ಮಹಾರಾಷ್ಟ್ರದಲ್ಲಿ ಮುಂಗಾರು ಅಬ್ಬರ: ಮಳೆ ಸಂಬಂಧಿತ ಅವಘಡಗಳಲ್ಲಿ 62 ಮಂದಿ ಸಾವು
ಮುಂಬೈ (ಮಹಾರಾಷ್ಟ್ರ): ರಾಜ್ಯದಲ್ಲಿ ಮಳೆ ಸಂಬಂಧಿತ ಅವಘಡಗಳಲ್ಲಿ ಈವರೆಗೆ (ಜೂನ್ 1 ರಿಂದ ಜುಲೈ 8ರವರೆಗೆ) ಒಟ್ಟು 62 ಜನ ಸಾವಿಗೀಡಾಗಿದ್ದಾರೆ. 74 ಮಂದಿ ಗಾಯಗೊಂಡಿದ್ದಾರೆ. ಇದೇ ಅವಧಿಯಲ್ಲಿ ಸುಮಾರು 200 ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿವೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಸ್ಡಿಎಂಎ) ಬುಧವಾರ ತಿಳಿಸಿದೆ. ಇಂದು ( ಬುಧವಾರ) ಮುಂಬೈ-ಪುಣೆ-ನಾಸಿಕ

ಮುಂಬೈ (ಮಹಾರಾಷ್ಟ್ರ): ರಾಜ್ಯದಲ್ಲಿ ಮಳೆ ಸಂಬಂಧಿತ ಅವಘಡಗಳಲ್ಲಿ ಈವರೆಗೆ (ಜೂನ್ 1 ರಿಂದ ಜುಲೈ 8ರವರೆಗೆ) ಒಟ್ಟು 62 ಜನ ಸಾವಿಗೀಡಾಗಿದ್ದಾರೆ. 74 ಮಂದಿ ಗಾಯಗೊಂಡಿದ್ದಾರೆ. ಇದೇ ಅವಧಿಯಲ್ಲಿ ಸುಮಾರು 200 ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿವೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಸ್ಡಿಎಂಎ) ಬುಧವಾರ ತಿಳಿಸಿದೆ. ಇಂದು ( ಬುಧವಾರ) ಮುಂಬೈ-ಪುಣೆ-ನಾಸಿಕ್ ಪಟ್ಟಣಗಳಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವರದಿಯ ಪ್ರಕಾರ, ಕಟ್ಟಡ/ಗೋಡೆ ಕುಸಿತ ಪ್ರಕರಣಗಳಲ್ಲಿ 25 ಮಂದಿ, ಸಿಡಿಲು ಬಡಿದು 23, ಮರಗಳು ಉರುಳಿ ಬಿದ್ದು, 6, ಭೂಕುಸಿತ ಮತ್ತು ಮಣ್ಣು ಕುಸಿತದಲ್ಲಿ 6 ಹಾಗೂ ಪ್ರವಾಹದಿಂದ ಇಬ್ಬರು ಸಾವಿಗೀಡಾಗಿದ್ದಾರೆ.ರೈಲು ಸೇವೆ, ವಿದ್ಯುತ್ ವ್ಯತ್ಯಯ ಪಾಲ್ಘರ್ ಜಿಲ್ಲೆಯ ವಸಾಯಿ-ವಿರಾರ್ ವ್ಯಾಪ್ತಿಯಲ್ಲಿ ಪ್ರವಾಹದ ನೀರು ಸ್ವಲ್ಪ ಮಟ್ಟಿಗೆ ಇಳಿಮುಖವಾಗಿದೆಯಾದರೂ ಜನರ ಸಂಕಷ್ಟ ಇನ್ನೂ ಮುಗಿದಿಲ್ಲ. ನಲಸೋಪಾರ ಪ್ರದೇಶದಲ್ಲಿ ರೈಲು ಹಳಿಗಳು ಸಂಪೂರ್ಣ ಜಲಾವೃತಗೊಂಡಿರುವುದರಿಂದ ಪಶ್ಚಿಮ ರೈಲ್ವೆಯ ಉಪನಗರ ರೈಲು ಸಂಚಾರದಲ್ಲಿ ಭಾರಿ ಅಡಚಣೆ ಉಂಟಾಗಿದೆ.