ಸಿನಿಮಾ ವಿಮರ್ಶೆ: ‘ಮದರ್ ಪ್ರಾಮಿಸ್’ ಇನ್ನೇನೋ ಬೇಕಿತ್ತು!
ಹಿಂದಿಯಲ್ಲಿ ‘ಹೇರಾಫೇರಿ’ ಸರಣಿ, ‘ವೆಲ್ಕಮ್’, ‘ಗೋಲ್ಮಾಲ್’, ‘ಡೆಲ್ಲಿ ಬೆಲ್ಲಿ’ ಮುಂತಾದ ಗ್ಯಾಂಗ್ಸ್ಟರ್ ಕಾಮಿಡಿ ಜಾನರ್ನ ಸಿನಿಮಾಗಳು ಅಧಿಕವಾಗಿ ಬಂದಿವೆ. ಈ ಜಾನರ್ನ ಸಿನಿಮಾಗಳಲ್ಲಿ ಸೃಷ್ಟಿಯಾಗುವ ಗೊಂದಲಗಳು, ಬಗೆ ಬಗೆಯ ಪಾತ್ರಗಳು, ಚಿತ್ರಕಥೆಯಲ್ಲಿನ ತಿರುವು, ಸಂಭಾಷಣೆಗಳು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪೂರ್ಣಚ

ಹಿಂದಿಯಲ್ಲಿ ‘ಹೇರಾಫೇರಿ’ ಸರಣಿ, ‘ವೆಲ್ಕಮ್’, ‘ಗೋಲ್ಮಾಲ್’, ‘ಡೆಲ್ಲಿ ಬೆಲ್ಲಿ’ ಮುಂತಾದ ಗ್ಯಾಂಗ್ಸ್ಟರ್ ಕಾಮಿಡಿ ಜಾನರ್ನ ಸಿನಿಮಾಗಳು ಅಧಿಕವಾಗಿ ಬಂದಿವೆ. ಈ ಜಾನರ್ನ ಸಿನಿಮಾಗಳಲ್ಲಿ ಸೃಷ್ಟಿಯಾಗುವ ಗೊಂದಲಗಳು, ಬಗೆ ಬಗೆಯ ಪಾತ್ರಗಳು, ಚಿತ್ರಕಥೆಯಲ್ಲಿನ ತಿರುವು, ಸಂಭಾಷಣೆಗಳು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪೂರ್ಣಚಂದ್ರ ಮೈಸೂರು ನಿರ್ದೇಶನದ ‘ಮದರ್ ಪ್ರಾಮಿಸ್’ ಈ ಜಾನರ್ನಲ್ಲೇ ಇದೆ. ಹತ್ತಾರು ಪಾತ್ರಗಳು ಇದ್ದರೂ ಸಿನಿಮಾ ಪರಿಣಾಮ ಬೀರುವುದಿಲ್ಲ.ರಾಸಿ(ಧನಂಜಯ) ಬೆಂಗಳೂರಿನಲ್ಲಿ ಬೈಕ್ ರೇಸರ್ ಹಾಗೆಯೇ ಬೆಟ್ಟಿಂಗ್ ಅಡ್ಡ ಕಟ್ಟಿಕೊಂಡಾತ. ಅಮ್ಮ ಶಾರದಮ್ಮ(ವಿನಯ್ ಪ್ರಸಾದ್) ಪ್ರೀತಿಯಿಂದ ಕೊಡಿಸಿದ ಸ್ಪ್ಲೆಂಡರ್ ಬೈಕೇ ಈತನ ರೇಸ್ ಬೈಕ್. ದೊನ್ನೆ ಬಿರಿಯಾನಿ(ಮಹಾದೇವ್ ಪ್ರಸಾದ್) ಬೆಂಗಳೂರಿನಲ್ಲಿ ಕಳ್ಳಸಾಗಣೆಯ ಕಿಂಗ್ಪಿನ್. ಬಾಲ್ಯದಲ್ಲಿ ಸ್ನೇಹಿತರಾಗಿದ್ದರೂ ಕಾರಣಾಂತರಗಳಿಂದ ಇವರಿಬ್ಬರೂ ದೂರವಾಗಿರುತ್ತಾರೆ. ಎಲ್ಲಾ ಮಾದರಿಯ ಬೆಟ್ಟಿಂಗ್ನಲ್ಲಿ ಸೈ ಎನಿಸಿಕೊಂಡಿರುವ ರ್ಯಾಂಡಿ (ಪೂರ್ಣಚಂದ್ರ ಮೈಸೂರು) ಇವರಿಬ್ಬರ ನಡುವೆ ಸಿಲುಕಿಕೊಂಡಾಗ ಕಥೆ ತೆರೆದುಕೊಳ್ಳುತ್ತದೆ. ಸಿನಿಮಾದ ಬರವಣಿಗೆಯನ್ನೇ ಹೀರೊ ಎಂದು ಪ್ರದರ್ಶಿಸಿರುವ ತಂಡ ಬರವಣೆಗೆಯನ್ನು ಇನ್ನಷ್ಟು ಗಟ್ಟಿಗೊಳಿಸಬಹುದಿತ್ತು. ಮುಖ್ಯಪಾತ್ರಗಳಿಗೆ ಆಳವಾದ ಹಿನ್ನೆಲೆ ಇಲ್ಲ. ಅನಗತ್ಯ ಚಿತ್ರಕಥೆಯು ಚಿತ್ರದ ಅವಧಿಯನ್ನಷ್ಟೇ ಹೆಚ್ಚಿಸಿಲ್ಲ, ಜೊತೆಗೆ ತಾಳ್ಮೆಯನ್ನೂ ಪರೀಕ್ಷಿಸುತ್ತದೆ. ‘ರಾಸಿ’ ಪಾತ್ರದ ಸುತ್ತಲಿನ ಹತ್ತಾರು ಪಾತ್ರಗಳು ನಿರ್ಜೀವ. ಬಹಳ ಕೃತಕವಾಗಿ ಹಲವು ದೃಶ್ಯಗಳು, ಪಾತ್ರಗಳು ಭಾಸವಾಗುತ್ತದೆ. ಗೊಂದಲ ಸೃಷ್ಟಿಯಾಗುವ ಸನ್ನಿವೇಶಗಳನ್ನು ಇನ್ನಷ್ಟು ಮನರಂಜನಾತ್ಮಕವಾಗಿ ತೆರೆಗೆ ತರಬಹುದಿತ್ತು. ‘ಎಸ್ಎಂಎಸ್’ ಆಗಿ ಶ್ರೀವತ್ಸ, ‘ಜಿಲೇಬಿ’ಯಾಗಿ ಯಶವಂತ್ ಶೆಟ್ಟಿ, ‘ಲೈಟರ್’ ಆಗಿ ಶಮಂತ್, ‘ಗುಲ್ಕನ್’ ಪಾತ್ರದಲ್ಲಿ ಸಂಪತ್, ‘ಮನು’ ಆಗಿ ಯಶವಂತ್ ನಟನೆ ಚೆನ್ನಾಗಿದೆ. ಈ ಪಾತ್ರಗಳ ಬರವಣಿಗೆಯಷ್ಟೇ ನಗು ತರಿಸುತ್ತದೆ. ಕಾಲ್ಪನಿಕ ಬೆಂಗಳೂರು ಮಾದರಿ ಚೆನ್ನಾಗಿದೆ. ಕ್ಲೈಮ್ಯಾಕ್ಸ್ ಹಂತ ತಲುಪುತ್ತಾ ನಿರ್ದೇಶಕರು ಬೋಧನೆಯತ್ತ ಇಳಿಯುತ್ತಾರೆ! ಯಾಕಾಗಿ ಇಂಗ್ಲಿಷ್ ಟೀಚರ್ ಅಲ್ಲಿಗೆ ಬಂದರು ಎನ್ನುವುದಕ್ಕೆ ಉತ್ತರವಿಲ್ಲ. ‘ರ್ಯಾಂಡಿ’ ಬೆಟ್ಟಿಂಗ್ ಕಿಂಗ್ ಎನಿಸಿಕೊಂಡರೂ ₹20 ಲಕ್ಷಕ್ಕೆ ತಡಬಡಿಸುವುದೇಕೆ? ಹೀಗೆ ಹಲವು ಪ್ರಶ್ನೆಗಳನ್ನು ಚಿತ್ರಕಥೆಯು ಹುಟ್ಟುಹಾಕುತ್ತದೆ. ನಟನೆಯಲ್ಲಿ ಎಂದಿನಂತೆ ಧನಂಜಯ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅಮ್ಮನನ್ನು ಪ್ರೀತಿಸುವ ಮುದ್ದಿನ ಮಗನಾಗಿ ಮಿಂಚಿದ್ದಾರೆ. ‘ಮರ್ಯಾದೆ ಪ್ರಶ್ನೆ’, ‘ಎಕ್ಕ’ ಮುಂತಾದ ಸಿನಿಮಾಗಳಲ್ಲಿ ತಮ್ಮ ನಟನೆಯ ಸಾಮರ್ಥ್ಯ ಪ್ರದರ್ಶಿಸಿದ್ದ ಪೂರ್ಣಚಂದ್ರ ಅವರ ನಟನೆ ಈ ಸಿನಿಮಾದಲ್ಲಿ ಏಕತಾನತೆಯಿಂದ ಕೂಡಿದೆ. ‘ಬೆಂಗಳೂರು ನಮ್ದೇನೆ’ ಹಾಡು, ಧನಂಜಯ ಹೆಜ್ಜೆ ಚೆನ್ನಾಗಿದೆ.