ಎರಡು ಮಹಾ ದುರಂತಗಳ ನಡುವೆ ನಿಂತ ಕನ್ನಡತಿ!
– ಕೆ.ಪಿ.ನಾಗರಾಜ್ ಕೆಲವು ಹುದ್ದೆಗಳು ಅಧಿಕಾರವನ್ನು ಕೊಡುತ್ತವೆ. ಇನ್ನೂ ಕೆಲವು ಹುದ್ದೆಗಳು ಜವಾಬ್ದಾರಿಯನ್ನು ಕೊಡುತ್ತವೆ. ಆದರೆ, ಕೆಲವೇ ಹುದ್ದೆಗಳು ಮನುಷ್ಯನನ್ನು ಪರೀಕ್ಷಿಸುತ್ತವೆ. ಜಿಲ್ಲಾಧಿಕಾರಿ ಎಂಬ ಹುದ್ದೆ ಅಂತಹದ್ದೇ. ಅದರಲ್ಲೂ ಪ್ರಕೃತಿ ವಿಕೋಪಗಳು ಪದೇ ಪದೇ ಎದುರಾಗುವ ಜಿಲ್ಲೆಯ ಜಿಲ್ಲಾಧಿಕಾರಿಯಾಗಿರುವುದು ಇನ್ನೂ ಕಠಿಣ. ವಯನಾಡು (Wayanad Landslide) ಜ

– ಕೆ.ಪಿ.ನಾಗರಾಜ್ ಕೆಲವು ಹುದ್ದೆಗಳು ಅಧಿಕಾರವನ್ನು ಕೊಡುತ್ತವೆ. ಇನ್ನೂ ಕೆಲವು ಹುದ್ದೆಗಳು ಜವಾಬ್ದಾರಿಯನ್ನು ಕೊಡುತ್ತವೆ. ಆದರೆ, ಕೆಲವೇ ಹುದ್ದೆಗಳು ಮನುಷ್ಯನನ್ನು ಪರೀಕ್ಷಿಸುತ್ತವೆ. ಜಿಲ್ಲಾಧಿಕಾರಿ ಎಂಬ ಹುದ್ದೆ ಅಂತಹದ್ದೇ. ಅದರಲ್ಲೂ ಪ್ರಕೃತಿ ವಿಕೋಪಗಳು ಪದೇ ಪದೇ ಎದುರಾಗುವ ಜಿಲ್ಲೆಯ ಜಿಲ್ಲಾಧಿಕಾರಿಯಾಗಿರುವುದು ಇನ್ನೂ ಕಠಿಣ. ವಯನಾಡು (Wayanad Landslide) ಜಿಲ್ಲಾಧಿಕಾರಿ ಮೇಘಶ್ರೀ ಡಿ.ಆರ್. (Meghashree D.R) ಅವರ ಸೇವೆಯ ಕಥೆಯನ್ನು ನೋಡಿದರೆ ಈ ಮಾತಿನ ಅರ್ಥ ಇನ್ನಷ್ಟು ಸ್ಪಷ್ಟವಾಗುತ್ತದೆ. 2024 ಮೇಘಾಶ್ರೀ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ಕೆಲವೇ ವಾರಗಳು. ಕಡತಗಳು, ಸಭೆಗಳು, ಇಲಾಖೆಗಳ ಪರಿಚಯ ಇನ್ನೂ ಪೂರ್ಣವಾಗುವ ಮೊದಲೇ ಮುಂಡಕ್ಕೈ–ಚೂರಲ್ಮಲದ ಬೆಟ್ಟಗಳು ಕುಸಿದವು. ಅದು ಸಾಮಾನ್ಯ ಭೂ ಕುಸಿತವಾಗಿರಲಿಲ್ಲ. ಇಡೀ ದೇಶವೇ ಬೆಚ್ಚಿಬಿದ್ದ ದುರಂತ. ನೂರಾರು