ಭಾರತೀಯ ರೈಲ್ವೆ: ಸೋರಿಕೆಗೆ ಬೇಕು ತಡೆ
ಭಾರತೀಯ ರೈಲ್ವೆಯು ಟಿಕೆಟ್ರಹಿತ ಪ್ರಯಾಣದ ದಂಡದ ಮೊತ್ತವನ್ನು ಜುಲೈ 1ರಿಂದ ದುಪ್ಪಟ್ಟುಗೊಳಿಸಿದೆ. ಮೊದಲಿದ್ದ ಕನಿಷ್ಠ ದಂಡದ ಮೊತ್ತವನ್ನು ₹250ರಿಂದ ₹500ಕ್ಕೆ ಹೆಚ್ಚಿಸಲಾಗಿದೆ. ಪ್ರಯಾಣಿಕರು ನಿಗದಿತ ದರದ ಜೊತೆಗೆ ದಂಡ ಪಾವತಿಸಬೇಕು, ನಿರಾಕರಿಸಿದರೆ ನ್ಯಾಯಾಲಯದ ಮೂಲಕ ₹1,000ವರೆಗೆ ಜುಲ್ಮಾನೆ, 6 ತಿಂಗಳ ಜೈಲು ಶಿಕ್ಷೆಯಾಗುತ್ತದೆ. ಮಹಿಳಾ ಬೋಗಿ ಅತಿಕ್ರಮಿಸುವ ಪುರುಷ

ಭಾರತೀಯ ರೈಲ್ವೆಯು ಟಿಕೆಟ್ರಹಿತ ಪ್ರಯಾಣದ ದಂಡದ ಮೊತ್ತವನ್ನು ಜುಲೈ 1ರಿಂದ ದುಪ್ಪಟ್ಟುಗೊಳಿಸಿದೆ. ಮೊದಲಿದ್ದ ಕನಿಷ್ಠ ದಂಡದ ಮೊತ್ತವನ್ನು ₹250ರಿಂದ ₹500ಕ್ಕೆ ಹೆಚ್ಚಿಸಲಾಗಿದೆ. ಪ್ರಯಾಣಿಕರು ನಿಗದಿತ ದರದ ಜೊತೆಗೆ ದಂಡ ಪಾವತಿಸಬೇಕು, ನಿರಾಕರಿಸಿದರೆ ನ್ಯಾಯಾಲಯದ ಮೂಲಕ ₹1,000ವರೆಗೆ ಜುಲ್ಮಾನೆ, 6 ತಿಂಗಳ ಜೈಲು ಶಿಕ್ಷೆಯಾಗುತ್ತದೆ. ಮಹಿಳಾ ಬೋಗಿ ಅತಿಕ್ರಮಿಸುವ ಪುರುಷರು, ರೈಲಿನಲ್ಲಿ ಧೂಮಪಾನ, ಅಪಾಯಕಾರಿ ಪ್ರಯಾಣ, ಅನಧಿಕೃತ ವ್ಯಾಪಾರ, ಭಿಕ್ಷೆ ಬೇಡುವವರ ಮೇಲೆ ಹಾಕುವ ದಂಡದಲ್ಲೂ ಭಾರೀ ಹೆಚ್ಚಳವಾಗಿದೆ. ಈ ಕಠಿಣ ಆದೇಶವು ಆದಾಯ ಸೋರಿಕೆ ತಡೆಯಲು, ಸ್ಲೀಪರ್ ಮತ್ತು ಎಸಿ ಬೋಗಿಗಳಲ್ಲಿ ಟಿಕೆಟ್ ಇಲ್ಲದವರ ಉಪಟಳವನ್ನು ನಿಯಂತ್ರಿಸಲು, ಮಹಿಳೆ ಯರು ಸೇರಿದಂತೆ ಎಲ್ಲ ಪ್ರಯಾಣಿಕರ ಸುರಕ್ಷತೆ ಹೆಚ್ಚಿಸಲು ಕೈಗೊಂಡ ಪ್ರಮುಖ ಸುಧಾರಣಾ ಕ್ರಮವೆನ್ನಬಹುದು.