ಹತ್ಯೆಯ ಸಂಚೋ? ಅಧಿಕಾರದ ಆಟವೋ?: ಇರಾನಿನತ್ತ ಟ್ರಂಪ್ 1000 ಕ್ಷಿಪಣಿಗಳ ಚಿತ್ತ
ಜುಲೈ 11ರಂದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಟ್ರುತ್ ಸೋಷಿಯಲ್ ಸಾಮಾಜಿಕ ಜಾಲತಾಣದಲ್ಲಿ ಸಣ್ಣದಾದ, ಆದರೆ ಅಷ್ಟೇ ಭೀತಿದಾಯಕವಾದ ಸಂದೇಶವೊಂದನ್ನು ಬರೆದುಕೊಂಡರು. 1,000 ಕ್ಷಿಪಣಿಗಳು ಈಗಾಗಲೇ ಇರಾನಿನತ್ತ ಗುರಿ ಇಟ್ಟು ಉಡಾವಣೆಗೆ ಸಿದ್ಧವಾಗಿವೆ. ಇನ್ನೂ ಸಾವಿರಾರು ಹೆಚ್ಚುವರಿ ಕ್ಷಿಪಣಿಗಳೂ ಪ್ರಯೋಗಕ್ಕೆ ಸನ್ನದ್ಧವಾಗಿವೆ ಎಂದು ಟ್ರಂಪ್ ಬರೆದಿದ್ದಾರೆ. ಒಂದು
ಜುಲೈ 11ರಂದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಟ್ರುತ್ ಸೋಷಿಯಲ್ ಸಾಮಾಜಿಕ ಜಾಲತಾಣದಲ್ಲಿ ಸಣ್ಣದಾದ, ಆದರೆ ಅಷ್ಟೇ ಭೀತಿದಾಯಕವಾದ ಸಂದೇಶವೊಂದನ್ನು ಬರೆದುಕೊಂಡರು. 1,000 ಕ್ಷಿಪಣಿಗಳು ಈಗಾಗಲೇ ಇರಾನಿನತ್ತ ಗುರಿ ಇಟ್ಟು ಉಡಾವಣೆಗೆ ಸಿದ್ಧವಾಗಿವೆ. ಇನ್ನೂ ಸಾವಿರಾರು ಹೆಚ್ಚುವರಿ ಕ್ಷಿಪಣಿಗಳೂ ಪ್ರಯೋಗಕ್ಕೆ ಸನ್ನದ್ಧವಾಗಿವೆ ಎಂದು ಟ್ರಂಪ್ ಬರೆದಿದ್ದಾರೆ. ಒಂದು ವೇಳೆ ಇರಾನ್ ಏನಾದರೂ ತನ್ನ ಹತ್ಯೆಗೆ ಪ್ರಯತ್ನ ನಡೆಸಿದರೆ, ಅಮೆರಿಕನ್ ಮಿಲಿಟರಿ ಇರಾನಿನ ಎಲ್ಲ ಪ್ರದೇಶಗಳನ್ನೂ ಸಂಪೂರ್ಣವಾಗಿ ನಾಶಪಡಿಸಲಿದೆ ಎಂದು ಟ್ರಂಪ್ ಹೇಳಿದ್ದಾರೆ. ಜಗತ್ತಿನ ಅತ್ಯಂತ ಶಕ್ತಿಶಾಲಿ ದೇಶದ ಅಧ್ಯಕ್ಷನಿಂದ ಇಂತಹ ಮಾತು ಬಂದಾಗ ಸಹಜವಾಗಿಯೇ ಜನರು ಆತಂಕಕ್ಕೆ ಒಳಗಾಗುತ್ತಾರೆ. ಆದರೆ ಇಲ್ಲಿನ ದೊಡ್ಡ ಪ್ರಶ್ನೆ ಸರಳ: ಟ್ರಂಪ್ ಏಕೆ ಇದನ್ನೆಲ್ಲ ಏಕೆ ಹೇಳುತ್ತಿದ್ದಾರೆ?