₹4.70 ಕೋಟಿ ವಂಚನೆ ಆರೋಪ: ಚೈತ್ರ ಶಿಕ್ಷಣ ಸಂಸ್ಥೆ ವಿರುದ್ಧದ ತನಿಖೆಗೆ ತಡೆ
ಬೆಂಗಳೂರು: ಪಾಲುದಾರರ ಅನುಮತಿ ಇಲ್ಲದೆ ಒಪ್ಪಂದ ಮುರಿದು ₹4.70 ಕೋಟಿ ಪಡೆದು ವಂಚಿಸಿದ ಆರೋಪದಡಿ ಶ್ರೀರಾಂಪುರದ ಚೈತ್ರ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಎಸ್.ಗುರುರಾಜ್ ಮತ್ತು ಇತರರ ವಿರುದ್ಧದ ಕ್ರಿಮಿನಲ್ ಪ್ರಕರಣದ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.‘ನಮ್ಮ ವಿರುದ್ಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ 2026ರ ಏಪ್ರಿಲ್ 30ರಂದು ದಾಖಲಾಗಿರುವ ಎಫ್ಐಆರ

ಬೆಂಗಳೂರು: ಪಾಲುದಾರರ ಅನುಮತಿ ಇಲ್ಲದೆ ಒಪ್ಪಂದ ಮುರಿದು ₹4.70 ಕೋಟಿ ಪಡೆದು ವಂಚಿಸಿದ ಆರೋಪದಡಿ ಶ್ರೀರಾಂಪುರದ ಚೈತ್ರ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಎಸ್.ಗುರುರಾಜ್ ಮತ್ತು ಇತರರ ವಿರುದ್ಧದ ಕ್ರಿಮಿನಲ್ ಪ್ರಕರಣದ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.‘ನಮ್ಮ ವಿರುದ್ಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ 2026ರ ಏಪ್ರಿಲ್ 30ರಂದು ದಾಖಲಾಗಿರುವ ಎಫ್ಐಆರ್ ರದ್ದುಪಡಿಸಬೇಕು’ ಎಂದು ಕೋರಿ ಎಸ್.ಗುರುರಾಜ್, ಬಿ.ವಿ.ಪುಷ್ಪಲತಾ ಮತ್ತು ಬಿ.ಯು.ದೇಚಮ್ಮ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.ಅರ್ಜಿದಾರರ ಪರ ಹೈಕೋರ್ಟ್ ವಕೀಲ ಪಿ.ಪ್ರಸನ್ನ ಕುಮಾರ್ ಮಂಡಿಸಿದ ವಾದವನ್ನು ಮಾನ್ಯ ಮಾಡಿರುವ ನ್ಯಾಯಪೀಠ, ‘ಎಫ್ಐಆರ್ ದಾಖಲಿಸಲು ಉಭಯ ಪಕ್ಷಗಾರರ ನಡುವಿನ ಹಣಕಾಸು ವಹಿವಾಟಿನ ಉಲ್ಲಂಘನೆಯೇ ಮುಖ್ಯ ಕಾರಣ ಎಂಬುದನ್ನು ಪರಿಗಣಿಸಲಾಗಿದೆ’ ಎಂದು ಅವಲೋಕಿಸಿದೆ.