ಜಗತ್ತಿನ ಅತಿದೊಡ್ಡ ರೈಲು ಜಾಲಗಳಲ್ಲಿ ಒಂದಾಗಿರುವ ಭಾರತೀಯ ರೈಲ್ವೆಯು ಪ್ರತಿದಿನ ಕೋಟ್ಯಂತರ ಜನರನ್ನಲ್ಲದೆ, ಲಕ್ಷಾಂತರ ಟನ್ ಸರಕುಗಳನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಸಾಗಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ರೈಲ್ವೆಯು ತಾಂತ್ರಿಕವಾಗಿ ಮತ್ತು ಮೂಲಸೌಕರ್ಯ ಸೃಜನೆಯಲ್ಲಿ ಅಪಾರ ಪ್ರಗತಿ ಸಾಧಿಸಿದ್ದರೂ, ಆದಾಯ, ಸುರಕ್ಷತೆ ಮತ್ತು ಸೇವೆಗೆ ಸಂಬಂಧಿಸಿದಂತೆ ಕೆಲವು ಗಂಭೀರ ಲೋಪಗಳು, ಕೊರತೆಗಳನ್ನು ಎದುರಿಸುತ್ತಿದೆ.ಟಿಕೆಟ್ ಇಲ್ಲದೆ ಪ್ರಯಾಣಿಸುವವ ರಿಂದ ರೈಲ್ವೆ ಇಲಾಖೆ ಭಾರೀ ನಷ್ಟ ಅನುಭವಿಸುತ್ತಿದೆ. ಒಂದೆಡೆ ರೈಲುಗಳ ಸಂಖ್ಯೆಯಲ್ಲಿ ಹೆಚ್ಚಳ ಆಗುತ್ತಿದ್ದರೂ, ಅದಕ್ಕೆ ತಕ್ಕಂತೆ ಟಿಕೆಟ್ ತಪಾಸಕರ (ಟಿಟಿಇ) ಸಂಖ್ಯೆ ಏರುತ್ತಿಲ್ಲ. ದೀರ್ಘ ಪ್ರಯಾಣದಲ್ಲೂ ಒಮ್ಮೊಮ್ಮೆ ಟಿಟಿಇ ಗಳ ದರ್ಶನ ಆಗದು! ಈಗಿರುವ ಕಡಿಮೆ ಸಂಖ್ಯೆಯ ತಪಾಸಕರಿಂದ ಪ್ರತಿ ನಿಲ್ದಾಣದಲ್ಲಿ ಪ್ರತಿ ಬೋಗಿಯನ್ನು ಪರೀಕ್ಷಿಸುವುದು ಕಷ್ಟ. ತಪಾಸಣೆಯಲ್ಲಿನ ಈ ಲೋಪವನ್ನು ದುರುಪಯೋಗಪಡಿಸಿಕೊಳ್ಳುವ ದೊಡ್ಡ ಸಂಖ್ಯೆಯ ಪ್ರಯಾಣಿಕರು ಅನಧಿಕೃತವಾಗಿ ಪ್ರಯಾಣಿಸುತ್ತಾರೆ. ಟಿಟಿಇ ಬಂದರೂ ತಪ್ಪಿಸಿಕೊಳ್ಳುವ ಮಾರ್ಗವನ್ನೂ ಕಂಡುಕೊಂಡಿದ್ದಾರೆ. ರಾತ್ರಿ ವೇಳೆಯಲ್ಲಿ ಒಂಟಿಯಾಗಿ ತಪಾಸಣೆ ನಡೆಸುವ ಟಿಟಿಇಗಳ ಮೇಲೆ ಕಳ್ಳ ಪ್ರಯಾಣಿಕರು ಹಲ್ಲೆ ನಡೆಸಿದ ನಿದರ್ಶನಗಳೂ ಇವೆ.ಬಹುತೇಕ ರೈಲ್ವೆ ನಿಲ್ದಾಣಗಳಿಗೆ ಸರಿಯಾದ ಗೇಟ್ ವ್ಯವಸ್ಥೆ ಇಲ್ಲದಿರುವುದರಿಂದ, ಯಾರು ಬೇಕಾದರೂ ಸುಲಭವಾಗಿ ಪ್ಲಾಟ್ಫಾರ್ಮ್ ಪ್ರವೇಶಿಸಿ ಟಿಕೆಟ್ ಇಲ್ಲದೆ ರೈಲು ಹತ್ತಬಹು ದಾಗಿದೆ. ಹಬ್ಬ ಹಾಗೂ ಸಾರ್ವಜನಿಕ ರಜಾದಿನಗಳಲ್ಲಿ ಟಿಕೆಟ್ ರಹಿತ ಪ್ರಯಾಣಿಕರನ್ನು ಹಿಡಿಯಲು ವಿಚಕ್ಷಣಾ ದಳಗಳ ಮೂಲಕ ದಿಢೀರ್ ತಪಾಸಣೆ ನಡೆಸಿ ಇಲಾಖೆಯು ಕೋಟ್ಯಂತರ ರೂಪಾಯಿ ದಂಡ ವಸೂಲಿ ಮಾಡುತ್ತಿದ್ದರೂ, ಈ ಬಾಬಿನಲ್ಲಿ ಸೋರಿ ಹೋಗುತ್ತಿ ರುವ ಆದಾಯ ಹಲವು ಪಟ್ಟು ದೊಡ್ಡದಿದೆ! ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಬೋಗಿಗಳ ಸಂಖ್ಯೆ ಕಡಿಮೆಯಾಗಿರು ವುದರಿಂದ, ಟಿಕೆಟ್ ಇಲ್ಲದ ಅಥವಾ ಸಾಮಾನ್ಯ ಟಿಕೆಟ್ ಹೊಂದಿದ ಪ್ರಯಾಣಿಕರು ಸ್ಲೀಪರ್ ಮತ್ತು ಎಸಿ ಬೋಗಿಗಳಿಗೆ ನುಗ್ಗುತ್ತಿದ್ದಾರೆ. ಇದನ್ನು ನಿಯಂತ್ರಿ ಸಲು ಕನಿಷ್ಠ ಸಂಖ್ಯೆಯಲ್ಲಿರುವ ಟಿಟಿಇ ಮತ್ತು ಭದ್ರತಾ ಸಿಬ್ಬಂದಿಗೆ ಸಾಧ್ಯವಾಗುತ್ತಿಲ್ಲ.ಮೆಟ್ರೊ ನಿಲ್ದಾಣಗಳಲ್ಲಿ ಬಾರ್ಕೋಡ್ ಆಧಾರಿತ ಸ್ವಯಂ ಚಾಲಿತ ಗೇಟ್ಗಳ ಮೂಲಕ, ಟಿಕೆಟ್ ಇದ್ದವರಿಗೆ ಮಾತ್ರ ನಿಲ್ದಾಣದೊಳಗೆ ಪ್ರವೇಶ ನೀಡಲಾಗುತ್ತದೆ. ಈ ಪದ್ಧತಿಯನ್ನು ರೈಲ್ವೆ ಇಲಾಖೆ ಅಳವಡಿಸಿಕೊಳ್ಳಬಹುದು. ಸ್ಲೀಪರ್ ಮತ್ತು ಎಸಿ ಬೋಗಿಗಳಿಗೆ ಅನಧಿಕೃತ ಪ್ರಯಾಣಿಕರು ನುಗ್ಗದಂತೆ ತಡೆಯಲು ಪ್ರತಿ ರೈಲಿನಲ್ಲೂ ಟಿಟಿಇಗಳ ಜೊತೆಗೆ ರೈಲ್ವೆ ಸುರಕ್ಷತಾ ಪಡೆಯ ಸಿಬ್ಬಂದಿಯನ್ನು ನಿಯೋಜಿಸುವುದು ಕಡ್ಡಾಯವಾಗಬೇಕು. ತಪಾಸಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು, ಭ್ರಷ್ಟಾಚಾರ, ಗಲಾಟೆಗಳನ್ನು ತಡೆಯಲು ಕರ್ತವ್ಯದಲ್ಲಿರುವ ಸಿಬ್ಬಂದಿಗೆ ದೇಹದ ಮೇಲೆ ಧರಿಸುವ ಕ್ಯಾಮೆರಾ ಸೌಲಭ್ಯ ನೀಡಬೇಕು.