‘ಬ್ಲೇಝ್: ಮಗನೊಬ್ಬನ ಅಗ್ನಿದಿವ್ಯ’ ಪುಸ್ತಕ ಬಿಡುಗಡೆ ಜುಲೈ 11ರಂದು
ಬೆಂಗಳೂರು: ನೈಜಕತೆ ಆಧರಿತ ‘Blaze – A Son’s Trial by Fire’ ಇಂಗ್ಲಿಷ್ ಕೃತಿಯ ಕನ್ನಡ ಅನುವಾದ ‘ಬ್ಲೇಝ್– ಮಗನೊಬ್ಬನ ಅಗ್ನಿದಿವ್ಯ, ಒಂದು ಸತ್ಯಕಥೆ’ ಪುಸ್ತಕ ಜುಲೈ 11ರಂದು ಬಿಡುಗಡೆಯಾಗಲಿದೆ.ನಿಧಿ ಪೋದ್ದಾರ್ ಮತ್ತು ಸುಶೀಲ್ ಪೋದ್ದಾರ್ ದಂಪತಿ ಬರೆದಿರುವ ಈ ಕೃತಿಯನ್ನು ನಿವೃತ್ತ ಪ್ರಾಧ್ಯಾಪಕ ಎಂ.ಸಿ. ಪ್ರಕಾಶ್ ಅವರು ಕನ್ನಡಕ್ಕೆ ತಂದಿದ್ದಾರೆ.ಬೆಂಗಳೂರಿನ ಇ

ಬೆಂಗಳೂರು: ನೈಜಕತೆ ಆಧರಿತ ‘Blaze – A Son’s Trial by Fire’ ಇಂಗ್ಲಿಷ್ ಕೃತಿಯ ಕನ್ನಡ ಅನುವಾದ ‘ಬ್ಲೇಝ್– ಮಗನೊಬ್ಬನ ಅಗ್ನಿದಿವ್ಯ, ಒಂದು ಸತ್ಯಕಥೆ’ ಪುಸ್ತಕ ಜುಲೈ 11ರಂದು ಬಿಡುಗಡೆಯಾಗಲಿದೆ.ನಿಧಿ ಪೋದ್ದಾರ್ ಮತ್ತು ಸುಶೀಲ್ ಪೋದ್ದಾರ್ ದಂಪತಿ ಬರೆದಿರುವ ಈ ಕೃತಿಯನ್ನು ನಿವೃತ್ತ ಪ್ರಾಧ್ಯಾಪಕ ಎಂ.ಸಿ. ಪ್ರಕಾಶ್ ಅವರು ಕನ್ನಡಕ್ಕೆ ತಂದಿದ್ದಾರೆ.ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ನಲ್ಲಿ ಬೆಳಿಗ್ಗೆ 10.30ಕ್ಕೆ ನಡೆಯುವ ಸಮಾರಂಭದಲ್ಲಿ, ಇಸ್ರೊ ಮಾಜಿ ಮುಖ್ಯಸ್ಥ ಎ.ಎಸ್. ಕಿರಣಕುಮಾರ್, ಶಿಕ್ಷಣ ತಜ್ಞ ಗುರುರಾಜ ಕರಜಗಿ, ಐಪಿಎಸ್ ಅಧಿಕಾರಿ ಬಿ.ಆರ್.ರವಿಕಾಂತೇಗೌಡ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಪೋದ್ದಾರ್ ದಂಪತಿಯ ಪುತ್ರ ದಿವ್ಯಾಂಶ್ ಆತ್ಮನ್ ಲ್ಯುಕೇಮಿಯಾಗೆ (ರಕ್ತದ ಕ್ಯಾನ್ಸರ್) ತುತ್ತಾದರೂ, ಧೃತಿಗೆಡದೆ ಹೋರಾಡಿದ, ಬದುಕನ್ನು ಪ್ರೀತಿಸಿದ ಕಥೆ ಇದರಲ್ಲಿದೆ. ಪ್ರತಿಭಾವಂತನೂ ಆಗಿದ್ದ ದಿವ್ಯಾಂಶ್, ಜೀವನ ಪ್ರೀತಿಯನ್ನು ಎಂದೂ ಕಳೆದುಕೊಂಡವರಲ್ಲ. ಹೋರಾಟ ನಡೆಸುತ್ತಲೇ, ಆತ ತೋರುವ ಜೀವನಪ್ರೇಮ ಓದುಗರನ್ನು ಚಕಿತಗೊಳಿಸುತ್ತದೆ.