಪಾದಚಾರಿಗಳು ನಡೆದಾಡಲಿ’ ಚಿಕ್ಕ ಅಧಿಕಾರಿ ದೊಡ್ಡ ಐಡಿಯಾ ಕೊಟ್ಟರು.‘ಅವೈಜ್ಞಾನಿಕ ಐಡಿಯಾ ಕೊಡಬೇಡ್ರೀ’ ಸಾಹೇಬ್ರು ರೇಗಿದರು.‘ಫುಟ್ಪಾತ್ನಲ್ಲಿ ಪಾದಚಾರಿಗಳೂ ಓಡಾಡಬೇಕು, ವ್ಯಾಪಾರಿಗಳಿಗೂ ಅವಕಾಶ ಮಾಡಿಕೊಡಬೇಕು ಅಂದ್ರೆ ಇನ್ನೇನು ಮಾಡೋದು ಸಾರ್?’ಸಾಹೇಬ್ರು ಗೊಂದಲಕ್ಕೆ ಬಿದ್ದರು.‘ಸಾರ್, ಎಲ್ಲಾ ಫುಟ್ಪಾತ್ಗಳನ್ನು ವಿಸ್ತರಿಸಿ ಡಬ್ಬಲ್ ಪಾತ್ ಮಾಡೋಣ. ಒಂದು ಪಾತ್ನಲ್ಲಿ ಪಾದಚಾರಿಗಳು ನಡೆದಾಡಲಿ, ಇನ್ನೊಂದರಲ್ಲಿ ವ್ಯಾಪಾರಿಗಳು ವ್ಯವಹಾರ ಮಾಡಲಿ...’ ಸಣ್ಣ ಅಧಿಕಾರಿ ಸಲಹೆ ಕೊಟ್ಟರು.ಕೋಪ ಕಂಟ್ರೋಲ್ ಮಾಡಿಕೊಂಡ ಸಾಹೇಬ್ರು, ‘ಈ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರುತ್ತೇವೆ...’ ಎಂದು ಹೇಳಿ ಸಭೆ ಮುಗಿಸಿದರು.