ಇಲಾಖೆಯಲ್ಲಿ ಚಾಲಕರು ಸೇರಿದಂತೆ ತಾಂತ್ರಿಕ ಸಿಬ್ಬಂದಿಯ ತೀವ್ರ ಕೊರತೆಯಿದೆ. ಇದರಿಂದಾಗಿ ಇರುವ ಸಿಬ್ಬಂದಿ ವಿಶ್ರಾಂತಿಯಿಲ್ಲದೆ ದೀರ್ಘಕಾಲ ಕೆಲಸ ಮಾಡ ಬೇಕಾಗಿರುವುದರಿಂದ ಮಾನವಸಹಜ ತಪ್ಪುಗಳಿಗೆ ಕಾರಣವಾಗುತ್ತಿದೆ. ಹಾಗಾಗಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕಿರುವುದು ಸದ್ಯದ ತುರ್ತು. ರೈಲುಗಳು ಪರಸ್ಪರ ಡಿಕ್ಕಿಯಾಗು ವುದನ್ನು ತಡೆಯುವ ದೇಶೀಯ ತಂತ್ರಜ್ಞಾನ ‘ಕವಚ್’ ಸೌಲಭ್ಯವನ್ನು ಯುದ್ಧದೋಪಾದಿಯಲ್ಲಿ ದೇಶದ ಪ್ರತಿಯೊಂದು ರೈಲು ಮಾರ್ಗಕ್ಕೂ ಅಳವಡಿಸಬೇಕು. ಹಳೆಯ ಹಳಿಗಳು ಮತ್ತು ಸಿಗ್ನಲ್ ವ್ಯವಸ್ಥೆಯನ್ನು ಅತ್ಯಾಧುನಿಕ ತಂತ್ರ ಜ್ಞಾನಕ್ಕೆ ಬದಲಾಯಿಸಬೇಕು. ಡ್ರೋನ್ಗಳು ಮತ್ತು ಎಐ ಮೂಲಕ ಹಳಿಗಳ ತಪಾಸಣೆ ನಿರಂತರವಾಗಿ ನಡೆಯಬೇಕು. ಪ್ರೀಮಿಯಂ ದರ್ಜೆಯ ‘ವಂದೇ ಭಾರತ್’ ರೈಲುಗಳಷ್ಟೇ ಅಲ್ಲದೆ, ಸಾಮಾನ್ಯ ಮತ್ತು ಬಡ ಪ್ರಯಾಣಿಕರು ಸಂಚರಿಸುವ ಸಾಮಾನ್ಯ ಬೋಗಿಗಳ ಸಂಖ್ಯೆಯೂ ಹೆಚ್ಚಬೇಕು. ರೈಲ್ವೆ ನಿಲ್ದಾಣಗಳು ಮತ್ತು ಚಲಿಸುವ ರೈಲುಗಳಲ್ಲಿ ಪ್ರತಿದಿನ ಟನ್ಗಟ್ಟಲೆ ಕಸ ಉತ್ಪತ್ತಿಯಾಗುತ್ತದೆ. ತ್ಯಾಜ್ಯದ ವೈಜ್ಞಾನಿಕ ನಿರ್ವಹಣೆಯ ಜೊತೆಗೆ ಕಸ ಎಸೆಯುವವರಿಗೆ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಮೂಲಕ ದಂಡ ವಿಧಿಸಬೇಕು. ಪ್ರಯಾಣಿಕರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಪ್ರಚಾರ ನಿರಂತರವಾಗಿರಬೇಕು.ಲೋಪದೋಷಗಳನ್ನು ಸರಿಪಡಿಸಿ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಭಾರತೀಯ ರೈಲ್ವೆಯು ಸುರಕ್ಷಿತ ಮತ್ತು ಸುಧಾರಿತ ಸಾರಿಗೆ ಜಾಲವಾಗಿಯೂ ಹೊರಹೊಮ್ಮ ಬಹುದು. ಸಾರ್ವಜನಿಕ ಸಾರಿಗೆ ಬಲಪಡಿಸುವುದು ದೇಶದ ಆರ್ಥಿಕತೆಗೂ ಪೂರಕ.