ಅಸಭ್ಯ ವರ್ತನೆ: ಡೆಲಿವರಿ ಬಾಯ್ ಸೆರೆ
ಬೆಂಗಳೂರು: ಶೌಚಾಲಯ ಬಳಸುವ ನೆಪದಲ್ಲಿ ಮನೆಗೆ ನುಗ್ಗಿ ಗೃಹಿಣಿಯ ಜತೆ ಅಸಭ್ಯವಾಗಿ ವರ್ತಿಸಿ, ಕಿರುಕುಳ ನೀಡಿ ಪರಾರಿಯಾಗಿದ್ದ ಇ- ಕಾಮರ್ಸ್ ವೇದಿಕೆಯ ಡೆಲಿವರಿ ಬಾಯ್ನನ್ನು ಮಾರತ್ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆ ನಿಲೋಫರ್ ಫಾತಿಮಾ ಎಂಬುವರು ಘಟನೆಗೆ ಸಂಬಂಧಿಸಿದಂತೆ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಮಹಿಳೆಯಿಂದ ದೂ

ಬೆಂಗಳೂರು: ಶೌಚಾಲಯ ಬಳಸುವ ನೆಪದಲ್ಲಿ ಮನೆಗೆ ನುಗ್ಗಿ ಗೃಹಿಣಿಯ ಜತೆ ಅಸಭ್ಯವಾಗಿ ವರ್ತಿಸಿ, ಕಿರುಕುಳ ನೀಡಿ ಪರಾರಿಯಾಗಿದ್ದ ಇ- ಕಾಮರ್ಸ್ ವೇದಿಕೆಯ ಡೆಲಿವರಿ ಬಾಯ್ನನ್ನು ಮಾರತ್ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆ ನಿಲೋಫರ್ ಫಾತಿಮಾ ಎಂಬುವರು ಘಟನೆಗೆ ಸಂಬಂಧಿಸಿದಂತೆ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಮಹಿಳೆಯಿಂದ ದೂರು ಪಡೆದು ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ವಿಜಯ್ ಮಲ್ಲಿಕಾರ್ಜುನ್ ಕಾಮತ್ (22) ಎಂಬಾತನನ್ನು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.ಪಾರ್ಸೆಲ್ ತಲುಪಿಸಲು ಬಂದ ಫ್ಲಿಪ್ಕಾರ್ಟ್ನ ಡೆಲಿವರಿ ಬಾಯ್, ನಂತರ ಶೌಚಾಲಯ ಬಳಸುವುದಾಗಿ ಬಲವಂತವಾಗಿ ಒಂಟಿ ಮಹಿಳೆಯಿದ್ದ ಫ್ಲ್ಯಾಟ್ಗೆ ನುಗ್ಗಿದ್ದಾನೆ. ಶೌಚಾಲಯದಿಂದ ಹೊರಬಂದ ಬಳಿಕ ತನ್ನ ಖಾಸಗಿ ಅಂಗವನ್ನು ಪ್ರದರ್ಶಿಸಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ದೂರಲಾಗಿದೆ.ತಮಗಾದ ಕೆಟ್ಟ ಅನುಭವದ ವಿಡಿಯೊವನ್ನು ಸಾಮಾಜಿಕ ಜಾಲತಾಣ ಖಾತೆಯಲ್ಲಿ ಮಹಿಳೆ ಹಂಚಿಕೊಂಡಿದ್ದಾರೆ.‘ಪಾರ್ಸೆಲ್ ತಲುಪಿಸಲು ಬಂದ ಡೆಲಿವರಿ ಬಾಯ್, ಶೌಚಾಲಯ ಬಳಸಲು ಅನುಮತಿ ಕೇಳಿದ. ಆದರೆ, ಅಪರಿಚಿತರನ್ನು ಮನೆಯೊಳಗೆ ಬಿಟ್ಟುಕೊಳ್ಳಲು ನಿರಾಕರಿಸಿದೆ, ತೀರಾ ತುರ್ತು ಪರಿಸ್ಥಿತಿಯಿದ್ದರೆ ಪಕ್ಕದ ಫ್ಲ್ಯಾಟ್ನಲ್ಲಿರುವ ಪುರುಷರ ನಿವಾಸದ ಬಳಿ ಮನವಿ ಮಾಡುವಂತೆ ಸಲಹೆ ನೀಡಿದೆ. ಹಲವು ಬಾರಿ ನಿರಾಕರಿಸಿದರೂ ಆತ ಹೊರಗಡೆ ತನ್ನ ಚಪ್ಪಲಿಗಳನ್ನು ಬಿಟ್ಟು, ಬಲವಂತವಾಗಿ ಫ್ಲ್ಯಾಟ್ಗೆ ನುಗ್ಗಿದ. ಶೌಚಾಲಯದಿಂದ ಹೊರಬಂದ ತಕ್ಷಣ, ತನ್ನ ಖಾಸಗಿ ಅಂಗ ಪ್ರದರ್ಶಿಸಿ ವಿಕೃತವಾಗಿ ವರ್ತಿಸಿದ. ಈ ಘಟನೆಯಿಂದ ನನ್ನದೇ ಮನೆಯಲ್ಲಿ ತೀವ್ರ ಅವಮಾನ ಮತ್ತು ಅಸುರಕ್ಷತೆಯ ಭಾವನೆ ಕಾಡತೊಡಗಿತು’ ಎಂದು ಮಹಿಳೆ ಹೇಳಿದ್ದಾರೆ.