ಐಐಎಸ್ಸಿ ಘಟಿಕೋತ್ಸವ; 1570 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಬೆಂಗಳೂರು; 'ವಿಜ್ಞಾನ ಇಂದು ಒಂದು ಪ್ರತ್ಯೇಕ ಅಧ್ಯಯನ ಶಿಸ್ತಾಗಿ ಉಳಿದಿಲ್ಲ. ವಿಜ್ಞಾನಿಗಳು ಪ್ರಯೋಗಾಲಯದಲ್ಲಿ ಒಂಟಿ ಕುಳಿತು ಸಂಶೋಧನೆ ಮಾಡುವ ದಿನಗಳು ಹೋಗಿವೆ. ಎಲ್ಲ ಸಂಶೋಧನೆಗಳು, ಸಂಶೋಧಕರು ಸಮಾಜದ ಒಳಿತಿಗಾಗಿ ಒಗ್ಗೂಡಬೇಕಾದ ಕಾಲಘಟ್ಟ ಇದು' ಎಂದು ಎಂ.ಎಸ್. ಸ್ವಾಮಿ ನಾಥನ್ ರಿಸರ್ಚ್ ಫೌಂಢೇಶನ್ ಅಧ್ಯಕ್ಷೆ ಸೌಮ್ಯ ಸ್ವಾಮಿನಾಥನ್ ಪ್ರತಿಪಾದಿಸಿದರು.ನಗರದ ಜೆ.ಎನ್.ಟ

ಬೆಂಗಳೂರು; 'ವಿಜ್ಞಾನ ಇಂದು ಒಂದು ಪ್ರತ್ಯೇಕ ಅಧ್ಯಯನ ಶಿಸ್ತಾಗಿ ಉಳಿದಿಲ್ಲ. ವಿಜ್ಞಾನಿಗಳು ಪ್ರಯೋಗಾಲಯದಲ್ಲಿ ಒಂಟಿ ಕುಳಿತು ಸಂಶೋಧನೆ ಮಾಡುವ ದಿನಗಳು ಹೋಗಿವೆ. ಎಲ್ಲ ಸಂಶೋಧನೆಗಳು, ಸಂಶೋಧಕರು ಸಮಾಜದ ಒಳಿತಿಗಾಗಿ ಒಗ್ಗೂಡಬೇಕಾದ ಕಾಲಘಟ್ಟ ಇದು' ಎಂದು ಎಂ.ಎಸ್. ಸ್ವಾಮಿ ನಾಥನ್ ರಿಸರ್ಚ್ ಫೌಂಢೇಶನ್ ಅಧ್ಯಕ್ಷೆ ಸೌಮ್ಯ ಸ್ವಾಮಿನಾಥನ್ ಪ್ರತಿಪಾದಿಸಿದರು.ನಗರದ ಜೆ.ಎನ್.ಟಾಟಾ ಸಭಾಂಗಣದಲ್ಲಿ ಶುಕ್ರವಾರ ನಡೆದ ಭಾರತೀಯ ವಿಜ್ಞಾನ ಸಂಸ್ಥೆಯ ಘಟಿಕೋತ್ಸವದಲ್ಲಿ ವರ್ಚವಲ್ ಘಟಿಕೋತ್ಸವ ಭಾಷಣ ಮಾಡಿದ ಅವರು, 'ಹವಾಮಾನ ತಜ್ಞರಿಗೆ ಆರ್ಥಿಕ ತಜ್ಞರ ನೆರವು ಬೇಕಾಗುತ್ತದೆ. ಎಂಜಿನಿಯರುಗಳಿಗೆ ಜೀವಶಾಸ್ತ್ರಜ್ಞರ ಸಲಹೆಗಳು ನೆರವಾಗುತ್ತವೆ. ಫಿಸಿಶಿಯನ್ ಗಳಿಗೆ ಡಾಟಾ ವಿಜ್ಞಾನದ ಒಳನೋಟಗಳು ಬೇಕು. ಎಕಾಲಜಿಸ್ಟ್ ಗಳಿಗೆ ಕೃತಕ ಬುದ್ಧಿಮತ್ತೆ ನೆರವು ಬೇಕು. ಸಾರ್ವಜನಿಕ ನೀತಿ ನಿರೂಪಕರಿಗೆ ವರ್ತನಾ ಶಾಸ್ತ್ರ ಅರಿತವರ ಸಹಕಾರ ಬೇಕಾಗುತ್ತದೆ. ಅಂತರ್ ಶಿಸ್ತೀಯ ಅಧ್ಯಯನಗಳಿಲ್ಲದೆ ಸಂಶೋಧನೆಗಳು ಅಪೂರ್ಣವಾಗುತ್ತವೆ' ಎಂದು ಅಭಿಪ್ರಾಯಪಟ್ಟರು.' ನಾವೀಗ ಸುಳ್ಳು ಮಾಹಿತಿಗಳು ಮತ್ತು ಮನುಷ್ಯರ ನಡುವೆ ವಿಶ್ವಾಸ ಕುಸಿಯುತ್ತಿರುವ ಕಾಲಘಟ್ಟದಲ್ಲಿದ್ದೇವೆ. ವೈರುಧ್ಯವೆಂಬಂತೆ ಮನುಕುಲವು ವಿಜ್ಞಾನವನ್ನೇ ಹೆಚ್ಚು ಅವಲಂಬಿಸಿದೆ. ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ಜಗತ್ತಿನ ಎಲ್ಲಾ ವಿಜ್ಞಾನಿಗಳೂ ಮನುಷ್ಯರನ್ನು ಕಾಪಾಡುವ ಔಷಧಗಳನ್ನು ಕಂಡು ಹಿಡಿಯುವಲ್ಲಿ ಒಟ್ಟಾಗಿದ್ದರು. ಅಂಥ ಒಗ್ಗಟ್ಟು ಈಗಲೂ, ಮುಂದೆಯೂ ಅತ್ಯಗತ್ಯ' ಎಂದರು.'ಕೃತಕ ಬುದ್ಧಿಮತ್ತೆಯು ಈಗ ವೈಜ್ಞಾನಿಕ ಸಂಶೋಧನೆಗಳನ್ನು ರೂಪಾಂತರಿಸುತ್ತಿದೆ. ಹವಾಮಾನ ಬದಲಾವಣೆಯು ಪರಿಸರದ ವ್ಯವಸ್ಥೆ ಮತ್ತು ಅರ್ಥಿಕತೆಯನ್ನು ಬದಲಾಯಿಸುತ್ತಿದೆ. ಸಾಂಕ್ರಾಮಿಕ ರೋಗಗಳು ಬೆದರಿಕೆಯನ್ನು ಒಡ್ಡುತ್ತಿವೆ. ಮಾರಣಾಂತಿಕ ರೋಗಗಳು ಹೆಚ್ಚಾಗುತ್ತಿವೆ. ಇಂಧನ ವ್ಯವಸ್ಥೆಗಳು ಮರುರೂಪುಗೊಳ್ಳುತ್ತಿವೆ. ಜೀವಶಾಸ್ತ್ರ,ಕಂಪ್ಯೂಟಿಂಗ್ ತಂತ್ರಜ್ಞಾನದಲ್ಲೂ ಸಂಶೋಧನೆಗಳು ನಡೆದಿವೆ. ಇವೆಲ್ಲ ಒಂದರೊಂದಿಗೆ ಇನ್ನೊಂದು ಸಂಬಂಧವನ್ನು ಹೊಂದಿರುವಂಥವು. ಹೀಗಾಗಿ ಐಐಎಸ್ಸಿಯಂಥ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ' ಎಂದು ಹೇಳಿದರು.'ವಿಜ್ಞಾನ ಮತ್ತು ಸಂಶೋಧನೆಗಳು ಸಮಗ್ರತೆಯಿಂದ, ಪಾರದರ್ಶಕತೆಯಿಂದ ಸಮಾಜವನ್ನು ತಲುಪಬೇಕು. ದೇಶವು ವೈಜ್ಞಾನಿಕ ಉತ್ಕೃಷ್ಟ ತೆಯ ವಿಚಾರದಲ್ಲಿ ಗಮನ ಸೆಳೆಯುತ್ತಿದೆ. ಆದರೆ ಅದಷ್ಟೇ ಸಾಲದು. ಸಂಶೋಧನೆಗಳು ಈ ಕಾಲದ ಅಗತ್ಯವನ್ನು ಪೂರೈಸುವಂತಿರಬೇಕು. ನೈತಿಕವಾಗಿ ಬಲಯುತವಾಗಿರಬೇಕು' ಎಂದು ಪ್ರತಿಪಾದಿಸಿದರು.'