ಶಿವ, ವಿಷ್ಣು, ಬ್ರಹ್ಮದೇವನಿಗೆ ಸಮರ್ಪಿತವಾದ ಪ್ರಂಬನನ್ ಹಿಂದೂ ದೇವಾಲಯಕ್ಕೆ ಮೋದಿ ಭೇಟಿ – ಏನಿದರ ವಿಶೇಷ?
– ದೇವಾಲಯ ಅಭಿವೃದ್ಧಿಗೆ ಸಹಾಯಹಸ್ತ ಚಾಚಿದ ಭಾರತ ಇಂಡೋನೇಷ್ಯಾಕ್ಕೆ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ (ಜು.8) ಇಲ್ಲಿನ ಐತಿಹಾಸಿಕ ಪ್ರಂಬನನ್ ದೇವಾಲಯ (Prambanan Temple) ಸಂಕೀರ್ಣಕ್ಕೆ ಭೇಟಿ ನೀಡಿದ್ದಾರೆ. ಯೋಗ್ಯಕರ್ತಾ ಪ್ರದೇಶದಲ್ಲಿರುವ ಪ್ರಂಬನನ್ ದೇವಾಲಯಕ್ಕೂ ಭೇಟಿ ನೀಡಿದ್ದಾರೆ. ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ ಅವರೊಂದಿಗೆ ದೇವಸ್ಥಾ

– ದೇವಾಲಯ ಅಭಿವೃದ್ಧಿಗೆ ಸಹಾಯಹಸ್ತ ಚಾಚಿದ ಭಾರತ ಇಂಡೋನೇಷ್ಯಾಕ್ಕೆ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ (ಜು.8) ಇಲ್ಲಿನ ಐತಿಹಾಸಿಕ ಪ್ರಂಬನನ್ ದೇವಾಲಯ (Prambanan Temple) ಸಂಕೀರ್ಣಕ್ಕೆ ಭೇಟಿ ನೀಡಿದ್ದಾರೆ. ಯೋಗ್ಯಕರ್ತಾ ಪ್ರದೇಶದಲ್ಲಿರುವ ಪ್ರಂಬನನ್ ದೇವಾಲಯಕ್ಕೂ ಭೇಟಿ ನೀಡಿದ್ದಾರೆ. ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ ಅವರೊಂದಿಗೆ ದೇವಸ್ಥಾನಕ್ಕೆ ಆಗಮಿಸಿದ ಪ್ರಧಾನಿ ಮೋದಿ (Narendra Modi), ತ್ರಿಮೂರ್ತಿಗಳಾದ ಶಿವ, ವಿಷ್ಣು ಹಾಗೂ ಬ್ರಹ್ಮ ದೇವರಿಗೆ ಸಮರ್ಪಿತವಾದ ಸುಮಾರು 1,000 ವರ್ಷಗಳಷ್ಟು ಹಳೆಯದ್ದಾದ ಹಿಂದೂ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆಯನ್ನೂ ಸಲ್ಲಿಸಿದ್ದಾರೆ. ಈ ಪ್ರಸಿದ್ಧ ಐತಿಹಾಸಿಕ ಸ್ಥಳದ ಫೋಟೊ, ವಿಡಿಯೊಗಳನ್ನ ತಮ್ಮ ಸೋಷಿಯಲ್ ಮೀಡಿಯಾ (Social Media) ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ʻಇತಿಹಾಸ ಪ್ರಸಿದ್ಧ ಪ್ರಂಬನನ್ ದೇಗುಲಕ್ಕೆ ಭೇಟಿ ನೀಡಿರುವುದು ತುಂಬಾ ಖುಷಿ ಕೊಟ್ಟಿದೆʼ ಎಂದು ಬರೆದುಕೊಂಡಿದ್ದಾರೆ. ಇದೇ ವೇಳೆ ತಮ್ಮ ಜೀವನದಲ್ಲಿ ಶಿವನ ಪ್ರಭಾವದ ಬಗ್ಗೆ ಮೋದಿ ಮಾತನಾಡಿದ್ದಾರೆ. ಇಂಡೋನೇಷ್ಯಾ ವಿಶ್ವದಲ್ಲೇ ಅತಿ ಹೆಚ್ಚು ಮುಸ್ಲಿಂ ಸಮುದಾಯದ (Muslims