ಕಾರವಾರ: ಭೂಕುಸಿತ ತಡೆಗೆ ಜಿಲ್ಲಾಡಳಿತ ನಿರ್ಲಕ್ಷ್ಯ
ಕಾರವಾರ: ಮಳೆಗಾಲ ಬಿರುಸು ಪಡೆಯುತ್ತಿದ್ದಂತೆ ಜಿಲ್ಲೆಯಲ್ಲಿ ಭೂಕುಸಿತದ ಆತಂಕ ಹೆಚ್ಚಿದ್ದು, ರಾಷ್ಟ್ರೀಯ ಹೆದ್ದಾರಿ ಪಕ್ಕದ ಅಪಾಯಕಾರಿ ಪ್ರದೇಶಗಳಲ್ಲಿ ಜಿಲ್ಲಾಡಳಿತ ಸುರಕ್ಷತಾ ಕ್ರಮ ವಹಿಸುವಲ್ಲಿ ನಿರ್ಲಕ್ಷಿಸಿದೆ ಎಂಬ ಆರೋಪ ಹೆಚ್ಚಿದೆ.ಜಿಲ್ಲೆಯ ಕರಾವಳಿ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಗುಡ್ಡ ಕತ್ತರಿಸಲಾಗಿದೆ. ಅರೆಬೈಲ್, ದೇವಿಮನೆ ಘಟ್ಟ ಪ್ರದೇಶದಲ್ಲಿಯ

ಕಾರವಾರ: ಮಳೆಗಾಲ ಬಿರುಸು ಪಡೆಯುತ್ತಿದ್ದಂತೆ ಜಿಲ್ಲೆಯಲ್ಲಿ ಭೂಕುಸಿತದ ಆತಂಕ ಹೆಚ್ಚಿದ್ದು, ರಾಷ್ಟ್ರೀಯ ಹೆದ್ದಾರಿ ಪಕ್ಕದ ಅಪಾಯಕಾರಿ ಪ್ರದೇಶಗಳಲ್ಲಿ ಜಿಲ್ಲಾಡಳಿತ ಸುರಕ್ಷತಾ ಕ್ರಮ ವಹಿಸುವಲ್ಲಿ ನಿರ್ಲಕ್ಷಿಸಿದೆ ಎಂಬ ಆರೋಪ ಹೆಚ್ಚಿದೆ.ಜಿಲ್ಲೆಯ ಕರಾವಳಿ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಗುಡ್ಡ ಕತ್ತರಿಸಲಾಗಿದೆ. ಅರೆಬೈಲ್, ದೇವಿಮನೆ ಘಟ್ಟ ಪ್ರದೇಶದಲ್ಲಿಯೂ ರಸ್ತೆ ವಿಸ್ತರಣೆಗೆ ಗುಡ್ಡ ಕತ್ತರಿಸುವ ಕೆಲಸ ನಡೆದಿದೆ. ಇದರಿಂದ ಭೂಕುಸಿತ ಸಂಭಾವ್ಯತೆ ಹೆಚ್ಚಿದೆ ಎಂಬುದಾಗಿ ಭಾರತೀಯ ಭೂ ಸರ್ವೇಕ್ಷಣಾ ಸಂಸ್ಥೆಯ (ಜಿಎಸ್ಐ) ತಜ್ಞರು ಮೂರು ವರ್ಷದ ಹಿಂದೆಯೇ ವರದಿ ಸಲ್ಲಿಸಿದ್ದರು.ಮಳೆಗಾಲದ ಆರಂಭದಲ್ಲಿಯೇ ಹೊನ್ನಾವರ ಪಟ್ಟಣದ ರಾಮತೀರ್ಥ ಕ್ರಾಸ್ ಸಮೀಪ ಭೂಕುಸಿತ ಉಂಟಾಗಿತ್ತು. ಭೂಕುಸಿತದ ಆತಂಕದಲ್ಲಿ ಕಾರವಾರ ತಾಲ್ಲೂಕಿನ ಸಂಕ್ರುಬಾಗ ಘಟ್ಟ ಪ್ರದೇಶದಲ್ಲಿ ಹೆದ್ದಾರಿಯ ಒಂದು ಪಥದಲ್ಲಿ ಮಳೆಗಾಲ ಮುಗಿಯುವವರೆಗೆ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಮೂರು ದಿನಗಳ ಹಿಂದೆ ಆದೇಶಿಸಿದ್ದಾರೆ. ಸದ್ಯ ಆ ಸ್ಥಳದಲ್ಲಿ ವಾಹನ ಸಂಚರಿಸದಂತೆ ಬಿಣಗಾದಲ್ಲಿ ರಸ್ತೆಗೆ ಜಲ್ಲಿ ರಾಶಿ ಸುರಿದಿಡಲಾಗಿದೆ.