ವಿಂಬಲ್ಡನ್: ಸಿನ್ನರ್–ಜೊಕೊ ಮುಖಾಮುಖಿ
ಲಂಡನ್: ದಿಗ್ಗಜ ಆಟಗಾರ ನೊವಾಕ್ ಜೊಕೊವಿಚ್ ಅವರು ಮಂಗಳವಾರ ತಡರಾತ್ರಿಯವರೆಗೆ ನಡೆದ ಸಮಬಲದ ಹಣಾಹಣಿಯಲ್ಲಿ ಕೆನಡಾದ ಫಿಲಿಕ್ಸ್ ಊಜರ್ ಆ್ಯಲಿಯಾಸಿಮ್ ವಿರುದ್ಧ ರೋಚಕ ಜಯ ಸಾಧಿಸಿದರು. ಅದರೊಂದಿಗೆ, ವಿಂಬಲ್ಡನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಸೆಮಿಫೈನಲ್ನಲ್ಲಿ ಅಗ್ರ ಶ್ರೇಯಾಂಕದ ಯಾನಿಕ್ ಸಿನ್ನರ್ ವಿರುದ್ಧ ಸೆಣಸಾಡಲು ವೇದಿಕೆ ಸಿದ್ಧಪಡಿಸಿಕೊಂಡರು.ಆಲ್

ಲಂಡನ್: ದಿಗ್ಗಜ ಆಟಗಾರ ನೊವಾಕ್ ಜೊಕೊವಿಚ್ ಅವರು ಮಂಗಳವಾರ ತಡರಾತ್ರಿಯವರೆಗೆ ನಡೆದ ಸಮಬಲದ ಹಣಾಹಣಿಯಲ್ಲಿ ಕೆನಡಾದ ಫಿಲಿಕ್ಸ್ ಊಜರ್ ಆ್ಯಲಿಯಾಸಿಮ್ ವಿರುದ್ಧ ರೋಚಕ ಜಯ ಸಾಧಿಸಿದರು. ಅದರೊಂದಿಗೆ, ವಿಂಬಲ್ಡನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಸೆಮಿಫೈನಲ್ನಲ್ಲಿ ಅಗ್ರ ಶ್ರೇಯಾಂಕದ ಯಾನಿಕ್ ಸಿನ್ನರ್ ವಿರುದ್ಧ ಸೆಣಸಾಡಲು ವೇದಿಕೆ ಸಿದ್ಧಪಡಿಸಿಕೊಂಡರು.ಆಲ್ ಇಂಗ್ಲೆಂಡ್ ಕ್ಲಬ್ನ ಸೆಂಟರ್ ಕೋರ್ಟ್ನಲ್ಲಿ ನಡೆದ ಪಂದ್ಯದಲ್ಲಿ ಜೊಕೊವಿಚ್ 7–6 (12–10), 3–6, 6–3, 6–7 (4–7), 7–6 (10–4)ರಿಂದ ಮೂರನೇ ಶ್ರೇಯಾಂಕದ ಆಟಗಾರನ ಸವಾಲನ್ನು ಮೆಟ್ಟಿನಿಂತರು. 5 ಗಂಟೆ 15 ನಿಮಿಷಗಳವರೆಗೆ ಸಾಗಿದ ಈ ಪಂದ್ಯವು ಟೂರ್ನಿಯ ಇತಿಹಾಸದಲ್ಲಿ ಸುದೀರ್ಘ ಕ್ವಾರ್ಟರ್ಫೈನಲ್ ಪಂದ್ಯ ಎನಿಸಿತು.39 ವರ್ಷ ವಯಸ್ಸಿನ ‘ಜೊಕೊ’ ಸ್ನಾಯು ಸೆಳೆತದ ನಡುವೆಯೂ ಸ್ವಲ್ಪವೂ ಉತ್ಸಾಹ ಕಳೆದಕೊಳ್ಳಲಿಲ್ಲ. ‘ಈ ವಯಸ್ಸಲ್ಲೂ 14 ವರ್ಷ ಕಿರಿಯ ವಯಸ್ಸಿನ ಆಟಗಾರರನ್ನು ಸೋಲಿಸಿದ್ದು ಅಚ್ಚರಿ ಮೂಡಿಸಿತು’ ಎಂದು ಅವರು ಪಂದ್ಯದ ನಂತರ ಪ್ರತಿಕ್ರಿಯಿಸಿದರು. ದಾಖಲೆಯ 25ನೇ ಗ್ರ್ಯಾನ್ಸ್ಲಾಮ್ ಗೆಲ್ಲಲು ಶತಪ್ರಯತ್ನ ಹಾಕುತ್ತಿರುವ ಸರ್ಬಿಯಾದ ತಾರೆ, ನಾಲ್ಕರ ಘಟ್ಟದಲ್ಲಿ ಸಿನ್ನರ್ ಅವರ ಸವಾಲನ್ನು ಮೆಟ್ಟಿನಿಲ್ಲುವರೇ ಎಂಬ ಕುತೂಹಲ ಟೆನಿಸ್ ಪ್ರೇಮಿಗಳಲ್ಲಿದೆ.