ಕಿರುತೆರೆ ಮೂಲಕ ಮನೆಮಗಳಾದ ರಾಣಿ: ಬಾಲ ನಟಿ ಧನ್ವಿಶ್ರೀ ತಾಯಿಯ ಹೆಮ್ಮೆಯ ಮಾತುಗಳಿವು
ಮುಖದ ಮೇಲೆ ಮುದ್ದಾದ ನಗು, ಪಟಪಟ ಅಂತ ಮಾತನಾಡುವ ಮೂಲಕ ಎಲ್ಲರ ಮನಸ್ಸು ಗೆದ್ದಿರುವ ‘ರಾಣಿ’ ಸದ್ಯ ಕಿರುತೆರೆ ಲೋಕದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾಳೆ. ಅಲ್ಲದೆ ವೀಕ್ಷಕರ ಮನೆ ಮಗಳಾಗಿದ್ದಾಳೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ರಾಣಿ’ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿರುವ ಬಾಲ ನಟಿ ಧನ್ವಿಶ್ರೀ ಈಗ ಕಿರುತೆರೆಯಲ್ಲಿ ಮಿಂ

ಮುಖದ ಮೇಲೆ ಮುದ್ದಾದ ನಗು, ಪಟಪಟ ಅಂತ ಮಾತನಾಡುವ ಮೂಲಕ ಎಲ್ಲರ ಮನಸ್ಸು ಗೆದ್ದಿರುವ ‘ರಾಣಿ’ ಸದ್ಯ ಕಿರುತೆರೆ ಲೋಕದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾಳೆ. ಅಲ್ಲದೆ ವೀಕ್ಷಕರ ಮನೆ ಮಗಳಾಗಿದ್ದಾಳೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ರಾಣಿ’ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿರುವ ಬಾಲ ನಟಿ ಧನ್ವಿಶ್ರೀ ಈಗ ಕಿರುತೆರೆಯಲ್ಲಿ ಮಿಂಚುತ್ತಿದ್ದಾಳೆ. ಅಮ್ಮ-ಮಗಳ ನಿಷ್ಕಲ್ಮಶ ಪ್ರೀತಿಯ ಮಹಾಕಾವ್ಯ ‘ರಾಣಿ’ ಧಾರಾವಾಹಿಯು ಮಾರ್ಚ್ 9ರಿಂದ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿಯು ವೀಕ್ಷಕರಿಗೆ ಹೊಸದೊಂದು ಭಾವಲೋಕವನ್ನು ಪರಿಚಯಿಸಿದೆ. ಇಡೀ ಕಥೆಯ ಸಾರವು ‘ತಾಯಿಯಿಂದ ದೂರವಾಗುವುದೇ ರಾಣಿಗೆ ಸಿಗುವ ಅತಿದೊಡ್ಡ ಶಿಕ್ಷೆ’ ಎಂಬ ಸೂಕ್ಷ್ಮ ಎಳೆಯಿಂದ ಆರಂಭಗೊಂಡಿತ್ತು. ಅಂದಿನಿಂದ ರಾಣಿ ಪಾತ್ರದ ಮೂಲಕ ಧನ್ವಿಶ್ರೀ ಚಿರಪರಿಚಿತ ಆದಳು. ಮೂಲತಃ ಬೆಂಗಳೂರಿನವರಾದ ಧನ್ವಿಶ್ರೀ ಕನ್ನಡ ಮಾತ್ರವಲ್ಲದೆ, ತಮಿಳು ಧಾರಾವಾಹಿಯಲ್ಲಿ ನಟಿಸಿ ಅಲ್ಲಿಯೂ ಕೂಡ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾಳೆ. ಅಷ್ಟೇ ಅಲ್ಲದೆ ಪುಟಾಣಿ ಧನ್ವಿ ಸಿನಿಮಾಗಳಲ್ಲೂ ನಟಿಸಿದ್ದಾಳೆ. ಧನ್ವಿಶ್ರೀಯ ಧಾರಾವಾಹಿ ಪಯಣ, ಮಗಳು ಬೆಳೆದು ಬಂದ ಹಾದಿ ಬಗ್ಗೆ ತಾಯಿ ಶಿಲ್ಪ ಅವರು ಮಗಳು ಬೆಳೆದು ಬಂದ ಹಾದಿ ಬಗ್ಗೆ ‘ಪ್ರಜಾವಾಣಿ ಡಿಜಿಟಲ್’ ಜೊತೆಗೆ ಮಾತನಾಡಿದ್ದಾರೆ.