‘ಮಳೆಗಾಲದಲ್ಲಿ ಗುಡ್ಡ ಕುಸಿದು ಬೀಳಬಹುದು ಎಂಬ ಕಾರಣಕ್ಕೆ ರಾಷ್ಟ್ರೀಯ ಹೆದ್ದಾರಿಯ ಒಂದು ಪಥದಲ್ಲಿ ಸಂಚಾರ ಸ್ಥಗಿತಗೊಳಿಸುವ ಕೆಲಸ ಕಳೆದ ಎರಡು ವರ್ಷಗಳಿಂದ ನಡೆಯುತ್ತಿದೆ. ಆದರೆ, ಎರಡು ವರ್ಷ ಕಳೆದರೂ ಸುರಕ್ಷತೆಗೆ ಕ್ರಮವಹಿಸಲು ಅಧಿಕಾರಿಗಳು ಮುಂದಾಗಿಲ್ಲ. ಅಪಾಯಕಾರಿ ತಿರುವು ಇರುವ ಸಂಕ್ರುಬಾಗ ಘಟ್ಟ ಪ್ರದೇಶದಲ್ಲಿ ಒಂದೇ ಪಥದಲ್ಲಿ ದ್ವಿಮುಖವಾಗಿ ವಾಹನಗಳು ಸಂಚರಿಸುವುದು ಅಪಘಾತಕ್ಕೆ ಎಡೆಮಾಡಿಕೊಡಬಹುದು’ ಎಂದು ಸಾಮಾಜಿಕ ಕಾರ್ಯಕರ್ತ ರಾಜೀವ ನಾಯ್ಕ ದೂರಿದರು.‘ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಸರಿಯಾದ ರೀತಿಯಲ್ಲಿ ಗುಡ್ಡಗಳನ್ನು ಕತ್ತರಿಸದ ಪರಿಣಾಮ ತಂಡ್ರಕುಳಿ, ಬರ್ಗಿ, ಶಿರೂರಿನಲ್ಲಿ ಗುಡ್ಡ ಕುಸಿತದ ದುರ್ಘಟನೆ ನಡೆದಿದೆ. ಕಳೆದೊಂದು ದಶಕದಿಂದಲೂ ಕರಾವಳಿಯ ಹೆದ್ದಾರಿ ಮಳೆಗಾಲದಲ್ಲಿ ಭೂಕುಸಿತ ವಲಯವಾಗಿ ಮಾರ್ಪಟ್ಟಿದೆ. ಇಷ್ಟೊಂದು ಸುದೀರ್ಘ ಅವಧಿಯಿಂದ ಪ್ರತಿ ಮಳೆಗಾಲಕ್ಕೆ ಮುನ್ನ ಸಂಭವನೀಯ ಕುಸಿತ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ವಹಿಸುವ ಯಾವ ಕೆಲಸವನ್ನೂ ಗುತ್ತಿಗೆ ಕಂಪನಿ, ಜಿಲ್ಲಾಡಳಿತ ನಡೆಸದ ಪರಿಣಾಮ ಜನರು ಆತಂಕದಲ್ಲಿ ಸಂಚರಿಸುವ ಸ್ಥಿತಿ ಉಂಟಾಗಿದೆ. ಈ ನಿರ್ಲಕ್ಷಕ್ಕೆ ಜನಪ್ರತಿನಿಧಿಗಳೂ ಹೊಣೆ’ ಎಂದು ಅಂಕೋಲಾದ ವಿನಾಯಕ ನಾಯಕ ದೂರಿದರು.17 ಸ್ಥಳಗಳಲ್ಲಿಯೂ ಕ್ರಮವಿಲ್ಲ!ಕರಾವಳಿ ಭಾಗದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ–66, ಶಿರಸಿ–ಕುಮಟಾ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ–766ಇ ಪ್ರದೇಶದ 17 ಸ್ಥಳಗಳಲ್ಲಿ ಜಿಎಸ್ಐ ತಜ್ಞರು ಗುರುತಿಸಿದ ಭೂಕುಸಿತ ವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶಿಫಾರಸ್ಸು ಮಾಡಿದ ಕಾಮಗಾರಿಗಳನ್ನು ಕೈಗೊಂಡಿಲ್ಲ ಎಂದು ಅಧಿಕಾರಿಯೊಬ್ಬರು ಈಚೆಗೆ ಉಸ್ತುವಾರಿ ಸಚಿವ ಯು.