ಆಳ–ಅಗಲ: ಫಿಫಾ ಅಂಗಳದಲ್ಲೂ ಟ್ರಂಪ್ ‘ಆಟ’
ಫುಟ್ಬಾಲ್ ಕ್ರೀಡೆಯಲ್ಲಿ ಇದುವರೆಗೆ ಕೆಂಪು ಮತ್ತು ಹಳದಿ ಕಾರ್ಡ್ಗಳು ಇದ್ದವು. ಇದೀಗ ಈ ಸಾಲಿಗೆ ‘ಟ್ರಂಪ್ ಕಾರ್ಡ್’ ಕೂಡ ಸೇರಿದೆ. ಈ ಹಿಂದೆ ಕ್ರೀಡೆಯಲ್ಲಿ ಪರೋಕ್ಷವಾಗಿ ನಡೆಯುತ್ತಿದ್ದ ರಾಜಕೀಯ ಹಸ್ತಕ್ಷೇಪ ಈಗ ನೇರವಾಗಿ ನಡೆದಂತಾಗಿದೆ...1936ರ ಬರ್ಲಿನ್ ಒಲಿಂಪಿಕ್ಸ್ನಲ್ಲಿ ಭಾರತ ಹಾಕಿ ತಂಡವು ಆತಿಥೇಯ ಜರ್ಮನಿ ತಂಡವನ್ನು ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಸಮ್ಮುಖ

ಫುಟ್ಬಾಲ್ ಕ್ರೀಡೆಯಲ್ಲಿ ಇದುವರೆಗೆ ಕೆಂಪು ಮತ್ತು ಹಳದಿ ಕಾರ್ಡ್ಗಳು ಇದ್ದವು. ಇದೀಗ ಈ ಸಾಲಿಗೆ ‘ಟ್ರಂಪ್ ಕಾರ್ಡ್’ ಕೂಡ ಸೇರಿದೆ. ಈ ಹಿಂದೆ ಕ್ರೀಡೆಯಲ್ಲಿ ಪರೋಕ್ಷವಾಗಿ ನಡೆಯುತ್ತಿದ್ದ ರಾಜಕೀಯ ಹಸ್ತಕ್ಷೇಪ ಈಗ ನೇರವಾಗಿ ನಡೆದಂತಾಗಿದೆ...1936ರ ಬರ್ಲಿನ್ ಒಲಿಂಪಿಕ್ಸ್ನಲ್ಲಿ ಭಾರತ ಹಾಕಿ ತಂಡವು ಆತಿಥೇಯ ಜರ್ಮನಿ ತಂಡವನ್ನು ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಸಮ್ಮುಖದಲ್ಲಿಯೇ ಮಣ್ಣುಮುಕ್ಕಿಸಿತ್ತು. ಆ ಪಂದ್ಯದ ಗೆಲುವಿನ ರೂವಾರಿ ‘ಹಾಕಿ ಮಾಂತ್ರಿಕ’ ಧ್ಯಾನಚಂದ್ ಅವರನ್ನು ಭೇಟಿಯಾದ ಹಿಟ್ಲರ್, ‘ನಮ್ಮ ದೇಶದ ಪೌರತ್ವ, ಸೇನೆಯಲ್ಲಿ ಉನ್ನತ ಹುದ್ದೆ ಹಾಗೂ ಸಕಲ ಸೌಲಭ್ಯ ನೀಡುತ್ತೇನೆ. ಇಲ್ಲಿಗೆ ಬಂದುಬಿಡಿ’ ಎಂದು ಆಹ್ವಾನ ನೀಡಿದ್ದರು. ಆದರೆ, ಅದಕ್ಕೆ ಪ್ರತ್ಯುತ್ತರ ನೀಡಿದ ಧ್ಯಾನಚಂದ್, ‘ನನ್ನ ದೇಶಕ್ಕಾಗಿಯೇ ಆಡುತ್ತೇನೆ. ಇಲ್ಲಿಗೆ ಬರುವುದಿಲ್ಲ’ ಎಂದು ಕಡ್ಡಿ ಮುರಿದಂತೆ ಹೇಳಿದ್ದರು. ಅವರ ಮಾತು ಕೇಳಿ ಹಿಟ್ಲರ್ ತಬ್ಬಿಬ್ಬಾಗಿದ್ದರು. ನಂತರ ಧ್ಯಾನಚಂದ್ ಅವರ ಇಚ್ಛಾಶಕ್ತಿಗೆ ತಲೆದೂಗಿದ್ದರು. ಅದರಿಂದಾಗಿಯೇ ಮೇಜರ್ ಧ್ಯಾನಚಂದ್ ಅವರ ಬಗ್ಗೆ ಇಂದಿಗೂ ವಿಶ್ವದಾದ್ಯಂತ ಗೌರವ ಇದೆ. ಇಂತಹದೊಂದು ದಿಟ್ಟ ನಿಲುವಿನೊಂದಿಗೆ ದೊಡ್ಡ ಗೌರವವನ್ನು ಶಾಶ್ವತವಾಗಿ ಗಳಿಸಿಕೊಳ್ಳುವ ಅವಕಾಶವೊಂದನ್ನು ಫಿಫಾ ಅಧ್ಯಕ್ಷ ಜಿಯಾನಿ ಇನ್ಫಾಂಟಿನೊ ಕಳೆದುಕೊಂಡಿದ್ದಾರೆ. ಜೊತೆಗೆ ಫುಟ್ಬಾಲ್ ಕ್ರೀಡೆಯ ಗೌರವವನ್ನೂ ಮುಕ್ಕಾಗಿಸಿದ್ದಾರೆ. ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ಮಾತು ಕೇಳಿ ಕೆಟ್ಟಿದ್ದಾರೆ. ಅಮೆರಿಕ, ಕೆನಡಾ ಹಾಗೂ ಮೆಕ್ಸಿಕೊ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ನಡೆದಿರುವ ಘಟನೆ ಈಗ ಕ್ರೀಡೆಯಲ್ಲಿ ರಾಜಕೀಯ ಹಸ್ತಕ್ಷೇಪದ ಚರ್ಚೆಯನ್ನು ಮುನ್ನೆಲೆಗೆ ತಂದಿದೆ. ಇಷ್ಟು ವರ್ಷ ತೆರೆಮರೆಯಲ್ಲಿ ರಾಜಕೀಯ ನಡೆಯುತ್ತಿದ್ದದ್ದನ್ನು ಯಾರೂ ಅಲ್ಲಗಳೆಯಲಾರರು. ಆದರೆ ಇದೀಗ ಟ್ರಂಪ್ ಒಂದು ಹೆಜ್ಜೆ ಮುಂದೆ ಹೋಗಿದ್ದು, ಫುಟ್ಬಾಲ್ ಅಂಗಳಕ್ಕೆ ನೇರವಾಗಿ ಧುಮುಕಿ ‘ಕ್ರೀಡಾಗೌರವ’ವನ್ನು ಬೌಂಡರಿಯ ಹೊರಗೆ ‘ಕಿಕ್’ ಮಾಡಿದ್ದಾರೆ. ಅಮೆರಿಕ ತಂಡದ ಆಟಗಾರ ಫೊಲಾರಿನ್ ಬಾಲೋಗನ್ ಅವರಿಗೆ ಬೋಸ್ನಿಯಾ ಎದುರಿನ ಪಂದ್ಯದಲ್ಲಿ ಒರಟು ಆಟವಾಡಿದ್ದಕ್ಕಾಗಿ ರೆಫರಿ ರೆಡ್ ಕಾರ್ಡ್ ತೋರಿಸಿದ್ದರು. ಇದರಿಂದಾಗಿ ಬಾಲೋಗನ್ ಅವರು ಒಂದು ಪಂದ್ಯದ ನಿಷೇಧ ಅನುಭವಿಸಬೇಕಿತ್ತು. ಟ್ರಂಪ್ ಅವರು ಮಧ್ಯಸ್ಥಿಕೆ ವಹಿಸಿ ಬಾಲೋಗನ್ ಮೇಲಿನ ನಿಷೇಧ ತೆರವುಗೊಳ್ಳುವಂತೆ ಮಾಡಿದರು. ಅದಕ್ಕಾಗಿ ಫಿಫಾ ಅಧ್ಯಕ್ಷ ಇನ್ಫಾಂಟಿನೊ ಅವರ ಸ್ನೇಹವನ್ನೂ ಸಮರ್ಥವಾಗಿ ಬಳಸಿಕೊಂಡರು. ರೆಡ್ಕಾರ್ಡ್, ಯೆಲ್ಲೊ ಕಾರ್ಡ್ಗಳನ್ನು ರೆಫರಿಗಳು ಫುಟ್ಬಾಲ್ ಕ್ರೀಡೆಯಲ್ಲಿ ಬಳಸುವುದು ಹೊಸದೇನಲ್ಲ. ದೊಡ್ಡ ದೇಶವೊಂದರ ಅಧ್ಯಕ್ಷರೊಬ್ಬರು ಮಧ್ಯಸ್ಥಿಕೆ ವಹಿಸಿ ಪರಿಹರಿಸಬೇಕಾದ ದೊಡ್ಡ ವಿಷಯವೂ ಇದಾಗಿರಲಿಲ್ಲ. ಬಾಲೋಗನ್ ಆಡದಿದ್ದರೆ ಅವರ ಬದಲಿಗೆ ಇನ್ನೊಬ್ಬ ಆಟಗಾರ ಕಣಕ್ಕಿಳಿಯುತ್ತಿದ್ದರು ಅಷ್ಟೇ.ಸೋಮವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಅಮೆರಿಕವನ್ನು ಸೋಲಿಸಿದ ಬೆಲ್ಜಿಯಂ ಆಟಗಾರರು ಟ್ರಂಪ್ ಅವರು ಈ ಹಿಂದೆ ಮಾಡಿದ್ದ ನೃತ್ಯವೊಂದನ್ನು ಅಣಕ ಮಾಡಿದ್ದಾರೆ. ಫುಟ್ಬಾಲ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರಂಪ್ ಅವರನ್ನು ವ್ಯಂಗ್ಯ ಮಾಡಿರುವ ಸಾವಿರಾರು ಮೀಮ್ಗಳು, ವಿಡಿಯೊಗಳು ತುಂಬಿಹೋಗಿವೆ. ಇನ್ಫಾಂಟಿನೊ ಅವರು ನುರಿತ ಕ್ರೀಡಾ ಆಡಳಿತಗಾರ. ಅವರು ಇಲ್ಲಿ ತಮ್ಮ ಸೂಕ್ಷ್ಮತೆ ಮತ್ತು ಅನುಭವ ಬಳಸಿ ಟ್ರಂಪ್ ಮನವೊಲಿಸಬಹುದಿತ್ತು. ಇಲ್ಲವೇ ತೀರ್ಪು ಬದಲಾವಣೆ ನಿರಾಕರಿಸುವ ದಿಟ್ಟತನ ತೋರಿದ್ದರೆ ಕ್ರೀಡಾ ವಲಯವು ಅವರನ್ನು ಬಹುಕಾಲ ನೆನಪಿನಲ್ಲಿಟ್ಟುಕೊಳ್ಳುತ್ತಿತ್ತು. ಆದರೆ, ರಾಜಕೀಯ ಹಸ್ತಕ್ಷೇಪ ಮತ್ತು ಫುಟ್ಬಾಲ್ ಕ್ರೀಡೆಯ ಚಾರಿತ್ರ್ಯಕ್ಕೆ ಧಕ್ಕೆ ತಂದಿರುವುದಕ್ಕೆ ಫಿಫಾ ನಿಯಮ 2 ಮತ್ತು 15ರ ಅಡಿಯಲ್ಲಿ ಅಮೆರಿಕ ತಂಡವನ್ನು ಅನರ್ಹಗೊಳಿಸಲು ಈಗಲೂ ಅವಕಾಶ ಇದೆ. ಈ ಕ್ರಮಕ್ಕೆ ಇನ್ಫಾಂಟಿನೊ ಮುಂದಾಗುವರೇ? ಅಂಥದ್ದೊಂದು ದಿಟ್ಟ ನಡೆಯನ್ನು ಅವರಿಂದ ನಿರೀಕ್ಷಿಸಬಹುದೇ?