ವಾಸ್ತವವನ್ನು ಒಪ್ಪಿಕೊಂಡು, ಅದರ ವಿರುದ್ಧ ಧೈರ್ಯವಾಗಿ ನಿಲ್ಲುವ ದಿವ್ಯಾಂಶ್, ಬದುಕಿನ ಬಗ್ಗೆ ಹೊಸ ದೃಷ್ಟಿಕೋನವನ್ನು ತೆರೆದಿಡುತ್ತಾರೆ. ಕಷ್ಟ ಕಾಲದಲ್ಲೂ ಜೊತೆ ಉಳಿಯುವ ಸ್ನೇಹ, ಬೆನ್ನಿಗೆ ನಿಲ್ಲುವ ಕುಟುಂಬ, ಆಸರೆಯಾಗುವ ಸಂಬಂಧಗಳು ದಿವ್ಯಾಂಶ್ ಅವರನ್ನು ಗಟ್ಟಿಗೊಳಿಸುತ್ತವೆ. ಅವೆಲ್ಲದರ ಬಲ ಹಾಗೂ ಅವರೊಳಗಿನ ಕಿಚ್ಚು ಜೀವನೋತ್ಸಾಹದ ಚಿಲುಮೆಯಾಗಿ ಕಾಣುತ್ತದೆ. ಇದು, ಇತರರಿಗೂ ಸ್ಫೂರ್ತಿಯ ಸೆಲೆಯಾಗುತ್ತದೆ. ಈ ಎಲ್ಲ ಕಾರಣದಿಂದಾಗಿ ಈ ಕೃತಿ, ಕೇವಲ ಕ್ಯಾನ್ಸರ್ ರೋಗಿಯೊಬ್ಬರ ದುರಂತದ, ನೋವಿನ ಕಥೆಯಾಗಿರದೆ, ಪ್ರೇರಣಾದಾಯಕ ಕಥನವಾಗಿದೆ.ಹೋರಾಟ ನಡೆಸಿದರೂ, ಹೆತ್ತವರು ಪ್ರೀತಿಯ ಧಾರೆ ಎರೆದರೂ ದಿವ್ಯಾಂಶ್ ತನ್ನ 22ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸುತ್ತಾರೆ. ಚಿಕಿತ್ಸೆ ವೇಳೆ ಅನುಭವಿಸಿದ ಅಪಾರ ನೋವು, ದೈಹಿಕ ಮತ್ತು ಮಾನಸಿಕ ಸವಾಲುಗಳ ನಡುವೆಯೂ ಅವರು ಬಿಟ್ಟುಹೋದ ನೆನಪುಗಳು, ಸಾರಿದ ಜೀವನಪ್ರೇಮದ ಸಂದೇಶಗಳು ಕೃತಿಯಲ್ಲಿ ಹಸಿರಾಗಿವೆ.ವಯಸ್ಸಿಗೂ ಮೀರಿದ ಪ್ರಬುದ್ಧತೆ ತೋರುವ ದಿವ್ಯಾಂಶ್, ಮುಖತಃ ಪರಿಚಯವೇ ಇಲ್ಲದಿದ್ದರೂ, ಈ ಕೃತಿ ಓದಿ ಮುಗಿಸುವುದರೊಳಗೆ ಆವರಿಸಿಕೊಳ್ಳುತ್ತಾರೆ. ನಮ್ಮೊಳಗೆ ಒಬ್ಬರಾಗಿ, ಅಗಲಿಕೆಯ ದುಃಖವನ್ನೂ ನೀಡುತ್ತಾರೆ.ಈ ಪುಸ್ತಕ, ಕ್ಯಾನ್ಸರ್ ಕುರಿತು ಅರಿವು ಮೂಡಿಸುವುದಷ್ಟೇ ಅಲ್ಲದೆ, ಕಷ್ಟಗಳೊಂದಿಗೆ ನಿಲ್ಲುವುದು, ಬದುಕನ್ನು ಪ್ರೀತಿಸುವುದನ್ನು, ತಾಳ್ಮೆಯಿಂದ ಮುನ್ನಡೆಯುವುದನ್ನು ಕಲಿಸುತ್ತದೆ.ಕೃತಿಯನ್ನು ಓದಿರುವ ಸುಧಾಮೂರ್ತಿ ಅವರು, ‘ದಿವ್ಯಾಂಶ್ನ ಪಯಣ ಕಸುವು, ಕೆಚ್ಚು ಮತ್ತು ಹುಡುಕಾಟದ್ದು’ ಎಂದಿದ್ದಾರೆ.‘ಬ್ಲೇಝ್ ತೀವ್ರವಾದ ಕೆಚ್ಚಿನಿಂದ ಮೂಡಿಬಂದಿದೆ. ವೀರ ಯೋಧನಂತೆ ಸಾವಿಗೆ ಎದುರಾಗಿ ನಿಂತ ಯುವ ದಿವ್ಯಾಂಶ್ ಕಥೆ ಈ ಕೃತಿಯಲ್ಲಿದೆ. ಆತನಲ್ಲಿದ್ದ ಆಧ್ಯಾತ್ಮಿಕ ಪಕ್ವತೆ, ವಯಸ್ಸಿಗೆ ಮೀರಿದ್ದು. ಈ ಕಥನ ದಿವ್ಯಾಂಶ್ಗಿಂತಲೂ ಹೆಚ್ಚಿನ ನೋವನ್ನು ಆತನ ಹೆತ್ತವರು ಅನುಭವಿಸಿದ ತೀವ್ರತೆಯನ್ನು ಕಟ್ಟಿಕೊಟ್ಟಿದೆ. ಅದರಲ್ಲೂ ತಾಯಿಯೇ ದಿವ್ಯಾಂಶ್ ಕಥೆ ನಿರೂಪಿಸಿರುವ ಕಾರಣ, ಪ್ರಭಾವಶಾಲಿಯಾಗಿ ಮೂಡಿಬಂದಿದೆ. ಇದು ಸ್ಫೂರ್ತಿದಾಯಕ’ ಎಂದು ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅಭಿಪ್ರಾಯಪಟ್ಟಿದ್ದಾರೆ.