‘ಇಂತಹ ಪ್ರಕರಣಗಳ ವಿಚಾರಣೆಗಳನ್ನು ಮುಂದುವರಿಸಲು ಅನುಮತಿ ನೀಡಿದ್ದೇ ಆದರೆ, ದೂರುದಾರರು ಮತ್ತು ಅರ್ಜಿದಾರರ ನಡುವಿನ ಆರ್ಥಿಕ ಭಿನ್ನಾಭಿಪ್ರಾಯವನ್ನು ಪರಿಹರಿಸುವ ಉದ್ದೇಶಕ್ಕಾಗಿ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಬಳಕೆ ಮಾಡಿಕೊಂಡಂತಾಗುತ್ತದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ತನಿಖೆಗೆ ಮಧ್ಯಂತರ ತಡೆ ನೀಡಿ ಆದೇಶಿಸಿದೆ.ಅಂತೆಯೇ, ಪ್ರತಿವಾದಿ ಕುವೆಂಪುನಗರ ಠಾಣೆಯ ಪೊಲೀಸರಿಗೆ ನೋಟಿಸ್ ಮತ್ತು ದೂರುದಾರ ಆಂಜನೇಯುಲು ನಿಡ್ಜೆಲ್ಲಿ ಅವರಿಗೆ ತುರ್ತು ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ಮುಂದೂಡಿದೆ. ದೂರು: ಚೈತ್ರ ಶಿಕ್ಷಣ ಸಂಸ್ಥೆಯು ಹೈದರಾಬಾದ್ನ ಎನ್ಎಸ್ಪಿಐಆರ್ಎ ಮ್ಯಾನೇಜ್ಮೆಂಟ್ ಟ್ರಸ್ಟ್ನೊಂದಿಗೆ ಶೈಕ್ಷಣಿಕ ಒಪ್ಪಂದ ಮಾಡಿಕೊಂಡಿತ್ತು. ಇದರನ್ವಯ ಎರಡೂ ಸಂಸ್ಥೆಗಳು ತಮ್ಮ ಹಣಕಾಸು ವ್ಯವಹಾರಗಳಿಗಾಗಿ ಒಂದೇ ಬ್ಯಾಂಕ್ ಖಾತೆ ತೆರೆದಿದ್ದವು.‘ಚೈತ್ರ ಶಿಕ್ಷಣ ಸಂಸ್ಥೆಯ ಟ್ರಸ್ಟಿ; ವಂಚನೆಯ ಉದ್ದೇಶದಿಂದ ಬಿ.ವಿ.ಪುಷ್ಪಲತಾ, ಕಾಲೇಜಿನ ಪ್ರಾಂಶುಪಾಲೆ ದೇಚಮ್ಮ ಅವರ ಸಹಕಾರದಲ್ಲಿ ಬ್ಯಾಂಕ್ ಖಾತೆಯಿಂದ ₹4.70 ಕೋಟಿ ಪಡೆದಿದ್ದಾರೆ. ನಮ್ಮ ಸಂಸ್ಥೆಯ ಜವಾಬ್ದಾರಿಯಲ್ಲಿ ಇರುವವರ ಸಹಿಯ ಬದಲು ದೇಚಮ್ಮ ಅವರ ಸಹಿ ಬಳಸಿದ್ದಾರೆ. ವಿಷಯ ಗೊತ್ತಾದ ಕೂಡಲೇ ಐಸಿಐಸಿಐ ಬ್ಯಾಂಕ್ ಸರಸ್ವತಿಪುರಂ ಶಾಖೆಗೆ ಮಾಹಿತಿ ನೀಡಲಾಗಿತ್ತು. ಆದರೆ, ಅವರಿಂದ ಉತ್ತರ ಬಂದಿಲ್ಲ’ ಎಂದು ಹೈದರಾಬಾದ್ನ ಎನ್ಎಸ್ಪಿಐಆರ್ಎ ಸಂಸ್ಥೆಯ ಆಂಜನೇಯುಲು ನಿಡ್ಜೆಲ್ಲಿ ದೂರು ನೀಡಿದ್ದರು.ಈ ದೂರಿನ ಅನ್ವಯ ಕುವೆಂಪುನಗರ ಠಾಣೆಯ ಪೊಲೀಸರು ಅರ್ಜಿದಾರರ ವಿರುದ್ಧ; ಭಾರತೀಯ ನ್ಯಾಯ ಸಂಹಿತಾ–2023ರ ಕಲಂ 316(2), 318(4), 324(4) ಮತ್ತು 3(5)ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದರು. ಈ ಕ್ರಿಮಿನಲ್ ಪ್ರಕರಣವು, ಮೈಸೂರು ನಗರದ 4ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ಮತ್ತು ಜೆಎಂಎಫ್ಸಿ ಕೋರ್ಟ್ನಲ್ಲಿ ವಿಚಾರಣೆಗೆ ಬಾಕಿ ಇದೆ.