Community) ಜನರಿರುವ ದೇಶ. ಇಲ್ಲಿರುವ ಪ್ರಂಬನನ್ ದೇಗುಲ ಆಗ್ನೇಯ ಏಷ್ಯಾದ ಹಿಂದೂ ಶಿಲ್ಪಕಲೆಗೆ ಉದಾಹರಣೆಯಾಗಿ ನಿಂತಿದೆ. ಯೋಗ್ಯಕರ್ತಾ ಪ್ರದೇಶದಲ್ಲಿ ನೆಲೆಗೊಂಡಿರುವ ʻಪ್ರಂಬನನ್ʼ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ. ಅಷ್ಟೇ ಅಲ್ಲ, ಇಂಡೋನೇಷ್ಯಾದ ಅತಿದೊಡ್ಡ ಹಿಂದೂ ದೇವಾಲಯ ಸಂಕೀರ್ಣವಾಗಿದೆ. ಇದು ಕಾಂಬೋಡಿಯಾದ ಅಂಕೋರ್ ವಾಟ್ ನಂತರ ಆಗ್ನೇಯ ಏಷ್ಯಾದಲ್ಲಿ 2ನೇ ದೊಡ್ಡ ದೇವಾಲಯವಾಗಿದೆ. ಪ್ರಧಾನಿ ಮೋದಿ ಅವರು ಈ ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ಅದರ ಇತಿಹಾಸದ (History) ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಬಗ್ಗೆ ನಿಮಗೂ ತಿಳಿಯುವ ಕುತೂಹಲವಿದ್ದರೆ ಮುಂದೆ ಓದಿ…. ಶತಮಾನಗಳ ಸಂಸ್ಕೃತಿಯನ್ನ ಸಾರಿ ಸಾರಿ ಹೇಳುವ ಪ್ರಂಬನನ್ ಜಾವಾ ದ್ವೀಪದಲ್ಲಿರುವ ಪ್ರಂಬನನ್, ಇಂಡೋನೇಷ್ಯಾದ ಅತಿದೊಡ್ಡ ಹಿಂದೂ ದೇವಾಲಯ ಸಂಕೀರ್ಣ ಮತ್ತು ಕಾಂಬೋಡಿಯಾದ ಅಂಕೋರ್ ವಾಟ್ ನಂತರ ಆಗ್ನೇಯ ಏಷ್ಯಾದ 2ನೇ ಅತಿ ದೊಡ್ಡ ದೇವಾಲಯವಾಗಿದೆ. ಸುಮಾರು 40 ಹೆಕ್ಟೇರ್ ವಿಸ್ತೀರ್ಣದಲ್ಲಿರುವ ಈ ದೇವಾಲಯ ಸಂಕೀರ್ಣವು ಸುಮಾರು 240 ದೇವಾಲಯಗಳನ್ನ ಒಳಗೊಂಡಿದೆ. ಇದು ಇಂಡೋನೇಷ್ಯಾದ ಪ್ರಮುಖ ಸಾಂಸ್ಕೃತಿಕ ಹೆಗ್ಗುರುತುಗಳಲ್ಲಿ ಒಂದು. ಇದು ಭಾರತೀಯ ಉಪಖಂಡ ಮತ್ತು ಆಗ್ನೇಯ ಏಷ್ಯಾದ ನಡುವಿನ ಶತಮಾನಗಳಷ್ಟು ಹಳೆಯ ಸಾಂಸ್ಕೃತಿ ಸಂಪರ್ಕಗಳನ್ನ ಸಾರಿ ಸಾರಿ ಹೇಳುತ್ತದೆ. ನಿರ್ಮಾಣಗೊಂಡಿದ್ದು ಯಾವಾಗ? 9 ಮತ್ತು 10ನೇ ಶತಮಾನದಲ್ಲಿ ಪ್ರಾಚೀನ ಮತಾರಂ ಸಾಮ್ರಾಜ್ಯದ ಸಂಜಯ ರಾಜವಂಶ ಈ ದೇಗುಲದ ಸಂಕೀರ್ಣವನ್ನ ನಿರ್ಮಿಸಿದೆ. ಇದರ ಮಧ್ಯ ಭಾಗದಲ್ಲಿ ತ್ರಿಮೂರ್ತಿಗಳಾದ ಶಿವ, ವಿಷ್ಣು ಮತ್ತು ಬ್ರಹ್ಮ ದೇವರಿಗೆ ಸಮರ್ಪಿತವಾದ ಮೂರು ಭವ್ಯ ದೇವಾಲಯಗಳಿವೆ. ಅಲ್ಲದೇ ಈ ದೇಗುಲದ ಸನಿಹವೇ ಇಂಡೋನೇಷ್ಯಾದ ಬೌದ್ಧ ಪರಂಪರೆಯನ್ನು ಪ್ರತಿನಿಧಿಸುವ ಬೊರೊಬುದೂರ್ ದೇವಾಲಯವಿದೆ. 