ಸುಸ್ಥಿರ ಕೃಷಿ, ಸೌಕರ್ಯಯುತ ನಗರ, ಉತ್ತಮ ಸಾರ್ವಜನಿಕ ಆರೋಗ್ಯ, ಜೈವಿಕ ವೈವಿಧ್ಯ ಸಂರಕ್ಷಣೆಯಂಥ ಮಹಾನ್ ಉದ್ದೇಶಗಳು ಸಂಶೋಧನೆಗಳಿರಬೇಕು' ಎಂದ ಅವರು, 'ವೈಜ್ಞಾನಿಕ ಸಂಶೋಧನೆಗಳ ಯಶಸ್ಸು ಎಂಬುದು ಪ್ರತಿಷ್ಟಿತ ವಿಶ್ವವಿದ್ಯಾಲಯಗಳ ಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸುವುದರಲ್ಲಿ ಇರುವುದಿಲ್ಲ. ಜನರ ಬದುಕನ್ನು ಬದಲಿಸುವುದರಲ್ಲಿ ಇರುತ್ತದೆ' ಎಂದು ಹೇಳಿದರು.'ಭಾರತವು ಕ್ವಾಂಟಮ್ ತಂತ್ರಜ್ಞಾನ, ಸೆಮಿಕಂಡಕ್ಟರ್, ಜೈವಿಕ ತಂತ್ರಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನ, ಡಿಜಿಟಲ್ ಸಾರ್ವಜನಿಕ ಆರೋಗ್ಯದಂಥ ಕ್ಷೇತ್ರಗಳಲ್ಲಿ ಮಹತ್ವದ ಸಂಶೋಧನೆಗಳನ್ನು ನಡೆಸುತ್ತಿದೆ. ಆದರೆ ನೈತಿಕತೆ ಬಹಳ ಮುಖ್ಯ. ಜನರ ಸಮಸ್ಯೆ ಪರಿಹರಿಸದಿದ್ದರೆ ಸಂಶೋಧನೆಗೆ ಮಹತ್ವ ಪ್ರಾಪ್ತಿಯಾಗದು' ಎಂದು ಅಭಿಪ್ರಾಯ ಪಟ್ಟರು.ಇಸ್ರೋ ಅಧ್ಯಕ್ಷ ವಿ.ನಾರಾಯಣನ್ ಮಾತನಾಡಿ, 'ಸಂಸ್ಥೆಯ ಪ್ರಯೋಗಗಳು ಯಶಸ್ವಿಯಾಗುವಲ್ಲಿ ಐಐಎಸ್ಸಿ ಸಹಯೋಗವು ಸಾಕಷ್ಟು ನೆರವಾಗಿದೆ' ಎಂದರು.ಐಐಎಸ್ಸಿ ಆಡಳಿತಮಂಡಳಿ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಅವರೂ ವರ್ಚುವಲ್ ಆಗಿ ಶುಭ ಹಾರೈಸಿದರು.ನಿರ್ದೇಶಕ ಗೋವಿಂದನ್ ರಂಗರಾಜನ್, ರಿಜಿಸ್ಟ್ರಾರ್ ಪ್ರೊ.ನಾಗೇಶ್, ಎಂಜಿನಿಯರಿಂಗ್ ವಿಭಾಗದ ಡೀನ್ ಜಯಂತ್ ಮೋದಕ್, ವಿಜ್ಞಾನ ವಿಭಾಗದ ಡೀನ್ ಬಿ.ಅಶೋಕನ್, ಸ್ನಾತಕ ವಿಭಾಗದ ಸಹಾಯಕ ಡೀನ್ ದೀಪ್ಶಿಕಾ ಚಕ್ರವರ್ತಿ ಪಾಲ್ಗೊಂಡಿದ್ದರು.83 ವಿದ್ಯಾರ್ಥಿಗಳಿಗೆ ಪದಕಗಳನ್ನು ಪ್ರದಾನ ಮಾಡಲಾಯಿತು. 1,452 ಪಿಎಚ್ಡಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ 118 ಸ್ನಾತಕ ವಿದ್ಯಾರ್ಥಿಗಳು ಪದವಿ ಪಡೆದರು.