ದೇಶಗಳ ಅಮಾನತು ಕ್ರೀಡೆಯಲ್ಲಿ ರಾಜಕೀಯ ಹಸ್ತಕ್ಷೇಪ ಸಲ್ಲದು ಎಂಬುದು ಹಳೆಯ ಸಿದ್ಧಾಂತ. ಆದರೆ, ಅದನ್ನು ಮೀರುವ ಘಟನೆಗಳು ಹಿಂದೆಯೂ ನಡೆದಿವೆ. ಅದಕ್ಕಾಗಿ ಫಿಫಾದಿಂದ ಹತ್ತು ದೇಶಗಳು ಅಮಾನತು ಶಿಕ್ಷೆಗೆ ಒಳಗಾದನಿದರ್ಶನಗಳೂ ಇವೆ. 2007ರಲ್ಲಿ ಕುವೈತ್ ಸರ್ಕಾರವು ಆ ದೇಶದ ಫುಟ್ಬಾಲ್ ಸಂಸ್ಥೆಯ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ನಡೆಸಿತ್ತೆನ್ನಲಾಗಿದೆ. ಅದಕ್ಕಾಗಿ ಫಿಫಾ, ಕುವೈತ್ ಸಂಸ್ಥೆಯನ್ನು ಕೆಲಕಾಲ ಅಮಾನತು ಮಾಡಿತ್ತು. ಅಲ್ಲದೇ 2015ರಲ್ಲಿ ಕುವೈತ್ನಲ್ಲಿ ಸರ್ಕಾರವು ನೂತನ ಕ್ರೀಡಾ ನೀತಿ ಜಾರಿಗೊಳಿಸಲು ಸಾಧ್ಯವಾಗದೇ ಫುಟ್ಬಾಲ್ ಸಂಸ್ಥೆಯ ಮಾನ್ಯತೆ ರದ್ದಾಯಿತು. 2018ರ ವಿಶ್ವಕಪ್ ಅರ್ಹತೆಯೂ ಕೈತಪ್ಪಿತು. ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ತಂಡವನ್ನು ಈ ಬಾರಿಯ ಟೂರ್ನಿಯಲ್ಲಿ ಆಡುವುದರಿಂದ ಅನರ್ಹಗೊಳಿಸಲಾಗಿದೆ. ಅಲ್ಲದೇ ಯುಇಎಫ್ಎಯಿಂದಲೂ ರಷ್ಯಾವನ್ನು ಹೊರಗಿಡಲಾಗಿದೆ. ಇದಲ್ಲದೇ ಇರಾಕ್, ಬ್ರೂನಿ, ಇಂಡೊನೇಷ್ಯಾ, ಪಾಕಿಸ್ತಾನ, ಕೆನ್ಯಾ, ಕಾಂಗೊ, ಸಿಯೊರಾ ಲಿಯೊನ್, ಗ್ವಾಟೆಮಾಲಾ ದೇಶಗಳು ರಾಜಕೀಯದಾಟದಿಂದಾಗಿ ಫಿಫಾದ ಕೆಂಗಣ್ಣಿಗೆ ಗುರಿಯಾಗಿದ್ದವು. ಮೈದಾನ ಪ್ರವೇಶಿಸಿದ ರಾಜಕೀಯಮೈದಾನದೊಳಗೂ ಪಂದ್ಯಗಳ ಮಧ್ಯೆ ರಾಜಕೀಯ ಇಣುಕಿ ಸದ್ದು ಮಾಡಿದ ಉದಾಹರಣೆಗಳೂ ಇವೆ. 