ಮಗು, ವೃದ್ಧೆ.. ಹಲವು ಧ್ವನಿಯಲ್ಲಿ ಹಾಡುವ ಅಪರೂಪದ ಪ್ರತಿಭೆ ಹೊಂದಿದ್ದ ಗಾನ ಕೋಗಿಲೆ
ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿ (88) ಅವರು ಶನಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ದಕ್ಷಿಣ ಭಾರತದ ಚಿತ್ರರಂಗವನ್ನು ತಮ್ಮ ಸುಮಧುರ ಕಂಠದ ಮೂಲಕ ಆರು ದಶಕಗಳಿಗೂ ಹೆಚ್ಚು ಕಾಲ ಆಳಿದ್ದ, ಅಸಂಖ್ಯಾತ ಹಿಟ್ ಗೀತೆಗಳ ಗಾನಕೋಗಿಲೆ ‘ಜಾನಕಮ್ಮ’ ಎಂದೇ ಖ್ಯಾತಿ ಪಡೆದುಕೊಂಡಿದ್ದರು.ಲಕ್ಷಾಂತರ ಅಭಿಮಾನಿಗಳಿಗೆ ಕೇವಲ ತಮ್ಮ ಧ್ವನಿಯ ಮೂಲಕವೇ ‘ಜಾನಕಿಯಮ್ಮ’ ಆಗಿದ್ದ ಅವರು, ಒಂ

ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿ (88) ಅವರು ಶನಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ದಕ್ಷಿಣ ಭಾರತದ ಚಿತ್ರರಂಗವನ್ನು ತಮ್ಮ ಸುಮಧುರ ಕಂಠದ ಮೂಲಕ ಆರು ದಶಕಗಳಿಗೂ ಹೆಚ್ಚು ಕಾಲ ಆಳಿದ್ದ, ಅಸಂಖ್ಯಾತ ಹಿಟ್ ಗೀತೆಗಳ ಗಾನಕೋಗಿಲೆ ‘ಜಾನಕಮ್ಮ’ ಎಂದೇ ಖ್ಯಾತಿ ಪಡೆದುಕೊಂಡಿದ್ದರು.ಲಕ್ಷಾಂತರ ಅಭಿಮಾನಿಗಳಿಗೆ ಕೇವಲ ತಮ್ಮ ಧ್ವನಿಯ ಮೂಲಕವೇ ‘ಜಾನಕಿಯಮ್ಮ’ ಆಗಿದ್ದ ಅವರು, ಒಂದೇ ಹಾಡಿನಲ್ಲಿ ಮಗುವಿನಂತೆ, ನಾಚಿಕೆಯಿಂದ ಮುದುಡಿಕೊಳ್ಳುವ ನವವಧುವಿನಂತೆ ಮತ್ತು ವೃದ್ಧೆಯಂತೆ ಧ್ವನಿ ಬದಲಾಯಿಸಿ ಹಾಡಬಲ್ಲ ಅಪ್ರತಿಮ ಪ್ರತಿಭೆ ಅವರದ್ದಾಗಿತ್ತು.ಕನ್ನಡದಲ್ಲಿ ‘ಚಕ್ರವ್ಯೂಹ’ ಚಿತ್ರದ ‘ನಿಜ ಹೇಳುವೆನು ನಗುಮೊಗದ’, ‘ಶಂಕರ್ ಗುರು’ ಚಿತ್ರದ ‘ಚಿನ್ನ ಚಿನ್ನ ಹೂವೆ’ ಮುಂತಾದ ಹಾಡುಗಳನ್ನು ಹಾಡಿದ್ದರು. 1978ರ ‘ಮಧುರ ಸಂಗಮ’ ಚಿತ್ರದಲ್ಲಿನ ‘ಹದಿನಾರರ ಹರೆ ಬಂದಾಗ’ ಮಕ್ಕಳ ಧ್ವನಿಯಲ್ಲಿ ಹಾಡನ್ನು ಹಾಡಿದ್ದರು.48 ಸಾವಿರಕ್ಕೂ ಹೆಚ್ಚು ಹಾಡಿಗೆ ಧ್ವನಿಯಾದ ಜಾನಕಿಯಮ್ಮನ ಸಂಗೀತ ಪಯಣ ಹೀಗಿತ್ತು..ಅಭಿಮಾನಿಗಳ ಪ್ರೀತಿಯ 'ಜಾನಕಿಯಮ್ಮ' ಜನಿಸಿದ್ದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ (1938ರ ಏಪ್ರಿಲ್ 23ರಂದು). ಮೂರನೇ ವಯಸ್ಸಿನಲ್ಲೇ ಅವರಲ್ಲಿ ಸಂಗೀತದ ಆಸಕ್ತಿ ಮೊಳಕೆಯೊಡೆದಿತ್ತು. ನಂತರದ ದಿನಗಳಲ್ಲಿ ಆಲ್ ಇಂಡಿಯಾ ರೇಡಿಯೊದ ರಾಷ್ಟ್ರೀಯ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ ಜನಪ್ರಿಯರಾಗಿದ್ದರು. ನಂತರ ಮದ್ರಾಸ್ನ ಎವಿಎಂ ಸ್ಟುಡಿಯೊದಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರು. ಈ ಬಗ್ಗೆ ಮಲಯಾಳಂನ ‘www.mathrubhumi.com’ ವರದಿ ಮಾಡಿದೆ.