ಇದನ್ನು ಅರ್ಥ ಮಾಡಿಕೊಳ್ಳಬೇಕಾದರೆ, ಮೊದಲು ನಾವು ಹಿನ್ನಲೆಯನ್ನು ಗಮನಿಸಬೇಕು. ಹಲವಾರು ವರ್ಷಗಳಿಂದ ಅಮೆರಿಕ ಮತ್ತು ಇರಾನ್ ಸಂಬಂಧ ಬಹಳ ಹದಗೆಟ್ಟಿತ್ತು. ಇರಾನ್ ಈಗ ಹೊಸದಾಗಿ ಟ್ರಂಪ್ ಹತ್ಯೆಗೆ ಸಂಚು ರೂಪಿಸುತ್ತಿದೆ ಎಂದು ಇಸ್ರೇಲಿನ ಗುಪ್ತಚರ ಸಂಸ್ಥೆ ವಾಷಿಂಗ್ಟನ್ಗೆ ಮಾಹಿತಿ ನೀಡಿರುವುದಾಗಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದ ಬಳಿಕ ಉದ್ವಿಗ್ನತೆ ಇನ್ನಷ್ಟು ಹೆಚ್ಚಾಯಿತು. ಅಂದರೆ, "ಇರಾನ್ ನಿಮ್ಮ ಅಧ್ಯಕ್ಷನ ಹತ್ಯೆಗೆ ಪ್ರಯತ್ನ ನಡೆಸುವ ಸಾಧ್ಯತೆಗಳಿವೆ" ಎಂದು ಇಸ್ರೇಲ್ ಅಮೆರಿಕಕ್ಕೆ ಹೇಳಿದೆ. ಶ್ವೇತ ಭವನ ಈ ಮಾಹಿತಿಗಳನ್ನು ಖಚಿತಪಡಿಸಿಲ್ಲವಾದರೂ, ಸ್ವತಃ ಟ್ರಂಪ್ ಈ ಕುರಿತು ಬಹಿರಂಗವಾಗಿಯೇ ಮಾತನಾಡಿದ್ದಾರೆ. ತಾನು ಇರಾನಿನ ಪ್ರತಿಯೊಂದು ಹತ್ಯಾ ಪಟ್ಟಿಯಲ್ಲೂ ಇದ್ದೇನೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.ಇಲ್ಲೂ ಒಂದು ಹಳೆಯ ಇತಿಹಾಸವಿದೆ. 2020ರಲ್ಲಿ, ಟ್ರಂಪ್ ಇರಾನಿನ ಉನ್ನತ ಕಮಾಂಡರ್ ಆಗಿದ್ದ ಖಾಸಿಂ ಸೊಲೆಮಾನಿ ಹತ್ಯೆಗೆ ಆದೇಶಿಸಿದ್ದರು. ಸೊಲೆಮಾನಿಯನ್ನು ಬಹಳಷ್ಟು ಇರಾನಿಯನ್ನರು ತಮ್ಮ ಆದರ್ಶ ಎಂದೇ ಪರಿಗಣಿಸಿದ್ದರು. ಅಂದಿನಿಂದಲೂ ಇರಾನ್ ನಿರಂತರವಾಗಿ ಪ್ರತೀಕಾರ ಕೈಗೊಳ್ಳುವುದಾಗಿ ಹೇಳುತ್ತಲೇ ಬಂದಿದೆ. ಇತ್ತೀಚೆಗೆ, ಅಮೆರಿಕ ಮತ್ತು ಇಸ್ರೇಲಿ ದಾಳಿಗಳು ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲ ಅಲಿ ಖಮೇನಿ ಹತ್ಯೆ ನಡೆಸಿದ ಬಳಿಕ, ಉದ್ವಿಗ್ನತೆಗಳು ಇನ್ನಷ್ಟು ತೀವ್ರವಾದವು. ಖಮೇನಿ ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ, ಬಹಳಷ್ಟು ಸಂಖ್ಯೆಯಲ್ಲಿದ್ದ ಆಕ್ರೋಶಿತ ಜನರು ಬಹಿರಂಗವಾಗಿಯೇ ಟ್ರಂಪ್ ಹತ್ಯೆಗೆ ಕರೆ ನೀಡಿದ್ದರು. ಆದ್ದರಿಂದ, ಟ್ರಂಪ್ ಈಗ ಕ್ಷಿಪಣಿಗಳ ಕುರಿತು ಮಾತನಾಡುವಾಗ, ಅವರು ತನ್ನ ಜೀವಕ್ಕೆ ಎದುರಾಗಿರುವ ನೇರ ಅಪಾಯಗಳ ವಿರುದ್ಧವೂ ಮಾತನಾಡುತ್ತಿದ್ದಾರೆ.ಆದರೆ, ಟ್ರಂಪ್ ಏಕೆ ಇಷ್ಟೊಂದು ಅತಿರಂಜಿತ, ನಾಟಕೀಯ ಭಾಷೆಯನ್ನು ಬಳಸುತ್ತಿದ್ದಾರೆ? ಮೊದಲನೆಯ ಕಾರಣವೆಂದರೆ, ದಾಳಿಗೆ ಪ್ರತಿರೋಧ ಒಡ್ಡುವುದು. ದೊಡ್ಡ ಮಾತುಗಳನ್ನು ಆಡುವುದರಿಂದ, ಶತ್ರುವನ್ನು ಹೆದರಿಸಿ, ಆತ ದಾಳಿ ನಡೆಯದಂತೆ ತಡೆಯುವುದು ಟ್ರಂಪ್ ಉದ್ದೇಶ. ಸಾವಿರಾರು ಕ್ಷಿಪಣಿಗಳು ಸಿದ್ಧವಾಗಿವೆ ಎಂದು ಹೇಳುವ ಮೂಲಕ, ಟ್ರಂಪ್ ಟೆಹರಾನ್ಗೆ "ನೀವು ನನ್ನನ್ನು ಮುಟ್ಟಿದರೆ, ಅದಕ್ಕೆ ಇರಾನ್ ತೆರುವ ಬೆಲೆ ಸಹಿಸಲು ಅಸಾಧ್ಯವಾಗಿರುತ್ತದೆ" ಎನ್ನುವ ಸಂದೇಶ ರವಾನಿಸಿದ್ದಾರೆ.ಇನ್ನು ಎರಡನೆಯ ಕಾರಣವೆಂದರೆ, ಮಾತುಕತೆ ನಡೆಸುವಂತೆ ಒತ್ತಡ ಸೃಷ್ಟಿಸುವುದು. ಈ ಬೆದರಿಕೆಗಳ ಜೊತೆಗೆ, ಇರಾನ್ ಮಾತುಕತೆ ನಡೆಸುವ ಇಚ್ಛೆ ಹೊಂದಿದೆ ಎಂದೂ ಟ್ರಂಪ್ ಸುಳಿವು ನೀಡಿದ್ದಾರೆ. ಇರಾನಿನ ಆರ್ಥಿಕತೆ ದುರ್ಬಲವಾಗಿದ್ದು, ಅವರು ಯುದ್ಧ ನಿಲ್ಲಿಸಲು ಉತ್ಸುಕರಾಗಿದ್ದಾರೆ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ. ಆದ್ದರಿಂದ, ಟ್ರಂಪ್ ನೀಡುತ್ತಿರುವ ದೊಡ್ಡ ಬೆದರಿಕೆಗಳು ಬಹುಶಃ ಚೌಕಾಸಿಯ ತಂತ್ರವೂ ಆಗಿದ್ದು, ಒಂದು ಕೈಯಿಂದ ಜೋರಾಗಿ ತಳ್ಳಿ, ಇನ್ನೊಂದು ಕೈಯಿಂದ ಒಪ್ಪಂದ ಮಾಡಿಕೊಳ್ಳುವ ಪ್ರಯತ್ನವೂ ಆಗಿರಬಹುದು. ರಾಜಕೀಯ ಮತ್ತು ಉದ್ಯಮದಲ್ಲಿ ಇದೊಂದು ಹಳೆಯ ಒತ್ತಡ ತಂತ್ರವಾಗಿದೆ.ಇನ್ನು ಮೂರನೇ ಕಾರಣವೆಂದರೆ, ಸ್ವದೇಶದಲ್ಲಿ ತನ್ನ ಗೌರವ ಮತ್ತು ರಾಜಕೀಯದ ಲೆಕ್ಕಾಚಾರ. ಟ್ರಂಪ್ ಸದಾ ತಾನೊಬ್ಬ ಬಲವಾದ, ಭೀತಿ ರಹಿತ ನಾಯಕ ಎಂದೇ ತೋರಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ದೊಡ್ಡದಾಗಿ ಹೇಳಿಕೆ ನೀಡುವುದರಿಂದ, ಟ್ರಂಪ್ ಬೆಂಬಲಿಗರಿಗೆ ಟ್ರಂಪ್ ಎಲ್ಲವನ್ನೂ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾರೆ ಎನ್ನುವ ಭಾವನೆ ಮೂಡಿಸುತ್ತದೆ. ತನ್ನ ಎಂದಿನ ಆತ್ಮವಿಶ್ವಾಸ ಮತ್ತು ಹಾಸ್ಯದ ಶೈಲಿಯಲ್ಲಿ ಮಾಧ್ಯಮಗಳೊಡನೆ ಮಾತನಾಡಿದ ಟ್ರಂಪ್, ಒಂದು ವೇಳೆ ತಾನು ಹತ್ಯೆಗೊಳಗಾದರೂ ಏನು ಮಾಡಬೇಕು ಎನ್ನುವ ಕುರಿತು ಸ್ಪಷ್ಟ ನಿರ್ದೇಶನ ನೀಡಿರುವುದಾಗಿ ಹೇಳಿದ್ದಾರೆ. ಇರಾನ್ಗೆ ಬಹುತೇಕ ಹತ್ಯೆಗೆ ಪ್ರಯತ್ನ ನಡೆಸಿ ನೋಡಿ ಎನ್ನುವ ಸವಾಲನ್ನೂ ಒಡ್ಡಿದಂತಾಗಿದೆ.ಆದರೆ, ನಾವು ಕಡೆಗಣಿಸಲು ಸಾಧ್ಯವಿಲ್ಲದ ಒಂದು ಬದಿಯೂ ಇಲ್ಲಿದೆ. ಯಾವಾಗ ನಾಯಕರು ಬೃಹತ್ತಾದ, ಅನಿಯಮಿತ ವಿಧ್ವಂಸದ ಕುರಿತ ಹೇಳಿಕೆಗಳನ್ನು ನೀಡುತ್ತಾರೋ, ಆಗೆಲ್ಲ ಇವು ಅತ್ಯಂತ ಅಪಾಯಕಾರಿಯಾದ, ಬೃಹತ್ ಪ್ರಮಾಣದ ದಾಳಿಯತ್ತ ಸಾಗುತ್ತದೆ ಎಂದು ಒಂದಷ್ಟು ವೀಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ. ಇದರಿಂದ ಅಪಾರ ಸಂಖ್ಯೆಯಲ್ಲಿ ಪ್ರಾಣ ಹಾನಿ ಉಂಟಾಗುತ್ತದೆ ಎನ್ನುವುದು ಅವರ ಆತಂಕವಾಗಿದೆ. ಆದ್ದರಿಂದಲೇ ಇಂತಹ ಹೇಳಿಕೆಗಳನ್ನು ಜಗತ್ತು ಅತ್ಯಂತ ಸೂಕ್ಷ್ಮವಾಗಿ, ಎಚ್ಚರಿಕೆಯಿಂದ ಗಮನಿಸುತ್ತದೆ.ಇನ್ನೊಂದೆಡೆ, ಇರಾನ್ ತನ್ನದೇ ಆಟವನ್ನು ಆಡುತ್ತಿದೆ. ಎಜಾತೊಲ್ಲಾ ಜ಼ರ್ಗಾಮಿ ಎನ್ನುವ ಇರಾನಿಯನ್ ಅಧಿಕಾರಿ ತಾನು ಇತ್ತೀಚೆಗೆ ನ್ಯಾಟೋ ಸಮಾವೇಶಕ್ಕಾಗಿ ಟರ್ಕಿಗೆ ತೆರಳಿದಾಗ, ಟ್ರಂಪ್ ತನ್ನ ವ್ಯಾಪ್ತಿಯ ಒಳಗೇ ಇದ್ದರು ಎಂದಿದ್ದಾರೆ. ಆದರೂ ತಾನು ಟ್ರಂಪ್ ಅವರನ್ನು ಗುರಿಯಾಗಿಸಲಿಲ್ಲ ಎಂದು ಅವರು ಹೇಳಿದ್ದು, ಇದಕ್ಕೆ ನೆರೆಯವರೊಡನೆ ಉತ್ತಮ ಬಾಂಧವ್ಯ ಉಳಿಸಿಕೊಳ್ಳುವುದೂ ಕಾರಣವಾಗಿತ್ತು ಎಂದಿದ್ದಾರೆ. ಆದರೆ ಈ ಹೇಳಿಕೆ ನಿಜವೋ, ಅಥವಾ ಸುಮ್ಮನೆ ಬಾಯಿ ಮಾತಿನವೋ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಇಂತಹ ಹೇಳಿಕೆಗಳು ದೇಶದೊಳಗೆ ಶಕ್ತಿಶಾಲಿಯಾಗಿ ಕಾಣಿಸಿಕೊಳ್ಳಲು ನೆರವಾದರೂ, ಯುದ್ಧ ತೀವ್ರತೆಯನ್ನು ತಪ್ಪಿಸಲು ಬಳಕೆಯಾಗುತ್ತವೆ.ವಾಸ್ತವ ಚಿತ್ರಣವೂ ಈಗ ಉದ್ವಿಗ್ನವೇ ಆಗಿದೆ. ದುರ್ಬಲ ಕದನ ವಿರಾಮ ಈಗಾಗಲೇ ಕುಸಿದಿದೆ. ಉಭಯ ಪಕ್ಷಗಳೂ ಈಗಾಗಲೇ ಅತ್ಯಂತ ಕಿರಿದಾದ, ಆದರೆ ಅಷ್ಟೇ ಮುಖ್ಯವಾದ, ಜಗತ್ತಿನ ಬಹುಪಾಲು ಕಚ್ಚಾ ತೈಲ ಹಾದುಹೋಗುವ ಸಮುದ್ರ ಮಾರ್ಗವಾದ ಹೊರ್ಮುಸ್ ಜಲಸಂಧಿಯ ಬಳಿ ದಾಳಿ ಪ್ರತಿದಾಳಿ ನಡೆಸಿವೆ. ಅಲ್ಲಿ ಉಂಟಾಗುವ ಯಾವುದೇ ದೊಡ್ಡ ಚಕಮಕಿ ನಮ್ಮಂತಹ ದೇಶದಲ್ಲಿನ ತೈಲ ಬೆಲೆಯೂ ಸೇರಿದಂತೆ, ಜಾಗತಿಕ ಆರ್ಥಿಕತೆಗಳನ್ನು ನಲುಗಿಸಬಹುದು.