ಫಿಫಾ ವಿಶ್ವಕಪ್: ಅರ್ಜೆಂಟೀನಾ ವಿರುದ್ಧ ಈಜಿಪ್ಟ್ ದೂರು
ಅಟ್ಲಾಂಟಾ: ಅರ್ಜೆಂಟೀನಾ ಎದುರಿನ ಪ್ರಿಕ್ವಾರ್ಟರ್ಫೈನಲ್ ಪಂದ್ಯದಲ್ಲಿ ರೆಫರಿಗಳು ಪಕ್ಷಪಾತ ಮಾಡಿದ್ದಾರೆಂದು ಆರೋಪಿಸಿರುವ ಈಜಿಪ್ಟ್ ಫುಟ್ಬಾಲ್ ಫೆಡರೇಷನ್ ಫಿಫಾಗೆ ದೂರು ನೀಡಿದೆ.‘ಅರ್ಜೆಂಟೀನಾ ತಂಡವನ್ನು ವಿಶ್ವಕಪ್ ಟೂರ್ನಿಯಿಂದ ಹೊರಹಾಕಬೇಕು. ಪಂದ್ಯದಲ್ಲಿ ಕಾರ್ಯನಿರ್ವಹಿಸಿದ್ದ ಫ್ರೆಂಚ್ ರೆಫರಿ ಫ್ರಾಂಕೋಸ್ ಲೆಕ್ಸೀರ್ ಅವರ ವಿರುದ್ಧ ತನಿಖೆ ನಡೆಸಬೇಕು. ರೆಫರಿಗಳ ತ

ಅಟ್ಲಾಂಟಾ: ಅರ್ಜೆಂಟೀನಾ ಎದುರಿನ ಪ್ರಿಕ್ವಾರ್ಟರ್ಫೈನಲ್ ಪಂದ್ಯದಲ್ಲಿ ರೆಫರಿಗಳು ಪಕ್ಷಪಾತ ಮಾಡಿದ್ದಾರೆಂದು ಆರೋಪಿಸಿರುವ ಈಜಿಪ್ಟ್ ಫುಟ್ಬಾಲ್ ಫೆಡರೇಷನ್ ಫಿಫಾಗೆ ದೂರು ನೀಡಿದೆ.‘ಅರ್ಜೆಂಟೀನಾ ತಂಡವನ್ನು ವಿಶ್ವಕಪ್ ಟೂರ್ನಿಯಿಂದ ಹೊರಹಾಕಬೇಕು. ಪಂದ್ಯದಲ್ಲಿ ಕಾರ್ಯನಿರ್ವಹಿಸಿದ್ದ ಫ್ರೆಂಚ್ ರೆಫರಿ ಫ್ರಾಂಕೋಸ್ ಲೆಕ್ಸೀರ್ ಅವರ ವಿರುದ್ಧ ತನಿಖೆ ನಡೆಸಬೇಕು. ರೆಫರಿಗಳ ತಂಡವು ಮಾಡಿರುವ ಲೋಪಗಳು ಮತ್ತು ಇಬ್ಬಗೆ ನೀತಿಯಿಂದಾಗಿ ನಮ್ಮ ತಂಡ ಸೋತು ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದೆ’ ಎಂದು ಈಜಿಪ್ಟ್ ಫುಟ್ಬಾಲ್ ಫೆಡರೇಷನ್ ಅಧ್ಯಕ್ಷ ಹನಿ ಅಬುರಿದಾ ಅವರು ದೂರು ನೀಡಿದ್ದಾರೆ.ಅರ್ಜೆಂಟೀನಾ ತಂಡವು 3–2 ಗೋಲುಗಳಿಂದ ಈಜಿಪ್ಟ್ ವಿರುದ್ಧ ಜಯಿಸಿ ಕ್ವಾರ್ಟರ್ಫೈನಲ್ ಪ್ರವೇಶಿಸಿತ್ತು. ಆದರೆ ಈಜಿಪ್ಟ್ ತಂಡವು ಪಂದ್ಯದ ಒಂದು ಹಂತದಲ್ಲಿ 1-0ಯಿಂದ ಮುನ್ನಡೆಯಲ್ಲಿತ್ತು. 58ನೇ ನಿಮಿಷದಲ್ಲಿ ಈಜಿಪ್ಟ್ ಆಟಗಾರ ಮುಸ್ತಫಾ ಝಿಕೊ ಗಳಿಸಿದ್ದ ಗೋಲನ್ನು, ವಿಡಿಯೋ ಮರುಪರಿಶೀಲನೆ (ವಿಎಆರ್) ಮೂಲಕ ರದ್ದುಗೊಳಿಸಲಾಯಿತು. ಈಜಿಪ್ಟ್ ತಂಡದ ಡಿಫೆಂಡರ್ ಮರ್ವಾನ್ ಅಟ್ಟಿಯಾ ಅವರು ಅರ್ಜೆಂಟೀನಾದ ಲಿಸಾಂಡ್ರೊ ಮಾರ್ಟಿನೆಜ್ ವಿರುದ್ಧ ಫೌಲ್ ಮಾಡಿದ್ದಾರೆ ಎಂದು ತೀರ್ಮಾನಿಸ ಲಾಯಿತು. ಈ ತೀರ್ಪು ವಿವಾದಕ್ಕೆ ತಿರುಗಿತು. ಆದರೂ ಝಿಕೊ ಅವರು 67ನೇ ನಿಮಿಷದಲ್ಲಿ ಗೋಲು ಹೊಡೆದು 2–0 ಮುನ್ನಡೆ ಒದಗಿಸಿಕೊಟ್ಟರು.ಅರ್ಜೆಂಟೀನಾದ ಕ್ರಿಸ್ಟಿಯನ್ ರೊಮೆರಿಯೊ(79ನೇ ನಿ), ಲಯೊನೆಲ್ ಮೆಸ್ಸಿ (83ನಿ) ಮತ್ತು ಎಂಝೊ ಫರ್ನಾಂಡಿಸ್ (90+3ನಿ) ಅವರು ಗೋಲು ಹೊಡೆದು ಗೆಲುವಿನ ಸಂಭ್ರಮ ಆಚರಿಸಿದರು.ಆದರೆ; ಪಂದ್ಯದ ಅಂತಿಮ ಕ್ಷಣಗಳಲ್ಲಿ ಅರ್ಜೆಂಟೀನಾ ಆಟಗಾರ ಅಲೆಕ್ಸಿಸ್ ಮ್ಯಾಕ್ ಆಲಿಸ್ಟರ್ ಅವರು ಈಜಿಪ್ಟ್ನ ಹಮಿದಿ ಫಾತಿ ಅವರ ಜರ್ಸಿ ಎಳೆದರೂ ರೆಫರಿ ಪೆನಾಲ್ಟಿ ನೀಡಲಿಲ್ಲ. ಕನಿಷ್ಠ ಪಕ್ಷ ವಿಎಆರ್ ಪರಿಶೀಲನೆಯನ್ನೂ ನಡೆಸಲಿಲ್ಲ ಎಂದು ಈಜಿಪ್ಟ್ ಆಟಗಾರರು ಹಾಗೂ ಕೋಚ್ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು.‘ರೆಫರಿಗಳು ಅರ್ಜೆಂಟೀನಾ ತಂಡಕ್ಕೆ ಪರೋಕ್ಷವಾಗಿ ಬೆಂಬಲ ನೀಡಿದ್ದಾರೆ ಮತ್ತು ತಮ್ಮ ತಂಡಕ್ಕೆ ಅನ್ಯಾಯವಾಗಿದೆ’ ಎಂದು ಈಜಿಪ್ಟ್ ಕೋಚ್ ಹೊಸಮ್ ಹಸನ್ ಆರೋಪಿಸಿದರು.‘ನಾನು ಯಾವುದೇ ಮೃದು ಭಾಷೆಯ ಪದಗಳೊಂದಿಗೆ ಇದನ್ನು ವಿವರಿಸುವುದಿಲ್ಲ. ಅಲ್ಲದೇ ಅದೃಷ್ಟ ಕೈಕೊಟ್ಟಿತು ಎಂದೂ ಹೇಳುವುದಿಲ್ಲ. ನಮಗೆ ಘೋರ ಅನ್ಯಾಯವಾಗಿದೆ. ಯಾವುದೇ ಗೌರವ ಅಥವಾ ಸಭ್ಯ ಆಟವನ್ನು ನಾವು ನೋಡಿಲ್ಲ. ಅವರಿಗೆ ಹಾಲಿ ಚಾಂಪಿಯನ್ ತಂಡವನ್ನು ಸ್ಪರ್ಧೆಯಲ್ಲಿ ಉಳಿಸಿಕೊಳ್ಳ ಬೇಕಿದೆ. ಮೆಸ್ಸಿ ಅವರು ಕಣದಲ್ಲಿ ಇರುವುದು ಬೇಕಿದೆ. ಕೆಲವೊಮ್ಮೆ ಫುಟ್ಬಾಲ್ ಕ್ರೀಡೆಯು ತಾಂತ್ರಿಕ ಅಂಶಗಳಿಗಿಂತ ಬಾಹ್ಯ ಕಾರಣಗಳಿಂದಲೂ ನಡೆಯುತ್ತಿರುತ್ತದೆ’ ಎಂದು ಹಸನ್ ಅಸಮಾಧಾನ ವ್ಯಕ್ತಪಡಿಸಿದರು.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260709-51-875730663