‘ಕೊನೆಯ ಗಾಯನ ಕಾರ್ಯಕ್ರಮ’ವೂ ಮೈಸೂರಿನಲ್ಲೇ....
ಮೈಸೂರು: ಎಸ್. ಜಾನಕಿ ಅವರು ‘ಸಾರ್ವಜನಿಕವಾಗಿ ಮುಂದೆ ಗಾಯನ ಕಾರ್ಯಕ್ರಮ ನೀಡುವುದಿಲ್ಲ’ ಎಂದು ಘೋಷಿಸಿದ್ದ ತಮ್ಮ ನೆಚ್ಚಿನ ಮೈಸೂರಿನಲ್ಲೇ ಊರಿನಲ್ಲೇ ಕೊನೆಯುಸಿರೆಳೆದಿದ್ದಾರೆ.ಸುಮಧುರ ಕಂಠದಿಂದ ದಕ್ಷಿಣ ಭಾರತದಲ್ಲಿ ಅಪಾರ ಅಭಿಮಾನಿಗಳ ಮನಸೂರೆಗೊಂಡಿದ್ದ ಅವರು, 2017ರ ಅ. 28ರಂದು ಮೈಸೂರಿನಲ್ಲಿ ತಮ್ಮ ಕೊನೆಯ ಸಾರ್ವಜನಿಕ ಕಾರ್ಯಕ್ರಮ ನೀಡುವುದರೊಂದಿಗೆ ಗಾಯನ ಲೋಕಕ್

ಮೈಸೂರು: ಎಸ್. ಜಾನಕಿ ಅವರು ‘ಸಾರ್ವಜನಿಕವಾಗಿ ಮುಂದೆ ಗಾಯನ ಕಾರ್ಯಕ್ರಮ ನೀಡುವುದಿಲ್ಲ’ ಎಂದು ಘೋಷಿಸಿದ್ದ ತಮ್ಮ ನೆಚ್ಚಿನ ಮೈಸೂರಿನಲ್ಲೇ ಊರಿನಲ್ಲೇ ಕೊನೆಯುಸಿರೆಳೆದಿದ್ದಾರೆ.ಸುಮಧುರ ಕಂಠದಿಂದ ದಕ್ಷಿಣ ಭಾರತದಲ್ಲಿ ಅಪಾರ ಅಭಿಮಾನಿಗಳ ಮನಸೂರೆಗೊಂಡಿದ್ದ ಅವರು, 2017ರ ಅ. 28ರಂದು ಮೈಸೂರಿನಲ್ಲಿ ತಮ್ಮ ಕೊನೆಯ ಸಾರ್ವಜನಿಕ ಕಾರ್ಯಕ್ರಮ ನೀಡುವುದರೊಂದಿಗೆ ಗಾಯನ ಲೋಕಕ್ಕೆ ವಿದಾಯ ಹೇಳಿದ್ದರು. ಸಾಂಸ್ಕೃತಿಕ ನಗರಿಯಲ್ಲಿ ಅಭಿಮಾನಿಗಳನ್ನು ರಂಜಿಸುವ ಮೂಲಕ ಭಾವುಕ ಕ್ಷಣಗಳನ್ನು ಸೃಷ್ಟಿಸಿದ್ದರು. ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ‘ಎಸ್.ಜಾನಕಿ ಚಾರಿಟಬಲ್ ಟ್ರಸ್ಟ್’ ಈ ಕಾರ್ಯಕ್ರಮ ಆಯೋಜಿಸಿತ್ತು. ಆಗಿನಿಂದಲೂ ಮೈಸೂರಿಗೆ ಬಂದು ಹೋಗುತ್ತಿದ್ದರು. ಕೊನೆಯ ದಿನಗಳನ್ನು ಇಲ್ಲೇ ಕಳೆದರು. ಈ ನಡುವೆ ಅವರು ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿರಲಿಲ್ಲ. ಎಲ್ಲಿಯೂ ಸಂಗೀತ ಕಾರ್ಯಕ್ರಮವನ್ನೂ ನಡೆಸಿಕೊಡಲಿಲ್ಲ. ಆದರೆ, ಹಿಂದೆ ಅವರು ಹಾಡಿದ ಹಾಡುಗಳ ಮೂಲಕ ಜನಮಾನಸದಲ್ಲಿ ಉಳಿದಿದ್ದಾರೆ.ಮೈಸೂರಿನ ನಂಟು: ಅವರು 1957ರಲ್ಲಿ ನಗರದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಾಡಿದ್ದರು. ಈ ವೇದಿಕೆಯಲ್ಲಿ ಇದು ಇಲ್ಲಿ ಅವರ ಮೊದಲ ಕಾರ್ಯಕ್ರಮವಾಗಿತ್ತು. ನಂತರ 2017ರ ಅ.28ರಂದು ಸಂಗೀತ ಕಾರ್ಯಕ್ರಮದಲ್ಲಿ ಹಾಡಿ, ಮತ್ತೆ ಹಾಡುವುದಿಲ್ಲ ಎಂದು ಘೋಷಿಸಿದ್ದರು.ಮೈಸೂರಿನೊಂದಿಗೆ ಸಾಕಷ್ಟು ಒಡನಾಟದೊಂದಿಗೆ, ಬಹಳಷ್ಟು ಅಭಿಮಾನಿಗಳ ಬಳಗವನ್ನು ಹೊಂದಿದ್ದರು. 2025ರ ಜ.22ರಂದು ಅವರು ಮೈಸೂರಿನ ವಿಜಯನಗರದ ಯೋಗಾನರಸಿಂಹ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. 2024ರ ಡಿ.7ರಂದು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಮಸಣಿಕಮ್ಮ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಮಸಣಿಕಮ್ಮ ದೇವರಿಗೆ ಸೀರೆಯನ್ನು ಕಾಣಿಕೆ ನೀಡಿ ಭಕ್ತಿ ಸಮರ್ಪಿಸಿದ್ದರು.‘ಪಿರಿಯಾಪಟ್ಟಣದ ಮಸಣೀಕಮ್ಮ ದೇವಾಲಯದ ಬಗ್ಗೆ ಕೇಳಿದ್ದೆ. ಆದರೆ, ನೋಡಲು ಸಾಧ್ಯವಾಗಿರಲಿಲ್ಲ. ಈ ಬಾರಿ ದೇವಾಲಯಕ್ಕೆ ಭೇಟಿ ನೀಡಿ ತಾಯಿ ಆಶೀರ್ವಾದ ಪಡೆದಿದ್ದೇನೆ. ಇಲ್ಲಿಗೆ ಬಂದಿದ್ದು ಸಂತೋಷ ತಂದಿದೆ‘ ಎಂದು ತಿಳಿಸಿದರು.ಜಾನಕಿ ಅವರು ಬಂದಿರುವುದನ್ನು ತಿಳಿದ ಭಕ್ತರು, ಜಾನಕಿಯವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದು ಅಭಿಮಾನ ಮೆರೆದಿದ್ದರು. ನಂತರ ಪಿರಿಯಾಪಟ್ಟಣದ ಪುರಸಭಾ ಸದಸ್ಯ ಪಿ.ಎನ್. ವಿನೋದ್ ಅವರ ಮನೆಗೆ ಭೇಟಿ ನೀಡಿದ ಜಾನಕಿ ಅವರು, ಕುಟುಂಬಸ್ಥರಿಂದ ಸನ್ಮಾನ ಸ್ವೀಕರಿಸಿದ್ದರು.‘ಜಾನಕಿ ಅವರನ್ನು ಮೈಸೂರಿನ ಎನ್.ಆರ್. ಮೊಹಲ್ಲಾದ ನವೀನ್ ಎಂಬ ಅಭಿಮಾನಿಯೊಬ್ಬರು, ‘ಒಮ್ಮೆ ಮನೆಗೆ ಬನ್ನಿ’ ಎಂದು ಕರೆದಿದ್ದರು. ಮಗನ ಮನೆಗೇ ಬಂದಂತೆ ಕಳೆದ ಎರಡು ದಶಕಗಳಿಂದಲೂ ಆಗಾಗ ಭೇಟಿ ಕೊಡುತ್ತಿದ್ದರು. ಅವರು ಅದೆಷ್ಟು ಆ ಅಭಿಮಾನಿಯ ಮನೆಯವರೊಂದಿಗೆ ಹೊಂದಿಕೊಂಡಿದ್ದರೆಂದರೆ, ತಿಂಗಳುಗಟ್ಟಲೆ ಅವರ ಮನೆಯಲ್ಲೇ ನೆಂಟರಂತೆ ಇರುತ್ತಿದ್ದರು. ಆ ಅಭಿಮಾನಿ ಜಾನಕಿ ಅವರ ಹೆಸರಿನಲ್ಲಿ ಫರ್ನಿಚರ್ ಅಂಗಡಿ ಇಟ್ಟುಕೊಂಡಿದ್ದಾರೆ. ಬೋಗಾದಿ ಸಮೀಪದಲ್ಲೇ ನವೀನ್ ತೋಟವಿದೆ. ಅಲ್ಲೇ ಜಾನಕಿ ಅವರ ಅಂತ್ಯಕ್ರಿಯೆ ನಡೆಯುತ್ತಿದೆ. ಇದೆಲ್ಲವೂ ಯಾವ ಋಣಾನುಬಂಧವೋ ಯಾರು ಬಲ್ಲರು?’ ಎಂದು ಲೇಖಕ ಎಸ್. ಪ್ರಕಾಶ್ ಬಾಬು ಹಂಚಿಕೊಂಡಿದ್ದಾರೆ. ‘ಇತ್ತೀಚೆಗೆ ಅವರ ಕಾಲಿಗೆ ಆದ ಗಾಯ ಗ್ಯಾಂಗ್ರಿನ್ ರೂಪ ತಾಳಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಭೌತಿಕವಾಗಿ ನಿಧನರಾಗಿರಬಹುದು. ಆದರೆ, ಅವರ ಹಾಡುಗಳಲ್ಲಿ ಜೀವಂತವಾಗಿರುತ್ತಾರೆ’ ಎಂದು ಕಂಬನಿ ಮಿಡಿದಿದ್ದಾರೆ.ಪಿರಿಯಾಪಟ್ಟಣದ ಇತಿಹಾಸ ಪ್ರಸಿದ್ಧ ಮಸಣಿಕಮ್ಮ ದೇವಾಲಯಕ್ಕೆ ಖ್ಯಾತ ಗಾಯಕಿ ಎಸ್. ಜಾನಕಿ ಭೇಟಿ ನೀಡಿದ್ದರುಮೈಸೂರಿನಲ್ಲಿ ತಾವಿದ್ದ ಮನೆಯಲ್ಲಿ ಅಭಿಮಾನಿಗಳೊಂದಿಗೆ ಫೋಟೊ ತೆಗೆಸಿಕೊಂಡಿದ್ದ ಎಸ್.ಜಾನಕಿ