ಆದ್ದರಿಂದ, ಟ್ರಂಪ್ ನೀಡಿರುವ ಸಾವಿರ ಕ್ಷಿಪಣಿಗಳ ಬೆದರಿಕೆ ಒಂದು ರೀತಿಯಲ್ಲಿ ನೈಜ ಭಯ (ತನ್ನ ಜೀವಕ್ಕೆ ಅಪಾಯವಿದೆ, ಸಂಚು ರೂಪಿಸಲಾಗಿದೆ ಎನ್ನುವ ಆತಂಕ), ಹಳೆಯ ವೈಷಮ್ಯ (ಸೊಲೆಮಾನಿ ಮತ್ತು ಖಮೇನಿ), ಬುದ್ಧಿವಂತಿಕೆಯ ಕಾರ್ಯತಂತ್ರ (ಇರಾನನ್ನು ಬೆದರಿಸಿ, ಅದು ಮಾತುಕತೆಗೆ ಇಳಿಯುವಂತೆ ಮಾಡುವುದು) ಮತ್ತು ವೈಯಕ್ತಿಕ ಶೈಲಿ (ಯಾವಾಗಲೂ ಸುದ್ದಿಯಲ್ಲಿ ಇರುವಂತೆ ದೊಡ್ಡ ಹೇಳಿಕೆಗಳನ್ನು ನೀಡುವುದು) ಎಲ್ಲದರ ಮಿಶ್ರಣವಾಗಿದೆ. ಇದು ಒಂದು ಮಟ್ಟಿಗೆ ನೈಜ ಎಚ್ಚರಿಕೆಯಾಗಿದ್ದರೆ, ಇನ್ನೊಂದು ಮಟ್ಟಿಗೆ ರಾಜಕೀಯ ಪ್ರದರ್ಶನವೂ ಹೌದು.ಇಲ್ಲಿ ನೆನಪಿಟ್ಟುಕೊಳ್ಳಬೇಕಾದ ಅಂಶವೆಂದರೆ - ನಾಟಕೀಯವಾಗಿ ಕಾಣಿಸಿಕೊಳ್ಳುವ ಹೇಳಿಕೆಗಳ ಹಿಂದೆ, ಒಂದು ಗಂಭೀರ ಮತ್ತು ಸೂಕ್ಷ್ಮ ಬಿಕ್ಕಟ್ಟು ಬಚ್ಚಿಟ್ಟುಕೊಂಡಿರುತ್ತದೆ. ಆದರೆ, ಇದು ಒಂದು ಒಪ್ಪಂದದ ರೂಪದಲ್ಲಿ ಅಂತ್ಯಗೊಳ್ಳುತ್ತದೆಯೋ, ಅಥವಾ ದುರಂತದ ರೂಪ ತಳೆಯುತ್ತದೆಯೋ ಎನ್ನುವುದು ಮುಂದಿನ ದಿನಗಳಲ್ಲಿ ಉಭಯ ದೇಶಗಳು ಹೇಗೆ ನಡೆದುಕೊಳ್ಳುತ್ತವೆ ಎನ್ನುವುದನ್ನು ಆಧರಿಸಲಿದೆ. ಸದ್ಯದ ಮಟ್ಟಿಗೆ, ಜಗತ್ತು ಕೇವಲ ಆಶಾ ಭಾವನೆಯಿಂದ, ಶಾಂತವಾಗಿ ನೋಡುತ್ತಾ ಇರಬಹುದು. ಟ್ರಂಪ್ ಹೇಳಿರುವ ಕ್ಷಿಪಣಿಗಳು ಸನ್ನದ್ಧ ಸ್ಥಿತಿಯಲ್ಲಿ ಅಲ್ಲೇ ಇರಲಿ, ಎಂದಿಗೂ ಪ್ರಯೋಗಿಸಲ್ಪಡದಿರಲಿ ಎಂದು ಪ್ರಾರ್ಥಿಸಬಹುದು.