ವೇತನ ಕಡಿತ: ರಾಮಮಂದಿರದ ನಗದು ಎಣಿಕೆ ಸಿಬ್ಬಂದಿ ದಿಢೀರ್ ರಾಜೀನಾಮೆ
ಲಖನೌ: ವೇತನ ಕಡಿತ ಮತ್ತು ಕೆಲಸದ ವೇಳಾಪಟ್ಟಿ ಬದಲಾವಣೆಯನ್ನು ಖಂಡಿಸಿ ಅಯೋಧ್ಯೆಯ ರಾಮಮಂದಿರದ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ 23 ನಗದು ಎಣಿಕೆ ಸಿಬ್ಬಂದಿ ಶುಕ್ರವಾರ ದಿಢೀರ್ ರಾಜೀನಾಮೆ ನೀಡಿದ್ದಾರೆ. ದೇವಸ್ಥಾನದಲ್ಲಿ ಕಾಣಿಕೆ ಹಣ ಎಣಿಕೆ ಕಾರ್ಯದಲ್ಲಿ ತೊಡಗಿದ್ದ ಒಟ್ಟು 36 ಉದ್ಯೋಗಿಗಳ ಪೈಕಿ 13 ಮಂದಿ ಮಾತ್ರ ಕೆಲಸಕ್ಕೆ ಹಾಜರಾಗಿದ್ದಾರೆ ಎಂದು ಮೂಲಗಳು

ಲಖನೌ: ವೇತನ ಕಡಿತ ಮತ್ತು ಕೆಲಸದ ವೇಳಾಪಟ್ಟಿ ಬದಲಾವಣೆಯನ್ನು ಖಂಡಿಸಿ ಅಯೋಧ್ಯೆಯ ರಾಮಮಂದಿರದ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ 23 ನಗದು ಎಣಿಕೆ ಸಿಬ್ಬಂದಿ ಶುಕ್ರವಾರ ದಿಢೀರ್ ರಾಜೀನಾಮೆ ನೀಡಿದ್ದಾರೆ. ದೇವಸ್ಥಾನದಲ್ಲಿ ಕಾಣಿಕೆ ಹಣ ಎಣಿಕೆ ಕಾರ್ಯದಲ್ಲಿ ತೊಡಗಿದ್ದ ಒಟ್ಟು 36 ಉದ್ಯೋಗಿಗಳ ಪೈಕಿ 13 ಮಂದಿ ಮಾತ್ರ ಕೆಲಸಕ್ಕೆ ಹಾಜರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೆಲಸದ ವೇಳಾಪಟ್ಟಿ ಬದಲಾವಣೆಯನ್ನು ವಿರೋಧಿಸಿದ್ದ ಸಿಬ್ಬಂದಿ, ಹಳೆಯ ವೇಳಾಪಟ್ಟಿಯನ್ನೇ ಮುಂದುವರಿಸುವಂತೆ ಆಡಳಿತ ಮಂಡಳಿಯನ್ನು ಒತ್ತಾಯಿಸಿದ್ದರು. ಆದರೆ, ಅವರ ಬೇಡಿಕೆಗೆ ಟ್ರಸ್ಟ್ ಸ್ಪಂದಿಸಿರಲಿಲ್ಲ ಎಂದು ವರದಿಯಾಗಿದೆ.‘ನಾವು ಎರಡು ಶಿಫ್ಟ್ಗಳಲ್ಲಿ ಕೆಲಸ ಮಾಡುತ್ತಿದ್ದೆವು. ಆದರೆ, ಹೊಸ ವೇಳಾಪಟ್ಟಿಯಲ್ಲಿ ಕೇವಲ ಒಂದು ಶಿಫ್ಟ್ ಮಾತ್ರ ಇದೆ ಮತ್ತು ತಮ್ಮ ಕೆಲಸದ ಅವಧಿಯನ್ನು ಆರರಿಂದ ಒಂಬತ್ತು ಗಂಟೆಗೆ ಹೆಚ್ಚಿಸಲಾಗಿದೆ’ ಎಂದು ಸಿಬ್ಬಂದಿಯೊಬ್ಬರು ಅಳಲು ತೊಡಿಕೊಂಡಿದ್ದಾರೆ.ಅಲ್ಲದೆ, ಆಡಳಿತ ಮಂಡಳಿಯು ನಮ್ಮ ವೇತನವನ್ನೂ ಕಡಿತಗೊಳಿಸಿದೆ ಎಂದೂ ಆರೋಪಿಸಿರುವ ಅವರು, ನಮಗೆ ಸಿಗುತ್ತಿದ್ದ ರಜೆಗಳನ್ನು ಕಡಿತಗೊಳಿಸಲಾಗಿದೆ ಎಂದಿದ್ದಾರೆ.ಈ ಹಿಂದೆ ಪ್ರತಿ ಉದ್ಯೋಗಿಗೆ ಮಾಸಿಕ ₹14,755 ವೇತನ ನೀಡಲಾಗುತ್ತಿತ್ತು. ಆದರೆ, ಈಗ ಕೆಲವು ಉದ್ಯೋಗಿಗಳಿಗೆ ಹೆಚ್ಚಿನ ಹಣ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.ಸಿಬ್ಬಂದಿ ತಮ್ಮ ಕುಂದುಕೊರತೆಗಳನ್ನು ದೇವಸ್ಥಾನದ ಆಡಳಿತ ಮಂಡಳಿಯ ಮುಂದೆ ಮಂಡಿಸಿ, ಹೊಸ ವ್ಯವಸ್ಥೆಯನ್ನು ರದ್ದುಗೊಳಿಸುವಂತೆ ಕೋರಿದ್ದರು. ಬೇಡಿಕೆಗಳನ್ನು ತಿರಸ್ಕರಿಸಿದ ಬೆನ್ನಲ್ಲೇ ಅವರು ರಾಜೀನಾಮೆ ನೀಡಿದ್ದಾರೆ. ಆದರೆ, ಹಣ ಎಣಿಕೆಯಲ್ಲಿ ತೊಡಗಿದ್ದ ಅನೇಕರನ್ನು ಹೌಸ್ಕೀಪಿಂಗ್ (ಸ್ವಚ್ಛತಾ) ವಿಭಾಗದಿಂದ ಇಲ್ಲಿಗೆ ವರ್ಗಾಯಿಸಲಾಗಿತ್ತು ಎಂದು ಕೆಲವು ವರದಿಗಳು ತಿಳಿಸಿವೆ.ದೇಣಿಗೆ ಹಣದ ದುರುಪಯೋಗ ಆಗಿರುವ ಬಗ್ಗೆ ವರದಿಯಾದ ನಂತರ ಆಡಳಿತ ಮಂಡಳಿಯು ಅವರನ್ನು ಮರಳಿ ಹೌಸ್ಕೀಪಿಂಗ್ ವಿಭಾಗಕ್ಕೆ ಕಳುಹಿಸಲು ನಿರ್ಧರಿಸಿತ್ತು. ಆದರೆ, ಅಲ್ಲಿಗೆ ಹೋಗಲು ಅವರು ಹಿಂದೇಟು ಹಾಕಿದ್ದರಿಂದ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.