‘ಧನ್ವಿಶ್ರೀ ಈಗ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಳೆ. ಅವಳು ಮಗುವಾಗಿದ್ದಾಗಿನಿಂದ ಚುರುಕಾಗಿದ್ದಳು. ಆಗಲೇ ತುಂಬಾ ಚೆನ್ನಾಗಿ ನಟನೆ ಮಾಡುತ್ತಿದ್ದಳು. ಮಗಳಿಗೆ ನಟನೆಯಲ್ಲಿ ಆಸಕ್ತಿ ಇರುವುದು ನಮಗೆ ಗೊತ್ತಾಯಿತು. ಹೀಗಾಗಿ ನನ್ನ ಸ್ನೇಹಿತೆಯ ಮುಖಾಂತರ ಧನ್ವಿಯನ್ನು ಆಡಿಷನ್ಗೆ ಕರೆದುಕೊಂಡು ಹೋದೆವು. ಮೊದಲ ಬಾರಿಗೆ ‘ಲಾಕ್ಡೌನ್ ಲಕ್ಷ್ಮೀ’ ಎಂಬ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಆದರೆ ಕಾರಣಾಂತರಗಳಿಂದ ಸಿನಿಮಾ ಬಿಡುಗಡೆಯಾಗಲಿಲ್ಲ. ಬಳಿಕ ‘ಬೇವು ಬೆಲ್ಲ’ ಎಂಬ ವೆಬ್ ಸರಣಿಯಲ್ಲಿ ಕುರುಡಿ ಪಾತ್ರದಲ್ಲಿ ಅಭಿನಯಿಸಿದಳು. ಬಳಿಕ ‘ಅಮೃತ ಘಳಿಗೆ’, ‘ವಧು’, ತಮಿಳಿನ ‘ಅಯಾಲಿ’, ಈಗ ‘ರಾಣಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾಳೆ. ಧನ್ವಿ ನಟಿಸಿರುವ ‘ಶಬರಿ’ ಎಂಬ ಮತ್ತೊಂದು ಸಿನಿಮಾ ಬಿಡುಗಡೆಯ ಹಂತದಲ್ಲಿದೆ’ ಎಂದರು.ಮುಂದುವರೆದು ಮಾತನಾಡಿದ ಅವರು, ‘ಧನ್ವಿಶ್ರೀ ಎಲ್ಲಿಗೆ ಹೋದರೂ ಅವಳನ್ನು ರಾಣಿ ಎಂದು ಗುರುತಿಸಿ ಮಾತನಾಡುತ್ತಾರೆ. ಅದರಲ್ಲೂ ಪುಟ್ಟ ಮಕ್ಕಳು ಧ್ವನಿಯಲ್ಲೇ ಕಂಡು ಹಿಡಿದು ಮಾತಾಡಿಸುತ್ತಾರೆ. ತೆರೆ ಮೇಲೆ ನಟಿಸುವ ರಾಣಿ, ತೆರೆಹಿಂದೆ ಅಷ್ಟೇ ತುಂಟಿ. ಎಲ್ಲರ ಜೊತೆಗೆ ಚನ್ನಾಗಿ ಮಾತಾಡುತ್ತಾ, ಶಾಲೆಯಲ್ಲೂ ಚನ್ನಾಗಿ ಓದುತ್ತಿದ್ದಾಳೆ. ಆಕೆಯ ಶಿಕ್ಷಕರು ಕೂಡ ಪ್ರೋತ್ಸಾಹಿಸುತ್ತಾರೆ. ನಟನೆ ಹಾಗೂ ಓದುವುದನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದಾಳೆ. ಮಗಳ ನಟನೆ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ. ಅವಳಿಂದ ಎಲ್ಲರು ನಮ್ಮನ್ನು ಗುರುತಿಸುವಂತಾಗಿದೆ’ ಎಂದು ಹೆಮ್ಮಯಿಂದ ಮಾತನಾಡಿದ್ದಾರೆ. ಇನ್ನು, ಧಾರಾವಾಹಿ ಬಗ್ಗೆ ಹೇಳುವುದಾದರೇ, ನಿರ್ದೇಶಕಿ ಹಾಗೂ ನಿರ್ಮಾಪಕಿ ಸ್ವಪ್ನ ಕೃಷ್ಣ ಅವರು ಈ ಧಾರಾವಾಹಿಯನ್ನು ನಿರ್ದೇಶಿಸುವುದರ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಕಥೆಯು ಕೇವಲ ದೃಶ್ಯವಲ್ಲ, ಅದೊಂದು ಅನುಭವ. ಇದು ಕೇವಲ ಮನರಂಜನೆಯ ಚೌಕಟ್ಟನ್ನು ಮೀರಿ, ಪ್ರತಿಯೊಬ್ಬ ಮಹಿಳೆಯ ಮತ್ತು ಮಗುವಿನ ಭಾವನಾತ್ಮಕ ಸತ್ಯವನ್ನು ಪ್ರತಿಬಿಂಬಿಸುವ ಕನ್ನಡಿಯಾಗಲಿದೆ.ಈ ಧಾರಾವಾಹಿಯಲ್ಲಿ ನಾಯಕನಾಗಿ ಆರವ್ ಸೂರ್ಯ ಮತ್ತು ನಾಯಕಿಯಾಗಿ ಐಶ್ವರ್ಯಾ ಅವರು ಗಟ್ಟಿ ಪಾತ್ರಗಳ ಮೂಲಕ ಕಥೆಗೆ ಜೀವ ತುಂಬುತ್ತಿದ್ದಾರೆ. ಇದರಲ್ಲಿ ಮುಖ್ಯ ಆಕರ್ಷಣೆಯೇ ರಾಣಿ ಪಾತ್ರ. ಭಾವುಕ ಕಥಾಹಂದರದ ಮೂಲಕ ‘ರಾಣಿ’ ಧಾರಾವಯಿ ಕನ್ನಡಿಗರ ಹೃದಯ ಗೆಲ್ಲುತ್ತಿದೆ. View this post on Instagram