ನಿಜ್ಜರ್ ಹತ್ಯೆಯಲ್ಲಿ ಭಾರತದ ನಂಟಿನ ಪುರಾವೆಗಳಿಲ್ಲ: ರಾಯಲ್ ಕೆನಡಿಯನ್ ಪೊಲೀಸ್
ನವದೆಹಲಿ: ‘ಕೆನಡಾದಲ್ಲಿ 2023ರಲ್ಲಿ ನಡೆದ ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಅಧಿಕಾರಿಗಳ ನಂಟಿನ ಬಗ್ಗೆ ತನಿಖಾಧಿಕಾರಿಗಳಿಗೆ ಯಾವುದೇ ಪುರಾವೆ ದೊರೆತಿಲ್ಲ’ ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ (ಆರ್ಸಿಎಂಪಿ) ಡೆಪ್ಯುಟಿ ಕಮಿಷನರ್ ಲಿಸಾ ಮೋರ್ಲ್ಯಾಂಡ್ ಹೇಳಿದ್ದಾರೆ.ಇದು ಆಗಿನ ಪ್ರಧಾನಿ ಜಸ್ಟಿನ್ ಟ್ರುಡೊ ಅವ

ನವದೆಹಲಿ: ‘ಕೆನಡಾದಲ್ಲಿ 2023ರಲ್ಲಿ ನಡೆದ ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಅಧಿಕಾರಿಗಳ ನಂಟಿನ ಬಗ್ಗೆ ತನಿಖಾಧಿಕಾರಿಗಳಿಗೆ ಯಾವುದೇ ಪುರಾವೆ ದೊರೆತಿಲ್ಲ’ ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ (ಆರ್ಸಿಎಂಪಿ) ಡೆಪ್ಯುಟಿ ಕಮಿಷನರ್ ಲಿಸಾ ಮೋರ್ಲ್ಯಾಂಡ್ ಹೇಳಿದ್ದಾರೆ.ಇದು ಆಗಿನ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಹಿಂದಿನ ಆರೋಪಗಳಿಗೆ ವಿರುದ್ಧವಾಗಿದೆ. ಟ್ರುಡೊ ಆರೋಪಗಳಿಂದ ಭಾರತ ಮತ್ತು ಕೆನಡಾ ನಡುವಿನ ದ್ವಿಪಕ್ಷೀಯ ಸಂಬಂಧ ತೀವ್ರವಾಗಿ ಹದಗೆಟ್ಟಿತ್ತು.ಜೈಲಿನಲ್ಲಿರುವ ಪಾತಕಿ ಲಾರೆನ್ಸ್ ಬಿಷ್ಣೋಯ್ ಮತ್ತು ಆತನ ಸಹಾಯಕ ಸತೀಂದರ್ಜೀತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ ಅವರು ನಿಜ್ಜರ್ ಹತ್ಯೆಗೆ ಸೂಚಿಸಿದ್ದರು ಎಂದು ಅಮೆರಿಕದ ಅಧಿಕಾರಿಗಳು ಆರೋಪಿಸಿದ ಬೆನ್ನಲ್ಲೇ ಲಿಸಾ ಅವರ ಹೇಳಿಕೆ ಬಂದಿದೆ.ತನಿಖೆಯ ವಿವರಗಳನ್ನು ಹಂಚಿಕೊಂಡ ಲಿಸಾ ಅವರು, ‘ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳು ಸಿಕ್ಕಿಲ್ಲ’ ಎಂದು ವಿವರಿಸಿದರು. ಅಲ್ಲದೆ, ‘ಈ ಪ್ರಕರಣದ ತನಿಖೆಗೆ ಭಾರತ ಸರ್ಕಾರ ಅಗತ್ಯ ಸಹಕಾರ ನೀಡಿದೆ’ ಎಂದೂ ಅವರು ಹೇಳಿದರು.‘ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ’ ಎಂದು 2023ರಲ್ಲಿ ಕೆನಡಾದ ಅಂದಿನ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ್ದರು. ಇದನ್ನು ಭಾರತ ಸರ್ಕಾರ ತಳ್ಳಿಹಾಕಿತ್ತು. 