ಪಶ್ಚಿಮ ಬಂಗಾಳ: ಟಿಎಂಸಿಯ ₹440 ಕೋಟಿ ಮುಟ್ಟುಗೋಲು ಹಾಕಿಕೊಂಡ ED
ನವದೆಹಲಿ: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್ಎ) ಅಡಿಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ₹440 ಕೋಟಿ ಠೇವಣಿ ಹೊಂದಿರುವ ಮೂರು ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಬುಧವಾರ ತಿಳಿಸಿದೆ.ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಂಎಲ್ಎ ಕಾಯ್ದೆಯ ಸೆಕ್ಷನ್ 17 (1ಎ) ಅಡಿಯಲ್ಲಿ ಈ ಕ್ರಮ ಜರುಗಿಸಲಾಗಿದೆ ಎಂದ

ನವದೆಹಲಿ: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್ಎ) ಅಡಿಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ₹440 ಕೋಟಿ ಠೇವಣಿ ಹೊಂದಿರುವ ಮೂರು ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಬುಧವಾರ ತಿಳಿಸಿದೆ.ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಂಎಲ್ಎ ಕಾಯ್ದೆಯ ಸೆಕ್ಷನ್ 17 (1ಎ) ಅಡಿಯಲ್ಲಿ ಈ ಕ್ರಮ ಜರುಗಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಟಿಎಂಸಿಯು ಎಚ್ಡಿಎಫ್ಸಿ ಬ್ಯಾಂಕ್ನ ಮೂರು ಖಾತೆಗಳಲ್ಲಿ ₹440.42 ಕೋಟಿ ಹಣವಿಟ್ಟಿದ್ದು, ಇದರ ಮೂಲದ ಕುರಿತು ಶಂಕೆ ವ್ಯಕ್ತವಾಗಿದ್ದ ಕಾರಣ ಇತ್ತೀಚೆಗಷ್ಟೇ ಕೋಲ್ಕತ್ತದ ಐದು ಪ್ರದೇಶಗಳಲ್ಲಿ ಇ.ಡಿ ಶೋಧ ನಡೆಸಿತ್ತು. ನ್ಯಾಯಾಲಯದ ನಿರ್ದೇಶನದಂತೆ ಟಿಎಂಸಿ ಖಾತೆಗಳಲ್ಲಿರುವ ಒಟ್ಟು ಹಣದ ವಿವರವನ್ನು ಬ್ಯಾಂಕ್ ಅಧಿಕಾರಿಗಳು ಕಲ್ಕತ್ತ ಹೈಕೋರ್ಟ್ಗೆ ಸಲ್ಲಿಸಿದ್ದಾರೆ. ಆದರೆ, ನ್ಯಾಯಾಲಯವು ಈ ಕುರಿತ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ.ಟಿಎಂಸಿ ಬ್ಯಾಂಕ್ ಖಾತೆಯಿಂದ ‘ಕೇರ್ವೆಲ್ ಏವಿಯೇಷನ್ ಇಂಡಿಯಾ ಪ್ರೈ.ಲಿ’ ಮತ್ತು ಅದರ ಸಹ ಸಂಸ್ಥೆಗೆ 2023ರ ಏಪ್ರಿಲ್ನಿಂದ 2026ರ ಜೂನ್ ಅವಧಿಯಲ್ಲಿ ₹160 ಕೋಟಿ ವರ್ಗಾವಣೆ ಆಗಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಅಲ್ಲದೇ, ಇದೇ ಅವಧಿಯಲ್ಲಿ ಈ ಕಂಪನಿಯು ₹82.96 ಕೋಟಿಯನ್ನು ಮತ್ತೊಂದು ಹೊಸ ಕಂಪನಿಗೆ ವರ್ಗಾಯಿಸಿದೆ ಎನ್ನಲಾಗಿದೆ. ಜತೆಗೆ ‘ಗಣನೀಯ ಮೊತ್ತವನ್ನೂ’ ಆ ಕಂಪನಿಗೆ ವರ್ಗಾಯಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದ್ದು, ಆ ಪೈಕಿ ₹112 ಕೋಟಿಯನ್ನು ‘ಎಂಬ್ರೆರ್ ಲೆಗಸಿ 600’ ವಾಣಿಜ್ಯ ವಿಮಾನ ಹಾಗೂ ‘ಆಗಸ್ಟಾ ವೆಸ್ಟ್ಲ್ಯಾಂಡ್ 109ಎಸ್ಪಿ’ ಹೆಲಿಕಾಪ್ಟರ್ ಖರೀದಿಗೆ ಬಳಸಲಾಗಿದೆ. ಈ ವಿಮಾನ ಮತ್ತು ಕಾಪ್ಟರ್ ಅನ್ನು ಟಿಎಂಸಿ ಪಕ್ಷಕ್ಕೆ ಕೇರ್ವೆಲ್ ಏವಿಯೇಷನ್ ಬಾಡಿಗೆಗೆ ನೀಡಿತ್ತು ಎಂದೂ ಅಧಿಕಾರಿಗಳು ತಿಳಿಸಿದ್ದಾರೆ. ಈ ಬೆಳವಣಿಗೆ ಕುರಿತಂತೆ ಟಿಎಂಸಿ ಪಕ್ಷವು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.