1982ರಲ್ಲಿ ಫ್ರಾನ್ಸ್ ಮತ್ತು ಕುವೈತ್ ನಡುವಣ ಪಂದ್ಯ ನಡೆದಿತ್ತು. ಅದರಲ್ಲಿ ಫ್ರಾನ್ಸ್ ಆಟಗಾರರು ಗೋಲು ಗಳಿಸಿದರು. ಅದೇ ಹೊತ್ತಿಗೆ ಕುವೈತ್ ರಕ್ಷಣಾ ಆಟಗಾರರು ಆಟ ನಿಲ್ಲಿಸಿದರು. ಸ್ಟ್ಯಾಂಡ್ನಿಂದ ಶಿಳ್ಳೆಯ ಸದ್ದು ಬಂದಿತ್ತು ಎಂದು ದೂರಿದರು. ಆಗ ಕುವೈತ್ ದೇಶದ ರಾಜನ ಸಹೋದರ ಮತ್ತು ಅಲ್ಲಿಯ ಫುಟ್ಬಾಲ್ ಸಂಸ್ಥೆ ಅಧ್ಯಕ್ಷ ಶೇಖ್ ಫಹಾದ್ ಅಲ್ ಅಹ್ಮದ್ ಅಲ್ ಜಾಬರ್ ಅಲ್ ಸಬಾ ಅವರು ಆಟದಂಕಣ ಪ್ರವೇಶಿಸಿದರು. ಫ್ರಾನ್ಸ್ಗೆ ಗೋಲು ಕೊಡದಂತೆ ರೆಫರಿಯ ಮನವೊಲಿಸಿದ್ದರು ಎಂದು ‘ಫಸ್ಟ್ಪೋಸ್ಟ್’ ವೆಬ್ಸೈಟ್ ಉಲ್ಲೇಖಿಸಿದೆ. ಆ ಪಂದ್ಯದಲ್ಲಿ ಫ್ರಾನ್ಸ್ 3–1ರಿಂದ ಮುಂದಿತ್ತು. ಆದರೆ ನಾಲ್ಕನೇ ಗೋಲು ಹೊಡೆದರೂ ಶೇಖ್ ಮನವಿಯಿಂದಾಗಿ ರದ್ದಾಯಿತು.1934ರಲ್ಲಿ ಇಟಲಿಯಲ್ಲಿ ನಡೆದ ವಿಶ್ವಕಪ್ ಟೂರ್ನಿಯನ್ನು ಫ್ಯಾಸಿಸ್ಟ್ ಸಿದ್ಧಾಂತದ ಪ್ರಚಾರಕ್ಕಾಗಿ ಬೆನೆಟೊ ಮುಸೊಲಿನಿ ಬಳಸಿಕೊಂಡಿದ್ದ. 3 ಲಕ್ಷಕ್ಕೂ ಹೆಚ್ಚು ಭಿತ್ತಿಚಿತ್ರಗಳನ್ನು ಅಂಟಿಸಲಾಗಿತ್ತು. ಅದರಲ್ಲಿ ಫ್ಯಾಸಿಸ್ಟ್ ಸೆಲ್ಯೂಟ್ ಚಿತ್ರ ಅಚ್ಚಾಗಿತ್ತು ಎಂದು ‘ಸ್ಕೈ ಹಿಸ್ಟರಿ’ ವೆಬ್ಸೈಟ್ ಲೇಖನದಲ್ಲಿ ಉಲ್ಲೇಖಿಸಲಾಗಿದೆ. ಆದರೆ ಇತಿಹಾಸದ ಎಲ್ಲ ಪ್ರಕರಣಗಳನ್ನೂ ‘ಟ್ರಂಪ್ ರೆಡ್ ಕಾರ್ಡ್’ ಮೀರಿಸಿದೆ. ಅದರಲ್ಲೂ ಈ ಬಾರಿಯ ಫಿಫಾ ವಿಶ್ವಕಪ್ ಟೂರ್ನಿಯು ಕ್ವಾರ್ಟರ್ಫೈನಲ್ ಘಟ್ಟಕ್ಕೆ ತಲುಪುವ ಮುನ್ನವೇ ಹಲವಾರು ವಿವಾದಗಳಿಂದಾಗಿ ಸುದ್ದಿಯಾಗಿದೆ. ಕ್ರೀಡಾ ಸ್ಫೂರ್ತಿಯ ಬೆಳಕು ಮಂದವಾಗುತ್ತಿರುವಂತೆ ಭಾಸವಾಗುತ್ತಿದೆ.