ಯಲಹಂಕ ಶಾಲೆಯಲ್ಲಿ ವಿದ್ಯಾರ್ಥಿ ಸಾವು: ಪೋಷಕರಿಂದ ಪ್ರತಿಭಟನೆ
ಬೆಂಗಳೂರು: ಯಲಹಂಕ ಸಮೀಪದ ಕಾಡಯರಪ್ಪನಹಳ್ಳಿ ಸ್ಟರ್ಲಿಂಗ್ ಇಂಗ್ಲಿಷ್ ವಸತಿಶಾಲೆಯ 6ನೇ ತರಗತಿ ವಿದ್ಯಾರ್ಥಿ ಗುರುಕಿರಣ್ (12) ಬುಧವಾರ ಅನುಮಾನಾಸ್ಪದವಾಗಿಮೃತಪಟ್ಟಿದ್ದು, ವಿದ್ಯಾರ್ಥಿಯ ಪೋಷಕರು ಹಾಗೂ ಸಂಬಂಧಿಕರು ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿದರು.ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಶಾಲಾ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.‘ಗುರುಕಿರಣ್ ಮೇಲ

ಬೆಂಗಳೂರು: ಯಲಹಂಕ ಸಮೀಪದ ಕಾಡಯರಪ್ಪನಹಳ್ಳಿ ಸ್ಟರ್ಲಿಂಗ್ ಇಂಗ್ಲಿಷ್ ವಸತಿಶಾಲೆಯ 6ನೇ ತರಗತಿ ವಿದ್ಯಾರ್ಥಿ ಗುರುಕಿರಣ್ (12) ಬುಧವಾರ ಅನುಮಾನಾಸ್ಪದವಾಗಿಮೃತಪಟ್ಟಿದ್ದು, ವಿದ್ಯಾರ್ಥಿಯ ಪೋಷಕರು ಹಾಗೂ ಸಂಬಂಧಿಕರು ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿದರು.ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಶಾಲಾ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.‘ಗುರುಕಿರಣ್ ಮೇಲೆ ದೈಹಿಕ ಶಿಕ್ಷಣ ಶಿಕ್ಷಕ ಹಲ್ಲೆ ನಡೆಸಿದ್ದಾರೆ. ಆ ಶಿಕ್ಷಕನನ್ನೇ ಸುಟ್ಟು ಹಾಕುತ್ತೇವೆ’ ಎಂದು ಪೋಷಕರು ಹಾಗೂ ಕುಟುಂಬಸ್ಥರು ಆಕ್ರೋಶ ಹೊರಹಾಕಿದರು. ಬಳಿಕ, ಸ್ಥಳಕ್ಕೆ ಬಂದ ಪೊಲೀಸರು ಲಾಠಿ ಬೀಸಿ ಪರಿಸ್ಥಿತಿ ತಿಳಿಗೊಳಿಸಿದರು.ಮೃತ ಗುರುಕಿರಣ್ ಯಲಹಂಕ ತಾಲ್ಲೂಕಿನ ಸುಬೇದಾರ್ ಪಾಳ್ಯದ ರಾಘವೇಂದ್ರ ಅವರ ಪುತ್ರ.‘ಗುರುಕಿರಣ್ಗೆ ಹುಷಾರಿಲ್ಲ. ಆಸ್ಪತ್ರೆಗೆ ಕರೆದೊಯ್ಯಲಾಗಿದೆ’ ಎಂದು ವಸತಿ ಶಾಲೆಯ ಶಿಕ್ಷಕ ರೊಬ್ಬರು ಪೋಷಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಪೋಷಕರು ಆಸ್ಪತ್ರೆಗೆ ಬರುವಷ್ಟರಲ್ಲಿ ಗುರುಕಿರಣ್ ಮೃತಪಟ್ಟಿದ್ದ. ವಿದ್ಯಾರ್ಥಿ ಸಾವು ಅನುಮಾನಾಸ್ಪದವಾಗಿದ್ದು, ವಸತಿ ಶಾಲೆಯ ಶಿಕ್ಷಕರೇ ಮಗನ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದರು.ಹಲ್ಲೆಯೇ ಕಾರಣ–ಪೋಷಕರ ಆರೋಪ: ಗುರುಕಿರಣ್ ಮೇಲೆ ದೈಹಿಕ ಶಿಕ್ಷಣ ಶಿಕ್ಷಕ ಹಲ್ಲೆ ನಡೆಸಿದ್ದರಿಂದಲೇ ಪುತ್ರ ಮೃತಪಟ್ಟಿದ್ದಾನೆ ಎಂದು ಪೋಷಕರು ಆರೋಪಿಸಿದರು. ಆಕ್ರೋಶಗೊಂಡ ಪೋಷಕರು ಹಾಗೂ ಕುಟುಂಬಸ್ಥರು ಶಿಕ್ಷಕ ನಾರಾಯಣ ಗೌಡ ಮೇಲೆ ಹಲ್ಲೆ ನಡೆಸಿದರು. ‘ಶಿಕ್ಷಕನ ಮೇಲೆ ಪೆಟ್ರೋಲ್ ಸುರಿದು ಸುಟ್ಟುಹಾಕುತ್ತೇವೆ. ನಮಗೆ ಒಪ್ಪಿಸಿ’ ಎಂದು ಪಟ್ಟು ಹಿಡಿದರು. ಆಗ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಷ್ಟರಲ್ಲಿ ನಾರಾಯಣ ಗೌಡ ತಪ್ಪಿಸಿಕೊಂಡು ಓಡಿದರು. ಅವರನ್ನು ಹಿಂಬಾಲಿಸಿ ಹಿಡಿದು ಅಲ್ಲಿಯೂ ಥಳಿಸಿದರು. ಬಳಿಕ, ಮಧ್ಯೆ ಪ್ರವೇಶಿಸಿದ ಬಾಗಲೂರು ಪೊಲೀಸರು, ನಾರಾಯಣ ಗೌಡ ಅವರನ್ನು ರಕ್ಷಿಸಿ ಪೊಲೀಸ್ ವಾಹನಕ್ಕೆ ಹತ್ತಿಸಿದ್ದರು.ಆಗ ಪೊಲೀಸ್ ವಾಹನಕ್ಕೆ ಅಡ್ಡಲಾಗಿ ಕುಳಿತು ಪೋಷಕರು ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸಿದರು. ನಾರಾಯಣ ಗೌಡ ಅವರನ್ನು ವಶಕ್ಕೆ ನೀಡುವಂತೆ ಪಟ್ಟು ಹಿಡಿದರು. ಅಲ್ಲದೇ, ದೈಹಿಕ ಶಿಕ್ಷಕನನ್ನು ಸಾಯಿಸುವವರೆಗೂ ಇಲ್ಲಿಂದ ಹೋಗುವುದಿಲ್ಲ. ಮಗನ ಸಾವಿಗೆ ಆತನೇ ಕಾರಣ ಎಂದು ತಂದೆ ರಾಘವೇಂದ್ರ ಆಪಾದಿಸಿದರು.ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಸ್ಥಳಕ್ಕೆ ಡಿಸಿಪಿ ಮಿಥುನ್ ಕುಮಾರ್ ಹಾಗೂ ಎಸಿಪಿ ಶ್ರೀಹರ್ಷ ಸ್ಥಳಕ್ಕೆ ಬಂದು ಪ್ರತಿಭಟನಕಾರರ ಮನವೊಲಿಸಿದರು.‘ಮರಣೋತ್ತರ ಪರೀಕ್ಷೆಯ ವರದಿ ಬಂದ ಮೇಲೆ ಸಾವಿಗೆ ಕಾರಣ ಗೊತ್ತಾಗಲಿದೆ. ಪೋಷಕರು ನೀಡಿದ ದೂರಿನ ಮೇಲೆ ದೈಹಿಕ ಶಿಕ್ಷಣ ಶಿಕ್ಷಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು. ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಗಿತ್ತು. ಅಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.ಮೈದಾನದಲ್ಲಿ ಕುಸಿದು ಬಿದ್ದಿದ್ದ ವಿದ್ಯಾರ್ಥಿ?‘ಬುಧವಾರವೂ ಬೆಳಿಗ್ಗೆ 5ಕ್ಕೆ ಎದ್ದಿದ್ದೆವು. ಮೈದಾನಕ್ಕೆ ಬರುವುದಕ್ಕೂ ಮುನ್ನ ಗುರುಕಿರಣ್ ಶೌಚಾಲಯಕ್ಕೆ ತೆರಳಿದ್ದ. ಮೈದಾನಕ್ಕೆ ಬರದೇ ಶೌಚಾಲಯಕ್ಕೆ ಹೋಗಿದ್ದಕ್ಕೆ ಶಿಕ್ಷಕ ನಾರಾಯಣ ಗೌಡ ಹೊಡೆದರು. ಅಲ್ಲದೇ ಮೈದಾನಕ್ಕೆ ಕರೆಸಿ ಎರಡು ಸುತ್ತು ಹಾಕುವಂತೆ ಸೂಚಿಸಿದರು. ಮೈದಾನದಲ್ಲಿ ಓಡುವಾಗ ಗುರುಕಿರಣ್ ಕುಸಿದು ಬಿದ್ದ. ಅದಾದ ಮೇಲೆ ಆಸ್ಪತ್ರೆಗೆ ಕರೆದೊಯ್ಯ ಲಾಯಿತು ಎಂಬುದಾಗಿ ಗುರುಕಿರಣ್ ಸ್ನೇಹಿತ ತಿಳಿಸಿದ್ದಾನೆ. ದೈಹಿಕ ಶಿಕ್ಷಣ ಶಿಕ್ಷಕರೇ ಮಗನ ಸಾವಿಗೆ ಕಾರಣ’ ಎಂದು ವಿದ್ಯಾರ್ಥಿ ತಂದೆ ರಾಘವೇಂದ್ರ ಹಾಗೂ ಸಂಬಂಧಿ ಮಲ್ಲಿಕಾರ್ಜುನ್ ದೂರಿದರು.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260709-51-43429088