ಟಿ20 ಸರಣಿ: ಶ್ರೇಯಸ್ ಪಡೆಗೆ ಸರಣಿ ಸೋಲಿನ ಭೀತಿ
ಬ್ರಿಸ್ಟಲ್ : ಆಯ್ಕೆ ಪ್ರಕ್ರಿಯೆ ಯಲ್ಲಿ ಆಗಿರುವ ಗೊಂದಲಗಳು ಮತ್ತು ಇಂಗ್ಲೆಂಡ್ ನೆಲದ ಹವಾಮಾನಕ್ಕೆ ಒಗ್ಗಿಕೊಳ್ಳುವ ಸವಾಲುಗಳ ನಡುವೆ ಭಾರತ ತಂಡವು ಟಿ20 ಸರಣಿ ಸೋಲಿನ ಅಂಚಿಗೆ ಬಂದು ನಿಂತಿದೆ.ಗುರುವಾರ ಇಲ್ಲಿ ನಡೆಯಲಿರುವ ನಾಲ್ಕನೇ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಬಳಗವು ಕಣಕ್ಕಿಳಿಯಲಿದೆ. ಆತಿಥೇಯ ಇಂಗ್ಲೆಂಡ್ ಎದುರಿನ ಐದು ಪಂದ್ಯಗಳ ಸರಣಿಯಲ್ಲಿ ಭಾರತ ತಂಡವು 0–2ರ ಹಿ

ಬ್ರಿಸ್ಟಲ್ : ಆಯ್ಕೆ ಪ್ರಕ್ರಿಯೆ ಯಲ್ಲಿ ಆಗಿರುವ ಗೊಂದಲಗಳು ಮತ್ತು ಇಂಗ್ಲೆಂಡ್ ನೆಲದ ಹವಾಮಾನಕ್ಕೆ ಒಗ್ಗಿಕೊಳ್ಳುವ ಸವಾಲುಗಳ ನಡುವೆ ಭಾರತ ತಂಡವು ಟಿ20 ಸರಣಿ ಸೋಲಿನ ಅಂಚಿಗೆ ಬಂದು ನಿಂತಿದೆ.ಗುರುವಾರ ಇಲ್ಲಿ ನಡೆಯಲಿರುವ ನಾಲ್ಕನೇ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಬಳಗವು ಕಣಕ್ಕಿಳಿಯಲಿದೆ. ಆತಿಥೇಯ ಇಂಗ್ಲೆಂಡ್ ಎದುರಿನ ಐದು ಪಂದ್ಯಗಳ ಸರಣಿಯಲ್ಲಿ ಭಾರತ ತಂಡವು 0–2ರ ಹಿನ್ನಡೆಯಲ್ಲಿದೆ. ಮಂಗಳವಾರ ರಾತ್ರಿ ನಡೆದಿದ್ದ ಪಂದ್ಯದಲ್ಲಿ ಶ್ರೇಯಸ್ ಪಡೆಯು 125 ರನ್ಗಳ ಹೀನಾಯ ಸೋಲು ಅನುಭವಿಸಿತ್ತು. ಇದರಿಂದಾಗಿ ಇನ್ನುಳಿದಿರುವ ಎರಡೂ ಪಂದ್ಯಗಳನ್ನು ಗೆದ್ದು ಸರಣಿ ಸಮ ಮಾಡಿಕೊಳ್ಳುವ ಅವಕಾಶವಷ್ಟೇ ಭಾರತಕ್ಕೆ ಉಳಿದಿದೆ. ಆತಿಥೇಯ ಇಂಗ್ಲೆಂಡ್ ತಂಡವು ಈ ಎರಡು ಹಣಾಹಣಿಗಳಲ್ಲಿ ಒಂದರಲ್ಲಿ ಗೆದ್ದರೂ ಸರಣಿ ಕಿರೀಟ ಧರಿಸಲಿದೆ.ಅಲ್ಲದೇ ಅನುಭವಿ ಸಂಜು ಸ್ಯಾಮ್ಸನ್ ಅವರನ್ನು 11ರ ಬಳಗದಲ್ಲಿ ಕಣಕ್ಕಿಳಿಸುವ ಕುರಿತ ಗೊಂದಲವೂ ಪರಿಹಾರವಾಗಿಲ್ಲ.ಅವರು ಐರ್ಲೆಂಡ್ ಎದುರಿನ ಸರಣಿ ಮತ್ತು ಇಂಗ್ಲೆಂಡ್ ಎದುರಿನ ಒಂದು ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದರು.ಆದ್ದರಿಂದ ಅವರನ್ನು ಕಳೆದೆರಡು ಪಂದ್ಯಗಳಲ್ಲಿ ಕೈಬಿಡಲಾಗಿತ್ತು.ಅವರ ಬದಲಿಗೆ 15 ವರ್ಷದ ‘ಸ್ಫೋಟಕ ಶೈಲಿ’ಯ ಬ್ಯಾಟರ್ ವೈಭವ್ ಸೂರ್ಯವಂಶಿ ಅವರನ್ನು ಕಣಕ್ಕಿಳಿಸ ಲಾಗಿತ್ತು. ಆದರೆ ಅವರಿಂದ ನಿರೀಕ್ಷಿತ ಆಟ ಮೂಡಿಬಂದಿಲ್ಲ. ಅವರು ಕೂಡ ತಂಡದ ಉಳಿದ ಆಟಗಾರರಂತೆ ಬ್ಯಾಟಿಂಗ್ನಲ್ಲಿ ಸಫಲರಾಗಿಲ್ಲ. ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಸಂಜು ಅವರ ವೃತ್ತಿ ಬದುಕು ಹಲವು ಏರಿಳಿತಗಳನ್ನು ಕಂಡಿದೆ.ನಾಯಕನಾಗಿ ತಂಡಕ್ಕೆ ಮರಳಿ ಬಂದಿರುವ ಶ್ರೇಯಸ್ ಅವರನ್ನು ಸೋಲಿನ ಹೊಣೆಗಾರ ರನ್ನಾಗಿ ಮಾಡುವುದು ಅಷ್ಟೇನೂ ಸಮಂಜಸವಲ್ಲ. ನಾಯಕನಾದ ನಂತರ ಪಂದ್ಯ ಗೆಲ್ಲುವ ಕನಸು ಅವರಿಗಿನ್ನೂ ಕೈಗೂಡಿಲ್ಲ. ದೀರ್ಘ ಅವಧಿಯ ನಂತರ ತಂಡಕ್ಕೆ ಮರಳಿದ ಅವರಿಗೆ ನಾಯಕತ್ವ ನೀಡುವ ಅಚ್ಚರಿ ನಿರ್ಧಾರ ಕೈಗೊಂಡ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಮತ್ತು ಕೋಚ್ ಗೌತಮ್ ಗಂಭೀರ್ ಅವರೇ ಹೊಣೆ ಹೊರಬೇಕಿದೆ.ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ನಾಯಕತ್ವ ವಹಿಸಿದ್ದ ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆಗೆ ಪರಿಗಣಿಸಿರಲಿಲ್ಲ. ಇದರಿಂದಾಗಿಯೇ ಆಯ್ಕೆ ಸಮಿತಿಯು ತೀವ್ರ ಟೀಕೆಗೆ ಗುರಿಯಾಗಿದೆ. ಭಾರತ ತಂಡದ ಈ ಸೋಲುಗಳಿಗೆ ಪ್ರಮುಖವಾಗಿ ಬ್ಯಾಟಿಂಗ್ ವೈಫಲ್ಯವೇ ಕಾರಣವಾಗಿದೆ. ಅಭಿಷೇಕ್ ಶರ್ಮಾ ಮತ್ತು ವೈಭವ್ ಅವರ ಜೋಡಿಯು ಉತ್ತಮ ಆರಂಭ ನೀಡಿಲ್ಲ. ಉಪನಾಯಕ ತಿಲಕ್ ವರ್ಮಾ ಅವರಿಂದಲೂ ರನ್ಗಳು ದಾಖಲಾಗಿಲ್ಲ. ಆದ್ದರಿಂದ ಅವರು ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಇಶಾನ್ ಕಿಶನ್ ಬ್ಯಾಟಿಂಗ್ ಮತ್ತು ವಿಕೆಟ್ಕೀಪಿಂಗ್ ನಲ್ಲಿ ಒಂದಿಷ್ಟು ಬದ್ಧತೆ ತೋರಿರುವುದರಿಂದ ಸ್ಥಾನ ಉಳಿಸಿಕೊಳ್ಳಬಹುದು. ಶ್ರೇಯಸ್ ಬ್ಯಾಟಿಂಗ್ ಕೂಡ ಅಸ್ಥಿರವಾಗಿದೆ.