ಘಟನೆಯಿಂದ ತೀವ್ರ ಭಯಭೀತರಾಗಿದ್ದ ಮಹಿಳೆ, ತನ್ನ ರಕ್ಷಣೆಗಾಗಿ ಆರೋಪಿಯ ಕೃತ್ಯವನ್ನು ತಮ್ಮ ಫೋನ್ನಲ್ಲಿ ಸೆರೆ ಹಿಡಿದಿದ್ದಾರೆ. ವಿಡಿಯೊವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿರುವ ಅವರು, ಪ್ರತಿನಿತ್ಯ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳ ಬಗ್ಗೆ ಕೇಳುವಾಗ ಇಂತಹ ಪರಿಸ್ಥಿತಿ ಎದುರಾದರೆ ಭಯವಾಗುತ್ತದೆ ಎಂದು ಕಣ್ಣೀರಿಟ್ಟಿದ್ದಾರೆ.ಮಹಿಳೆಯ ಜಾಲತಾಣದ ಪೋಸ್ಟ್ ಅನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ತಕ್ಷಣವೇ ಸ್ಪಂದಿಸಿ, ಘಟನೆಯ ಸಂಪೂರ್ಣ ವಿವರಗಳನ್ನು ಹಂಚಿಕೊಳ್ಳುವಂತೆ ಸೂಚಿಸಿದ್ದರು. 'ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಯಿತು. ಉದ್ದೇಶಪೂರ್ವಕವಾಗಿ ಆ ರೀತಿ ನಡೆದುಕೊಂಡಿಲ್ಲ. ತುರ್ತಾಗಿ ಶೌಚಾಲಯಕ್ಕೆ ಹೋಗಬೇಕಾಗಿತ್ತು. ಮಹಿಳೆ ಗಾಬರಿಗೊಂಡು ಕೂಗಿಕೊಂಡ ಕಾರಣ ಪ್ಯಾಂಟ್ನ ಜಿಪ್ ಹಾಕವುದನ್ನೆ ಮರೆತ್ತಿದ್ದೆ ಎಂದು ಹೇಳಿದ್ದಾನೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಈ ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ.ತನಿಖೆಗೆ ಸಹಕಾರಫ್ಲಿಪ್ ಕಾರ್ಟ್ ‘ಈ ಘಟನೆಯಿಂದ ನಮಗೆ ತೀವ್ರ ಆಘಾತವಾಗಿದ್ದು ಗ್ರಾಹಕರ ಸುರಕ್ಷತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಈ ವಿಷಯ ಗಮನಕ್ಕೆ ಬಂದ ತಕ್ಷಣ ಡೆಲಿವರಿ ಬಾಯ್ ಸೇವೆಯನ್ನು ರದ್ದುಗೊಳಿಸಿದ್ದೇವೆ. ಈ ಕುರಿತು ಎಫ್ಐಆರ್ ದಾಖಲಾಗಿದ್ದು ತನಿಖೆಗೆ ಸಹಕರಿಸಲಾಗುವುದು’ ಎಂದು ಫ್ಲಿಪ್ ಕಾರ್ಟ್ ಮಾಧ್ಯಮ ವಕ್ತಾರರು ತಿಳಿಸಿದ್ದಾರೆ. ‘ಡೆಲಿವರಿ ಬಾಯ್ಗಳನ್ನು ಕರ್ತವ್ಯಕ್ಕೆ ಸೇರಿಸಿಕೊಳ್ಳುವ ಮುನ್ನ ಕಡ್ಡಾಯವಾಗಿ ಅವರ ಹಿನ್ನೆಲೆ ತಿಳಿದುಕೊಳ್ಳಲಾಗುತ್ತದೆ ಮತ್ತು ಅವರಿಗೆ ತರಬೇತಿ ನೀಡಲಾಗುತ್ತದೆ. ಇಂತಹ ಘಟನೆಯನ್ನು ಎಂದಿಗೂ ಸಹಿಸುವುದಿಲ್ಲ’ ಎಂದು ಹೇಳಿದ್ದಾರೆ.