ಶಿರಸಿ: ತಗ್ಗು ಪ್ರದೇಶದ ಬಡಾವಣೆಗಳಲ್ಲಿ ಕೃತಕ ನೆರೆ
ಶಿರಸಿ: ಮಳೆ ಚುರುಕುಗೊಂಡ ಬೆನ್ನಲ್ಲೇ ನಗರದ ತಗ್ಗು ಪ್ರದೇಶಗಳಲ್ಲಿ ನಾಗರಿಕರ ಬದುಕು ದುಸ್ತರವಾಗಿದೆ. ಬಡಾವಣೆಗಳ ರಸ್ತೆ ಹಾಗೂ ವಸತಿ ಪ್ರದೇಶಗಳಲ್ಲಿ ಚರಂಡಿ ನೀರು ಸರಾಗವಾಗಿ ಹೊರ ಹರಿಯಲು ಸೂಕ್ತ ವ್ಯವಸ್ಥೆ ಇರದ ಕಾರಣ, ಪ್ರತಿ ಬಾರಿ ಮಳೆ ಬಂದಾಗಲೂ ಕೃತಕ ನೆರೆ ಸೃಷ್ಟಿಯಾಗುತ್ತಿದ್ದು, ಬಡಾವಣೆಗಳ ಜನರ ಬದುಕು ಕಂಗೆಡಿಸಿದೆ.ನಗರಸಭೆ ವ್ಯಾಪ್ತಿಯಲ್ಲಿ ಬರುವ ಲಯನ್ಸ್ ನಗರದ

ಶಿರಸಿ: ಮಳೆ ಚುರುಕುಗೊಂಡ ಬೆನ್ನಲ್ಲೇ ನಗರದ ತಗ್ಗು ಪ್ರದೇಶಗಳಲ್ಲಿ ನಾಗರಿಕರ ಬದುಕು ದುಸ್ತರವಾಗಿದೆ. ಬಡಾವಣೆಗಳ ರಸ್ತೆ ಹಾಗೂ ವಸತಿ ಪ್ರದೇಶಗಳಲ್ಲಿ ಚರಂಡಿ ನೀರು ಸರಾಗವಾಗಿ ಹೊರ ಹರಿಯಲು ಸೂಕ್ತ ವ್ಯವಸ್ಥೆ ಇರದ ಕಾರಣ, ಪ್ರತಿ ಬಾರಿ ಮಳೆ ಬಂದಾಗಲೂ ಕೃತಕ ನೆರೆ ಸೃಷ್ಟಿಯಾಗುತ್ತಿದ್ದು, ಬಡಾವಣೆಗಳ ಜನರ ಬದುಕು ಕಂಗೆಡಿಸಿದೆ.ನಗರಸಭೆ ವ್ಯಾಪ್ತಿಯಲ್ಲಿ ಬರುವ ಲಯನ್ಸ್ ನಗರದ ಕೆಲ ಭಾಗಗಳು, ದುಂಡಶಿನಗರ, ಅಶೋಕನಗರ, ಚಂದ್ರಾ ಲೇ ಔಟ್, ಪ್ರಗತಿ ನಗರದ ಕೆಲವು ಪ್ರದೇಶಗಳು, ಶಾಂತಿನಗರ ಹಾಗೂ ಬಶೆಟ್ಟಿಕೆರೆಯ ಕೆಳಭಾಗ ಸೇರಿದಂತೆ ಹತ್ತಾರು ಬಡಾವಣೆಗಳಲ್ಲಿ ಮಳೆ ನೀರು ಹರಿದು ಹೋಗಲು ಜಾಗವಿಲ್ಲದೇ ರಸ್ತೆಗಳಲ್ಲೇ ಸಂಗ್ರಹವಾಗುತ್ತಿದೆ. ನಗರಸಭೆಯು ಈ ಭಾಗಗಳಲ್ಲಿ ವೈಜ್ಞಾನಿಕವಾಗಿ ಗಟಾರಗಳನ್ನು ನಿರ್ಮಿಸದ ಕಾರಣ, ಮಳೆ ನೀರು ಕೊಳಚೆ ನೀರಿನೊಂದಿಗೆ ಮಿಶ್ರಣಗೊಂಡು ಇಡೀ ಪರಿಸರವನ್ನು ದುರ್ನಾತ ಬೀರುವಂತೆ ಮಾಡಿದೆ. ಈ ಕಲುಷಿತ ನೀರು ರಸ್ತೆ ದಾಟಿ ಜನರ ಮನೆಗಳ ಅಂಗಳ ಹಾಗೂ ಒಳಗಡೆ ನುಗ್ಗುತ್ತಿರುವುದರಿಂದ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.