ಪಾದಚಾರಿ ಮಾರ್ಗದಲ್ಲಿ ಅಡ್ಡಿ: ಕಠಿಣ ಕ್ರಮ
ಬೆಂಗಳೂರು: ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿಕೊಂಡು ಸಾರ್ವಜನಿಕರ ಓಡಾಟಕ್ಕೆ ತೊಂದರೆ ಕೊಡುವವರ ವಿರುದ್ಧ ಮುಂಬರುವ ದಿನಗಳಲ್ಲೂ ಕಠಿಣ ಕ್ರಮ ತೆಗೆದುಕೊಳ್ಳಲು ನಗರ ಪಾಲಿಕೆಗಳು ತೀರ್ಮಾನಿಸಿವೆ.ಸಾರ್ವಜನಿಕರ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡರ ನಿರ್ದೇಶನದಂತೆ ಪಾದಚಾರಿ ಮ

ಬೆಂಗಳೂರು: ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿಕೊಂಡು ಸಾರ್ವಜನಿಕರ ಓಡಾಟಕ್ಕೆ ತೊಂದರೆ ಕೊಡುವವರ ವಿರುದ್ಧ ಮುಂಬರುವ ದಿನಗಳಲ್ಲೂ ಕಠಿಣ ಕ್ರಮ ತೆಗೆದುಕೊಳ್ಳಲು ನಗರ ಪಾಲಿಕೆಗಳು ತೀರ್ಮಾನಿಸಿವೆ.ಸಾರ್ವಜನಿಕರ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡರ ನಿರ್ದೇಶನದಂತೆ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿದಿದೆ. ಪೂರ್ವ ನಗರ ಪಾಲಿಕೆಯಲ್ಲಿ ಮಂಗಳವಾರ 11.2 ಕಿ.ಮೀ ಪಾದಚಾರಿ ಮಾರ್ಗದಲ್ಲಿ ಒತ್ತುವರಿ ತೆರವು ಮಾಡಲಾಗಿದೆ ಎಂದು ಆಯುಕ್ತ ಡಿ.ಎಸ್. ರಮೇಶ್ ತಿಳಿಸಿದರು.ಪಾಲಿಕೆ ವ್ಯಾಪ್ತಿಯ ವಿವಿಧ ಮುಖ್ಯ ಹಾಗೂ ಉಪ ಮುಖ್ಯರಸ್ತೆಗಳಲ್ಲಿನ ಒತ್ತುವರಿ ತೆರವುಗೊಳಿಸಲು ಸಂಚಾರ ಹಾಗೂ ಕಾನೂನು ಸುವ್ಯವಸ್ಥೆಯ ಪೊಲೀಸ್ ವಿಭಾಗದ ಅಧಿಕಾರಿಗಳು ಸೇರಿದಂತೆ ಇತರೆ ಇಲಾಖೆಗಳ ಸಮನ್ವಯದೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಕೊಡುವವರ ವಿರುದ್ಧ ಮುಂಬರುವ ದಿನಗಳಲ್ಲೂ ಕಠಿಣ ಕ್ರಮ ಮುಂದುವರಿಯಲಿದೆ ಎಂದರು.ಪಾದಚಾರಿ ಮಾರ್ಗಗಳ ಒತ್ತುವರಿಗೆ ಅವಕಾಶ ನೀಡುವುದಿಲ್ಲ. ಪಾದಚಾರಿಗಳ ಸುರಕ್ಷಿತ ಮತ್ತು ಸುಗಮ ಸಂಚಾರಕ್ಕಾಗಿ ನಿರಂತರವಾಗಿ ಕಾರ್ಯಾಚರಣೆ ನಡೆಯಲಿದೆ ಎಂದು ಕೇಂದ್ರ ನಗರ ಪಾಲಿಕೆ ಆಯುಕ್ತ ಜಿ. ಜಗದೀಶ್ ತಿಳಿಸಿದರು.