ಉಕ್ರೇನ್ನ ಮಾರ್ತಾ ಕೊಸ್ತಯುಕ್ ಹಾಗೂ ಜೆಕ್ ಗಣರಾಜ್ಯದ ಲಿಂಡಾ ನೊಸ್ಕೊವಾ ಅವರು ಮಹಿಳೆಯರ ಸಿಂಗಲ್ಸ್ನಲ್ಲಿ ನಾಲ್ಕರ ಘಟ್ಟಕ್ಕೆ ಮುನ್ನಡೆ ದರು. ಸೆಂಟರ್ ಕೋರ್ಟ್ನಲ್ಲಿ ಬುಧವಾರ ನಡೆದ ಕ್ವಾರ್ಟರ್ಫೈನಲ್ನಲ್ಲಿ ಮಾರ್ತಾ 6–3, 6–2ರಿಂದ ನೇರ ಸೆಟ್ಗಳಲ್ಲಿ ಇಟಲಿಯ ಜಾಸ್ಮಿನ್ ಪಾವೊಲಿನಿ ಅವರನ್ನು ಸೋಲಿಸಿದರು. ಲಿಂಡಾ 6–3, 7–5ರಿಂದ ಬೆಲ್ಜಿಯಂನ ಅನುಭವಿ ಆಟಗಾರ್ತಿ ಎಲೀಸಾ ಮೆರ್ಟೆನ್ಸ್ ಅವರನ್ನು ಹಿಮ್ಮೆಟ್ಟಿಸಿದರು.ಜ್ವರೇವ್ ಮುನ್ನಡೆ: ಎರಡನೇ ಶ್ರೇಯಾಂಕದ ಆಟಗಾರ ಜ್ವರೇವ್ ಅವರು 6–4, 6–4, 6–2ರಿಂದ ನೇರಸೆಟ್ಗಳಲ್ಲಿ ಅಮೆರಿಕದ ಟೇಲರ್ ಫ್ರಿಟ್ಝ್ ಅವರನ್ನು ಮಣಿಸಿ, ನಾಲ್ಕರ ಘಟ್ಟ ಪ್ರವೇಶಿಸಿದರು. ವಿಂಬಲ್ಡನ್ನಲ್ಲಿ 9 ವರ್ಷಗಳಿಂದ ಸ್ಪರ್ಧಿಸುತ್ತಿರುವ ಅವರು ಈ ಹಿಂದೆ ಎಂದೂ 16ರ ಘಟ್ಟ ದಾಟಿರಲಿಲ್ಲ.ಇಲ್ಲಿ ಆರನೇ ಶ್ರೇಯಾಂಕ ಪಡೆದಿರುವ ಫ್ರಿಟ್ಝ್ ಅವರು ಎರಡು ವರ್ಷಗಳಲ್ಲಿ ನಡೆದ ಎಂಟು ಮುಖಾಮುಖಿಗಳಲ್ಲಿ ಮೊದಲ ಸಲ ಜರ್ಮನಿಯ ಆಟಗಾರನ ಎದುರು ಪರಾಭವಗೊಂಡರು.ಜ್ವರೇವ್ ಅವರು ಸೆಮಿಫೈನಲ್ನಲ್ಲಿಆತಿಥೇಯ ಬ್ರಿಟನ್ನ ಆರ್ಥರ್ ಫೆರಿ ಅವರನ್ನು ಎದುರಿಸಲಿದ್ದಾರೆ. ವೈಲ್ಡ್ಕಾರ್ಡ್ ಪ್ರವೇಶ ಪಡೆದ ಫೆರಿ ಸೆಂಟರ್ಕೋರ್ಟ್ನಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 6–4, 7–6 (7–4), 6–0 ಯಿಂದ ಇಟಲಿಯ ಫ್ಲಾವಿಯೊ ಕೊಬೊಲ್ಲಿ ಅವರನ್ನು ಸೋಲಿಸಿದರು.ಆ ಮೂಲಕ, ವಿಂಬಲ್ಡನ್ನಲ್ಲಿ ಕಳೆದ 25 ವರ್ಷಗಳಲ್ಲಿ ವೈಲ್ಡ್ಕಾರ್ಡ್ ಪಡೆದ ಆಟಗಾರನೊಬ್ಬ ಇದೇ ಮೊದಲ ಬಾರಿ ಪುರುಷರ ಸಿಂಗಲ್ಸ್ ಸೆಮಿಫೈನಲ್ ತಲುಪಿದಂತಾಗಿದೆ. ಸ್ಪರ್ಧೆಯಲ್ಲಿ ಉಳಿದಿರುವ ಆತಿಥೇಯ ರಾಷ್ಟ್ರದ ಏಕೈಕ ಆಟಗಾರ ಫೆರಿ ಅವರು ನಿರೀಕ್ಷೆಯಂತೆ ಪ್ರೇಕ್ಷಕರ ಒಕ್ಕೊರಲ ಬೆಂಬಲ ಪಡೆದರು.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260709-4-614129742