ಜಿದ್ದಾಜಿದ್ದಿನ ಹೋರಾಟ ಗೆದ್ದ ಅರ್ಜೆಂಟೀನಾ: ಉಪಾಂತ್ಯದಲ್ಲಿ ಯಾರಿಗೆ ಯಾರ ಪೈಪೋಟಿ?
ಅಟ್ಲಾಂಟಾ: ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾದ ನಾಲ್ಕನೇ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವು ಸ್ವಿಟ್ಜರ್ಲೆಂಡ್ ವಿರುದ್ಧ 3 - 1 ಗೋಲು ಅಂತರದ ಜಯ ಸಾಧಿಸಿತು.ಕೊನೆವರೆಗೂ ತೀವ್ರ ಪೈಪೋಟಿ ನೀಡಿದ ಸ್ವಿಟ್ಜರ್ಲೆಂಡ್ ಸುಲಭವಾಗಿ ಸೋಲೊಪ್ಪಿಕೊಳ್ಳಲಿಲ್ಲ. ಹೀಗಾಗಿ, ನಿಗದಿತ 90 ನಿಮಿಷಗಳ ಅವಧಿಯಲ್ಲಿ ಪಂದ್ಯವು 1 -&nb

ಅಟ್ಲಾಂಟಾ: ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾದ ನಾಲ್ಕನೇ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವು ಸ್ವಿಟ್ಜರ್ಲೆಂಡ್ ವಿರುದ್ಧ 3 - 1 ಗೋಲು ಅಂತರದ ಜಯ ಸಾಧಿಸಿತು.ಕೊನೆವರೆಗೂ ತೀವ್ರ ಪೈಪೋಟಿ ನೀಡಿದ ಸ್ವಿಟ್ಜರ್ಲೆಂಡ್ ಸುಲಭವಾಗಿ ಸೋಲೊಪ್ಪಿಕೊಳ್ಳಲಿಲ್ಲ. ಹೀಗಾಗಿ, ನಿಗದಿತ 90 ನಿಮಿಷಗಳ ಅವಧಿಯಲ್ಲಿ ಪಂದ್ಯವು 1 - 1 ಅಂತರದಿಂದ ಸಮವಾಗಿತ್ತು.ಅರ್ಜೆಂಟೀನಾ ಪರ ಅಲೆಕ್ಸಿಸ್ ಅಲಿಸ್ಟರ್ 10ನೇ ನಿಮಿಷದಲ್ಲೇ ಗೋಲು ಬಾರಿಸಿದರು. ಇದಾದ ನಂತರ ಪಂದ್ಯದ ಅರ್ಧ ಅವಧಿ ಮುಗಿಯುವವರೆಗೆ ಒಂದೇ ಒಂದು ಗೋಲು ಬರಲಿಲ್ಲ. ಇತ್ತಂಡಗಳು ಪಟ್ಟುಬಿಡದೆ ಆಡಿದವು. 67ನೇ ನಿಮಿಷದಲ್ಲಿ ಗೋಲು ಗಳಿಸಿಕೊಂಡ ಸ್ವಿಟ್ಜರ್ಲೆಂಡ್, ಸಮಬಲದ ಹೋರಾಟ ನಡೆಸಿತು. ಆ ಗೋಲನ್ನು ಡ್ಯಾನ್ ಎನ್ಡೊಯೆ ಗಳಿಸಿದರು. ಐದು ನಿಮಿಷಗಳ ಅಂತರದಲ್ಲಿ ಬ್ರೀಲ್ ಎಂಬೊಲೊ ಇನ್ನೊಂದು ಗೋಲು ಬಾರಿಸಿದರೂ, ಫೌಲ್ ಆದದ್ದರಿಂದ, ಸ್ವಿಟರ್ಲೆಂಡ್ಗೆ ಮುನ್ನಡೆ ಪಡೆಯುವ ಅವಕಾಶ ಸಿಗಲಿಲ್ಲ.ನಿಗದಿತ ಅವಧಿಯಲ್ಲಿ ಇತ್ತಂಡಗಳು ಸಮಬಲ ಸಾಧಿಸಿದ್ದರಿಂದ, ಫಲಿತಾಂಶ ನಿರ್ಧಾರಕ್ಕಾಗಿ ಹೆಚ್ಚುವರಿ ಅವಧಿಯ ಆಟದ ಮೊರೆ ಹೋಗಲಾಯಿತು. ಈ ವೇಳೆ ಅರ್ಜೆಂಟೀನಾದ ಜೂಲಿಯನ್ ಅಲ್ವರೇಜ್ (112ನೇ ನಿಮಿಷ) ಹಾಗೂ ಲೌಟರೋ ಮಾರ್ಟಿನೇಜ್ (121ನೇ ನಿಮಿಷ) ಒಂದೊಂದು ಗೋಲು ಬಾರಿಸಿದರು. ಹೀಗಾಗಿ ಅರ್ಜೆಂಟೀನಾ ಸೆಮಿಫೈನಲ್ ಹಾದಿ ಸುಗಮವಾಯಿತು.ಯಾರಿಗೆ ಯಾರು ಎದುರಾಳಿ?ಕ್ವಾಟರ್ಫೈನಲ್ ಹಣಾಹಣಿಯಲ್ಲಿ ಪೆರುಗ್ವೆ ಎದುರು ಗೆದ್ದಿರುವ ಫ್ರಾನ್ಸ್, ಕೆನಡಾ ವಿರುದ್ಧ ಜಯ ಸಾಧಿಸಿರುವ ಮೊರೊಕ್ಕೊ ಮೊದಲ ಸೆಮಿಫೈನಲ್ನಲ್ಲಿ ಮುಖಾಮುಖಿಯಾಗಲಿವೆ.ನಾರ್ವೆಯನ್ನು ಮಣಿಸಿರುವ ಇಂಗ್ಲೆಂಡ್ ಮತ್ತು ಸ್ವಿಟರ್ಲೆಂಡ್ ಅನ್ನು ಪರಾಭವಗೊಳಿಸಿರುವ ಅರ್ಜೆಂಟೀನಾ ಎರಡನೇ ಸೆಮಿಫೈನಲ್ನಲ್ಲಿ ಸೆಣಸಾಟ ನಡೆಸಲಿವೆ.ಉಪಾಂತ್ಯದ ಪಂದ್ಯಗಳು ಕ್ರಮವಾಗಿ ಡಲ್ಲಾಸ್ (ಜುಲೈ 15) ಮತ್ತು ಅಟ್ಲಾಂಟಾದಲ್ಲಿ (ಜುಲೈ 15) ನಡೆಯಲಿವೆ. ಫೈನಲ್ ಪಂದ್ಯವು ನ್ಯೂಯಾರ್ಕ್ನ ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ಜುಲೈ 20ರಂದು ನಡೆಯಲಿದೆ.