‘ಮಳೆಗಾಲ ಆರಂಭವಾಗುವ ಮುನ್ನವೇ ನಗರಸಭೆ ಕೈಗೊಳ್ಳಬೇಕಾಗಿದ್ದ ಚರಂಡಿ ಹೂಳೆತ್ತುವ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ. ಕೇವಲ ಕಾಟಾಚಾರಕ್ಕೆ ಎಂಬಂತೆ ಕೆಲವೆಡೆ ಕಾಮಗಾರಿ ನಡೆಸಿ ಕೈತೊಳೆದುಕೊಳ್ಳಲಾಗಿದೆ. ಇದರ ಪರಿಣಾಮವಾಗಿ ನೀರು ಸರಾಗವಾಗಿ ಹರಿದು ಹೋಗಲು ಯಾವುದೇ ಮಾರ್ಗವಿಲ್ಲದಂತಾಗಿದೆ' ಎಂಬುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.‘ಪ್ರತಿ ವರ್ಷವೂ ಮಳೆಗಾಲದಲ್ಲಿ ಈ ಭಾಗದ ರಸ್ತೆಗಳು ಮತ್ತು ಮನೆಗಳ ಹೊರ ಆವರಣಗಳು ಸದಾ ಜಲಾವೃತಗೊಳ್ಳುತ್ತಿದ್ದು, ನಾಗರಿಕರು ಆತಂಕದ ನೆರಳಿನಲ್ಲಿ ಬದುಕುವಂತಾಗಿದೆ. ಸಾಂಕ್ರಾಮಿಕ ರೋಗಗಳ ಭೀತಿಯೂ ಇಲ್ಲಿನ ಜನರನ್ನು ತೀವ್ರವಾಗಿ ಕಾಡುತ್ತಿದೆ' ಎಂಬುದು ಸ್ಥಳೀಯ ನಿವಾಸಿಗಳ ದೂರಾಗಿದೆ.‘ಜೋರು ಮಳೆ ಬೀಳುವಾಗ ನಮಗೆ ಮನೆಗಳಿಂದ ಹೊರಗೆ ಹೋಗಲು ಸಾಧ್ಯವಾಗುತ್ತಿಲ್ಲ. ಮಳೆ ಸಂಪೂರ್ಣವಾಗಿ ಕಡಿಮೆ ಆಗುವವರೆಗೆ ಕಾಯಲೇಬೇಕಾದ ಅನಿವಾರ್ಯತೆ ಇದೆ. ಇನ್ನು ಅನಾರೋಗ್ಯದಂತಹ ತುರ್ತು ಪರಿಸ್ಥಿತಿ ಎದುರಾದರೆ, ಆಂಬುಲೆನ್ಸ್ ಸೇರಿದಂತೆ ಯಾವುದೇ ವಾಹನಗಳು ಈ ಭಾಗದ ಹದಗೆಟ್ಟ ರಸ್ತೆಗಳಿಗೆ ಬರಲು ಒಪ್ಪದ ದುಸ್ಥಿತಿ ನಿರ್ಮಾಣವಾಗಿದೆ. ವೃದ್ಧರು ಮತ್ತು ಶಾಲಾ ಮಕ್ಕಳ ಪರಿಸ್ಥಿತಿಯಂತೂ ಹೇಳತೀರದಾಗಿದೆ’ ಎನ್ನುತ್ತಾರೆ ಶಾಂತಿನಗರದ ನಿವಾಸಿ ರಾಮಚಂದ್ರ ಹೆಗಡೆ.ಪ್ರಕಾಶ ಚನ್ನಪ್ಪನವರ್, ಪೌರಾಯುಕ್ತಸಾರ್ವಜನಿಕರು ಎದುರಿಸುತ್ತಿರುವ ಈ ಸಮಸ್ಯೆ ಬಗ್ಗೆ ನಗರಸಭೆಯ ಗಮನಕ್ಕೆ ತಂದರೆ ತಕ್ಷಣವೇ ಪರಿಶೀಲಿಸಿ, ನೀರು ಸರಾಗವಾಗಿ ಹರಿದು ಹೋಗಲು ಅಗತ್ಯವಿರುವ ತಾತ್ಕಾಲಿಕ ಹಾಗೂ ಕಾಯಂ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುವುದು ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260709-20-1641182204