ವಿದ್ಯುತ್ ಸಂಪರ್ಕ ಮರುಸ್ಥಾಪಿಸಲು ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಆದಾಗ್ಯೂ, ಹಲವಾರು ಬಾರಿ ವಿದ್ಯುತ್ ಕಡಿತಗೊಂಡಿದೆ ಎಂದು ವಸಾಯಿ, ನಲಸೋಪಾರ ಮತ್ತು ವಿರಾರ್ ನಿವಾಸಿಗಳು ತಿಳಿಸಿದ್ದಾರೆ. ಜಲಾಶಯಗಳಿಂದ ನೀರು ಬಿಡುಗಡೆ, ನದಿ ತೀರದ ಜನರಿಗೆ ಎಚ್ಚರಿಕೆ ಇಲ್ಲಿನ ಖಡಕ್ವಾಸ್ಲಾ ಅಣೆಕಟ್ಟೆಯಿಂದ ಮುಥಾ ನದಿಗೆ 27,203 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಇತ್ತ ಆಂದ್ರಾ ಅಣೆಕಟ್ಟೆ ಶೇ 75ರಷ್ಟು ಭರ್ತಿಯಾಗಿದ್ದು, ಯಾವುದೇ ಕ್ಷಣದಲ್ಲಿ ಗೇಟ್ಗಳನ್ನು ತೆರೆಯದೆ ಅಣೆಕಟ್ಟಿನ ಸ್ಪಿಲ್ವೇಗಳ ಮೂಲಕ ನೇರವಾಗಿ ನೀರನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಹಾಗಾಗಿ ಇಂದ್ರಮಣಿ ಮತ್ತು ಸುಧಾ ನದಿ ತೀರದ ಜನ ಜಾಗರೂಕರಾಗಿರಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದೆ.ನಾಸಿಕ್-ತ್ರಯಂಬಕೇಶ್ವರದಲ್ಲಿ ವರುಣಾರ್ಭಟ ಜೋರಾಗಿದ್ದು, ನಂದೂರ್ ಮಾಧಮೇಶ್ವರ ಬ್ಯಾರೇಜ್ನಿಂದ ಗೋದಾವರಿ ನದಿಗೆ 12,620 ಕ್ಯುಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಭಾರಿ ಮಳೆಯಿಂದಾಗಿ ಹಲವು ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತಗೊಂಡಿರುವುದರಿಂದ 'ನಾಸಿಕ್- ತ್ರಯಂಬಕೇಶ್ವರ ರಸ್ತೆ'ಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಕೇಂದ್ರದಿಂದ ನೆರವು ಏತನ್ಮಧ್ಯೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ರಾಜ್ಯದ ವಿವಿಧ ಭಾಗಗಳಲ್ಲಿ ಭಾರಿ ಮಳೆಯಿಂದ ಉಂಟಾಗಿರುವ ಹಾನಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ, ರಕ್ಷಣಾ ಕಾರ್ಯಾಚರಣೆ ಮತ್ತು ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತೆಗೆದುಕೊಳ್ಳುತ್ತಿರುವ ಕ್ರಮಗಳ ಕುರಿತು ವಿವರವಾದ ಚರ್ಚೆಗಳು ನಡೆದವು. ಕೇಂದ್ರ ಸರ್ಕಾರದಿಂದ ಅಗತ್ಯವಿರುವ ಎಲ್ಲಾ ತಾಂತ್ರಿಕ ನೆರವು ನೀಡುವುದಾಗಿ ಶಾ ಭರವಸೆ ನೀಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.