ಸ್ಟಾರ್ಟ್ಅಪ್: ನಾಸಾ ಬಹುಕೋಟಿ ಒಪ್ಪಂದ
ಜೋಸೆಫ್ ಎಂ. ಆಲ್ದೂರುಆಲ್ದೂರು (ಚಿಕ್ಕಮಗಳೂರು): ಬಾಲ್ಯದಲ್ಲಿ ತಂದೆ ತಂದಿದ್ದ ವಿಶ್ವಕೋಶಗಳಲ್ಲಿ ಬ್ರಹ್ಮಾಂಡದ ಕುರಿತು ಓದುತ್ತ ಬೆಳೆದ ಆಲ್ದೂರಿನ ಯುವಕ ಇಂದು ಜಾಗತಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಗಮನ ಸೆಳೆದಿರುವ ವಿಜ್ಞಾನಿಯಾಗಿ ಹೊರಹೊಮ್ಮಿದ್ದಾರೆ.ಆವೇಜ್ ಅಹಮದ್ ಅವರು ಸ್ಥಾಪಿಸಿರುವ ಪಿಕ್ಸೆಲ್ (Pixxel) ಸಂಸ್ಥೆ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ (NASA

ಜೋಸೆಫ್ ಎಂ. ಆಲ್ದೂರುಆಲ್ದೂರು (ಚಿಕ್ಕಮಗಳೂರು): ಬಾಲ್ಯದಲ್ಲಿ ತಂದೆ ತಂದಿದ್ದ ವಿಶ್ವಕೋಶಗಳಲ್ಲಿ ಬ್ರಹ್ಮಾಂಡದ ಕುರಿತು ಓದುತ್ತ ಬೆಳೆದ ಆಲ್ದೂರಿನ ಯುವಕ ಇಂದು ಜಾಗತಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಗಮನ ಸೆಳೆದಿರುವ ವಿಜ್ಞಾನಿಯಾಗಿ ಹೊರಹೊಮ್ಮಿದ್ದಾರೆ.ಆವೇಜ್ ಅಹಮದ್ ಅವರು ಸ್ಥಾಪಿಸಿರುವ ಪಿಕ್ಸೆಲ್ (Pixxel) ಸಂಸ್ಥೆ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ (NASA) ಜೊತೆ 476 ಮಿಲಿಯನ್ ಡಾಲರ್ ಮೌಲ್ಯದ ಒಪ್ಪಂದ ಮಾಡಿಕೊಂಡು ಭಾರತದ ಮೊದಲ ಸ್ಪೇಸ್ಟೆಕ್ ಸ್ಟಾರ್ಟ್ಅಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಹೈಪರ್ಲೂಪ್ ಇಂಡಿಯಾ ತಂಡದಲ್ಲಿ ಆವೇಜ್ ಅಹಮದ್ ಅವರು ಎಂಜಿನಿಯರಿಂಗ್ ಲೀಡ್ ಆಗಿ ಕಾರ್ಯನಿರ್ವಹಿಸಿದ ಸಂದರ್ಭದಲ್ಲಿ ಎಲಾನ್ ಮಸ್ಕ್ ಅವರ ಬಾಹ್ಯಾಕಾಶ ಯೋಜನೆಗಳಿಂದ ಪ್ರೇರಿತರಾಗಿ ಸ್ವಂತ ಕಂಪನಿ ಆರಂಭಿಸುವ ಕನಸು ಕಂಡರು.2018ರಲ್ಲಿ ಸಹಪಾಠಿ ಕ್ಷಿತಿಜ್ ಖಂಡೇಲ್ವಾಲ್ ಅವರೊಂದಿಗೆ ಐಬಿಎಂ ವಾಟ್ಸನ್ ಎಐ ಚಾಲೆಂಜ್ನಲ್ಲಿ ಭಾಗವಹಿಸಿದ್ದ ವೇಳೆ, ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಿಗೆ ಅಗತ್ಯವಾದ ಉನ್ನತ ಗುಣಮಟ್ಟದ ಉಪಗ್ರಹ ಮಾಹಿತಿ ಕೊರತೆ ಇರುವುದನ್ನು ಗಮನಿಸಿದರು. ಬೆಳೆಗಳ ಆರೋಗ್ಯ, ಮಿಥೇನ್ ಅನಿಲ ಸೋರಿಕೆ, ಅಕ್ರಮ ಗಣಿಗಾರಿಕೆ ಮುಂತಾದವುಗಳನ್ನು ನಿಖರವಾಗಿ ಪತ್ತೆ ಹಚ್ಚುವ ತಂತ್ರಜ್ಞಾನದ ಅಗತ್ಯವನ್ನು ಮನಗಂಡು ಸ್ವಂತ ಸಂಸ್ಥೆ ಸ್ಥಾಪಿಸಲು ನಿರ್ಧರಿಸಿದರು.2019ರ ಫೆಬ್ರುವರಿಯಲ್ಲಿ ತಂದೆಯಿಂದ ₹10 ಸಾವಿರ ಸಾಲ ಪಡೆದು ಬೆಂಗಳೂರಿನ ಇಂದಿರಾನಗರದ ಮೆಟ್ರೊ ನಿಲ್ದಾಣದ ಸಮೀಪದ ಸಣ್ಣ ಕಚೇರಿಯಲ್ಲಿ ‘ಪಿಕ್ಸೆಲ್’ ಸಂಸ್ಥೆಯನ್ನು ಆರಂಭಿಸಿದರು. ಅಲ್ಲಿಂದ ಆರಂಭವಾದ ಸ್ಟಾರ್ಟ್ಅಪ್ ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡ ಬಾಹ್ಯಾಕಾಶ ತಂತ್ರಜ್ಞಾನ ಸಂಸ್ಥೆಯಾಗಿ ಬೆಳೆದಿದೆ.ಗೂಗಲ್, ಲೈಟ್ಸ್ಪೀಡ್, ರಾಡಿಕಲ್ ವೆಂಚರ್ಸ್ ಹಾಗೂ ಬ್ಲ್ಯೂಮ್ ವೆಂಚರ್ಸ್ ಸೇರಿದಂತೆ ಪ್ರಮುಖ ಹೂಡಿಕೆದಾರರಿಂದ ಸುಮಾರು ₹901.52 ಕೋಟಿ(95 ಮಿಲಿಯನ್ ಡಾಲರ್) ಹೂಡಿಕೆ ಪಡೆದಿರುವ ಪಿಕ್ಸೆಲ್, ವಿಶ್ವದ ಅತಿದೊಡ್ಡ ಹೈಪರ್ಸ್ಪೆಕ್ಟ್ರಲ್ ಇಮೇಜಿಂಗ್ ಕಂಪನಿಗಳಲ್ಲಿ ಒಂದಾಗಿ ಹೊರಹೊಮ್ಮಿದೆ ಎಂದು ಆವೇಜ್ ಅಹಮದ್ ಅವರ ತಂದೆ ನದೀಮ್ ಅಹಮದ್ ‘ಪ್ರಜಾವಾಣಿ’ ತಿಳಿಸಿದರು.2025ರಲ್ಲಿ ಸಂಸ್ಥೆ ‘ಫೈರ್ಫ್ಲೈ’ ಸರಣಿಯ ಆರು ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಐದು ಮೀಟರ್ ರೆಸಲ್ಯೂಷನ್ನಲ್ಲಿ 250ಕ್ಕೂ ಹೆಚ್ಚು ಸ್ಪೆಕ್ಟ್ರಲ್ ಬ್ಯಾಂಡ್ಗಳಲ್ಲಿ ಭೂಮಿಯ ಚಿತ್ರಣ ಸಂಗ್ರಹಿಸುವ ಈ ಉಪಗ್ರಹಗಳು, ಸಾಂಪ್ರದಾಯಿಕ ಉಪಗ್ರಹಗಳಿಗಿಂತ ಸುಮಾರು 50 ಪಟ್ಟು ಹೆಚ್ಚು ಮಾಹಿತಿ ಸಂಗ್ರಹಿಸುವ ಸಾಮರ್ಥ್ಯ ಹೊಂದಿವೆ.ಪಿಕ್ಸೆಲ್ ಸಂಸ್ಥೆ ಅಮೆರಿಕದ ಕ್ಯಾಲಿಫೋರ್ನಿಯಾದ ಎಲ್ ಸೆಗುಂಡೋ ನಗರದಲ್ಲೂ ಶಾಖಾ ಕಚೇರಿ ಸ್ಥಾಪಿಸಿದೆ.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260709-126-193462067