ಮಂಗಳವಾರದ ಪಂದ್ಯದಲ್ಲಿ ಹರ್ಷಿತ್ ರಾಣಾ ಅವರಿಗೆ ಕ್ರಮಾಂಕದಲ್ಲಿ ಬಡ್ತಿ ನೀಡಿದ್ದು ಮತ್ತೊಂದು ಪ್ರಮಾದ ವಾಯಿತು. ‘ಫಿನಿಷರ್’ ಶಿವಂ ದುಬೆ ಅವರಿಗಿಂತಲೂ ಮೇಲಿನ ಕ್ರಮಾಂಕದಲ್ಲಿ ರಾಣಾ ಆಡಿದರು. ಇದರಿಂದಾಗಿ ತಂಡವು ಕೇವಲ 76 ರನ್ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತು. ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರು ಕೂಡ ನಿರೀಕ್ಷೆಗೆ ತಕ್ಕಂತೆ ಆಡಿಲ್ಲ.ಇಂಗ್ಲೆಂಡ್ ತಂಡವು ಆತ್ಮವಿಶ್ವಾಸ ದಲ್ಲಿದೆ. ಫಿಲ್ ಸಾಲ್ಟ್, ಜೋಸ್ ಬಟ್ಲರ್, ಜೇಕಬ್ ಬೆಥೆಲ್ ಅವರು ಉತ್ತಮ ಲಯದಲ್ಲಿದ್ದಾರೆ. ವೇಗಿ ಜೋಫ್ರಾ ಆರ್ಚರ್ ಕೂಡ ಅಮೋಘ ಫಾರ್ಮ್ನಲ್ಲಿದ್ದಾರೆ.ನೇರಪ್ರಸಾರ: ಸೋನಿ ಸ್ಪೋರ್ಟ್ಸ್ ಇಂಗ್ಲಿಷ್, ಹಿಂದಿ, ಕನ್ನಡ.125 ರನ್ಭಾರತ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅನುಭವಿಸಿದ ಅತಿ ದೊಡ್ಡ ಅಂತರದ ಸೋಲು. 2019ರಲ್ಲಿ ನ್ಯೂಜಿಲೆಂಡ್ ವಿರುದ್ಧ 80 ರನ್ಗಳ ಸೋಲು ಈ ಹಿಂದಿನ ದಾಖಲೆಯಾಗಿತ್ತು.76 ರನ್ಟಿ20 ಪಂದ್ಯಗಳಲ್ಲಿ ಭಾರತದ ಎರಡನೇ ಅತಿ ಕಡಿಮೆ ಮೊತ್ತ. 2008ರ ಜುಲೈನಲ್ಲಿ ಮೆಲ್ಬರ್ನ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ 74 ರನ್ಗಳಿಗೆ ಆಲೌಟ್ ಆಗಿದ್ದು ಅತಿ ಕಡಿಮೆ ಮೊತ್ತವಾಗಿದೆ.54ಕ್ಕೆ5ಆರು ಓವರ್ಗಳ ನಂತರ ಭಾರತದ ಮೊತ್ತ 5 ವಿಕೆಟ್ಗೆ 54. ಪವರ್ಪ್ಲೇ ಅವಧಿಯಲ್ಲಿ ಭಾರತ ಐದು ವಿಕೆಟ್ಗಳನ್ನು ಕಳೆದುಕೊಂಡಿದ್ದು ಇದೇ ಮೊದಲು.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260709-43-237744093