ಮಂಗಳವಾರ ನಡೆದ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ 8 ರಸ್ತೆಗಳಲ್ಲಿ 6.30 ಕಿ.ಮೀ. ಪಾದಚಾರಿ ಮಾರ್ಗದ ಒತ್ತುವರಿ ತೆರವು ಮಾಡಲಾಗಿದೆ. 40 ಕಾರ್ಮಿಕರು, 4 ಜೆಸಿಬಿಗಳು, 10 ಟ್ರ್ಯಾಕ್ಟರ್ ಹಾಗೂ 3 ಟಿಪ್ಪರ್ಗಳನ್ನು ಬಳಸಲಾಗಿದೆ. 63 ಪೆಟ್ಟಿಗೆ ಅಂಗಡಿಗಳು, 57 ತಳ್ಳುವ ಗಾಡಿಗಳು, 8 ಶೀಟ್/ಚಾವಣಿ, 14 ರ್ಯಾಂಪ್ಸ್/ ಮೆಟ್ಟಿಲು, 9 ಶೆಡ್ಗಳು, 37 ಜಾಹೀರಾತು/ ನಾಮ ಫಲಕಗಳನ್ನು ಹಾಗೂ 36.5 ಟನ್ ಕಟ್ಟಡ ತ್ಯಾಜ್ಯ, ಇತರೆ ತ್ಯಾಜ್ಯಗಳನ್ನು ತೆರವುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ 12.67 ಕಿ.ಮೀ. ಪಾದಚಾರಿ ಮಾರ್ಗದಲ್ಲಿ ಒತ್ತುವರಿ ತೆರವು ಮಾಡಲಾಗಿದ್ದು, 26 ಪೆಟ್ಟಿಗೆ ಶಾಪ್, 40 ತಳ್ಳುಗಾಡಿ, 50ಕ್ಕೂ ಹೆಚ್ಚು ಎಸಿ ಶೀಟ್ಸ್ ಪ್ರೊಜೆಕ್ಷನ್ಸ್, 36 ಮೆಟ್ಟಿಲು ಮತ್ತು ರ್ಯಾಂಪ್, 70ಕ್ಕೂ ಹೆಚ್ಚು ಜಾಹೀರಾತು ಪಿಲ್ಲರ್ ಮತ್ತು ಬೋರ್ಡ್ಗಳು, 3 ತಾತ್ಕಾಲಿಕ/ ಶಾಶ್ವತ ಶೆಡ್, 9 ಟನ್ಗೂ ಹೆಚ್ಚು ಕಟ್ಟಡ ತ್ಯಾಜ್ಯ ತೆರವುಗೊಳಿಸಲಾಗಿದೆ ಎಂದು ಆಯುಕ್ತ ಡಾ.ರಾಜೇಂದ್ರ ಕೆ.ವಿ. ತಿಳಿಸಿದರು.ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಂಗಳವಾರ 13.40 ಕಿ.ಮೀ. ಪಾದಚಾರಿ ಮಾರ್ಗ ಅತಿಕ್ರಮಣ ಮುಕ್ತಗೊಳಿಸಲಾಗಿದ್ದು, 26 ಅಂಗಡಿ/ಪೆಟ್ಟಿಗೆ ಅಂಗಡಿ, 31 ತಳ್ಳುವ ಗಾಡಿ, 118 ಶೀಟ್ಗಳು/ಕೆನೋಪಿಗಳು/ ಚಾವಣಿ, 106 ಮೆಟ್ಟಿಲುಗಳು ಹಾಗೂ ರ್ಯಾಂಪ್, 87 ಜಾಹೀರಾತು ಫಲಕ, 6 ತಾತ್ಕಾಲಿಕ/ಶಾಶ್ವತ ಶೆಡ್, 78 ಟನ್ ತ್ಯಾಜ್ಯ, ಮಣ್ಣು ತೆರವುಗೊಳಿಸಲಾಯಿತು. 8 ಜೆಸಿಬಿಗಳು, 28 ಟ್ರ್ಯಾಕ್ಟರ್ 3 ಇತರೆ ಯಂತ್ರಗಳು ಹಾಗೂ 133 ಸಿಬ್ಬಂದಿ ಮತ್ತು ಕಾರ್ಮಿಕರನ್ನು ನಿಯೋಜಿಸಲಾಗಿತ್ತು ಎಂದು ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಹೇಳಿದರು.ಈ ಕಾರ್ಯಾಚರಣೆಗಾಗಿ ಒಟ್ಟು 180ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಕಾರ್ಮಿಕರನ್ನು ನಿಯೋಜಿಸಲಾಗಿತ್ತು. ಪಾದಚಾರಿ ಮಾರ್ಗದಲ್ಲಿದ್ದ ಅನಧಿಕೃತ ಶೆಡ್ಗಳು, ಕಾಂಕ್ರೀಟ್ ಮೆಟ್ಟಿಲು ಹಾಗೂ ಒತ್ತುವರಿಗಳನ್ನು ತೆರವುಗೊಳಿಸಲು 8 ಜೆಸಿಬಿ ಯಂತ್ರಗಳನ್ನು ಮತ್ತು ತ್ಯಾಜ್ಯ ಸಾಗಿಸಲು 12 ಟ್ರ್ಯಾಕ್ಟರ್ಗಳನ್ನು ಬಳಸಿಕೊಳ್ಳಲಾಗಿತ್ತು ಎಂದರು.ಕಟ್ಟಡ ತ್ಯಾಜ್ಯ ತೆರವಿಗೆ ಅಭಿಯಾನ‘ನಗರದ ಹೊರ ವಲಯದ ರಸ್ತೆಗಳಲ್ಲಿ ಕಟ್ಟಡ ನಿರ್ಮಾಣ ತ್ಯಾಜ್ಯ (ಡೆಬ್ರಿಸ್) ಸುರಿಯಲಾಗಿದ್ದು, ಅದರ ಮೇಲೆಲ್ಲ ಕಳೆ ಬೆಳೆದಿದೆ. ಇದನ್ನು ತೆರವು ಮಾಡಲು ನಗರ ಪಾಲಿಕೆ, ನಮ್ಮ ಮೆಟ್ರೊ, ಕೆ–ರೈಡ್, ರೈಲ್ವೆ ಇಲಾಖೆಯ ಸಮನ್ವಯದೊಂದಿಗೆ ಅಭಿಯಾನ ನಡೆಸಬೇಕು’ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.ಅಧಿಕಾರಿಗಳೊಂದಿಗೆ ಮಂಗಳವಾರ ಸಭೆ ನಡೆಸಿದ ಅವರು, ‘ನಗರದ ಒಳಭಾಗಕ್ಕಿಂತ ಹೊರವಲಯದಲ್ಲಿ ಡೆಬ್ರಿಸ್ ಸಮಸ್ಯೆ ಹೆಚ್ಚಿದೆ. ಇದರಲ್ಲಿ ನಮ್ಮ ಮೆಟ್ರೊ ಹಾಗೂ ಕೆ–ರೈಡ್ ಅವರ ಪಾಲೂ ಇದೆ. ಅವರೊಂದಿಗೆ ಶುಕ್ರವಾರ ಸಭೆ ನಡೆಸಿ ತೆರವಿಗೆ ಸೂಚಿಸಲಾಗುವುದು’ ಎಂದರು.‘ರೈಲು ಹಳಿಗಳ ಸುತ್ತಲೂ ಡೆಬ್ರಿಸ್ ಬಿದ್ದಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಸಚಿವರ ಗಮನ ಸೆಳೆದಿದ್ದೇನೆ. ರೈಲ್ವೆ ಅಧಿಕಾರಿಗಳು ತೆರವಿಗೆ ಸಮ್ಮತಿಸಿದ್ದು, ನಗರ ಪಾಲಿಕೆಗಳ ಸಹಕಾರ ಬೇಕಿದೆ. ಒಂದು ಬಾರಿ ತೆರವು ಮಾಡಿದರೂ ಮತ್ತೆ ಹಾಕುತ್ತಾರೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಬಗ್ಗೆ ನಮ್ಮ ವ್ಯವಸ್ಥೆ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಿದರೆ, ಡೆಬ್ರಿಸ್ ಮರುಕಳಿಸದಂತೆ ತಡೆಯಬಹುದು’ ಎಂದರು.ಐದು ನಗರದ ಪಾಲಿಕೆಗಳ ವ್ಯಾಪ್ತಿಯಲ್ಲಿ ವಾರಸುದಾರರಿಲ್ಲದ 1,518 ವಾಹನಗಳು ಪತ್ತೆಯಾಗಿದ್ದು, ಅವುಗಳ ತೆರವಿಗೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.