ನಾಡಹಬ್ಬ ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಮಾಡಿದ್ರೆ ತಪ್ಪೇನು?: ದೇವಿಪ್ರಸಾದ್ ಶೆಟ್ಟಿ
ಉಡುಪಿ: ಮೈಸೂರು ದಸರಾ (Mysuru Dasara) ಮಹೋತ್ಸವದಲ್ಲಿ ಕಂಬಳ (Kambala) ಆಯೋಜನೆ ವಿಚಾರಕ್ಕೆ ಸಂಬಂಧಿಸಿದಂತೆ ಪರ-ವಿರೋಧ ಚರ್ಚೆ ಮುಂದುವರಿದಿದೆ. ಈ ನಡುವೆ ರಾಜ್ಯ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ (Deviprasad Shetty) ಕಂಬಳದ ಪರವಾಗಿ ಬ್ಯಾಟ್ ಬೀಸಿದ್ದಾರೆ. ಕಂಬಳ ಕರಾವಳಿಗೆ ಮಾತ್ರ ಸೀಮಿತವಾದ ಕ್ರೀಡೆಯಲ್ಲ, ಇಡೀ ರಾಜ್ಯದ ಹೆಮ್ಮೆ ಎಂದು ಹೇಳಿದ್ದಾರೆ

ಉಡುಪಿ: ಮೈಸೂರು ದಸರಾ (Mysuru Dasara) ಮಹೋತ್ಸವದಲ್ಲಿ ಕಂಬಳ (Kambala) ಆಯೋಜನೆ ವಿಚಾರಕ್ಕೆ ಸಂಬಂಧಿಸಿದಂತೆ ಪರ-ವಿರೋಧ ಚರ್ಚೆ ಮುಂದುವರಿದಿದೆ. ಈ ನಡುವೆ ರಾಜ್ಯ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ (Deviprasad Shetty) ಕಂಬಳದ ಪರವಾಗಿ ಬ್ಯಾಟ್ ಬೀಸಿದ್ದಾರೆ. ಕಂಬಳ ಕರಾವಳಿಗೆ ಮಾತ್ರ ಸೀಮಿತವಾದ ಕ್ರೀಡೆಯಲ್ಲ, ಇಡೀ ರಾಜ್ಯದ ಹೆಮ್ಮೆ ಎಂದು ಹೇಳಿದ್ದಾರೆ. ನಾಡಹಬ್ಬ ಮೈಸೂರು ದಸರದಲ್ಲಿ ಕಂಬಳ ಆಯೋಜನೆ ಮಾಡಿದರೆ ತಪ್ಪೇನು? ಕಂಬಳ ರಾಜ್ಯದ ಘನತೆ ಮತ್ತು ಗೌರವ ಹೆಚ್ಚಿಸುವ ಕ್ರೀಡೆ. ದಸರಾ ವೇದಿಕೆಯಲ್ಲಿ ಕಂಬಳ ನಡೆಸಬೇಕು ಅನ್ನೋದು ಸರ್ಕಾರದ ಆಶಯವಾಗಿದೆ. ರಾಜ್ಯ ಸರ್ಕಾರ ಕಂಬಳಕ್ಕೆ ಕ್ರೀಡೆಯ ಮಾನ್ಯತೆ ನೀಡಿದ್ದು, ಕಂಬಳ ಅಸೋಸಿಯೇಷನ್ ಕೂಡ ರಚನೆಯಾಗಿದೆ. ರಾಜ್ಯದ ಯಾವುದೇ ಭಾಗದಲ್ಲಿ ಕಂಬಳ ಆಯೋಜನೆ ಮಾಡಬಹುದು ಎಂದು ನ್ಯಾಯಾಲಯವೂ ಸ್ಪಷ್ಟಪಡಿಸಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ – ರಾಜಮನೆತನ, ಪ್ರತಾಪ್ ಸಿಂಹ ವಿರೋಧ, ಅಶೋಕ್ ರೈ ಸಮರ್ಥನೆ ಕಂಬಳ ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಯ ಭಾಗವಾಗಿದ್ದು, ಇದರಿಂದ ಯಾವುದೇ ಧಕ್ಕೆ ಆಗುವುದಿಲ್ಲ. ಮೈಸೂರು ಸಂಸ್ಕೃತಿ ಮತ್ತು ಕರಾವಳಿ ಸಂಪ್ರದಾಯಗಳ ನಡುವೆ ಸಾಮ್ಯತೆ ಇದೆ. ಮೈಸೂರು ಅರಸರ ಕಾಲದಲ್ಲೂ ಕಂಬಳಕ್ಕೆ ಬೆಂಬಲ ಇತ್ತು. ನಾಲ್ವಡಿ ಕೃಷ್ಣರಾಜ ಒಡೆಯರು ಕಂಬಳಕ್ಕೆ ಸಹಕಾರ ನೀಡಿದ್ದರು. ಬಾರ್ಕೂರು ಸಂಸ್ಥಾನದ ಇತಿಹಾಸದಲ್ಲೂ ಕಂಬಳಕ್ಕೆ ವಿಶೇಷ ಸ್ಥಾನವಿದೆ ಎಂದು ಉಲ್ಲೇಖಿಸಿದ್ದಾರೆ. ಆಧುನಿಕ ಕಾಲದಲ್ಲಿ ಕಂಬಳಕ್ಕೆ ಹೊಸ ರೂಪ ಸಿಕ್ಕಿದ್ದು, ಯುವಕರು, ಉದ್ಯಮಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳು ಕೈಜೋಡಿಸುತ್ತಿವೆ. ಕಂಬಳದಲ್ಲಿ ಯಾವುದೇ ಶೋಷಣೆಗೆ ಅವಕಾಶವಿಲ್ಲ. ಇದು ರೈತರು ಮತ್ತು ಎಲ್ಲ ವರ್ಗದ ಜನರ ಕ್ರೀಡೆಯಾಗಿದೆ ಎಂದು ಶೆಟ್ಟಿ ಹೇಳಿದ್ದಾರೆ. ಕಂಬಳದ ಕೋಣಗಳನ್ನು ಮಕ್ಕಳಂತೆ ಪ್ರೀತಿಯಿಂದ ಸಾಕಲಾಗುತ್ತದೆ. ವರ್ಷದಲ್ಲಿ ಕೆಲವೇ ದಿನಗಳು ಓಟದಲ್ಲಿ ಭಾಗವಹಿಸುವ ಕೋಣಗಳನ್ನು ಉಳಿದ ಸಮಯದಲ್ಲಿ ಅತ್ಯಂತ ಕಾಳಜಿಯಿಂದ ನೋಡಿಕೊಳ್ಳಲಾಗುತ್ತದೆ. ಕಂಬಳದಿಂದ ಪರಿಸರಕ್ಕೆ ಯಾವುದೇ ಹಾನಿ ಇಲ್ಲ. ಕಡಿಮೆ ವೆಚ್ಚದಲ್ಲಿ ಕಂಬಳ ಆಯೋಜನೆ ಸಾಧ್ಯವಾಗುತ್ತದೆ. ಕಂಬಳದಲ್ಲಿ ಯಾವುದೇ ಲಾಬಿ ಇಲ್ಲ. ಕೋಣಗಳ ಮಾಲೀಕರಿಗೆ ಲಾಭದ ಉದ್ದೇಶವೂ ಇಲ್ಲ. ಪ್ರಾಣಿ ಮತ್ತು ಮನುಷ್ಯರ ನಡುವಿನ ಬಾಂಧವ್ಯದ ಪ್ರತೀಕವಾಗಿರುವ ಈ ಕ್ರೀಡೆಯನ್ನು ಮುಂದುವರಿಸಲು ನಾವು ಬದ್ಧರಾಗಿದ್ದೇವೆ. ಮೈಸೂರು ದಸರಾದಲ್ಲಿ ಕಂಬಳ ಆಯೋಜನೆಗೆ ವಿರೋಧ ವ್ಯಕ್ತಪಡಿಸುವವರು ಕಂಬಳದ ಇತಿಹಾಸ ಮತ್ತು ಪರಂಪರೆಯನ್ನು ಅರಿತುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬರಗಾಲ ಕಾರಣಕ್ಕೆ ದಸರಾ ನಿಲ್ಲಿಸುವ, ಸರಳವಾಗಿ ಆಚರಿಸುವ ಪ್ರಶ್ನೆಯೇ ಇಲ್ಲ: ಸಿಎಂ ಕಂಬಳ ಕರಾವಳಿಗೆ ಮಾತ್ರ ಸೀಮಿತ ಎಂದು ಹೇಳುವುದು ಸರಿಯಲ್ಲ. ಬೆಂಗಳೂರು ಅರಮನೆ ಮೈದಾನದಲ್ಲೂ ಕಂಬಳ ನಡೆದಿದ್ದು, ಅರಮನೆಯವರೇ ಅವಕಾಶ ನೀಡಿದ್ದರು. ರಾಜ್ಯದ ವಿವಿಧ ಭಾಗಗಳ ಕಲೆ, ಸಂಸ್ಕೃತಿ ಮತ್ತು ಕ್ರೀಡೆಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವುದೇ ದಸರಾ ಮಹೋತ್ಸವದ ಉದ್ದೇಶ. ಕಂಬಳವನ್ನು ರಾಜ್ಯದ ವೀರ ಸಾಹಸ ಕ್ರೀಡೆಯಾಗಿ ಮತ್ತಷ್ಟು ಜನಪ್ರಿಯಗೊಳಿಸುವುದು ಕಂಬಳ ಸಮಿತಿಯ ಆಶಯ ಎಂದು ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.