ಮೀಸಲಿಟ್ಟ ರಸ್ತೆ ಪಕ್ಕದಲ್ಲೇ ಬೀದಿಬದಿ ವ್ಯಾಪಾರಿಗಳಿಗೆ ಅವಕಾಶ: ಸಿಎಂ ಡಿಕೆಶಿ
ಬೆಳಗಾವಿ: 'ಬೆಂಗಳೂರಿನಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಮುಖ್ಯ ರಸ್ತೆಗಳ ಬದಲಿಗೆ, ಅವರಿಗಾಗಿಯೇ ಮೀಸಲಿಟ್ಟ ರಸ್ತೆಗಳ ಪಕ್ಕದಲ್ಲಿ ವ್ಯಾಪಾರ ಮಾಡಲು ಸ್ಥಳಾವಕಾಶ ಕಲ್ಪಿಸಲಾಗುವುದು' ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಕೆಲವರಿಗೆ ಇದು ಕಠಿಣ ನಿರ್ಧಾರ ಎನಿಸಬಹುದು. ಆದರೆ, ಸುಪ್ರೀಂಕೋರ್ಟ್ ಆದೇಶದಂತ

ಬೆಳಗಾವಿ: 'ಬೆಂಗಳೂರಿನಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಮುಖ್ಯ ರಸ್ತೆಗಳ ಬದಲಿಗೆ, ಅವರಿಗಾಗಿಯೇ ಮೀಸಲಿಟ್ಟ ರಸ್ತೆಗಳ ಪಕ್ಕದಲ್ಲಿ ವ್ಯಾಪಾರ ಮಾಡಲು ಸ್ಥಳಾವಕಾಶ ಕಲ್ಪಿಸಲಾಗುವುದು' ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಕೆಲವರಿಗೆ ಇದು ಕಠಿಣ ನಿರ್ಧಾರ ಎನಿಸಬಹುದು. ಆದರೆ, ಸುಪ್ರೀಂಕೋರ್ಟ್ ಆದೇಶದಂತೆ ಇದನ್ನು ಜಾರಿಗೊಳಿಸಲೇಬೇಕಿದೆ. ಬೆಂಗಳೂರಿನ ಎಲ್ಲ ಪಕ್ಷಗಳ ಶಾಸಕರ ಅಭಿಪ್ರಾಯ ಪಡೆದ ನಂತರವೇ, ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ' ಎಂದರು.'ಬೀದಿಬದಿ ವ್ಯಾಪಾರಿಗಳು ನಿಗದಿತ ಸ್ಥಳಗಳಲ್ಲಿ ಮಾತ್ರ ವ್ಯಾಪಾರ ಮಾಡಬೇಕು. ಸಂಜೆ ವೇಳೆ ಅಲ್ಲಿಂದ ತೆರಳಬೇಕು. ಈ ನಿರ್ಧಾರ ಕೈಗೊಳ್ಳುವ ಮುನ್ನ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ನ ಬೆಂಗಳೂರು ಶಾಸಕರೊಂದಿಗೆ ಸಭೆ ನಡೆಸಲಾಗಿದೆ. ಇದು ಎಲ್ಲರ ಸಾಮೂಹಿಕ ನಿರ್ಧಾರವಾಗಿದೆ' ಎಂದು ತಿಳಿಸಿದರು.'ಮುಖ್ಯ ರಸ್ತೆಗಳನ್ನು ಆಕ್ರಮಿಸಿಕೊಂಡಿರುವ ವ್ಯಾಪಾರಿಗಳಿಂದಾಗಿ ಸಂಚಾರದಟ್ಟಣೆ ಉಂಟಾಗುತ್ತಿದೆ. ಸಮೀಕ್ಷೆಯೊಂದರಲ್ಲಿ 60,000 ಮಂದಿಯನ್ನು ಗುರುತಿಸಲಾಗಿದೆ. ಒಟ್ಟು 30 ಸಾವಿರ ಮಂದಿ ದ್ವಿಚಕ್ರ ವಾಹನಗಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅವರಿಗೆ ವಾಹನಗಳನ್ನು ಒದಗಿಸಲು ಟೆಂಡರ್ ಕರೆಯಬೇಕಿದೆ. ಬೀದಿಬದಿ ವ್ಯಾಪಾರಿಗಳು ಡೇರೆಗಳನ್ನು ಹಾಕುವಂತಿಲ್ಲ. ಸಂಜೆ ವೇಳೆ ಅವರು ತಮ್ಮ ಮನೆಗಳಿಗೆ ಮರಳಬೇಕು' ಎಂದು ಅವರು ಹೇಳಿದರು.'ನಾವು ಸರ್ವೋಚ್ಚ ನ್ಯಾಯಾಲಯದ ಆದೇಶ ಹಾಗೂ ಸಾರ್ವಜನಿಕ ಅಭಿಪ್ರಾಯ ಪಾಲಿಸಬೇಕಿದೆ. ಈಗ ಕೈಗೊಂಡಿರುವ ಕ್ರಮಕ್ಕೆ ಬೆಂಗಳೂರು ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರನ್ನು ಮಾತ್ರ ದೂಷಿಸುವಂತಿಲ್ಲ. ಏಕೆಂದರೆ ಇದು ಬೆಂಗಳೂರಿನ ಎಲ್ಲ ಶಾಸಕರ ಅಭಿಪ್ರಾಯವಾಗಿದೆ. ಈ ಕುರಿತು ಪೊಲೀಸರೊಂದಿಗೂ ಚರ್ಚೆ ನಡೆಸಲಾಗಿದೆ' ಎಂದು ಶಿವಕುಮಾರ್ ತಿಳಿಸಿದರು.'ಸಚಿವ ಸಂಪುಟ ಸೇರ್ಪಡೆಗೆ ಸಂಬಂಧಿಸಿದಂತೆ ಶಾಸಕರಿಂದ ಯಾವುದೇ ಒತ್ತಡವಿಲ್ಲ. ಪಕ್ಷದ ನಾಯಕರು ಬೆಂಗಳೂರಿಗೆ ಬರುತ್ತಿದ್ದಾರೆ. ಆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು' ಎಂದು ಅವರು ಹೇಳಿದರು.ಬೆಳಗಾವಿಯಲ್ಲಿ ಆರ್ಎಸ್ಎಸ್ ಮೂರು ದಿನಗಳ ಕಾಲ ಸಭೆ ನಡೆಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, 'ಕಾನೂನಿನ ನಿಬಂಧನೆಗಳ ಪ್ರಕಾರ ಅದಕ್ಕೆ ಅನುಮತಿ ನೀಡಲಾಗಿದೆ' ಎಂದರು.'ಪ್ರಗತಿ ಪರಿಶೀಲನಾ ಸಭೆ ಸಂದರ್ಭ ಶಾಸಕರು ಮೋಡ ಬಿತ್ತನೆಗೆ ಕುರಿತು ಬೇಡಿಕೆ ಸಲ್ಲಿಸಿದ್ದಾರೆ. ನಾವು ಹಣಕಾಸು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ' ಎಂದು ಮಾಹಿತಿ ನೀಡಿದರು.