2024ರಲ್ಲಿ ಭಾರತ ತನ್ನ ರಾಯಭಾರಿ ಸೇರಿದಂತೆ ಐವರು ರಾಜತಾಂತ್ರಿಕ ಅಧಿಕಾರಿಗಳನ್ನು ವಾಪಸ್ ಕರೆಸಿಕೊಂಡಿತ್ತು. ಅಂದಿನಿಂದ ಉಭಯ ದೇಶಗಳ ರಾಜತಾಂತ್ರಿಕ ಸಂಬಂಧ ಹದಗೆಟ್ಟಿತ್ತು.2025ರ ಏಪ್ರಿಲ್ನಲ್ಲಿ ಲಿಬರಲ್ ಪಕ್ಷದ ಮಾರ್ಕ್ ಕಾರ್ನಿ ಅವರು ಪ್ರಧಾನಿಯಾಗಿ ಆಯ್ಕೆಯಾದ ನಂತರ ಸಂಬಂಧ ಪುನರ್ ಸ್ಥಾಪನೆಯ ಯತ್ನ ಆರಂಭಿಸಿದ್ದಾರೆ. ಇತ್ತೀಚೆಗಷ್ಟೇ ಕೆನಡಾ ಪ್ರಧಾನಿ ಭಾರತಕ್ಕೆ ಭೇಟಿ ನೀಡಿ ಆರ್ಥಿಕ ಪಾಲುದಾರಿಕೆ ಸೇರಿದಂತೆ ಹಲವು ಒಪ್ಪಂದಕ್ಕೆ ಸಹಿ ಹಾಕಿದ್ದರು.ಆಪರೇಷನ್ ‘ಹಾರ್ಡ್ಬಾಲ್’: ಅಮೆರಿಕ, ಕೆನಡಾ ಮತ್ತು ಯುರೋಪ್ನ ಕಾನೂನು ಜಾರಿ ಸಂಸ್ಥೆಗಳು ‘ಆಪರೇಷನ್ ಹಾರ್ಡ್ಬಾಲ್’ ಹೆಸರಿನಲ್ಲಿ ಸಂಘಟಿತ ಕಾರ್ಯಾಚರಣೆ ಕೈಗೊಂಡು ಬಿಷ್ಣೋಯ್ ಗ್ಯಾಂಗ್ ಸೇರಿದಂತೆ ಭಾರತ ಮೂಲದ ಮೂರು ಸಂಘಟಿತ ಅಪರಾಧ ಗುಂಪುಗಳ ಜತೆ ಸಂಪರ್ಕ ಹೊಂದಿದ್ದ 24 ಜನರನ್ನು ಬಂಧಿಸಿವೆ. ಅಲ್ಲದೆ ಬಿಷ್ಣೋಯ್ ಗ್ಯಾಂಗ್ ವಿರುದ್ಧ ನಿಜ್ಜರ್ ಹತ್ಯೆ ಮತ್ತು ಇತರ ಗಡಿಯಾಚೆಗಿನ ಸಂಘಟಿತ ಅಪರಾಧಗಳ ಆರೋಪಗಳಿವೆ ಎಂದು ಅಮೆರಿಕ ಮಂಗಳವಾರ ಹೇಳಿದೆ.ಗೋಲ್ಡಿ ಬ್ರಾರ್ ಸುಳಿವು ನೀಡಿದವರಿಗೆ ₹47 ಲಕ್ಷವಾಷಿಂಗ್ಟನ್ (ಪಿಟಿಐ): ತಲೆಮರೆಸಿಕೊಂಡಿರುವ ಗ್ಯಾಂಗ್ಸ್ಟರ್ ಸತೀಂದರ್ಜೀತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ ಬಗ್ಗೆ ಮಾಹಿತಿ ಒದಗಿಸಿದವರಿಗೆ 50 ಸಾವಿರ ಡಾಲರ್ (ಅಂದಾಜು ₹47 ಲಕ್ಷ) ಬಹುಮಾನ ನೀಡುವುದಾಗಿ ಅಮೆರಿಕದ ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್ (ಎಫ್ಬಿಐ) ಘೋಷಿಸಿದೆ.ಅಮೆರಿಕದ ಜಿಲ್ಲಾ ನ್ಯಾಯಾಲಯವು ಜುಲೈ 1ರಂದು ಬ್ರಾರ್ ಬಂಧನಕ್ಕಾಗಿ ಬಂಧನ ವಾರಂಟ್ ನೀಡಿದೆ ಎಂದು ಎಫ್ಬಿಐ ತಿಳಿಸಿದೆ.ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಅವರನ್ನು ಕೆನಡಾದಲ್ಲಿ ಹತ್ಯೆಗೈದ ಪ್ರಕರಣದಲ್ಲಿ ಗೋಲ್ಡಿ ಬ್ರಾರ್ ಮತ್ತು ಲಾರೆನ್ಸ್ ಬಿಷ್ಣೋಯಿ ವಿರುದ್ಧ ಅಮೆರಿಕ ಆರೋಪ ಹೊರಿಸಿದೆ. ಲಾರೆನ್ಸ್ ಬಿಷ್ಣೋಯಿ 2015ರಿಂದಲೂ ಭಾರತದಲ್ಲಿ ಬಂಧನದಲ್ಲಿದ್ದರೆ, ಗೋಲ್ಡಿ ಬ್ರಾರ್ ತಲೆಮರೆಸಿಕೊಂಡಿದ್ದಾನೆ.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260709-51-429700080