ಸಕಲೇಶಪುರ: ಒಡೆದ ಪೈಪ್, ಕಾರಂಜಿಯಂತೆ ಚಿಮ್ಮಿದ ನೀರು!
ಸಕಲೇಶಪುರ (ಹಾಸನ): ತಾಲ್ಲೂಕಿನ ಹಲಸುಲಿಗೆ ಗ್ರಾಮದಲ್ಲಿ ಭಾನುವಾರ ಎತ್ತಿನಹೊಳೆ ಯೋಜನೆಯ ಪೈಪ್ಲೈನ್ ಒಡೆದು ಕಾರಂಜಿಯಂತೆ ನೀರು ಚಿಮ್ಮಿದೆ. ದೊಡ್ಡನಾಗರ ಗ್ರಾಮದಿಂದ ಹೆಬ್ಬನಹಳ್ಳಿವರೆಗೆ ಭೂಮಿ ಅಡಿ ಅಳವಡಿಸಿರುವ ಸುಮಾರು 10 ಅಡಿ ಸುತ್ತಳತೆಯ ಪೈಪ್ ವೆಲ್ಡಿಂಗ್ ತುಂಡಾಗಿ ಈ ಅವಾಂತರ ಸೃಷ್ಟಿಯಾಗಿದೆ. ಭಾನುವಾರ ಸಂಜೆಯಾದರೂ ದುರಸ್ತಿಯಾಗದ ಕಾರಣ ನೀರು ಕಾರಂಜಿ

ಸಕಲೇಶಪುರ (ಹಾಸನ): ತಾಲ್ಲೂಕಿನ ಹಲಸುಲಿಗೆ ಗ್ರಾಮದಲ್ಲಿ ಭಾನುವಾರ ಎತ್ತಿನಹೊಳೆ ಯೋಜನೆಯ ಪೈಪ್ಲೈನ್ ಒಡೆದು ಕಾರಂಜಿಯಂತೆ ನೀರು ಚಿಮ್ಮಿದೆ. ದೊಡ್ಡನಾಗರ ಗ್ರಾಮದಿಂದ ಹೆಬ್ಬನಹಳ್ಳಿವರೆಗೆ ಭೂಮಿ ಅಡಿ ಅಳವಡಿಸಿರುವ ಸುಮಾರು 10 ಅಡಿ ಸುತ್ತಳತೆಯ ಪೈಪ್ ವೆಲ್ಡಿಂಗ್ ತುಂಡಾಗಿ ಈ ಅವಾಂತರ ಸೃಷ್ಟಿಯಾಗಿದೆ. ಭಾನುವಾರ ಸಂಜೆಯಾದರೂ ದುರಸ್ತಿಯಾಗದ ಕಾರಣ ನೀರು ಕಾರಂಜಿಯಂತೆ ಗಗನದತ್ತ ಚಿಮ್ಮುತ್ತಲೇ ಇತ್ತು. ಅಪಾರ ಪ್ರಮಾಣದ ನೀರು ಪೋಲಾಗಿದೆ. ಮಣ್ಣು ಕೊರಕಲು ಬಿದ್ದಿದೆ. ಸುತ್ತಮುತ್ತಲಿನ ಭತ್ತದ ಗದ್ದೆ, ಅಡಿಕೆ, ಕಾಫಿ ತೋಟಗಳಿಗೆ ನೀರು ಮತ್ತು ಮಣ್ಣು ನುಗ್ಗಿ ಅಪಾರ ಪ್ರಮಾಣದ ಬೆಳೆಹಾನಿಯಾಗಿದೆ. ಎತ್ತಿನಹೊಳೆ ಯೋಜನೆ ಪೈಪ್ಲೈನ್ ನೀರು ನುಗ್ಗಿ ನಷ್ಟ ಅನುಭವಿಸಿರುವ ರೈತರಿಗೆ ಎತ್ತಿನಹೊಳೆ ಕಾಮಗಾರಿ ಮಾಡಿದ ಗುತ್ತಿಗೆದಾರ ಕಂಪನಿ ಅಥವಾ ವಿಶ್ವೇಶ್ವರಯ್ಯ ಜಲ ನಿಗಮ ಇವೆರಡರಲ್ಲಿ ಯಾವುದರಿಂದ ರೈತರಿಗೆ ಪರಿಹಾರ ಕೊಡಿಸಬೇಕು ಎಂದು ಚರ್ಚಿಸಿ ತಿಳಿಸಲಾಗುವುದು ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಉಪವಿಭಾಗಾಧಿಕಾರಿ ಹುಲಮನಿ ತಿಮ್ಮಣ್ಣ ಹೇಳಿದರು.‘ಎತ್ತಿನಹೊಳೆ ಯೋಜನೆ ನಮ್ಮ ತಾಲ್ಲೂಕಿಗೆ ಮಾರಕ. ಭತ್ತ ನಾಟಿ ಮಾಡಲು ಉಳುಮೆ ಮಾಡಿದ್ದ ಗದ್ದೆಗಳಿಗೆ ನೀರು ನುಗ್ಗಿದೆ. ನೀರಿನೊಂದಿಗೆ ಮಣ್ಣು ಕೊಚ್ಚಿ ಬಂದು ಗದ್ದೆಯಲ್ಲಿ ತುಂಬಿಕೊಂಡಿದೆ. ಕೆಲವೆಡೆ ಕೊರಕಲು ಬಿದ್ದು ಸಮತಟ್ಟಾಗಿದ್ದ ಗದ್ದೆ, ತೋಟಗಳು ಚರಂಡಿಗಳಾಗಿವೆ’ ಎಂದು ಹಲಸುಲಿಗೆ ಗ್ರಾಮದ ರೈತರಾದ ಎಚ್.ಎಂ.ರಮೇಶ್ ಆಕ್ರೋಶ ಹೊರಹಾಕಿದರು.ಸಕಲೇಶಪುರ ತಾಲ್ಲೂಕಿನ ಹಲಸುಲಿಗೆ ಗ್ರಾಮಕ್ಕೆ ಭೇಟಿ ನೀಡಿದ ಉಪ ವಿಭಾಗಾಧಿಕಾರಿ ಹುಲಮನಿ ತಿಮ್ಮಣ್ಣ ಸ್ಥಳ ಪರಿಶೀಲಿಸಿ ರೈತರ ಜೊತೆಗೆ ಚರ್ಚಿಸಿದರು. ಸಕಲೇಶಪುರ ತಾಲ್ಲೂಕಿನ ಹಲಸುಲಿಗೆ ಗ್ರಾಮದಲ್ಲಿ ಭಾನುವಾರ ಎತ್ತಿನಹೊಳೆ ಯೋಜನೆ ಪೈಪ್ನ ತುಂಡಾಗಿ ನೀರು ಹರಿದ ಸ್ಥಳಕ್ಕೆ ಶಾಸಕ ಸಿಮೆಂಟ್ ಮಂಜು ಭೇಟಿ ನೀಡಿ ಪರಿಶೀಲಿಸಿದರು. ಸಕಲೇಶಪುರ ತಾಲ್ಲೂಕಿನ ಹಲಸುಲಿಗೆ ಗ್ರಾಮದಲ್ಲಿ ಭಾನುವಾರ ಎತ್ತಿನಹೊಳೆ ಯೋಜನೆ ಪೈಪ್ನ ವೆಲ್ಡಿಂಗ್ ತುಂಡಾಗಿ ನೀರು ಕಾರಂಜಿಯಂತೆ ಉಕ್ಕಿತು. ಪ್ರಜಾವಾಣಿ ಚಿತ್ರ/ಜಾನೇಕೆರೆ ಆರ್. ಪರಮೇಶ್