ಫಿಫಾ 2026ರ ಪ್ರಮುಖ ವಿವಾದಗಳು* ಸೊಮಾಲಿಯಾದ ಪ್ರಶಸ್ತಿ ಪುರಸ್ಕೃತ ರೆಫರಿ ಒಮರ್ ಅರ್ತನ್ ಅವರಿಗೆ ಅಮೆರಿಕ ಪ್ರವೇಶಕ್ಕೆ ವೀಸಾ ನಿರಾಕರಿಸಲಾಯಿತು. ಅವರನ್ನು ರೆಫರಿಗಳ ಪಟ್ಟಿಯಿಂದ ಕೈಬಿಡಲಾಯಿತು. ಮಯಾಮಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಒಮರ್ ಅವರಿಗೆ ಈ ವಿಷಯ ತಿಳಿಸಲಾಯಿತು. ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಕಾರ್ಯನಿರ್ವಹಿಸಿದ ಸೊಮಾಲಿಯಾದ ಮೊದಲ ರೆಫರಿಯೆಂಬ ಹೆಗ್ಗಳಿಕೆ ಪಡೆಯುವ ಅವಕಾಶ ಅವರಿಗೆ ಕೈತಪ್ಪಿತು. ಫಿಫಾ ಕೂಡ ಅಸಹಾಯಕವಾಯಿತು. ಅಕ್ರಮ ವಲಸೆ ಹತ್ತಿಕ್ಕಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಜಾರಿಗೊಳಿಸಿದ ಅಮೆರಿಕಕ್ಕೆ ‘ಪ್ರಯಾಣ ನಿರ್ಬಂಧವಿರುವ ದೇಶಗಳ ಪಟ್ಟಿ’ಯಲ್ಲಿ ಸೊಮಾಲಿಯಾ ಒಂದಾಗಿದೆ. ನಂತರ ಅವರು ಸ್ವದೇಶಕ್ಕೆ ಮರಳಿದರು. ಅಲ್ಲಿ ಅವರಿಗೆ ಭರ್ಜರಿ ನಾಗರಿಕ ಸಮ್ಮಾನ ದೊರೆಯಿತು * ಫಿಫಾ ಪಂದ್ಯಗಳ ಟಿಕೆಟ್ಗಳ ಬೆಲೆಯನ್ನು ಅವೈಜ್ಞಾನಿಕವಾಗಿ ಹೆಚ್ಚಳ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದವು * ತಾಪಮಾನ ಹೆಚ್ಚಳದಿಂದಾಗಿ ಆಟಗಾರರು ಅನಾರೋಗ್ಯಕ್ಕೆ ಒಳಗಾಗಲಿದ್ದಾರೆ ಎಂದು ಆರೋಗ್ಯ ವಿಜ್ಞಾನಿಗಳು ಎಚ್ಚರಿಸಿದ್ದರು. 