ಕುಟುಂಬಗಳು ಕ್ಷಣಾರ್ಧದಲ್ಲಿ ಬದುಕಿನ ನೆಲೆಯನ್ನು ಕಳೆದುಕೊಂಡವು. ಆ ದಿನಗಳಲ್ಲಿ ವೈನಾಡ್ ಜಿಲ್ಲಾಧಿಕಾರಿ ಕಚೇರಿ ಒಂದು ಆಡಳಿತಾತ್ಮಕ ಕಚೇರಿಯಾಗಿರಲಿಲ್ಲ. ಅದು ರಕ್ಷಣಾ ಕಾರ್ಯಾಚರಣೆಯ ನಿಯಂತ್ರಣ ಕೇಂದ್ರವಾಗಿತ್ತು. ಒಂದು ಕಡೆ ಎನ್ಡಿಆರ್ಎಫ್. ಇನ್ನೊಂದು ಕಡೆ ಸೇನೆ. ಮೂರನೇ ಕಡೆ ಆರೋಗ್ಯ ಇಲಾಖೆ. ನಾಲ್ಕನೇ ಕಡೆ ಪೊಲೀಸರು. ಐದನೇ ಕಡೆ ಸ್ವಯಂಸೇವಕರು. ಈ ಎಲ್ಲರನ್ನು ಒಂದೇ ಗುರಿಯತ್ತ ಮುನ್ನಡೆಸಬೇಕಾದ ಹೊಣೆ ಜಿಲ್ಲಾಧಿಕಾರಿಯದು. ಆ ಸಮಯದಲ್ಲಿ ಮೇಘಶ್ರೀ ಅವರ ನಾಯಕತ್ವದ ದೊಡ್ಡ ಪರೀಕ್ಷೆ ಆರಂಭವಾಗಿತ್ತು. ರಕ್ಷಣಾ ಕಾರ್ಯಾಚರಣೆ ಮುಗಿಯಿತು. ಆದರೆ ಜಿಲ್ಲಾಧಿಕಾರಿಯ ಕೆಲಸ ಅಲ್ಲೇ ಮುಗಿಯಲಿಲ್ಲ. ಪರಿಹಾರ ಶಿಬಿರಗಳು, ಮೃತರ ಗುರುತು ಪತ್ತೆ, ಕುಟುಂಬಗಳಿಗೆ ಪರಿಹಾರ, ಮನೆ ಕಳೆದುಕೊಂಡವರ ಪುನರ್ವಸತಿ, ಶಾಲೆ ಕಳೆದುಕೊಂಡ ಮಕ್ಕಳಿಗೆ ಶಿಕ್ಷಣ. ರಸ್ತೆ, ವಿದ್ಯುತ್, ಕುಡಿಯುವ ನೀರು. ಒಂದು ಜಿಲ್ಲೆಯನ್ನು ಮತ್ತೆ ಬದುಕಿನ ಹಳಿಗೆ ತರುವುದು ತಿಂಗಳುಗಳ ಕೆಲಸ. ವಯನಾಡು ಆ ಹಾದಿಯಲ್ಲಿ ಸಾಗುತ್ತಿತ್ತು. ಇದನ್ನೂ ಓದಿ: ಮೂರನೇ ದಿನ.. ಭರವಸೆಯ ಕೊನೆಯ ಹೆಜ್ಜೆ! ಅಷ್ಟರಲ್ಲಿ… 2026 ಕಳ್ಳಾಡಿಯಲ್ಲಿ ಮತ್ತೆ ಬೆಟ್ಟ ಕುಸಿದಿದೆ. ಮತ್ತೆ ಅದೇ ಜಿಲ್ಲೆ. ಮತ್ತೆ ಅದೇ ಮಳೆ ಮತ್ತೆ ಅದೇ ಆತಂಕ. ಮತ್ತೆ ಅದೇ ಜಿಲ್ಲಾಧಿಕಾರಿ. ಇತಿಹಾಸ ತನ್ನನ್ನೇ ಮರುಕಳಿಸುತ್ತಿದೆಯೇ ಎನ್ನುವ ಭಾವ ಮೂಡಿಸುವ ದೃಶ್ಯಗಳು. ಒಬ್ಬ ಜಿಲ್ಲಾಧಿಕಾರಿಯ ವೃತ್ತಿಜೀವನದಲ್ಲಿ ಎರಡು ದೊಡ್ಡ ಪ್ರಕೃತಿ ವಿಕೋಪಗಳನ್ನು ಎದುರಿಸುವುದು ಅಪರೂಪ. ಆದರೆ ಮೇಘಶ್ರೀ ಅವರ ಪಾಲಿಗೆ ಅದು ಎರಡು ವರ್ಷಗಳ ಅಂತರದಲ್ಲೇ ಸಂಭವಿಸಿತು. ಇದು ಕೇವಲ ಆಡಳಿತದ ಅನುಭವವಲ್ಲ. ಮಾನಸಿಕ ಸ್ಥೈರ್ಯದ ಪರೀಕ್ಷೆ. ಪ್ರತಿ ದುರಂತದಲ್ಲೂ ಅಧಿಕಾರಿಯ ಮುಂದೆ ಒಂದೇ ಪ್ರಶ್ನೆ ನಿಂತಿರುತ್ತದೆ. “ಮೊದಲು ಯಾರನ್ನು ರಕ್ಷಿಸಬೇಕು?”, “ಯಾವ ತಂಡವನ್ನು ಎಲ್ಲಿಗೆ ಕಳುಹಿಸಬೇಕು?” “ಜನರಲ್ಲಿ ಭಯ ಹರಡದಂತೆ ಹೇಗೆ ಮಾಹಿತಿ ನೀಡಬೇಕು?”, “ರಕ್ಷಣಾ ಸಿಬ್ಬಂದಿಯ ಸುರಕ್ಷತೆಯನ್ನೂ ಹೇಗೆ ಕಾಪಾಡಬೇಕು?” ಇಂತಹ ನಿರ್ಧಾರಗಳಿಗೆ ಪುಸ್ತಕಗಳಲ್ಲಿ ಉತ್ತರ ಇರುವುದಿಲ್ಲ. ಆ ಕ್ಷಣದ ವಿವೇಕವೇ ಉತ್ತರವಾಗಬೇಕು. ಮೇಘಾಶ್ರೀ ಅವರ ವಿವೇಕದ ಉತ್ತರ ಅವರ ಕೆಲಸದಲ್ಲಿ ಕಾಣುತ್ತಿದೆ. ಇದನ್ನೂ ಓದಿ: ಬೆಟ್ಟಗಳು ಯಾವತ್ತೂ ಸುಳ್ಳು ಹೇಳುವುದಿಲ್ಲ…! ಮೇಘಾಶ್ರೀ ಅವರು ಕರ್ನಾಟಕದ ಚಿತ್ರದುರ್ಗದವರು. ಇದು ಕರ್ನಾಟಕಕ್ಕೆ ಹೆಮ್ಮೆ ತರುವ ಸಂಗತಿ. ಆದರೆ ವೈನಾಡ್ನಲ್ಲಿ ಅವರ ಗುರುತು ಭಾಷೆಯಿಂದ ನಿರ್ಮಾಣವಾಗಲಿಲ್ಲ. ಕೆಲಸದಿಂದ ನಿರ್ಮಾಣವಾಯಿತು. ದುರಂತದ ನೆಲದಲ್ಲಿ ಕನ್ನಡ, ಮಲಯಾಳಂ, ತಮಿಳು, ಹಿಂದಿ ಎನ್ನುವ ಗಡಿಗಳೇ ಇರುವುದಿಲ್ಲ. ಅಲ್ಲಿ ಒಂದೇ ಭಾಷೆ. ಜೀವ ಉಳಿಸುವ ಭಾಷೆ. ಒಬ್ಬ ತಾಯಿ ತನ್ನ ಮಗನಿಗಾಗಿ ಅಳುವಾಗ ಅವಳ ಭಾಷೆಯನ್ನು ಯಾರೂ ಕೇಳುವುದಿಲ್ಲ. ಒಬ್ಬ ಕಾರ್ಮಿಕನ ಕುಟುಂಬ ಮಾಹಿತಿ ಕೇಳುವಾಗ ಅವರ ರಾಜ್ಯವನ್ನು ಯಾರೂ ಕೇಳುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಆಡಳಿತದ ಭಾಷೆಯೂ ಒಂದೇ. ಮಾನವೀಯತೆ. ಒಬ್ಬ ಜಿಲ್ಲಾಧಿಕಾರಿಯ ಯಶಸ್ಸನ್ನು ಎಷ್ಟು ಭಾಷಣ ಮಾಡಿದರು ಎಂದು ಅಳೆಯುವುದಿಲ್ಲ. ಸಂಕಷ್ಟದ ಸಮಯದಲ್ಲಿ ಎಷ್ಟು ಸ್ಥಿರವಾಗಿ ನಿಂತರು ಎಂದು ಅಳೆಯುತ್ತಾರೆ. ಎಷ್ಟು ಇಲಾಖೆಗಳನ್ನು ಒಂದೇ ದಿಕ್ಕಿನಲ್ಲಿ ಮುನ್ನಡೆಸಿದರು ಎಂದು ಅಳೆಯುತ್ತಾರೆ. ಎಷ್ಟು ಕುಟುಂಬಗಳಿಗೆ ವಿಶ್ವಾಸ ತುಂಬಿದರು ಎಂದು ಅಳೆಯುತ್ತಾರೆ. ವಯನಾಡಿನ ಎರಡು ದುರಂತಗಳು ಒಂದು ವಿಷಯವನ್ನು ಸ್ಪಷ್ಟವಾಗಿ ದಾಖಲಿಸಿವೆ. ಬೆಟ್ಟಗಳು ಎರಡು ಬಾರಿ ಕುಸಿದವು. ರಸ್ತೆಗಳು ಮುಚ್ಚಿದವು. ಜನರು ಮನೆ ಕಳೆದುಕೊಂಡರು. ಆದರೆ ಜಿಲ್ಲಾಡಳಿತದ ಚಕ್ರ ನಿಲ್ಲಲಿಲ್ಲ. ಅದರ ಹಿಂದೆ ನೂರಾರು ಸಿಬ್ಬಂದಿಯ ಹಗಲಿರುಳು ಶ್ರಮವಿತ್ತು. ಆ ಶ್ರಮವನ್ನು ಒಂದೇ ಗುರಿಯತ್ತ ಕೊಂಡೊಯ್ಯುವ ನಾಯಕತ್ವವಿತ್ತು. ಮೇಘಶ್ರೀ ಅವರ ಕಥೆ ಒಬ್ಬ ಅಧಿಕಾರಿಯ ಕಥೆ ಮಾತ್ರವಲ್ಲ. ಸಂಕಷ್ಟದ ಸಮಯದಲ್ಲಿ ಆಡಳಿತ ಹೇಗಿರಬೇಕು ಎಂಬುದರ ಕಥೆ. ಕೆಲವರು ಹುದ್ದೆಯನ್ನು ಅಲಂಕರಿಸುತ್ತಾರೆ. ಕೆಲವರು ಹುದ್ದೆಗೆ ಅರ್ಥ ಕೊಡುತ್ತಾರೆ. ಇದನ್ನೂ ಓದಿ: Wayanad Landslide | ಇಂದು 3 ಮೃತದೇಹ ಪತ್ತೆ – ಬಲಿಯಾದವರ ಸಂಖ್ಯೆ 6ಕ್ಕೆ ಏರಿಕೆ ವಯನಾಡಿನ ಎರಡು ಮಹಾ ದುರಂತಗಳ ನಡುವೆ ಮೇಘಶ್ರೀ. ಕೊಟ್ಟ ಸಂದೇಶ ಒಂದೇ— ʼಜಿಲ್ಲಾಧಿಕಾರಿ ಎಂದರೆ ಕಚೇರಿಯಲ್ಲಿ ಕುಳಿತು ಆದೇಶ ಮಾಡುವ ಅಧಿಕಾರಿ ಅಲ್ಲ; ಜಿಲ್ಲೆ ಸಂಕಷ್ಟದಲ್ಲಿದ್ದಾಗ ಕೊನೆಯವರೆಗೂ ನಿಂತು ಜವಾಬ್ದಾರಿ ಹೊರುವ ವ್ಯಕ್ತಿʼ. ಬಹುಶಃ… ಇದೇ ಒಬ್ಬ ಸಾರ್ವಜನಿಕ ಸೇವಕನ ಅತಿದೊಡ್ಡ ಪರಿಚಯ.