ಟಿ ಖಾದರ್ ನಡೆಸಿದ್ದ ಸಭೆಯಲ್ಲಿ ತಿಳಿಸಿದ್ದರು.‘ರಾಷ್ಟ್ರೀಯ ಹೆದ್ದಾರಿ–66ರಲ್ಲಿ 13 ಸ್ಥಳಗಳಲ್ಲಿ ಭೂಕುಸಿತ ವಲಯಗಳಿವೆ. ಮುನ್ನೆಚ್ಚರಿಕೆ ಕ್ರಮಕ್ಕೆ ಐಆರ್ಬಿ ಇನ್ಫ್ರಾಸ್ಟ್ರಕ್ಚರ್ ಕಂಪನಿಗೆ ಹಲವು ಬಾರಿ ನೋಟಿಸ್ ಮೂಲಕ ಸೂಚಿಸಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.ಶೇ 29ರಷ್ಟು ಭೂಕುಸಿತ ಪ್ರದೇಶಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ 29ರಷ್ಟು ಗುಡ್ಡ ಪ್ರದೇಶಗಳು ಕುಸಿತದ ಅಪಾಯ ಹೊಂದಿವೆ ಎಂದು ಮಣಿಪಾಲಯ ಎಂಐಟಿ ಸಂಸ್ಥೆಯ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸಲ್ಲಿಸಿರುವ ಸಂಶೋಧನೆ ವರದಿ ಹೇಳಿದೆ.ಈ ಪ್ರದೇಶಗಳಲ್ಲಿ ಬಹುತೇಕ ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲೇ ಇವೆ. ಶಿರೂರು ದುರ್ಘಟನೆ ಬಳಿಕ ಜಿಎಸ್ಐ ತಜ್ಞರು ಕೈಗೊಂಡಿದ್ದ ಅಧ್ಯಯನದಲ್ಲಿಯೂ ಹೆದ್ದಾರಿ ಅಂಚಿನ 8 ಸ್ಥಳಗಳು ಕುಸಿತದ ಅಪಾಯ ಎದುರಿಸುತ್ತಿವೆ ಎಂದು ತಿಳಿಸಿದ್ದರು. ಶಿರೂರು ಹೊರತುಪಡಿಸಿದರೆ ಉಳಿದ ಯಾವ ಸ್ಥಳದಲ್ಲಿಯೂ ಸುರಕ್ಷತಾ ಕ್ರಮ ಕೈಗೊಂಡಿಲ್ಲ ಎಂಬುದು ಜನರ ದೂರು.ಕೆ.ಶಿವಕುಮಾರ್, ಎನ್ಎಚ್ಎಐ ಯೋಜನಾ ನಿರ್ದೇಶಕರಾಷ್ಟ್ರೀಯ ಹೆದ್ದಾರಿ–66ರಲ್ಲಿ ಕೆಲವೆಡೆ ಮಳೆಗಾಲ ಆರಂಭವಾದ ಬಳಿಕ ಗುಡ್ಡ ಕುಸಿತ ತಡೆಗೆ ಗೇಬಿಯನ್ ವಾಲ್ ನಿರ್ಮಾಣ ಸೇರಿ ಸುರಕ್ಷತಾ ಕ್ರಮ ಆರಂಭಗೊಂಡಿದೆ, ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260709-20-2005707932