ಟಿ. ಚಲಪತಿ ರಾವ್ ಅವರು ಸಂಗೀತ ಸಂಯೋಜಿಸಿದ್ದ ತಮಿಳು ಸಿನಿಮಾ ‘ವಿಧಿಯಿನ್ ವಿಲಯಾಟ್ಟು’ವಿನಲ್ಲಿ ಹಾಡೊಂದನ್ನು ಹಾಡುವ ಮೂಲಕ ಹಿನ್ನಲೆ ಗಾಯನ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದರು. 1957ರಲ್ಲಿ ತೆರೆ ಕಾಣಬೇಕಾದ ಆ ಸಿನಿಮಾಗೆ ಬಿಡುಗಡೆ ಭಾಗ್ಯವೇ ಒದಗಿಬರಲಿಲ್ಲ. ಆದರೆ, ಜಾನಕಿ ಅವರು ಅಲ್ಲಿಂದಾಚೆಗೆ ತಿರುಗಿ ನೋಡಿದ್ದೇ ಇಲ್ಲ.ತೆಲುಗು, ಕನ್ನಡ, ಮಲಯಾಳಂ, ತಮಿಳು ಸೇರಿದಂತೆ ದಕ್ಷಿಣ ಭಾರತದ ಬಹುತೇಕ ಎಲ್ಲ ಭಾಷೆಗಳ ಸಿನಿಮಾಗಳಲ್ಲಿಯೂ ಹಾಡಿದ್ದಾರೆ. ಅಷ್ಟೇ ಅಲ್ಲ ಹಿಂದಿ, ಬಂಗಾಳಿ, ಒರಿಯಾ, ಇಂಗ್ಲಿಷ್, ಸಂಸ್ಕೃತ, ಅಸ್ಸಾಮಿ, ಸಿಂಧಿ, ಕೊಂಕಣಿ, ತುಳು, ಜರ್ಮನ್ ಸೇರಿದಂತೆ ಇನ್ನಷ್ಟು ಭಾಷೆಗಳಲ್ಲಿಯೂ ಹಾಡಿ ಸೈ ಎನಿಸಿಕೊಂಡಿದ್ದಾರೆ. ಮಲಯಾಳಂ ಸಿನಿಮಾಗಳ ಸುಮಾರು 1,200ಕ್ಕೂ ಹೆಚ್ಚು ಗೀತೆಗಳಿಗೆ ಧ್ವನಿಯಾಗಿರುವ ಅವರು, ಭಾರತದ 17 ಭಾಷೆಗಳಲ್ಲಿ 48,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಇಂಗ್ಲಿಷ್, ಜಪಾನೀಸ್, ಅರೇಬಿಕ್, ಜರ್ಮನ್ ಮತ್ತು ಸಿಂಹಳ ಭಾಷೆಗಳಲ್ಲಿಯೂ ಹಾಡಿದ ಕೀರ್ತಿ ಅವರದ್ದು.ಅತ್ಯುತ್ತಮ ಹಿನ್ನೆಲೆ ಗಾಯಕಿ ರಾಷ್ಟ್ರೀಯ ಪ್ರಶಸ್ತಿಯನ್ನು ನಾಲ್ಕು ಬಾರಿ ಮುಡಿಗೇರಿಸಿಕೊಂಡಿರುವುದು ಅವರ ಕಂಠಸಿರಿಗೆ ಸಾಕ್ಷಿ. ತಮಿಳು ಸಿನಿಮಾ ‘ಪದಿನಾರು ವಯತಿನಿಲೆ' ಚಿತ್ರದ ‘ಸಿಂದೂರ ಪೂವೆ...’ ಗೀತೆಗೆ 1976ರಲ್ಲಿ ಮೊದಲ ಸಲ ಈ ಪ್ರಶಸ್ತಿಯನ್ನು ಬಾಚಿಕೊಂಡಿದ್ದ ಅವರು, ಮಲಯಾಳಂ ಭಾಷೆಯ `ಓಪ್ಪೋಲ್' ಸಿನಿಮಾದ ‘ಎಟ್ಟುಮನೂರ್ ಅಂಬಲತ್ತಿಲ್...’ ಗಾಯನಕ್ಕೆ 1980ರಲ್ಲಿ, ತೆಲುಗಿನ `ಸಿತಾರ' ಸಿನಿಮಾದ ‘ವೆನ್ನಲ್ಲೋ ಗೋದಾರಿ ಆನಂದಂ...’ ಹಾಡಿಗೆ 1984ರಲ್ಲಿ ಮತ್ತು ತಮಿಳಿನ `ದೇವರ್ ಮಗನ್’ ಸಿನಿಮಾದ ‘ಇಂಚಿ ಇಡುಪ್ಪಝಗಿ’ ಹಾಡಿಗೆ 1992ರಲ್ಲಿ ಪ್ರಶಸ್ತಿ ಗಳಿಸಿದ್ದರು.