ಸೂಟ್ಕೇಸ್ನಲ್ಲಿ ಶವ ತುಂಬಿ ಎಸೆದಿದ್ದ ನಾಲ್ವರ ಬಂಧನ
ಶಿವಮೊಗ್ಗ: ಶಿಕಾರಿಪುರದಿಂದ ನಾಪತ್ತೆ ಯಾಗಿದ್ದ ತಾಲ್ಲೂಕಿನ ತರಲಘಟ್ಟತಾಂಡಾದ 16 ವರ್ಷದ ಬಾಲಕಿಯ ಶವ ಸಿದ್ದಾಪುರ ಬಳಿಯ ಮಾವಿಗುಂಡಿ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಇವರು ವರ್ಷದ ಹಿಂದೆ ಸೂಟ್ಕೇಸ್ನಲ್ಲಿ ಶವ ತುಂಬಿ ಅರಣ್ಯದಲ್ಲಿ ಎಸೆದಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ.ಬಾಲಕಿ ಶಿಕಾ

ಶಿವಮೊಗ್ಗ: ಶಿಕಾರಿಪುರದಿಂದ ನಾಪತ್ತೆ ಯಾಗಿದ್ದ ತಾಲ್ಲೂಕಿನ ತರಲಘಟ್ಟತಾಂಡಾದ 16 ವರ್ಷದ ಬಾಲಕಿಯ ಶವ ಸಿದ್ದಾಪುರ ಬಳಿಯ ಮಾವಿಗುಂಡಿ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಇವರು ವರ್ಷದ ಹಿಂದೆ ಸೂಟ್ಕೇಸ್ನಲ್ಲಿ ಶವ ತುಂಬಿ ಅರಣ್ಯದಲ್ಲಿ ಎಸೆದಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ.ಬಾಲಕಿ ಶಿಕಾರಿಪುರ ಪಟ್ಟಣದ ಪಿ.ಜಿಯೊಂದರಲ್ಲಿ (ಪೇಯಿಂಗ್ ಗೆಸ್ಟ್) ಕೆಲಸ ಮಾಡುತ್ತಿದ್ದು, 2025ರ ಜೂನ್ 18ರಂದು ನಾಪತ್ತೆಯಾಗಿದ್ದಳು. ಆಕೆಯ ತಂದೆ 2026ರ ಜುಲೈ 3ರಂದು ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ಮಗಳು ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು.ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕಳೆದ ವರ್ಷ ಜೂನ್ 18ರಂದು ಬಾಲಕಿಯ ಮೊಬೈಲ್ಫೋನ್ ಸ್ವಿಚ್ಡ್ ಆಫ್ ಆಗಿರುವುದು ಸೇರಿದಂತೆ ತಾಂತ್ರಿಕ ಸಾಕ್ಷ್ಯಗಳು ಹಾಗೂ ಇತರೆ ಮಾಹಿತಿಗಳನ್ನು ಸಂಗ್ರಹಿಸಿ ತನಿಖೆ ನಡೆಸಿದ್ದಾರೆ. ಪಿ.ಜಿಯ ಒಡತಿ ತರಳಘಟ್ಟದ ಸೌಭಾಗ್ಯ (40), ಅದೇ ಕಟ್ಟಡದಲ್ಲಿರುವ ಬ್ಯೂಟಿ ಪಾರ್ಲರ್ನಲ್ಲಿ ಸಹಾಯಕಿ ಆಗಿದ್ದ ರಂಜಿತಾ (26), ಸ್ನೇಹಿತರಾದ ಇಟ್ಟಿಗೆಹಳ್ಳಿಯ ಗಂಗಾ ನಾಯ್ಕ (39), ಸೋಗಿಲು ಗ್ರಾಮದ ಪೀರ್ಯಾನಾಯ್ಕ (28) ಅವರನ್ನು ಬಂಧಿಸಿದ್ದಾರೆ.ಗಂಗಾನಾಯ್ಕ ಮುದ್ದನಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಗೂ ಬಂಜಾರ ಸಮುದಾಯದ ತಾಲ್ಲೂಕು ಘಟಕದ ಅಧ್ಯಕ್ಷ.ಸೌಭಾಗ್ಯ ಪ್ರೇಮವಿವಾಹ ಆಗಿದ್ದು, ಮೊದಲಿಗೆ ದಾವಣಗೆರೆಯಲ್ಲಿ ವಾಸವಿದ್ದರು. ನಂತರ ಪತಿಯಿಂದ ವಿಚ್ಛೇದನ ಪಡೆದು ಶಿಕಾರಿಪುರಕ್ಕೆ ಬಂದು ಪಿ.ಜಿ. ನಡೆಸುತ್ತಿದ್ದರು ಎನ್ನಲಾಗಿದೆ. ಬಾಲಕಿ ಎಂಟನೇ ತರಗತಿವರೆಗೆ ತರಲಘಟ್ಟದಲ್ಲಿ ಓದಿದ್ದಳು. ತಾಯಿ ಮನೆ ಬಿಟ್ಟು ಹೋಗಿದ್ದು, ಮದ್ಯದ ಚಟ ಹೊಂದಿದ್ದ ಅಪ್ಪ ನೋಡಿಕೊಳ್ಳದ ಕಾರಣ ಶಿಕಾರಿಪುರಕ್ಕೆ ಬಂದು ಪಿ.ಜಿಯಲ್ಲಿ ಕೆಲಸಕ್ಕೆ ಸೇರಿದ್ದಳು.ಅರಣ್ಯದಲ್ಲಿ ಶವ ಎಸೆದಿದ್ದರು: ‘ಬಾಲಕಿಯ ಕಾರಣದಿಂದ ನಮ್ಮ ನಡುವೆ ಜಗಳವಾಗಿದ್ದು, ಅದು ಗೊತ್ತಾಗಿ ಆಕೆಯನ್ನು ಬ್ಯೂಟಿ ಪಾರ್ಲರ್ ಒಳಗೆ ಕರೆದು ತರಾಟೆಗೆ ತೆಗೆದಕೊಂಡಿದ್ದೆವು. ಹೀಗಾಗಿ ಆಕೆ ಪಿ.ಜಿಯ ಕೊಠಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಅದು ಪೊಲೀಸರ ಗಮನಕ್ಕೆ ಬಂದರೆ ತೊಂದರೆ ಆಗಲಿದೆ ಎಂದು ನಾಲ್ವರು ಸೇರಿ ಸೂಟ್ಕೇಸ್ನಲ್ಲಿ ಶವ ತುಂಬಿ ವಾಹನದಲ್ಲಿ ಕೊಂಡೊಯ್ದು ಮಾವಿನಗುಂಡಿ ಅರಣ್ಯ ಪ್ರದೇಶದಲ್ಲಿ ಎಸೆದು ಬಂದಿದ್ದೆವು’ ಎಂಬುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿದ್ದಾಗಿ ತಿಳಿದುಬಂದಿದೆ.ಮಾವಿನಗುಂಡಿ ಅರಣ್ಯ ಪ್ರದೇಶಕ್ಕೆ ಆರೋಪಿಗಳನ್ನು ಕರೆದೊಯ್ದು ಪೊಲೀಸರು ಪರಿಶೀಲನೆ ನಡೆಸಿದ್ದು, ಅಲ್ಲಿ ಶವದ ಅಸ್ತಿಪಂಜರ–ತಲೆಬುರಡೆ ಪತ್ತೆಯಾಗಿದ್ದು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿದ್ದಾರೆ.‘ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಯೇ? ಇಲ್ಲವೇ ಹೊಡೆದು ಕೊಲೆ ಮಾಡಲಾಗಿದೆಯೇ ಎಂಬುದರ ಬಗ್ಗೆ ಲಭ್ಯವಿರುವ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಗಳ ವಿಚಾರಣೆ ನಡೆಸುತ್ತಿದ್ದೇವೆ. ನೈಜ ಸಂಗತಿ ಹೊರಬಂದ ಬಳಿಕ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಎಸ್ಪಿ ಬಿ.ನಿಖಿಲ್ ಬುಧವಾರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260709-42-1092836284