ರಾಜ್ಯ ಸರ್ಕಾರಿ ನೌಕರರ ವರ್ಗಾವಣೆಗೆ ಹೊಸ ನಿಯಮ: ಮಾರ್ಗಸೂಚಿ ಪ್ರಕಟಿಸಿದ ಸರ್ಕಾರ
ಬೆಂಗಳೂರು: ಸರ್ಕಾರಿ ನೌಕರರ ವರ್ಗಾವಣೆಗೆ ಸಂಬಂಧಿಸಿದಂತೆ ಹೈಕೋರ್ಟ್ ರಿಟ್ ಅರ್ಜಿ ಸಂಖ್ಯೆ: 35777/2025 ರ ತೀರ್ಪನ್ನು ಅನುಷ್ಠಾನಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.ಅಬಕಾರಿ ಇಲಾಖೆಯ ಉಪ ಆಯುಕ್ತ ಕೆ. ಅರುಣ್ ಕುಮಾರ್ ಪ್ರಕರಣಕ್ಕೆ (ಸ್ಥಳ ನಿಯುಕ್ತಿಗೊಳಿಸದೆ ವರ್ಗಾವಣೆ ಮಾಡಿರುವುದನ್ನು ಪ್ರಶ್ನಿಸಿ, ಹೈಕೋರ್ಟ್ನಲ್ಲಿ ದಾಖಲಿಸಿರುವ

ಬೆಂಗಳೂರು: ಸರ್ಕಾರಿ ನೌಕರರ ವರ್ಗಾವಣೆಗೆ ಸಂಬಂಧಿಸಿದಂತೆ ಹೈಕೋರ್ಟ್ ರಿಟ್ ಅರ್ಜಿ ಸಂಖ್ಯೆ: 35777/2025 ರ ತೀರ್ಪನ್ನು ಅನುಷ್ಠಾನಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.ಅಬಕಾರಿ ಇಲಾಖೆಯ ಉಪ ಆಯುಕ್ತ ಕೆ. ಅರುಣ್ ಕುಮಾರ್ ಪ್ರಕರಣಕ್ಕೆ (ಸ್ಥಳ ನಿಯುಕ್ತಿಗೊಳಿಸದೆ ವರ್ಗಾವಣೆ ಮಾಡಿರುವುದನ್ನು ಪ್ರಶ್ನಿಸಿ, ಹೈಕೋರ್ಟ್ನಲ್ಲಿ ದಾಖಲಿಸಿರುವ ರಿಟ್ ಅರ್ಜಿ ) ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸುತ್ತೋಲೆಯನ್ನು ಹೊರಡಿಸಿದೆ. ನ್ಯಾಯಾಲಯದ ನಿರ್ದೇಶನದಂತೆ, ಯಾವುದೇ ನೌಕರರನ್ನು ಸ್ಥಳ ನಿಯುಕ್ತಿ ನೀಡದೆ, ಅನಿರ್ದಿಷ್ಟಾವಧಿಗೆ ಕಡ್ಡಾಯ ನಿರೀಕ್ಷಣೆಯಲ್ಲಿಡುವುದು ಕಾನೂನುಬಾಹಿರ. ನಿಯಮ ಉಲ್ಲಂಘಿಸಿದರೆ ಆ ಅವಧಿಗೆ ಪಾವತಿಸಲಾದ ವೇತನ ಮತ್ತು ಭತ್ಯೆಯನ್ನು ಸಂಬಂಧಿತ ಸಕ್ಷಮ ಪ್ರಾಧಿಕಾರಗಳಿಂದ ವಸೂಲಿ ಮಾಡಲಾಗುವುದೆಂದು ಸರ್ಕಾರ ತಿಳಿಸಿದೆ. ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಸಂಬಂಧ ರಾಜ್ಯ ಸರ್ಕಾರವು ಪ್ರತಿವರ್ಷವು ಹೊರಡಿಸುವ ಮಾರ್ಗಸೂಚಿಗಳಲ್ಲಿ, ವೃಂದ 'ಎ' ಮತ್ತು 'ಬಿ' ಗುಂಪಿಗೆ ಸೇರಿದ ಅಧಿಕಾರಿಗಳ ವರ್ಗಾವಣೆಗಳಿಗಾಗಿ ಸಂಬಂಧಪಟ್ಟ ಇಲಾಖಾ ಸಚಿವರುಗಳಿಗೆ ಹಾಗೂ ವೃಂದ 'ಸಿ' ಮತ್ತು 'ಡಿ' ಗುಂಪಿನ ಸಿಬ್ಬಂದಿಗಳ ವರ್ಗಾವಣೆಗಳಿಗಾಗಿ ಸಂಬಂಧಪಟ್ಟ ನೇಮಕಾತಿ ಪ್ರಾಧಿಕಾರಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿರುತ್ತದೆ. ಕೆಲವೊಂದು ಸಂದರ್ಭಗಳಲ್ಲಿ, ವರ್ಗಾವಣೆಗೊಂಡ ಅಧಿಕಾರಿಗಳಿಗೆ ಆಡಳಿತಾತ್ಮಕ ದೃಷ್ಟಿಯಿಂದ ತಕ್ಷಣ ಸ್ಥಳನಿಯುಕ್ತಿಗೊಳಿಸಲು ಸಾಧ್ಯವಾಗದೇ ಕಡ್ಡಾಯ ನಿರೀಕ್ಷಣೆಯಲ್ಲಿರಿಸುವ ಅನಿವಾರ್ಯ ಸನ್ನಿವೇಶ ಉದ್ಭವವಾಗುವುದನ್ನು ಹಾಗೂ ಆಡಳಿತಾತ್ಮಕ ಅನುಷ್ಠಾನದಲ್ಲಿ ಉಂಟಾಗುವ ತೊಂದರೆಗಳನ್ನು ಅರಿತು 2026ರ ಮಾರ್ಚ್ 30 ರಂದು ಹೊರಡಿಸಲಾದ ಸುತ್ತೋಲೆಯನ್ನು ಹಿಂಪಡೆದು, ಕೆಳಕಂಡ ಮಾರ್ಗಸೂಚಿಗಳನ್ನು ಅನುಸರಿಸಲು ಸೂಚಿಸಲಾಗಿದೆ.ಹೊಸ ಮಾರ್ಗಸೂಚಿಯ ಪ್ರಮುಖಾಂಶಗಳುಸಾಮಾನ್ಯವಾಗಿ, ಯಾವುದೇ ಅಧಿಕಾರಿ/ನೌಕರರನ್ನು ವರ್ಗಾವಣೆ ಮಾಡುವಾಗ, ಅವರಿಗೆ ಮುಂದಿನ ಹುದ್ದೆ ಸೂಚಿಸದೆ ವರ್ಗಾವಣೆ ಮಾಡುವಂತಿಲ್ಲ.ಕಾನೂನು ಸಂಬಂಧಿತ ಸಮಸ್ಯೆಗಳು, ಅಮಾನತು, ಹಣದ ದುರ್ಬಳಕೆ, ಅಧಿಕಾರ ದುರುಪಯೋಗ ಇತ್ಯಾದಿ ತೀವ್ರ ಸ್ವರೂಪದ ಇಲಾಖಾ ವಿಚಾರಣೆ/ಗಂಭೀರ ಆರೋಪಗಳು ಬಾಕಿಯಿರುವ ಪ್ರಕರಣಗಳನ್ನು ಹೊರತುಪಡಿಸಿ, ಇತರ ಅನಿವಾರ್ಯ ಆಡಳಿತಾತ್ಮಕ ಕಾರಣಗಳಿಂದ ವರ್ಗಾವಣೆಗೊಂಡ ಅಧಿಕಾರಿ/ನೌಕರರಿಗೆ ತಕ್ಷಣ ಸ್ಥಳ ನಿಯುಕ್ತಿ ನೀಡಲು ಸಾಧ್ಯವಾಗದಿದ್ದಲ್ಲಿ ವರ್ಗಾವಣೆಗೊಂಡ ಅಧಿಕಾರಿ / ನೌಕರರನ್ನು ಸಕ್ಷಮ ಪ್ರಾಧಿಕಾರಿಗಳ ಮಟ್ಟದಲ್ಲಿ ಗರಿಷ್ಠ ಒಂದು ತಿಂಗಳಿಗಿಂತ ಹೆಚ್ಚು ಕಾಲ ಕಡ್ಡಾಯ ನಿರೀಕ್ಷಣೆಯಲ್ಲಿರಿಸುವಂತಿಲ್ಲ. ವರ್ಗಾವಣೆಗೊಂಡ ನೌಕರರನ್ನು ಒಂದು ತಿಂಗಳಿಗಿಂತ ಹೆಚ್ಚು ಕಾಲ ಕಡ್ಡಾಯ ನಿರೀಕ್ಷಣೆಯಲ್ಲಿ ಮುಂದುವರಿಸುವ ಆಡಳಿತಾತ್ಮಕ ಅನಿವಾರ್ಯತೆ ಇದ್ದಲ್ಲಿ, ಸಕ್ಷಮ ಪ್ರಾಧಿಕಾರಿಗಳು ಸೂಕ್ತ ಕಾರಣಗಳನ್ನು ಲಿಖಿತವಾಗಿ ದಾಖಲಿಸಿ, ಮುಖ್ಯಮಂತ್ರಿಯವರ ಪೂರ್ವಾನುಮೋದನೆ ಪಡೆದು, ಗರಿಷ್ಠ ಮೂರು ತಿಂಗಳವರೆಗೆ ಮಾತ್ರ ಕಡ್ಡಾಯ ನಿರೀಕ್ಷಣೆಯಲ್ಲಿರಿಸಬಹುದು.ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪ್ರತಿಭಾ ಕೆ. ಅವರು ಈ ಆದೇಶ ಹೊರಡಿಸಿದ್ದಾರೆ.