40 ಡಿಗ್ರಿ ಸೆಲ್ಸಿಯಸ್ಗಿಂತಲೂ ಹೆಚ್ಚಿನ ತಾಪಮಾನದಿಂದ ಆಟಗಾರರಿಗೆ ರಕ್ಷಣೆ ನೀಡುವ ಸವಲತ್ತುಗಳು ಇಲ್ಲಿ ಸಮಂಜಸವಾಗಿಲ್ಲ ಎಂದೂ ಆತಂಕ ವ್ಯಕ್ತಪಡಿಸಿದ್ದರು* ಫ್ರಾನ್ಸ್ ತಂಡದ ಸೂಪರ್ ಸ್ಟಾರ್ ಕೈಲಿಯನ್ ಎಂಬಾಪೆ ಅವರ ವಿರುದ್ಧ ಪರಗ್ವೆಯ ಸೆನೆಟರ್ ಸೆಲೆಸ್ಟಿ ಅಮರಿಲಾ ಅವರು ಜನಾಂಗೀಯ ನಿಂದನೆ ಮಾಡಿದ್ದಾರೆ. ಈ ಹೇಳಿಕೆಗಳು ‘ಜನಾಂಗೀಯ ನಿಂದನೆ‘ ಮತ್ತು ‘ಅಸಹನೀಯ’ ಎಂದು ಎಂಬಾಪೆ ಪ್ರತಿಕ್ರಿಯಿಸಿದ್ದಾರೆ. ಸೆಲೆಸ್ಟಿ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದಾರೆ* ಲಾಸ್ ಏಂಜಲೀಸ್ನಲ್ಲಿ ನಡೆದಿದ್ದ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಗೋಲು ಗಳಿಸಿದ ಇರಾನ್ ದೇಶದ ಮೊಹಮ್ಮದ್ ಮೊಹಾಬಿ ಅವರು ಬಂದೂಕಿನಿಂದ ಗುಂಡು ಹಾರಿಸುವ ಶೈಲಿಯನ್ನು ತೋರಿಸಿ ಸಂಭ್ರಮಿಸಿದರು. ಇದರಿಂದಾಗಿ ಅವರ ಮೇಲೆ ಶಿಸ್ತುಕ್ರಮ ಜರುಗಿಸಲಾಯಿತು* ಕೆಲವು ಪಂದ್ಯಗಳಲ್ಲಿ ವಿಡಿಯೊ ವಿಶ್ಲೇಷಣೆ (ವಿಆರ್) ತಂತ್ರಜ್ಞಾನ ಮೂಲಕ ಹೊರಹೊಮ್ಮಿದ ತೀರ್ಮಾನಗಳೂ ವಿವಾದಕ್ಕೆಡೆ ಮಾಡಿಕೊಟ್ಟವು* ಫಿಫಾ ವಿಶ್ವಕಪ್ ಆರಂಭಕ್ಕೂ ಮುನ್ನ ಅಮೆರಿಕವು ಇರಾನ್ ಎದುರು ಯುದ್ಧ ಸಾರಿತ್ತು. ಅದರ ಬಿಸಿ ಫುಟ್ಬಾಲ್ ಅಂಗಳಕ್ಕೂ ತಟ್ಟಿತ್ತು. ಇರಾನ್ ತಂಡದ ಆಟಗಾರರು ಮತ್ತು ನೆರವು ಸಿಬ್ಬಂದಿಗೆ ಅಮೆರಿಕದ ವೀಸಾ ನಿರಾಕರಿಸಲಾಯಿತು. ಕಾನೂನು ಹೋರಾಟದ ನಂತರ ಅನುಮತಿ ಸಿಕ್ಕಿತು. ಆದರೆ ಮೈದಾನದಲ್ಲಿ ಇರಾನ್ ಬಾವುಟವನ್ನು ತೋರಿಸುವಂತಿಲ್ಲ ಎಂಬ ನಿರ್ಬಂಧ ಹೇರಲಾಯಿತು. ಇರಾನ್ ಗುಂಪು ಹಂತದಲ್ಲಿ ಆಡಿದ ಮೂರು ಪಂದ್ಯಗಳೂ ಡ್ರಾ ಆದವು. ಆದರೆ ನಾಕೌಟ್ಗೆ ಅರ್ಹತೆ ಪಡೆಯಲಿಲ್ಲ. ಈ ಗುಂಪಿನಿಂದ ತಲಾ ಐದು ಅಂಕ ಪಡೆದ ಬೆಲ್ಜಿಯಂ ಮತ್ತು ಈಜಿಪ್ತ್ 32ರ ಘಟ್ಟಕ್ಕೆ ಪ್ರವೇಶಿಸಿದವು ರಾಜಕೀಯ ಲೆಕ್ಕಾಚಾರವೇ? ಡೊನಾಲ್ಡ್ ಟ್ರಂಪ್ ಅವರು ಏಳು ವರ್ಷಗಳ ಹಿಂದೆ ಮೊದಲ ಬಾರಿ ಅಮೆರಿಕದ ಅಧ್ಯಕ್ಷರಾಗಿದ್ದರು. ಅವರ ಆ ಅಧಿಕಾರಾವಧಿಯಲ್ಲಿ ಕಪ್ಪು ಜನಾಂಗದ ವ್ಯಕ್ತಿಯೊಬ್ಬನ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದರು. ಅದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಕಪ್ಪು ವರ್ಣೀಯರ ಪರವಾಗಿ ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಪ್ರತಿಭಟನೆಗಳು ನಡೆದವು. ಅದು ಟ್ರಂಪ್ ಅವರ ಅಧಿಕಾರಕ್ಕೆ ಕುತ್ತು ತಂದಿದ್ದು ಸುಳ್ಳಲ್ಲ. ಎರಡನೇ ಅವಧಿಯಲ್ಲಿ ಟ್ರಂಪ್ ಅವರು ಇರಾನ್ ಎದುರಿನ ಯುದ್ಧದಿಂದಾಗಿ ಸ್ವದೇಶದಲ್ಲಿಯೇ ಟೀಕೆಗೆ ಗುರಿಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ತಮ್ಮ ದೇಶವಾಸಿಗಳಿಂದ ಮೆಚ್ಚುಗೆ ಗಳಿಸುವ ಲೆಕ್ಕಾಚಾರದಿಂದಾಗಿ ಅವರು ಬಾಲೋಗನ್ ಅವರ ನಿಷೇಧ ತೆರವಿಗೆ ಮುಂದಾಗಿರಬಹುದು ಎಂದೂ ವಿಶ್ಲೇಷಿಸಲಾಗುತ್ತಿದೆ. ಅಲ್ಲದೇ ಬಾಲೋಗನ್ ಅವರು ಕಪ್ಪುವರ್ಣೀಯ ಆಟಗಾರನಾಗಿದ್ದಾರೆ. ಆದ್ದರಿಂದ ಅವರ ನೆರವಿಗೆ ನಿಂತರೆ ತಮ್ಮ ದೇಶದ ಕಪ್ಪುವರ್ಣೀಯರು ಮೆಚ್ಚುಗೆಗೆ ಪಾತ್ರವಾಗುವ ಲೆಕ್ಕಾಚಾರವೂ ಅವರದ್ದಾಗಿರಬಹುದು ಎನ್ನಲಾಗಿದೆ.ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ರೆಡ್ ಕಾರ್ಡ್ ಹಿಡಿದಿರುವುದು ಮತ್ತು ಫಿಫಾ ಅಧ್ಯಕ್ಷ ಜಿಯಾನಿ ಇನ್ಫಾಂಟಿನೊ –2018ರ –ಸಂಗ್ರಹ ಚಿತ್ರ