2 ಸ್ಮಾರಕಗಳು ಸಾವಿರ ವರ್ಷಗಳ ಹಿಂದೆ ಜಾವಾದಲ್ಲಿ ಪ್ರವರ್ಧಮಾನಕ್ಕೆ ಬಂದ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆ ಪ್ರದರ್ಶಿಸುತ್ತವೆ. ಈ ದೇಗುಲದ ಸಾಂಸ್ಕೃತಿಕ ಪರಂಪರೆ ಮತ್ತು ಇತಿಹಾಸವನ್ನ ಗುರುತಿಸಿ 1991ರಲ್ಲಿ ಯುನೆಸ್ಕೋ ವಿಶ್ವ ಪಾರಂಪರಿಕ ತಾಣದ ಪಟ್ಟಿಗೆ ಸೇರಿಸಿದೆ. ವಾಸ್ತುಶಿಲ್ಪಕ್ಕೇ ಹೆಸರು ಈ ಸುಪ್ರಸಿದ್ಧ ಹಿಂದೂ ದೇವಾಲಯಕ್ಕೆ ಬರುವವರನ್ನು ಆಕರ್ಷಿಸುವುದೇ ಇಲ್ಲಿನ ವಾಸ್ತುಶಿಲ್ಪ. ಇಲ್ಲಿನ ವಿನ್ಯಾಸ, ಭಿನ್ನತೆ ಆಕಾಶಕ್ಕೆ ಮುತ್ತಿಡುವಂತೆ ಕಾಣುವ ಗೋಪುರಗಳು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಇಲ್ಲಿರುವ ಶಿವ, ವಿಷ್ಣು, ಬ್ರಹ್ಮದೇವನ ದೇವಾಲಯಗಳಲ್ಲಿ 47 ಮೀಟರ್ ಎತ್ತರದ ಶಿವ ದೇವಾಲಯವು ಈ ಸಂಕೀರ್ಣದ ಅತ್ಯಂತ ಎತ್ತರದ ಮತ್ತು ಪ್ರಮುಖ ರಚನೆಯಾಗಿದೆ. ದೇವಾಲಯದ ಗೋಡೆಗಳು ರಾಮಾಯಣ ಮತ್ತು ಇತರ ಹಿಂದೂ ಮಹಾಕಾವ್ಯಗಳ ದೃಶ್ಯಗಳನ್ನ ಚಿತ್ರಿಸುವ ಸಂಕೀರ್ಣವಾದ ಕೆತ್ತನೆಗಳಿಂದ ಅಲಂಕರಿಸಲ್ಪಟ್ಟಿವೆ. ಶಿವ, ದುರ್ಗಾ, ಗಣೇಶ ಮತ್ತು ಅಗಸ್ತ್ಯ ಋಷಿಗಳ ಪ್ರತಿಮೆಗಳನ್ನು ಹೊಂದಿರುವ ಹಲವಾರು ಗರ್ಭಗುಡಿಗಳೂ ಇಲ್ಲಿವೆ. ಸದ್ಯ ಇಲ್ಲಿನ ಹಲವು ದೇಗುಲಗಳು ಈಗ ಹಾನಿಗೆ ಒಳಗಾಗಿರೋದ್ರಿಂದ ಭಾರತದ ಹೊಸ ಪುನಃಸ್ಥಾಪನೆ ಯೋಜನೆಯು, ನವದೆಹಲಿ ಮತ್ತು ಜಕಾರ್ತಾ ನಡುವಿನ ದೀರ್ಘಕಾಲದ ನಾಗರಿಕ ಸಂಬಂಧಗಳನ್ನ ಮತ್ತಷ್ಟು ಬಲಪಡಿಸುವ ಮತ್ತು ಏಷ್ಯಾದ ಅತ್ಯಂತ ಮಹತ್ವದ ಹಿಂದೂ ಸ್ಮಾರಕಗಳಲ್ಲಿ ಒಂದನ್ನ ಸಂರಕ್ಷಿಸಲು ಸಹಾಯ ಮಾಡುವ ನಿರೀಕ್ಷೆಯಿದೆ. ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸುವ ಮೂಲಕ, ದೇವಾಲಯ ಸಂಕೀರ್ಣಕ್ಕಾಗಿ ಜಂಟಿ ಸಂರಕ್ಷಣೆ ಮತ್ತು ಪುನಃಸ್ಥಾಪನೆ ಯೋಜನೆಯನ್ನು ಪ್ರಾರಂಭಿಸಲು ಭಾರತ ಮತ್ತು ಇಂಡೋನೇಷ್ಯಾ ಒಪ್ಪಿಕೊಂಡಿವೆ. ನಿನ್ನೆ (ಜುಲೈ 7-ಮಂಗಳವಾರ) ನಡೆದ ದ್ವಿಪಕ್ಷೀಯ ಮಾತುಕತೆಯ ಸಂದರ್ಭದಲ್ಲಿ, ಪ್ರಧಾನಿ ಮೋದಿ ಮತ್ತು ಪ್ರಬೋವೊ ಸಂರಕ್ಷಣಾ ಉಪಕ್ರಮಕ್ಕಾಗಿ ಉದ್ದೇಶ ಪತ್ರವನ್ನು ವಿನಿಮಯ ಮಾಡಿಕೊಂಡಿದ್ದಾರೆ.